Asianet Suvarna News Asianet Suvarna News

ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸ್ಪಷ್ಟ ಸುಳಿವು : ಕೈ ನಾಯಕರಲ್ಲಿ ಹೆಚ್ಚಿದ ವಿಶ್ವಾಸ

  • ಹಾನಗಲ್‌ ಮತ್ತು ಸಿಂದಗಿ ಉಪಚುನಾವಣೆ ಫಲಿತಾಂಶ ಇಡೀ ಬಿಜೆಪಿ ಹಾಗೂ ರಾಜ್ಯ ಸರ್ಕಾರಕ್ಕೆ ಆಗಿರುವ ಮುಖಭಂಗ. 
  • ದೇಶದಲ್ಲಿ ಬಿಜೆಪಿಯ ವರ್ಚಸ್ಸು ಕುಸಿಯುತ್ತಿರುವ ಸಂಕೇತ ಕೂಡ ಹೌದು ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌
Congress will Get Power in Karnataka Says DK Shivakumar snr
Author
Bengaluru, First Published Nov 3, 2021, 11:16 AM IST

 ಬೆಂಗಳೂರು (ನ.03):  ಹಾನಗಲ್‌ (Hanagal) ಮತ್ತು ಸಿಂದಗಿ ಉಪಚುನಾವಣೆ (Sindagi By election) ಫಲಿತಾಂಶ ಇಡೀ ಬಿಜೆಪಿ (BJP) ಹಾಗೂ ರಾಜ್ಯ ಸರ್ಕಾರಕ್ಕೆ (Karnataka Govt) ಆಗಿರುವ ಮುಖಭಂಗ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆ ಅಷ್ಟೇ ಅಲ್ಲ, ದೇಶದಲ್ಲಿ ಬಿಜೆಪಿಯ (BJP) ವರ್ಚಸ್ಸು ಕುಸಿಯುತ್ತಿರುವ ಸಂಕೇತ ಕೂಡ ಹೌದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC President DK Shivakumar) ಹೇಳಿದ್ದಾರೆ.

ಉಪಚುನಾವಣೆ ಫಲಿತಾಂಶದ ಬಗ್ಗೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 2018ರ ಚುನಾವಣೆಯಲ್ಲಿ ಹಾನಗಲ್‌ನಲ್ಲಿ ಬಿಜೆಪಿ, ಸಿಂದಗಿಯಲ್ಲಿ ಜೆಡಿಎಸ್‌  (JDS) ಗೆದ್ದಿತ್ತು. ಆದರೆ, ಈಗಿನ ಉಪ ಚುನಾವಣೆಯಲ್ಲಿ ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್‌ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಈಗ ದುಪ್ಪಟ್ಟು ಮತ ಪ್ರಮಾಣ ಹೆಚ್ಚಿಸಿಕೊಂಡು ಎರಡನೇ ಸ್ಥಾನಕ್ಕೇರಿದೆ. ಇದೆಲ್ಲವನ್ನೂ ನೋಡಿದಾಗ ಜನ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡಿದ್ದು, ಇದು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆಯಾಗಿದೆ ಎಂದು ವ್ಯಾಖ್ಯಾನಿಸಿದರು.

'ಹಾನಗಲ್ ಫಲಿತಾಂಶದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ'

ಬಿಎಸ್‌ವೈ (BS Yediyurappa) ಕಣ್ಣೀರಲ್ಲಿ ಬಿಜೆಪಿ ಪತನ: ಉಪಚುನಾಣೆ ಫಲಿತಾಂಶ ಕೇವಲ ಮುಖ್ಯಮಂತ್ರಿ ಅವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇಡೀ ಬಿಜೆಪಿ, ಬಿಜೆಪಿ ಸರ್ಕಾರಕ್ಕೆ ಆಗಿರುವ ಮುಖಭಂಗ. 2023ರ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಹಾಗೂ ಆ ಪಕ್ಷದ ಸರ್ಕಾರ ಕೊಚ್ಚಿ ಹೋಗಲಿದೆ ಎಂಬ ಈ ಹಿಂದೆ ನಾನು ಹೇಳಿದ್ದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಶಿವಕುಮಾರ್‌ ಹೇಳಿದರು.

ನಮ್ಮ ಹೇಳಿಕೆಗಳಿಂದ ಬೇಸರವಾಗಿದ್ರೆ ಕ್ಷಮೆ ಕೇಳ್ತಿನಿ: ಡಿಕೆಶಿ ಮಾತಿನ ಅರ್ಥ ನಿಗೂಢ!

ಶ್ರೀನಿವಾಸ ಮಾನೆ (Shrinivas mane) ಅವರು ಕಳೆದ ಬಾರಿ ಹಾನಗಲ್‌ ಕ್ಷೇತ್ರದಲ್ಲಿ 6 ಸಾವಿರ ಮತಗಳಿಂದ ಸೋತಿದ್ದರು. ಈಗಿನ ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರವಿದೆ. ಜತೆಗೆ ಅದು ಮುಖ್ಯಮಂತ್ರಿಯವರ ತವರು ಜಿಲ್ಲೆ. ಅಲ್ಲದೆ ಮುಖ್ಯಮಂತ್ರಿಯವರು ಹಾನಗಲ್‌ ಕ್ಷೇತ್ರದ ಅಳಿಯ. ಎಲ್ಲ ರೀತಿಯಲ್ಲೂ ಅನುಕೂಲ ಬಿಜೆಪಿಯವರಿಗೆ ಇತ್ತು. ಅವರ ಸರ್ಕಾರದಲ್ಲಿರುವ ನಮ್ಮ ಸ್ನೇಹಿತರು ಬ್ಯಾಗ್‌ ತುಂಬಿಕೊಂಡು ಹೋಗಿ ಬಿಜೆಪಿಯ ಗೆಲುವಿಗಾಗಿ ಬಹಳ ಪ್ರಯತ್ನಪಟ್ಟಿದ್ದರು. ಮುಖ್ಯಮಂತ್ರಿ, ಯಡಿಯೂರಪ್ಪ, ಅವರ ಪುತ್ರ ಸೇರಿದಂತೆ ಅನೇಕ ಸಚಿವರು ಕ್ಷೇತ್ರದಲ್ಲಿ ಬೀಡುಬಿಟ್ಟು ಹೆಣೆದ ಕಾರ್ಯತಂತ್ರ ಫಲಿಸಿಲ್ಲ. ಅವರು ಏನೇ ಮಾಡಿದರೂ ಕ್ಷೇತ್ರದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇದು ಬದಲಾವಣೆಯ ಪರ್ವ ಅಲ್ಲವೇ ಎಂದು ಶಿವಕುಮಾರ್‌ ಪ್ರಶ್ನಿಸಿದರು.

ಸಿಂದಗಿಯಲ್ಲಿ ಕಾಂಗ್ರೆಸ್‌ಗೆ ಸಮಾಧಾನ:

ಸಿಂದಗಿಯಲ್ಲಿ ಹಿಂದೆ ನಾವು ಮೂರನೇ ಸ್ಥಾನದಲ್ಲಿದ್ದೆವು. ಮನಗೂಳಿ (Managuli) ಅವರು ತಮ್ಮ ಪುತ್ರನನ್ನು ನಮ್ಮ ಪಕ್ಷದಲ್ಲಿ ಬಿಟ್ಟು ಹೋದರು. ಅವರು ಜೆಡಿಎಸ್‌ ಚಿಹ್ನೆಯಲ್ಲಿ ಗೆಲ್ಲುತ್ತೇವೆ ಎಂದಿದ್ದರೆ ನಮ್ಮ ತಕರಾರು ಏನೂ ಇರಲಿಲ್ಲ. ಅವರು ಕಾಂಗ್ರೆಸ್‌ಗೆ ಬರಲು ಮುಂದಾದಾಗ ಜಿಲ್ಲೆಯ ಎಲ್ಲ ನಾಯಕರು ಒಟ್ಟಾಗಿ ಅವರಿಗೆ ಟಿಕೆಟ್‌ ನೀಡಿದೆವು. ಅಲ್ಲೂ ನಾವು ಗೆಲ್ಲುವ ವಿಶ್ವಾಸ ಇತ್ತು. ಮತ ಪ್ರಮಾಣ ನೋಡಿದರೆ ನಾವು ಸೋತಿದ್ದರೂ ಸಮಾಧಾನ ತಂದಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಮತದಾರರಿಗೆ ದೊಡ್ಡ ಸೆಲ್ಯೂಟ್‌:

ಹಾನಗಲ್‌ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ, ಚುನಾವಣೆಯಲ್ಲಿ ಹಳ್ಳಿ ಹಳ್ಳಿಯಲ್ಲಿ ದುಡಿದ ಕಾರ್ಯಕರ್ತರಿಗೆ ದೊಡ್ಡ ಸೆಲ್ಯೂಟ್‌. ಸಿಂದಗಿಯಲ್ಲೂ ಪಕ್ಷ ಗಟ್ಟಿಯಾಗುತ್ತಿದೆ. ಕಾರ್ಯಕರ್ತರು ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಆತ್ಮವಿಶ್ವಾಸದಿಂದ ಇರಿ. ಬಿಜೆಪಿಯವರು ಏನೆಲ್ಲಾ ಪ್ರಯತ್ನ ಪಟ್ಟಿದ್ದರು, ಎಷ್ಟೆಲ್ಲಾ ಒತ್ತಡ ಹಾಕಿದ್ದರು. ಆದರೂ ಅದ್ಯಾವುದಕ್ಕೂ ಮತದಾರ ಬಗ್ಗಲಿಲ್ಲ. ಕಾಂಗ್ರೆಸ್‌ ಮೇಲೆ ಜನ ಇಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಸಿಕೊಂಡು ಅವರ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದ್ದು, ಅದನ್ನು ನಾವು ಸರಿ ಮಾಡುತ್ತೇವೆ ಎಂದು ದೀಪಾವಳಿ ಹಬ್ಬದ ಸಮಯದಲ್ಲಿ ಶುಭ ಗಳಿಗೆಗೆ ಹೆಜ್ಜೆ ಇಡುವ ವಿಶ್ವಾಸದಿಂದ ಹೇಳುತ್ತೇನೆ ಎಂದು ತಿಳಿಸಿದರು.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Follow Us:
Download App:
  • android
  • ios