ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ನನ್ನನ್ನು ಕಳಿಸಲು ಷಡ್ಯಂತ್ರ: ಸೋಮಶೇಖರ್
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವುದು ‘ಘರ್ ವಾಪ್ಸಿ’ ಮತ್ತು ‘ಆಪರೇಷನ್ ಹಸ್ತ’ದ ಚರ್ಚೆ. ಇದಕ್ಕೆ ನಾಂದಿ ಹಾಡಿದ್ದು ಯಶವಂತಪುರದ ಹಾಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನಡೆ.

ವಿಜಯ್ ಮಲಗಿಹಾಳ
ಬೆಂಗಳೂರು (ಆ.31): ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವುದು ‘ಘರ್ ವಾಪ್ಸಿ’ ಮತ್ತು ‘ಆಪರೇಷನ್ ಹಸ್ತ’ದ ಚರ್ಚೆ. ಇದಕ್ಕೆ ನಾಂದಿ ಹಾಡಿದ್ದು ಯಶವಂತಪುರದ ಹಾಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನಡೆ. ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳುವುದರೊಂದಿಗೆ ಅನುಮಾನಕ್ಕೆ ಎಡೆಮಾಡಿ ಎಸ್‌ಟಿಎಸ್ ಬಳಿಕ ಬಿಜೆಪಿಯ ಸ್ಥಳೀಯ ಮುಖಂಡರ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಬಳಿಕ ಸೋಮಶೇಖರ್ ಅವರೊಂದಿಗೆ ವಲಸೆ ಬಂದಿದ್ದ ಅವರ ಕಟ್ಟಾಬೆಂಬಲಿಗರ ಪೈಕಿ ಅನೇಕರು ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಇದೇ ವೇಳೆ ಸೋಮಶೇಖರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಆಪ್ತ ಮಾತುಕತೆ ನಡೆಸಿದರು. ಕ್ಷೇತ್ರದಲ್ಲಿ ಸಭೆಯನ್ನೂ ನಡೆಸಿದರು. ಈ ಎಲ್ಲ ಬೆಳವಣಿಗೆಗಳು ಸೋಮಶೇಖರ್ ಅವರು ಮತ್ತೆ ಕಾಂಗ್ರೆಸ್‌ಗೆ ವಾಪಸಾಗುತ್ತಾರೆ ಎಂಬ ವದಂತಿಯನ್ನು ಕ್ರಮೇಣ ದಟ್ಟಗೊಳಿಸಿತು. ಈ ಹಿನ್ನೆಲೆಯಲ್ಲಿ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದು ಹೀಗೆ...
* ಬಿಜೆಪಿಯೊಂದಿಗಿನ 4 ವರ್ಷಗಳ ನಂಟು ಕವಲುದಾರಿಯಲ್ಲಿ ಬಂದು ನಿಂತಂತಿದೆ?
ಕವಲುದಾರಿ ಏನಿಲ್ಲ. ಚುನಾವಣೆಗೂ ಮೊದಲು ನಾನು ಕಾಂಗ್ರೆಸ್ ಹೋಗುತ್ತೇನೆ ಎಂಬ ಸುದ್ದಿ ತೇಲಿಬಿಡಲಾಗಿತ್ತು. ಅದರ ನಡುವೆಯೇ ಚುನಾವಣೆ ಎದುರಿಸಿದೆ. ಪಕ್ಷದ ಶೇ.40ರಷ್ಟುಕಾರ್ಯಕರ್ತರು ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದರು. ಆಗ ಆ ಬಗ್ಗೆ ನನ್ನ ಬಳಿ ಯಾವುದೇ ದಾಖಲೆ ಇರಲಿಲ್ಲ. ಆದರೂ, ನಾನು ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೆ. ಆದರೆ ಸ್ಪಂದನೆ ಸಿಗಲಿಲ್ಲ. ಫಲಿತಾಂಶ ಬಂತು. ಗೆಲುವು ಸಾಧಿಸಿದೆ. ಬಳಿಕ ಎಲ್ಲವನ್ನೂ ಮರೆತಿದ್ದೆ. ಆದರೆ, ಏಕಾಏಕಿ ನನ್ನನ್ನು ಚುನಾವಣೆ ವೇಳೆ ವಿರೋಧ ಮಾಡಿದವರು ನನ್ನ ಫೋಟೋ ಬಳಸಿಕೊಂಡು ಕ್ಷೇತ್ರದಾದ್ಯಂತ ಹುಟ್ಟುಹಬ್ಬದ ಬ್ಯಾನರ್ ಹಾಕಿದರು. ಆಗ ನಮ್ಮ ಕಾರ್ಯಕರ್ತರು ಇದನ್ನು ಪ್ರಶ್ನಿಸಿ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಕ್ಷೇತ್ರದ ಮಟ್ಟಿಗೆ ಪತ್ರಿಕಾಗೋಷ್ಠಿಯನ್ನೂ ನಡೆಸಿದರು. ಅದೇ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕಪೀಠದ ಸಮಾರಂಭವೊಂದಕ್ಕೆ ಆಗಮಿಸಿದ್ದರು. ನಾನು ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತನಾಡಿದೆ. ಅಲ್ಲಿಂದ ನಾನು ಪಕ್ಷ ಬಿಟ್ಟು ಹೋಗುತ್ತೇನೆ ಎಂಬ ವ್ಯವಸ್ಥಿತ ಅಪಪ್ರಚಾರ ಆರಂಭವಾಯಿತು.
ರೌಡಿ ಶೀಟರ್‌ಗಳು ಬಾಲ ಬಿಚ್ಚದಂತೆ ಹತೊಟಿಗೆ ತನ್ನಿ: ಸಚಿವ ಪ್ರಿಯಾಂಕ್ ಖರ್ಗೆ
* ನಿಮ್ಮ ವಿರುದ್ಧ ಅಪಪ್ರಚಾರ ಮಾಡಿದ್ರೆ ಸ್ಥಳೀಯ ಮುಖಂಡರಿಗೇನು ಲಾಭ?
ಚುನಾವಣೆಗೆ ಮೊದಲು ಎಲ್ಲವೂ ಸರಿಯಿತ್ತು. ನನ್ನನ್ನು ವಿರೋಧಿಸಿದವರು ನನ್ನ ಬಳಿ ಬಂದು ಕೆಲಸವನ್ನೂ ಮಾಡಿಸಿಕೊಂಡಿದ್ದಾರೆ. ಆದರೆ, ಚುನಾವಣೆ ಬಂದಾಗ ಮಾತ್ರ ವಿರೋಧಿ ಚಟುವಟಿಕೆ ನಡೆಸಿದ್ದನ್ನು ಗಮನಿಸಿದರೆ ಯಾರದ್ದೋ ಚಿತಾವಣೆ ಇರಬಹುದು ಎಂಬ ಅನುಮಾನ ಬಂತು. ಕ್ಷೇತ್ರದ ಕೆಲವರ ಹಿಂದೆ ಪಕ್ಷದ ಒಬ್ಬರೋ, ಇಬ್ಬರು ನಾಯಕರು ಯಾರೋ ಇರಬೇಕು ಎಂಬ ಅನುಮಾನ ನನ್ನದು. ಅವರಿಗೇನೋ ಲಾಭ ಇರಬಹುದೇನೊ ನನಗೆ ಗೊತ್ತಿಲ್ಲ. ಬಿಜೆಪಿಯಿಂದ ನನ್ನನ್ನು ಹೊರಗೆ ಕಳುಹಿಸಲು ಷಡ್ಯಂತ್ರ ನಡೆದಿದೆ.
* ನಿಮ್ಮ ದೂರಿನ ಅನ್ವಯ ಕ್ಷೇತ್ರದ ಕೆಲ ನಾಯಕರನ್ನು ಉಚ್ಚಾಟಿಸಲಾಗಿದೆಯಲ್ಲ?
ನಾನು ಯಾರ ವಿರುದ್ಧವೂ ದೂರು ನೀಡಿರಲಿಲ್ಲ. ಉಚ್ಚಾಟನೆ ಪರಿಹಾರವಲ್ಲ. ನಾನು ಉಚ್ಚಾಟಿಸಿ ಎಂದೂ ಕೇಳಿರಲಿಲ್ಲ. ಆ ಮುಖಂಡರು ಮಾತನಾಡಿದ ಒಂದು ಆಡಿಯೋವನ್ನು ರಾಜ್ಯ ನಾಯಕರಿಗೆ ಕೇಳಿಸಿದ್ದೆ. ಇಂಥ ಇನ್ನೂ ಏಳೆಂಟು ಆಡಿಯೋಗಳಿವೆ. ಒಂದು ಆಡಿಯೋದಲ್ಲಿ ‘ಈ ನನ್ನ ಮಗನನ್ನ ಈ ಸಲ ಸೋಲಿಸಿದರೆ ಮುಂದಿನ 2028ಕ್ಕೆ ನಮ್ಮ ಪಕ್ಷದವರೇ ಅಭ್ಯರ್ಥಿಗಳಾಗುತ್ತಾರೆ’ ಎಂದು ಮಾತನಾಡಿಕೊಂಡಿದ್ದಾರೆ. ಯಾರಾದರೂ ಹಿರಿಯರನ್ನು ಕಳುಹಿಸಿ ನಮ್ಮನ್ನೂ ಮತ್ತು ವಿರೋಧ ಮಾಡುತ್ತಿರುವವರನ್ನೂ ಕರೆದು ಚರ್ಚಿಸಿ. ವಾತಾವರಣ ತಿಳಿಗೊಳಿಸಿ. ಯಾರದ್ದೇ ತಪ್ಪಾಗಿದ್ದರೂ ಬುದ್ಧಿ ಹೇಳಿ. ನೆಮ್ಮದಿಯಿಂದ ಪಕ್ಷ ಸಂಘಟನೆ ಕೆಲಸ ಮಾಡುವಂತೆ ಮಾಡಿ ಎಂಬ ಮಾತನ್ನು ರಾಜ್ಯ ನಾಯಕರಿಗೆ ಹೇಳಿದ್ದೆ. ಆದರೆ, ಮಾತುಕತೆ ಮೂಲಕ ತಿಳಿಗೊಳಿಸುವ ಪ್ರಯತ್ನ ಯಾರೂ ಮಾಡಲಿಲ್ಲ.
* ಸ್ಥಳೀಯ ಮುಖಂಡರನ್ನು ನಿಯಂತ್ರಿಸುವ ಸಾಮರ್ಥ್ಯ ನಿಮಗೆ ಇಲ್ಲವೇ?
ನಾವು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇವೆ. ಆದರೆ, ಸುಖಾ ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಕಿರಿ ಕಿರಿ ಉಂಟು ಮಾಡುತ್ತದೆ. ನಾನು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಾಗ ಪಕ್ಷದ ಶೇ.90ರಷ್ಟುಕಾರ್ಯಕರ್ತರು ನನ್ನೊಂದಿಗೆ ಬಂದರು. ಅದರಲ್ಲಿ ಶೇ.10ರಷ್ಟುಮಂದಿಗೆ ಪಕ್ಷದ ವಿವಿಧ ಹಂತದಲ್ಲಿ ಸ್ಥಾನಮಾನ ನೀಡಲಾಯಿತು. ಇನ್ನುಳಿದವರಿಗೆ ಮಾನಸಿಕ ಹಿಂಸೆ ಶುರುವಾಯಿತು. ಕಾಂಗ್ರೆಸ್‌ನಲ್ಲಿ ಹಾಗಿರಲಿಲ್ಲ. ಇಲ್ಲಿ ಪ್ರತಿಯೊಂದಕ್ಕೂ ನಿಯಮ. ಹೊಂದಾಣಿಕೆ ಮಾಡಿಕೊಳ್ಳುವಂಥದ್ದೇ ಇರಲಿಲ್ಲ.
* ನಿಮ್ಮ ಬೆಂಬಲಿಗರನ್ನು ನೀವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದೀರಂತೆ?
ಈಗ ಷಡ್ಯಂತ್ರ ಮಾಡುತ್ತಿರುವವರು ನಿಮ್ಮನ್ನೇ ಬಿಡಲಿಲ್ಲ. ಇನ್ನು ನಮಗೆ ಮುಂದೆ ಬಿಬಿಎಂಪಿ, ತಾ.ಪಂ.-ಜಿ.ಪಂ. ಚುನಾವಣೆಯಲ್ಲಿ ಟಿಕೆಟ್ ನೀಡಲು ಬಿಡುತ್ತಾರಾ ಎಂಬ ಪ್ರಶ್ನೆಯನ್ನು ನನ್ನೊಂದಿಗೆ ಕಾಂಗ್ರೆಸ್‌ನಿಂದ ಬಂದ ಮುಖಂಡರು ಕೇಳತೊಡಗಿದ್ದರು. ಹೀಗಾಗಿ, ನೀವು ಬಂದರೆ ಬನ್ನಿ. ಬಿಟ್ಟರೆ ಬಿಡಿ. ನಾವು ಹೋಗುತ್ತೇವೆ ಎಂದು ಕಾಂಗ್ರೆಸ್‌ಗೆ ವಾಪಸ್ ಹೋದರು. ನಿಮಗೆ ಒಳ್ಳೆಯದಾಗುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನನ್ನ ಮುಂದಿನ ಚುನಾವಣೆ 2028ಕ್ಕೆ. ಅಲ್ಲಿವರೆಗೆ ಇಲ್ಲ. ನಿಮಗೆ ಈಗ ಅನುಕೂಲ ಆಗುವುದಾದರೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಎಂಬ ಮಾತನ್ನು ಹೇಳಿದೆ. ಅನುಕೂಲ ಆಗದಿದ್ದರೆ ವಾಪಸ್ ಬನ್ನಿ ಎಂದೂ ಹೇಳಿದ್ದೇನೆ.
* ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಅಂತ ಅನ್ನಿಸಿದೆಯೇ?
ಅಂಥ ವಾತಾವರಣ ಇದ್ದರೂ ನಾವು ಅದರ ಕಡೆಗೆ ಗಮನ ಕೊಡದೆ ನಮ್ಮ ಕೆಲಸ ಮಾಡಿಕೊಂಡಿದ್ದೆವು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ನಾನು ವ್ಯವಸ್ಥಿತವಾಗಿ ಆಯೋಜಿಸಿದ್ದೆ. ನಾನು ಪಕ್ಷದ ಕೆಲಸವನ್ನಾಗಲಿ, ಸಚಿವನಾಗಿದ್ದಾಗ ಸರ್ಕಾರದ ಕೆಲಸನ್ನಾಗಲಿ ಲೋಪದೋಷ ಇಲ್ಲದಂತೆ ಮಾಡಿದ್ದೇನೆ. ಪಕ್ಷ ನನಗೆ ಕೊಟ್ಟಎಲ್ಲ ಜವಾಬ್ದಾರಿಯನ್ನೂ ನಿಭಾಯಿಸಿದ್ದೇನೆ. ಕೆಲವು ಮೂಲ ಬಿಜೆಪಿ ನಾಯಕರಿಗಿಂತ ಹೆಚ್ಚು ಮಾಡಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ.
* ಸಮಸ್ಯೆ ಬಗ್ಗೆ ಸಂಘ ಪರಿವಾರಕ್ಕೆ ಮಾಹಿತಿ ನೀಡಬಹುದಿತ್ತಲ್ಲ?
ಕ್ಷೇತ್ರದ ಕೆಲ ಮುಖಂಡರು, ಕಾರ್ಯಕರ್ತರ ಈ ಚಟುವಟಿಕೆಗಳನ್ನು ಚುನಾವಣೆಗೆ ಮುಂಚೆಯೇ ನಾನು ಸಂಘ ಪರಿವಾರದ ಗಮನಕ್ಕೂ ತಂದೆ. ಸಂಘದ ಪ್ರಮುಖರು ಅವರನ್ನು ಕರೆಸಿ ಮಾತನಾಡಿದರು. ಇನ್ನು ಮುಂದೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ ಎಂಬ ಮಾತನ್ನು ನನಗೂ ತಿಳಿಸಿದರು. ಆದರೆ, ಅವರು ಹಾಗೆ ಹೇಳಿದ ಬಳಿಕ ಕ್ಷೇತ್ರದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರ ಚಟುವಟಿಕೆ ದುಪ್ಪಟ್ಟಾಯಿತು. ಮತ್ತೆ ಸಂಘ ಪರಿವಾರದ ಪ್ರಮುಖರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ನೀವು ಅಂಥವರನ್ನು ಬಿಟ್ಟಾಕಿ ಚುನಾವಣೆ ಮಾಡಿ ಎಂಬ ಸಲಹೆ ನೀಡಿದರು. ನಂತರ ಯಾರಿಗೂ ಈ ಬಗ್ಗೆ ಮಾತನಾಡಲು ಹೋಗಲಿಲ್ಲ. ವಾಸ್ತವವಾಗಿ ನಾನು 35ರಿಂದ 40 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಿತ್ತು. ಆದರೆ, ಈ ಎಲ್ಲ ಚಟುವಟಿಕೆಗಳಿಂದ ಗೆಲುವಿನ ಮತಗಳ ಅಂತರ ಕಡಮೆಯಾಯಿತು.
* ಕಾಂಗ್ರೆಸ್ ನಿಮಗೆ ತವರು ಪಕ್ಷ. ಆ ತವರಿನ ಪ್ರೀತಿ ನಿಮ್ಮನ್ನು ಸೆಳೆಯುತ್ತಿದೆಯೇ ಅಥವಾ ಅಲ್ಲಿನವರು ಕರೆಯುತ್ತಿದ್ದಾರೆಯೇ?
ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಯಾವುದೇ ತೊಂದರೆ ಇರಲಿಲ್ಲ. ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಜಿಲ್ಲಾ ಅಧ್ಯಕ್ಷ ಸ್ಥಾನದವರೆಗೆ ಹುದ್ದೆ ನಿಭಾಯಿಸಿದ್ದೇನೆ. ದೆಹಲಿ ಹೋಗದಿದ್ದರೂ ನನಗೆ ಟಿಕೆಟ್ ಕೊಟ್ಟರು. ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸ್ವಲ್ಪ ಏರಿಳಿತ ಉಂಟಾಗಿದ್ದರಿಂದ ಬಿಜೆಪಿಗೆ ಬರಬೇಕಾಯಿತು. ಕಾಂಗ್ರೆಸ್ ಸೇರಬೇಕು ಎಂದರೆ ನೇರವಾಗಿ ಸೇರುತ್ತೇನೆ. ಇಲ್ಲ ಎಂದರೆ ಇಲ್ಲ. ನನಗೇನೂ ಭಯ ಇಲ್ಲ. ಚುನಾವಣೆಗೆ ಹಲವು ತಿಂಗಳು ಮೊದಲೇ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದಿದ್ದರು. ಆದರೆ, ಆಗ ನನಗೆ ಹೋಗಬೇಕು ಎಂದು ಅನಿಸಿರಲಿಲ್ಲ. ಬಿಜೆಪಿಯಲ್ಲಿ ನನ್ನನ್ನು ವಿರೋಧ ಮಾಡುತ್ತಿರುವುದರ ಬಗ್ಗೆ ಆಗ ನನಗೆ ಇಷ್ಟುಅನುಭವ ಆಗಿರಲಿಲ್ಲ. ಅದರ ಬಗ್ಗೆ ಒಂದು ಸಣ್ಣ ಸುಳಿವು ಸಿಕ್ಕಿದ್ದರೆ ಆಗಲೇ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಹೋಗುತ್ತಿದ್ದೆ.
* ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷದ ನಾಯಕಕ್ಕೆ ನೀವು ಬಯಸಿದವರೆ ನೇಮಕಗೊಂಡರೆ ಬಿಕ್ಕಟ್ಟು ಬಗೆಹರಿಯುತ್ತಾ?
ನೂರಕ್ಕೆ ನೂರರಷ್ಟುಆಗುವುದಿಲ್ಲ. ಆ ಹಂತ ಆಗಲೇ ದಾಟಿದೆ. ಯಾರೇ ಬಂದರೂ ಪಕ್ಷವನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಸಾಮರ್ಥ್ಯ ಇಲ್ಲ. ಹೈಕಮಾಂಡ್ ಯಾವುದಕ್ಕೂ ಮುಕ್ತ ಅವಕಾಶ ನೀಡುತ್ತಿಲ್ಲ. ಚುನಾವಣೆಯಲ್ಲೂ ಪೂರ್ಣ ಕಂಟ್ರೋಲ್ ಮಾಡಿದರು. ಯಡಿಯೂರಪ್ಪ ಅವರು ಈ ರಾಜ್ಯದ ಅಗ್ರಗಣ್ಯ ನಾಯಕ. ಪಕ್ಷವನ್ನು ಈ ಮಟ್ಟಕ್ಕೆ ತಂದವರು. ಪ್ರಧಾನಿಗಳು ರಾಜ್ಯದ ಎಲ್ಲೇ ಪ್ರವಾಸ ಕೈಗೊಂಡರೂ ಯಡಿಯೂರಪ್ಪ ಅವರನ್ನು ಜತೆಗಿಟ್ಟುಕೊಂಡು ಹೋದರೆ ಗೌರವ ಕೊಟ್ಟಂತಾಗುತ್ತದೆ. ಯಾವುದೋ ಒಂದು ರಾಷ್ಟ್ರೀಯ ಸಮಿತಿಯಲ್ಲಿ ಸ್ಥಾನ ನೀಡಿದರೆ ಆಗುವುದಿಲ್ಲ.
* ಯಡಿಯೂರಪ್ಪ ಅವರನ್ನು ಅಕಾಲಿಕವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸದೆ ಮುಂದುವರೆಸಿದ್ದರೆ ಪಕ್ಷಕ್ಕೆ ಈ ದುರ್ಗತಿ ಬರುತ್ತಿರಲಿಲ್ಲ ಎಂಬ ಮಾತಿದೆ?
ಹೌದು ನಿಜ. ನ್ಯೂನ್ಯತೆಗಳನ್ನು ಸರಿಪಡಿಸಿ ಅವರನ್ನೇ ಮುಂದುವರೆಸಬೇಕಾಗಿತ್ತು. ಆ ವೇಳೆ ನಾವು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಸಚಿವರು ಒಂದು ಸಭೆ ಮಾಡಿದ್ದೆವು. ಪ್ರಮುಖ ನಿರ್ಧಾರ ಕೈಗೊಳ್ಳುವ ಉದ್ದೇಶವೂ ನಮ್ಮದಾಗಿತ್ತು. ಆದರೆ, ಆಗ ಯಡಿಯೂರಪ್ಪ ಅವರು ನಮಗೆ ಬ್ರೇಕ್ ಹಾಕಿದರು. ಪಕ್ಷ ಮತ್ತು ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾನು ಕೇಳುತ್ತೇನೆ. ನೀವು ನನ್ನನ್ನು ನಂಬಿಕೊಂಡು ಬಂದಿದ್ದೀರಿ. ಯಾರೇ ಮುಖ್ಯಮಂತ್ರಿಯಾಗಿರಲಿ. ನಿಮ್ಮನ್ನು ಕಾಪಾಡುವುದು ನನ್ನ ಜವಾಬ್ದಾರಿ. ನಾವು ಏನನ್ನೂ ಮಾತನಾಡಬಾರದು ಎಂಬ ಮನವಿ ಮಾಡಿದರು. ಹಾಗಾಗಿ ನಾವು ಸುಮ್ಮನಾದೆವು.
* ಯಡಿಯೂರಪ್ಪ ಈಗಲೂ ಅಧಿಕಾರಯುತ ಸ್ಥಾನದಲ್ಲಿ ಇದ್ದಿದ್ದರೆ ವಲಸೆ ಬಂದ ನಿಮ್ಮಂಥವರಿಗೆ ಗೊಂದಲ ಇರುತ್ತಿತ್ತಾ?
ಖಂಡಿತ ಇರುತ್ತಿರಲಿಲ್ಲ. ಅಂದು ಕಷ್ಟಕಾಲದಲ್ಲಿ ನಮ್ಮನ್ನು ಕರೆತಂದು ಸಚಿವ ಸ್ಥಾನ ನೀಡಿ, ಉಪಚುನಾವಣೆ ಗೆಲುವಿಗೆ ಓಡಾಡಿದರು. ನನ್ನ ಸಹಕಾರ ಇಲಾಖೆಯಲ್ಲಿ ಸಾಕಷ್ಟುಮುಕ್ತ ಅವಕಾಶ ನೀಡಿದರು. ಮೈಸೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದರು. ಈಗ ಯಡಿಯೂರಪ್ಪ ಅವರೊಂದಿಗೂ ಮಾತನಾಡಿದ್ದೇನೆ. ದುಡುಕಬೇಡ ಎಂದಿದ್ದಾರೆ. ಆಯ್ತು ಎಂದು ಹೇಳಿದ್ದೇನೆ. ಇನ್ನೂ ಯಾವುದಕ್ಕೂ ಕಾಲ ಮಿಂಚಿಲ್ಲ.
* ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ ನೀವು ಬೇಡಿಕೆ ಇಟ್ಟಿದ್ದೀರಂತೆ?
ಕೇಳಿದ್ದು ನಿಜ. ಆದರೆ, ಪಟ್ಟು ಹಿಡಿದಿಲ್ಲ. ಪ್ರತಿಪಕ್ಷದ ನಾಯಕ, ಉಪನಾಯಕ ಸ್ಥಾನಗಳ ಬಗ್ಗೆ ಚರ್ಚೆ ನಡೆಯುವ ವೇಳೆ ನಾನು ಜಾತಿ ಸಮೀಕರಣದ ಆಧಾರದ ಮೇಲೆ ಮುಖ್ಯ ಸಚೇತಕ ಸ್ಥಾನಕ್ಕೆ ನನ್ನನ್ನೂ ಪರಿಗಣಿಸಿ ಎಂಬ ಮಾತನ್ನು ಬೊಮ್ಮಾಯಿಯವರಿಗೆ ಹೇಳಿದ್ದೆ.
* ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ವಲಸೆ ಹೋಗುತ್ತಿದ್ದೀರಿ ಎಂಬ ಮಾತಿದೆ?
ಹಂಡ್ರೆಡ್ ಪರ್ಸೆಂಟ್ ಇಲ್ಲ. ನನ್ನ ಮಗನನ್ನು ಬಿಬಿಎಂಪಿ ಚುನಾವಣೆಗೆ ಅಥವಾ ಅಸೆಂಬ್ಲಿ ಚುನಾವಣೆಗೆ ತರುವುದಿಲ್ಲ. ನಾನು ಲೋಕಸಭಾ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಇದೆಲ್ಲ ಕೇವಲ ಊಹಾಪೋಹ. ಮತ್ತೊಂದು ಉಪಚುನಾವಣೆ ಎದುರಿಸುವ ಚಿಂತನೆಯೇ ನನ್ನ ಮುಂದೆ ಇಲ್ಲ. ಕಾಂಗ್ರೆಸ್‌ನವರು ನನ್ನನ್ನು ಆಹ್ವಾನಿಸಿಯೂ ಇಲ್ಲ. ಇನ್ನೂ ಪಕ್ಷದ ಕೆಲವು ನಾಯಕರ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪ, ಆರ್.ಅಶೋಕ್, ಸುನೀಲ್‌ಕುಮಾರ್ ಮೊದಲಾದವರಿದ್ದಾರೆ. ಎಲ್ಲವನ್ನೂ ಸರಿ ಮಾಡುತ್ತಾರೆ ಎಂಬ ವಿಶ್ವಾಸವಿದೆ.
* ಪಕ್ಷದ ವರಿಷ್ಠರಿಗೆ, ಬಿ.ಎಲ್.ಸಂತೋಷ್ ಮುಂದೆ ನಿಮ್ಮ ಅಹವಾಲು ಇಟ್ಟಿದ್ದೀರಾ?
ಈ ಸಂಬಂಧ ನಾನು ಯಾರನ್ನೂ ನಾನು ಸಂಪರ್ಕಿಸಿಲ್ಲ. ಸಂತೋಷ್ ಅವರನ್ನು ಸುಮಾರು ಒಂದೂವರೆ ತಿಂಗಳ ಹಿಂದೆ ಬೇರೊಂದು ವಿಷಯಕ್ಕಾಗಿ ಸಂಪರ್ಕಿಸಿದ್ದೆ. ಚುನಾವಣೆಗೂ ಮೊದಲು ನಮ್ಮ ಕ್ಷೇತ್ರದಲ್ಲಿ ಸರ್ಕಾರದ ರಾಜ್ಯ ಮಟ್ಟದ ಫಲಾನುಭವಿಗಳ ಸಮಾರಂಭ ನಡೆಸಲಾಯಿತು. ಅದರ ಕೋಟ್ಯಂತರ ರು. ಖರ್ಚು ವೆಚ್ಚವನ್ನು ಬಿಡಿಎ, ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಭರಿಸುವ ನಿರ್ಧಾರವಾಗಿತ್ತು. ಮುಂದೆ ಬಿಡಿಎನಿಂದ ಆಗ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರ ಮುಂದೆ ಈ ಫೈಲ್ ಹೋದಾಗ ತಿರಸ್ಕರಿಸಿದರು. ಅದು ಯಾಕೆ ಮಾಡಿದರೋ ಗೊತ್ತಿಲ್ಲ. ಹೀಗಾಗಿ, ಆ ಸಮಾರಂಭದ ವೆಚ್ಚಕ್ಕಾಗಿ ಸಂಬಂಧಪಟ್ಟಇಲಾಖೆಗಳು ನನ್ನನ್ನು ಕೇಳತೊಡಗಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮ. ಹೀಗಾಗಿ ಸಂತೋಷ್ ಅವರ ಗಮನಕ್ಕೆ ತಂದೆ.
ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ
* ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲವಂತೆ ಹೌದೆ?
ಪಕ್ಷದಲ್ಲಿ ಮೊದಲು ಈ ರೀತಿ ಇರಲಿಲ್ಲ. ಇಲ್ಲಿ ರಾಜ್ಯ ಮಟ್ಟದಲ್ಲಿ ಕೈಗೊಂಡ ನಿರ್ಧಾರ ದೆಹಲಿಯಲ್ಲಿ ಅಪ್ರೂವ್ ಆಗಿ ಬರುತ್ತಿತ್ತು. ಇತ್ತೀಚಿಗೆ ಕೋರ್ ಕಮಿಟಿಗೂ ಬೆಲೆ ಇಲ್ಲ. ರಾಜ್ಯ ಮಟ್ಟದ ನಾಯಕರಿಗೂ ಬೆಲೆ ಇಲ್ಲ. ಉಸಿರುಗಟ್ಟುವ ವಾತಾವರಣವಿದೆ ಎಂಬುದಾಗಿ ಮೂಲ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಅನೇಕರಿಗೆ ಬಹಿರಂಗವಾಗಿ ಹೇಳಿಕೊಳ್ಳಲು ಆಗುತ್ತಿಲ್ಲ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದವರು. ಈಗ ಪ್ರತಿಪಕ್ಷದ ನಾಯಕ ಸ್ಥಾನ ಅವರಿಗೆ ಘೋಷಿಸದೇ ಇರುವುದು ಅವರಿಗೆ ಎಷ್ಟುಅಸಮಾಧಾನ ಇರಬಹುದು ಹೇಳಿ. ಅಶೋಕ್ ಮೋಸ್ಟ್ ಸೀನಿಯರ್. ಅಧ್ಯಕ್ಷ ಸ್ಥಾನ ಕೇಳುತ್ತಿದ್ದಾರೆ. ಹೀಗೆ ಒಬ್ಬರಲ್ಲ ಮತ್ತೊಬ್ಬ ಶಾಸಕರು ಅಸಮಾಧಾನಗೊಂಡಿದ್ದಾರೆ. ಯಾರಿಗೂ ಹೇಳಿಕೊಳ್ಳಲು ಆಗುತ್ತಿಲ್ಲ ಅಷ್ಟೇ.