ಸರ್ಕಾರಿ ನೌಕರಿ ಪಡೆಯಲು ಮಹಿಳೆಯರು ಮಂಚ ಏರಬೇಕು ಮತ್ತು ಯುವಕರು ಲಂಚ ಕೊಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷದ ಕೀಳು ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ: ಗೀತಾ ವಿವೇಕಾನಂದ 

ಬೆಂಗಳೂರು(ಆ.27): ತಮ್ಮ ಹೇಳಿಕೆಯ ಮೂಲಕ ಮಹಿಳೆಯರಿಗೆ ಚಿತ್ತಾಪುರದ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವಮಾನ ಮಾಡಿದ್ದು, ಅವರು ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಎಚ್ಚರಿಕೆ ನೀಡಿದ್ದಾರೆ. 

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಸರ್ಕಾರಿ ನೌಕರಿ ಪಡೆಯಲು ಮಹಿಳೆಯರು ಮಂಚ ಏರಬೇಕು ಮತ್ತು ಯುವಕರು ಲಂಚ ಕೊಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷದ ಕೀಳು ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಅತ್ಯಂತ ಖಂಡನಾರ್ಹ’ ಎಂದರು. ‘ಪ್ರಿಯಾಂಕ್‌ ಖರ್ಗೆ ಹೇಳಿಕೆ ಖಂಡಿಸಿ 17 ಜಿಲ್ಲೆಗಳಲ್ಲಿ ಈಗಾಗಲೇ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಆದರೆ, ಪ್ರಿಯಾಂಕ್‌ ಅವರು ಮನಃಪೂರ್ವಕವಾಗಿ ಕ್ಷಮೆ ಕೇಳಿಲ್ಲ. ಇದನ್ನು ರಾಜ್ಯ ಮತ್ತು ದೇಶದ ಮಹಿಳೆಯರೆಲ್ಲರ ಪರವಾಗಿ ಖಂಡಿಸಲಾಗುವುದು’ ಎಂದು ಹೇಳಿದರು.

'ಗೋಮೂತ್ರ ಕುಡಿಯುವವರ ಬುದ್ದಿ ಹತ್ಯೆಯಾಗಿದೆ ಎಂದಿದ್ದ ಸಾವರ್ಕರ್!'

‘ಪ್ರಿಯಾಂಕ್‌ ಅವರು ತಮ್ಮನ್ನು ಚಾಲ್ತಿಯಲ್ಲಿಡಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರು ಮಹಿಳೆಯರು ಕುರಿತ ಗೌರವದಿಂದ ಮಾತನಾಡಬೇಕು. ಈ ರೀತಿಯ ಅಸಭ್ಯ ಪದ ಬಳಸಿದ ಅವರ ವಿರುದ್ಧ ಕಾಂಗ್ರೆಸ್‌ ಪಕ್ಷ ಉಗ್ರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಮಹಿಳಾ ಸರ್ಕಾರಿ ನೌಕರರೆಲ್ಲರೂ ಉತ್ತಮ ಕುಟುಂಬದ ಹಿನ್ನೆಲೆಯನ್ನೇ ಹೊಂದಿದ್ದಾರೆ. ಅಲ್ಲದೇ ಪರಿಶ್ರಮದ ಮೂಲಕ ಕೆಲಸ ಪಡೆದು ಉನ್ನತ ಹುದ್ದೆಗಳನ್ನೇರಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷದ ಮುಖಂಡ ಅಧೀರ್‌ ರಂಜನ್‌ ಚೌಧರಿ ಕೆಲವೇ ದಿನಗಳ ಹಿಂದೆ ರಾಷ್ಟ್ರಪತಿಗಳನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿ ಅವಮಾನ ಮಾಡಿದ್ದರು. ಇದೀಗ ಪ್ರಿಯಾಂಕ್‌ ಖರ್ಗೆ ಅದೇ ಮಾದರಿಯಲ್ಲಿ ಕಾಂಗ್ರೆಸ್‌ ಪಕ್ಷದವರ ಕೀಳು ಅಭಿರುಚಿಯನ್ನು ಮುಂದುವರೆಸುತ್ತಿರುವುದು ಅತ್ಯಂತ ಬೇಸರ ತಂದಿದೆ. ಹಲವಾರು ಮಹಿಳೆಯರು ತಮ್ಮನ್ನು ಸಂಪರ್ಕಿಸಿ ಈ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ಬೆಂಗಳೂರು ಉತ್ತರ ಜಿಲ್ಲಾ ವಕ್ತಾರ ಎಸ್‌.ಹರೀಶ್‌, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾರಾವ್‌, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಆನಂದ್‌ ಉಪಸ್ಥಿತರಿದ್ದರು.