ಸಂಪುಟ ಪುನರ್‌ ರಚನೆ ಕುರಿತು ಅಂತಿಮ ಪ್ರಯ​ತ್ನ​ಗಳು ನಡೆ​ಯು​ತ್ತಿವೆ: ಸಿ.ಪಿ.​ಯೋ​ಗೇ​ಶ್ವರ್‌

ಸಚಿವ ಸಂಪುಟ ಪುನರ್‌ ರಚನೆ ಕುರಿತು ಅಂತಿಮ ಪ್ರಯ​ತ್ನ​ಗಳು ನಡೆ​ಯು​ತ್ತಿವೆ. ಸಂಪು​ಟ​ದಲ್ಲಿ ಯಾರಿಗೆ ಸ್ಥಾನ ನೀಡ​ಬೇಕು ಎಂಬು​ದನ್ನು ಮುಖ್ಯ​ಮಂತ್ರಿ​ಗಳು ಹಾಗೂ ಪಕ್ಷದ ವರಿ​ಷ್ಠರು ತೀರ್ಮಾನ ಕೈಗೊ​ಳ್ಳು​ತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಪ್ರತಿ​ಕ್ರಿ​ಯಿ​ಸಿ​ದರು. 

BJP MLC CP Yogeshwar React On Cabinet Expansion Karnataka gvd

ರಾಮ​ನ​ಗರ (ಜ.16): ಸಚಿವ ಸಂಪುಟ ಪುನರ್‌ ರಚನೆ ಕುರಿತು ಅಂತಿಮ ಪ್ರಯ​ತ್ನ​ಗಳು ನಡೆ​ಯು​ತ್ತಿವೆ. ಸಂಪು​ಟ​ದಲ್ಲಿ ಯಾರಿಗೆ ಸ್ಥಾನ ನೀಡ​ಬೇಕು ಎಂಬು​ದನ್ನು ಮುಖ್ಯ​ಮಂತ್ರಿ​ಗಳು ಹಾಗೂ ಪಕ್ಷದ ವರಿ​ಷ್ಠರು ತೀರ್ಮಾನ ಕೈಗೊ​ಳ್ಳು​ತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಪ್ರತಿ​ಕ್ರಿ​ಯಿ​ಸಿ​ದರು. ನಗ​ರದ ಪಂಚ​ಮುಖಿ ಬಾಲಾಂಜ​ನೇ​ಯ​ಸ್ವಾಮಿ ದೇವಾ​ಲ​ಯದ ಆವ​ರ​ಣ​ದಲ್ಲಿ ಕಡಲೆ ಕಾಯಿ ಮತ್ತು ಅವ​ರೆ​ಕಾಯಿ ಪರಿಷೆಯಲ್ಲಿ ಪಾಲ್ಗೊಂಡ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪರಿ​ಪೂ​ರ್ಣ​ವಾಗಿ ಸಚಿವ ಸಂಪುಟ ಆಗಿ​ಲ್ಲ​ ಎಂಬುದು ಮುಖ್ಯ​ಮಂತ್ರಿ​ಗ​ಳಿಗೂ ಗೊತ್ತಿದೆ. ಪುನರ್‌ ರಚ​ನೆಗೆ ಬಹಳ ದಿನ​ಗ​ಳಿಂದ ಪ್ರಯತ್ನ ನಡೆ​ಯು​ತ್ತಿತ್ತು. ಈಗ ಅಂತಿಮ ಪ್ರಯತ್ನ ನಡೆ​ಯು​ತ್ತಿದೆ ಎಂದರು.

ಸಂಕ್ರಾಂತಿ ನಂತರ ಪ್ರಾಕೃ​ತಿ​ಕ​ವಾಗಿ ಬದ​ಲಾ​ವ​ಣೆ ಅಗು​ವುದು ಸಹಜ. ಹೀಗಾಗಿ ಸಂಕ್ರಾಂತಿ ನಂತ​ರವೇ ಸಂಪುಟ ಪುನರ್‌ ರಚ​ನೆಯ ಆಲೋ​ಚನೆ ನಡೆ​ದಿ​ತ್ತು. ಪ​ಕ್ಷ​ದ​ಲ್ಲಿಯೂ ಏನಾ​ದರು ಒಂದಷ್ಟುಬದ​ಲಾ​ವಣೆ ಆಗ​ಬೇ​ಕಿದೆ ಎಂದು ಹೇಳಿ​ದ​ರು. ಹಳೇ ಮೈಸೂರು ಭಾಗ​ದಲ್ಲಿ ಹೊಂದಾ​ಣಿಕೆ ರಾಜ​ಕಾ​ರ​ಣ​ದಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಗು​ತ್ತಿತ್ತು. ದೀಪದ ಕೆಳಗೆ ಕತ್ತಲು ಎಂಬಂತೆ ಬೆಂಗಳೂರು ಮತ್ತು ಸುತ್ತಮುತ್ತ ಏಕೆ ಬಿಜೆಪಿ ಬೆಳೆದಿಲ್ಲ ಎಂಬುದರ ಅರಿವು ಪಕ್ಷಕ್ಕೆ ಆಗಿದೆ. ಇದೆಲ್ಲವನ್ನು ಪಕ್ಷದ ವರಿ​ಷ್ಠರ ಗಮ​ನಕ್ಕೆ ಬಂದಿದೆ. ಹೊಂದಾ​ಣಿಕೆ ರಾಜ​ಕಾ​ರ​ಣದ ವಿರುದ್ಧ ನಾನು ಹತ್ತಾರು ಬಾರಿ ಪಕ್ಷದ ವೇದಿ​ಕೆ​ಯ​ಲ್ಲಿಯೇ ಆಕ್ಷೇ​ಪಣೆ ಎತ್ತಿ​ದ್ದೇನೆ. 

ಕೊರೋನಾ ಕಾಲದಲ್ಲಿ ಸರ್ಕಾರಿ ನೌಕ​ರರ ಸೇವೆ ಶ್ಲಾಘ​ನೀಯ: ಡಿ.ಕೆ.ಶಿವಕುಮಾರ್‌

ಗೃಹ ಸಚಿವ ಅಮಿತ್‌ ಶಾ ಭೇಟಿ​ಯಿಂದ ಬಿಜೆಪಿ ಸಂಘ​ಟ​ನೆಗೆ ಹೆಚ್ಚಿನ ಬಲ ಸಿಕ್ಕಿದೆ. ರಾಮ​ನ​ಗರ ಜಿಲ್ಲೆ​ಯಲ್ಲಿ ಮೂರು ಸ್ಥಾನ​ ಸೇರಿ ಹಳೇ ಮೈಸೂರು ಭಾಗದಲ್ಲಿಯೂ ಹೆಚ್ಚಿನ ಸ್ಥಾನ​ಗ​ಳನ್ನು ಗೆಲ್ಲುತ್ತೇವೆ ಎಂದು ತಿಳಿ​ಸಿ​ದ​ರು. ಸಂಸದೆ ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರಕ್ಕೆ ಪ್ರತಿ​ಕ್ರಿ​ಯಿ​ಸಿದ ಯೋಗೇ​ಶ್ವರ್‌, ಈ ಬಗ್ಗೆ ವರಿಷ್ಠರ ಮಟ್ಟ​ದಲ್ಲಿ ಮಾತ​ನಾ​ಡಿ​ದ್ದೇವೆ. ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಈ ಭಾಗದ ಮುಖಂಡರೆಲ್ಲ ಮನವಿ ಮಾಡಿದ್ದೇವೆ. ಇನ್ನೇನು ತೀರ್ಮಾನ ಆಗ​ಲಿದೆ. ಈಗಾ​ಗಲೇ ಸುಮಲತಾ ಅವರಿಗೂ ಬಿಜೆಪಿ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದೇವೆ. 

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ದ್ವಂ​ದ್ವ ನಿಲುವಿನ ಬಗ್ಗೆ ಸುಮಲತಾ ಅವರಿಗೂ ಗೊತ್ತಿದೆ. ಬಿಜೆಪಿ ಸ​ರ್ಕಾ​ರದ ಅವಧಿಯಲ್ಲಿ ಮಂಡ್ಯದಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಹೇಳಿ​ದರು. ಮಾಜಿ ಸಿಎಂ ಕುಮಾ​ರ​ಸ್ವಾಮಿ ನನ್ನ ಕ್ಷೇತ್ರಕ್ಕೆ ಬಂದರೆ ನಾನು ಸ್ಪರ್ಧಿ​ಸುತ್ತೇನೆಂಬ ಸಚಿವ ಅಶ್ವತ್ಥ ನಾರಾ​ಯಣ ಹೇಳಿಕೆಗೆ ಉತ್ತ​ರಿ​ಸಿದ ಅವರು, ಸಚಿ​ವರು ಹೇಳಿ​ರು​ವುದು ಸತ್ಯ. ಕುಮಾ​ರ​ಸ್ವಾಮಿ ಒಂದು ರೀತಿ ವಲಸೆ ಹಕ್ಕಿ ಇದ್ದಂತೆ. ಅವ​ರಿಗೆ ಪರ್ಮನೆಂಟ್‌ ಕ್ಷೇತ್ರ ಅಂತಾ ಯಾವುದು ಇಲ್ಲ ಎಂದು ವ್ಯಂಗ್ಯ​ವಾ​ಡಿ​ದರು. ಕುಮಾ​ರ​ಸ್ವಾಮಿ ಚುನಾ​ವ​ಣೆಯಲ್ಲಿ ಎಲ್ಲಿ ಬೇಕಾ​ದರೂ ಸ್ಪರ್ಧೆ ಮಾಡು​ತ್ತಾರೆ. 

ಈ ಹಿಂದೆ ಸಾತನೂರು, ಕನಕಪುರ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದರು. ನಾಳೆ ಬೇಕಾದರೆ ಮಂಡ್ಯದಲ್ಲೂ ಸ್ಪರ್ಧೆ ಮಾಡುತ್ತಾರೆ. ರಾಮನಗರದಲ್ಲಿ ಮಗನನ್ನು ಬೆಳೆಸಬೇಕು ಅಂತಾ ಚನ್ನಪಟ್ಟಣಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಏನು ಆಗುತ್ತದೆ ಅಂತ ಕಾದು ನೋಡೋಣ ಎಂದು ಮಾರ್ಮಿ​ಕ​ವಾಗಿ ನುಡಿ​ದ​ರು. ಈ ಸಂದ​ರ್ಭ​ದಲ್ಲಿ ಬಿಜೆಪಿ ಮುಖಂಡ ಜಿ.ಕೆ.​ಗೋ​ವಿಂದ​ರಾಜು, ಮಂಜು , ಪಿ.ಶಿವಾನಂದ, ಶಬರಿ, ರಾಮಾಂಜನೇಯ, ದೂ.ರಾ.ಸುರೇಶ್‌, ಗಿರಿಗೌಡ, ನಾಗೂ, ದೇವಿಕಾ, ಚಂದ್ರಕಲಾ ಇದ್ದ​ರು.

ಮಾಧ್ಯ​ಮ​ಗಳು ಸ್ವಾಭಾ​ವಿ​ಕ​ವಾಗಿ ಆಡಿ​ರುವ ಮಾತು​ಗ​ಳನ್ನು ಬಿತ್ತ​ರಿ​ಸಿವೆ: ಆಡಿ​ಯೋ​ದ​ಲ್ಲಿ​ರುವುದು ನಾನು ಅಧಿ​ಕೃ​ತ​ವಾಗಿ ಆಡಿದ ಮಾತು​ಗ​ಳಲ್ಲ. ಖಾಸ​ಗಿ​ಯಾಗಿ ಆಡಿ​ರುವ ಮಾತು​ಗಳು ಇರ​ಬಹುದು. ಅದು ನನ್ನ ಧ್ವನಿಯೇ ಎಂಬುದು ಗೊ​ತ್ತಾ​ಗುತ್ತಿಲ್ಲ. ವೈಯಕ್ತಿಕವಾಗಿ, ಸ್ವಾಭಾವಿಕವಾಗಿ ಮಾತನಾಡಿರುವು​ದನ್ನು ಮಾಧ್ಯಮಗಳು ಬಿತ್ತರಿಸಿವೆ. ನನ್ನ ವಿಚಾರ ಮಾಧ್ಯಮದ ಮುಂದೆ ಹಿಂದೆ ಒಂದೇ ಆಗಿರುತ್ತದೆ. ಏನೇ ಇದ್ದರೂ ನಾನು ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದೇನೆ. ಗ್ರಾಮೀಣ ಭಾಷೆಗಳಲ್ಲಿ ಕೆಲವೊಂದು ವಿಚಾರಗಳನ್ನು ಮಾತಾನಾಡಿದ್ದೇನೆ. ಏನೇ ಇದ್ದರೂ ನನ್ನ ಮನಸ್ಸಿನಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾರಡುವ ಉದ್ದೇಶ ಇದೆ. ಆ ದೃಷ್ಟಿಯಲ್ಲಿ ನಾನು ಮಾತನಾಡಿರಬಹುದು ಅಷ್ಟೆ. ಯಾವುದೇ ದುರುದ್ದೇಶದಿಂದ ಆಡಿದ ಮಾತುಗ​ಳಲ್ಲ ಎಂದು ಸಿ.ಪಿ.​ಯೋ​ಗೇ​ಶ್ವರ್‌ ಪ್ರತಿ​ಕ್ರಿಯೆ ನೀಡಿ​ದರು.

ಕಡಲೆ ಮತ್ತು ಅವ​ರೆ​ಕಾಯಿ ಪರಿಷೆ: ರಾಮನಗರದಲ್ಲಿ ಇದೇ ಮೊದಲ ಬಾರಿಗೆ ಕಡಲೆಕಾಯಿ ಮತ್ತು ಅವರೆಕಾಯಿ ಪರಿಷೆಯನ್ನು ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಕೆ.ಜಿ.ಗೋವಿಂದರಾಜು ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ನಗರದ ಡೀಸಿ ಕಚೇರಿ ಎದುರಿನ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪರಿಷೆ ನಡೆಯಿತು. ಟ್ರಸ್ಟ್‌ ವತಿ​ಯಿಂದಲೇ 3 ಟನ್‌ ಕಡಲೆಕಾಯಿ, 3 ಟನ್‌ ಅವರೆಕಾಯಿ ಮತ್ತು 3 ಟನ್‌ ಕಬ್ಬನ್ನು ಬಾಲಾಂಜನೇಯಸ್ವಾಮಿಯನ್ನು ದರ್ಶಿಸಿದ ಸುಮಾರು 3 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು. ಪಂಚಮುಖಿ ಆಂಜನೇಯಸ್ವಾಮಿಯನ್ನು ದರ್ಶಿಸಿದ ನಂತರ ನೆರೆದಿದ್ದ ಭಕ್ತರೊಂದಿಗೆ ಹಬ್ಬದ ಶುಭಾಷಯಗಳನ್ನು ವಿನಿಮಯಿಸಿಕೊಂಡರು.

ನಾನು ಉಡಾಫೆ ರಾಜಕಾರಣಿಯಲ್ಲ: ಶಾಸಕ ಮಂಜುನಾಥ್‌

ಇದು ರಾಜ​ಕೀಯ. ಎಲ್ಲ ಪಕ್ಷ​ಗ​ಳಲ್ಲು ಷಡ್ಯಂತ್ರಗಳು ಇರು​ತ್ತವೆ. ಚಾಣಕ್ಯನ ಕಾಲದಿಂದಲೂ ಇದೆಲ್ಲವೂ ನಡೆಯುತ್ತಿದೆ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ಅಷ್ಟೆ. ಷಡ್ಯಂತ್ರ ಅನ್ನುವುದು ರಾಜಕೀಯದಲ್ಲಿ ಸಾಮಾನ್ಯ. ಅದೆಲ್ಲದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ.
- ಸಿ.ಪಿ.​ಯೋ​ಗೇ​ಶ್ವರ್‌ , ವಿಧಾನ ಪರಿ​ಷತ್‌ ಸದ​ಸ್ಯರು.

Latest Videos
Follow Us:
Download App:
  • android
  • ios