Asianet Suvarna News Asianet Suvarna News

ಸಿದ್ದರಾಮಯ್ಯಗೆ ಬಿಜೆಪಿಗರಿಂದ ಎಚ್ಚರಿಕೆ : ಕ್ಷಮೆ ಕೇಳಬೇಕೆಂದು ಆಗ್ರಹ

  • ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ ಎನ್ನುವ ಹೇಳಿಕೆ ವಿರುದ್ಧ ಬಿಜೆಪಿ ವಾಗ್ದಾಳಿ
  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕೆಂದು ಆಗ್ರಹ
bjp Leaders warns To Congress Leader Siddaramaiah snr
Author
Bengaluru, First Published Nov 7, 2021, 7:03 AM IST

ಬೆಂಗಳೂರು (ನ.07): ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ ಎನ್ನುವ ಹೇಳಿಕೆ ವಿರುದ್ಧ ಬಿಜೆಪಿ ವಾಗ್ದಾಳಿ (BJP) ಮುಂದುವರೆಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ದಲಿತರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತೀವ್ರತರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಟ್ವೀಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi), ರಾಜಕೀಯ ಹಿತಾಸಕ್ತಿ, ಆಕಾಂಕ್ಷೆಗಳಿಗೆ ದಲಿತ ನಾಯಕರನ್ನು ಅವರು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ರಾಜ್ಯದ ದಲಿತ ಸಮುದಾಯಕ್ಕೆ ಗೊತ್ತಿದೆ ಎಂದಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ (N Ravikumar) ಮತ್ತು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಜಂಟಿಯಾಗಿ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಲ್ಲಿ ದಲಿತ ವಿರೋಧಿಯಾಗಿದ್ದು, ಬಾಯಲ್ಲಿ ಮಾತ್ರ ದಲಿತ ಪ್ರೇಮ ಇದೆ. ಕಟ್ಟಿದ ಮನೆಯಲ್ಲಿ ವಿಷ ಸರ್ಪದಂತೆ ಸೇರಿಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ (congress) ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದರು. ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬ ಮಾತು ಸಿದ್ದರಾಮಯ್ಯಗೆ ಸೂಕ್ತವಾಗಿದೆ. ಸಿಂದಗಿಯ ಮಾದಿಗ ಸಮಾವೇಶದಲ್ಲಿ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿತ್ತಿದ್ದಾರೆ. ಅದರ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆದರೆ, ಈಗ ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ (Dr BR ambedkar) ಅವರಿಗೆ ಭಾರತ ರತ್ನ ನೀಡಲಿಲ್ಲ. ದೆಹಲಿಯಲ್ಲಿ ಅವರ ಶವಸಂಸ್ಕಾರಕ್ಕೆ ಕಾಲು ಎಕರೆ ಜಾಗ ಕೊಡಲಿಲ್ಲ. ಆದರೆ, ಕಾಂಗ್ರೆಸ್‌ (Congress) ಪ್ರಧಾನಿಗಳಾದ ಜವಹಾರಲಾಲ್‌ ನೆಹರು (Javaharlal Neharu), ಇಂದಿರಾಗಾಂಧಿ (Indira Gandi) ಮತ್ತು ರಾಜೀವ್‌ ಗಾಂಧಿ (Rajeev Gandi) ಅವರಿಗೆ ಶವಸಂಸ್ಕಾರಕ್ಕಾಗಿ 15 ಎಕರೆ ಜಾಗ ನೀಡಲಾಗಿದೆ. ದಲಿತರಿಗೆ ಅಕ್ಕಿ, ಪಡಿತರ ಚೀಟಿ, ಮೂಲ ವೇತನ, ಕುಡಿಯುವ ನೀರು, ಜಮೀನು, ಮನೆಗಳ ವಿತರಣೆ, ಜಮ್ಮು-ಕಾಶ್ಮೀರದಲ್ಲಿ ಮೀಸಲಾತಿ, ದಲಿತರ ಕಾಲೋನಿಗೆ ಸಿಮೆಂಟ್‌ ಕಾಂಕ್ರೀಟ್‌ ರಸ್ತೆ, ದಲಿತರಿಗೆ ಉದ್ಯೋಗದಂತಹ ಹತ್ತಾರು ಅಭಿವೃದ್ಧಿ ಕ್ರಮಗಳನ್ನು ಬಿಜೆಪಿ ಕೈಗೊಂಡಿದೆ. ಬಿಜೆಪಿಯಲ್ಲಿ ಗರಿಷ್ಠ ದಲಿತ ಜನಪ್ರತಿನಿಧಿಗಳಿದ್ದಾರೆ ಎಂದರು.

ದಲಿತರ ಬಗ್ಗೆ ಸಿದ್ದುಗೆ ಅಸಮಾಧಾನವಿದೆ

ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಯಿಂದ ಅವರಿಗೆ ದಲಿತ ನಾಯಕರ ಬಗ್ಗೆ ಎಷ್ಟೊಂದು ಅಸಮಾಧಾನ ಇದೆ ಎಂಬುದು ತಿಳಿಯುತ್ತದೆ. ಅವರ ಸಮಕಾಲೀನ ದಲಿತ ನಾಯಕರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುತ್ತಾರೆ ಎಂದು ಭಾವಿಸಿರಲಿಲ್ಲ.

ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ದಲಿತರನ್ನು ಕಾಂಗ್ರೆಸ್‌ (Congress) ತುಚ್ಛವಾಗಿ ಕಂಡಿದೆ. ಆದರೆ, ಬಿಜೆಪಿ ಮತ್ತು ಬಿಜೆಪಿ ಸರ್ಕಾರಗಳು ದಲಿತರಿಗೆ ಗರಿಷ್ಠ ಅವಕಾಶ ನೀಡಿದ್ದು, ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ದಲಿತರು ಮತ್ತು ಮುಸ್ಲಿಮರನ್ನು ಅಧಿಕಾರಕ್ಕಾಗಿ ಮಾತ್ರ ಇಟ್ಟುಕೊಂಡ ಪಕ್ಷ ಕಾಂಗ್ರೆಸ್‌ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷ ಅವರನ್ನು ಮತ ಬ್ಯಾಂಕ್‌ ಆಗಿ ಮಾತ್ರ ಬಳಸಿಕೊಂಡಿದೆ. ಜಗಜೀವನರಾಂ (Jagajeevanram) ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕಿತ್ತು. ಆದರೆ, ಅವರನ್ನು ಕಡೆಗಣಿಸಲಾಯಿತು ಎಂದು ಕಿಡಿಕಾರಿದರು.

2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆ ಕಾಲದಲ್ಲಿ ಅತಿ ಹೆಚ್ಚು ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ (Sonia gandhi) ಅವರನ್ನು ತೃಪ್ತಿಪಡಿಸಲು ಈ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ದಲಿತರನ್ನು ಕೇಳುವವರೇ ಇರಲಿಲ್ಲ. ನಾವು ದಲಿತರಿಗೆ ಬಿಜೆಪಿಯಲ್ಲಿ ಅವಕಾಶ ಕೊಟ್ಟ ಬಳಿಕ ಕಾಂಗ್ರೆಸ್‌ನಲ್ಲಿನ ಧ್ರುವನಾರಾಯಣ್‌ ಸೇರಿದಂತೆ ಹಲವು ದಲಿತ ಮುಖಂಡರಿಗೆ ಕರೆ ಮಾಡಿ ಮಾತನಾಡಿಸುತ್ತಿದ್ದಾರೆ. ಸಿದ್ದರಾಮಯ್ಯರದ್ದು ನಿರಂತರ ದ್ವೇಷದ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.

ರಾಜಕೀಯ ಹಿತಾಸಕ್ತಿಗೆ ದಲಿತ ನಾಯಕರ ಬಳಕೆ:  ಈ ನಡುವೆ ಟ್ವೀಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜಕೀಯ ಹಿತಾಸಕ್ತಿ, ಆಕಾಂಕ್ಷೆಗಳಿಗೆ ದಲಿತ ನಾಯಕರನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ರಾಜ್ಯದ ದಲಿತ ಸಮುದಾಯಕ್ಕೆ, ಕರ್ನಾಟಕಕ್ಕೆ ಗೊತ್ತಿದೆ. ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯಿಂದ ಅವರಿಗೆ ದಲಿತ ನಾಯಕರ ಬಗ್ಗೆ ಎಷ್ಟೊಂದು ಅಸಮಾಧಾನ ಇದೆ ಎಂಬುದು ತಿಳಿಯುತ್ತದೆ. ಅವರ ಸಮಕಾಲೀನ ದಲಿತ ನಾಯಕರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios