ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಹೀಗಾಗಿ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ. ಅವರು ಪ್ರತಿಭಟನೆ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ. 

ರಾಮನಗರ (ಏ.06): ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ. ಹೀಗಾಗಿ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ. ಅವರು ಪ್ರತಿಭಟನೆ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ. ಮನೆಯಲ್ಲಿ ಹೆಂಗಸರು ಬಯ್ಯುತ್ತಾರೆಂಬ ಕಾರಣಕ್ಕೆ ಬಿಜೆಪಿ ನಾಯಕರು ವಿಧಾನಸೌಧ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ ಮಲಗುತ್ತಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು. ಮಾಗಡಿ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿಪುರ ಗ್ರಾಮದಲ್ಲಿ 6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳನ್ನು ಎಷ್ಟು ಬಾರಿ ಏರಿಕೆ ಮಾಡಿದ್ದಾರೆಂದು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದೆ. ಇದರಿಂದ ಆತಂಕಗೊಂಡಿರುವ ಬಿಜೆಪಿ ನಾಯಕರಿಗೆ ಮನೆಯಲ್ಲಿ ನಿದ್ರೆ ಬರಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಫ್ರೀಡಂ ಪಾರ್ಕಿನಲ್ಲಿ ಮಲಗುವ ಮೂಲಕ ಪ್ರತಿಭಟನೆ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಕ್ಫ್ ಮಸೂದೆ ಮುಸ್ಲಿಂ ವಿರೋಧಿ: ಸಚಿವ ಬೈರತಿ ಸುರೇಶ್

ಹೈಕಮಾಂಡ್ ತೀರ್ಮಾನ: ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಬೇಕೋ, ಬೇಡವೋ ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧರಿದ್ದಾರೆ. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ನಾವೂ ಕೂಡ ಸ್ವಾಗತಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಧ್ಯಕ್ಷ ಸ್ಥಾನ ತ್ಯಜಿಸುವ ವಿಚಾರದಲ್ಲಿ ನಮ್ಮ ನಾಯಕರು ಯಾವುದೇ ಷರತ್ತು ಹಾಕಿಲ್ಲ. ಇದೆಲ್ಲವೂ ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೆ. ಯಾರು ಯಾವ ಸ್ಥಾನದಲ್ಲಿರಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ಎಲ್ಲಾ ಸ್ಥಾನಗಳ ಪಲ್ಲಟ ಆಗಲಿದೆ ಎಂದರು.

ಬಿಜೆಪಿಯಿಂದ ಸಾವಿನ ರಾಜಕಾರಣ: ಬಿಜೆಪಿ ನಾಯಕರಿಗೆ ಸಾವು, ಜಾತಿ, ಧರ್ಮಗಳೇ ರಾಜಕಾರಣದ ವಿಚಾರಗಳು. ಆದರೆ, ನಮಗೆ ಅಭಿವೃದ್ಧಿಯೇ ರಾಜಕಾರಣದ ಮೂಲಮಂತ್ರವಾಗಿದ್ದು, ಗ್ಯಾರಂಟಿ ಯೋಜನೆಗಳ ಜಾರಿಯಿಂದ ನಮಗೆ ದೊರೆತಿರುವ ಹೆಸರನ್ನು ಕೆಡಿಸಲು ನಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದರು. ಮಡಿಕೇರಿಯ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಪ್ರಕರಣದ ನಿಸ್ಪಕ್ಷಪಾತ ತನಿಖೆ ನಡೆದರೆ ಸತ್ಯಾಂಶ ಏನೆಂದು ಹೊರ ಬರಲಿದೆ. ಅಲ್ಲಿವರೆಗೆ ಬಿಜೆಪಿಯವರು ಸಂಯಮ ಕಾಪಾಡಿಕೊಳ್ಳಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದರು.

ಆ ಬ್ರಹ್ಮ ಬಂದರೂ ಈ ಜಾಗವನ್ನು ಮುಸ್ಲಿಂರಿಗೆ ಬಿಟ್ಟುಕೊಡುವುದಿಲ್ಲ: ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?

ಮೊದಲು ಒಗ್ಗಟ್ಟು ಪ್ರದರ್ಶಿಸಲಿ: ಇದು ಘಜ್ನಿ, ಘೋರಿ ಸರ್ಕಾರ, ಇದರ ವಿರುದ್ಧ ಯುದ್ಧ ಆರಂಭಿಸುತ್ತೇನೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಸದ್ಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಮಧ್ಯೆಯೇ ಯುದ್ಧ ನಡೆಯುತ್ತಿದ್ದು, ಅವರಲ್ಲಿ ಹೊಂದಾಣಿಕೆ ಕೊರತೆ ಇದೆ. ಮೊದಲು ಅವರು ಒಗ್ಗಟ್ಟಾಗಲಿ, ನಂತರ ನಮ್ಮ ಮೇಲೆ ಯುದ್ಧ ಮಾಡಲಿ. ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಲೇವಡಿ ಮಾಡಿದರು. ಈ ವೇಳೆ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಯರೇಹಳ್ಳಿ ಮಂಜು, ತಾಪಂ ಮಾಜಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ಜಿಬಿಡಿಎ ನಿರ್ದೇಶಕ ಅಬ್ಬನಕುಪ್ಪೆ ರಮೇಶ್, ಗ್ರಾಪಂ ಅಧ್ಯಕ್ಷೆ ಅಶ್ವಿನಿಉಮೇಶ್, ಸದಸ್ಯ ನಾಗೇಶ್, ಮಹದೇವಯ್ಯ, ಶಿಲ್ಪಾ, ಮುಖಂಡರಾದ ಕೂಟಗಲ್ ನಾಗರಾಜು, ನಟರಾಜು, ಪಂಚಾಕ್ಷರಿ ಮತ್ತಿತರರು ಹಾಜರಿದ್ದರು.