Asianet Suvarna News Asianet Suvarna News

ಹಿಜಾಬ್‌ ನಿಷೇಧ ವಾಪಸ್‌: ಸಿದ್ದು ಹೇಳಿಕೆಗೆ ಬಿಜೆಪಿ ಕೆಂಡ, ಭುಗಿಲೆದ್ದ ಹಿಜಾಬ್‌ ವಿವಾದ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾದ ಹಿಜಾಬ್‌ ನಿಷೇಧ ತೀರ್ಮಾನವನ್ನು ವಾಪಸ್‌ ತೆಗೆದುಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. 

BJP Leaders Slams On CM Siddaramaiah Congress Govt Over Hijab Issue gvd
Author
First Published Dec 24, 2023, 6:43 AM IST

ಬೆಂಗಳೂರು (ಡಿ.24): ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾದ ಹಿಜಾಬ್‌ ನಿಷೇಧ ತೀರ್ಮಾನವನ್ನು ವಾಪಸ್‌ ತೆಗೆದುಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಶನಿವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಟೀಕಿಸಿದ್ದು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಶಾಲಾ ಮಕ್ಕಳ ನಡುವೆ ಯಾವುದೇ ತಾರತಮ್ಯ ಇರಬಾರದು ಎನ್ನುವ ಕಾರಣಕ್ಕೆ ಸಮವಸ್ತ್ರ ಜಾರಿಗೆ ತರಲಾಗಿದೆ. 

ಆದರೆ ಕೇವಲ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹಿಜಾಬ್ ನಿಷೇಧ ನಿರ್ಧಾರವನ್ನು ವಾಪಸ್ ಪಡೆಯುವ ತೀರ್ಮಾನವನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಕೂಡಲೇ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆಡಳಿತ ವೈಫಲ್ಯವನ್ನು ಮರೆಮಾಚಿ ಜನರ ದಾರಿ ತಪ್ಪಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹಿಜಾಬ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲೆಡೆ ಹಿಜಾಬ್ ನಿಷೇಧ ಆಗಿಯೇ ಇಲ್ಲ. ಯಾವ ಶಾಲೆಯಲ್ಲಿ ವಸ್ತ್ರಸಂಹಿತೆ ಇದೆ ಅಲ್ಲಿ ಮಾತ್ರ ನಿಷೇಧ ಇದೆ. ಮಹಿಳೆಯರು ಬೇರೆಡೆ ಎಲ್ಲಿ ಬೇಕೋ ಅಲ್ಲಿ ಹಿಜಾಬ್‌ ಹಾಕಿಕೊಳ್ಳಲು ಅವಕಾಶ ಇದೆ. ಹಿಜಾಬ್ ನಿಷೇಧವಾಗಿಯೇ ಇಲ್ಲ. ಅದನ್ನು ವಾಪಸ್ ಪಡೆಯುವ ಪ್ರಶ್ನೆ ಎಲ್ಲಿ ಬಂತು ಎಂದು ಕಿಡಿಕಾರಿದರು.

ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಬಸನಗೌಡ ಯತ್ನಾಳ

ಸರ್ಕಾರ ವಿರುದ್ಧ ಹೋರಾಟ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಆಡಳಿತ ವೈಫಲ್ಯ ಮತ್ತು ಕೆಲವು ಮುಜುಗರ ತರುವ ಘಟನೆಗಳಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಿದೆ. ಇದನ್ನೆಲ್ಲ ಮರೆಸಲು ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ಕೋರ್ಟ್ ನಲ್ಲಿ ಹಿಜಾಬ್ ವಿಚಾರ ಇದ್ದರೂ ಈ ನಿರ್ಣಯ ಘೋಷಿಸಿರೋದು ಸರಿಯಲ್ಲ. ಹಿಜಾಬ್ ನಿಷೇಧ ವಾಪಸ್ ನಿರ್ಧಾರದ ವಿರುದ್ಧ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು. ಸಿದ್ದರಾಮಯ್ಯಗೆ ಧರ್ಮ ಒಡೆಯುವ ಚಾಳಿ ಶುರುವಾಗಿದೆ ಕಳೆದ ಒಂದು ತಿಂಗಳಿಂದ ರಾಜ್ಯದ ಘನತೆಗೆ ಪೆಟ್ಟು ಬೀಳುವ ಪ್ರಕರಣಗಳು ನಡೆಯುತ್ತಿವೆ. 

ಈಗ ಮಕ್ಕಳಲ್ಲಿ ಧರ್ಮ ಭೇದಭಾವ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಅವರಿಗೆ ಟಿಪ್ಪು ಮನಸ್ಥಿತಿ ಇದೆ. ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮತ್ತೆ ಮುಂದುವರೆಸಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಸುಟ್ಟುಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು. ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಬ್ರಿಟಿಷರು ದೇಶ, ರಾಜ್ಯವನ್ನು ವಿಭಜಿಸಿ ಆಳಿದ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಜಾಬ್ ವಿಷಯ ಇದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂತಹ ಸಂದರ್ಭದಲ್ಲಿ ಹಿಜಾಬ್‍ಗೆ ಅನುಮತಿ ಕೊಡುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಮಿತ್ರಪಕ್ಷದಿಂದ ಮೇಕೆದಾಟು, ಮಹದಾಯಿ ಬಗೆಹರಿಸಿ: ಸಿದ್ದು, ಅಶೋಕ್ ಜಟಾಪಟಿ

ಸಿಎಂ ಬೇಜವಾಬ್ದಾರಿ ಹೇಳಿಕೆ: ಇನ್ನು, ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಹಿಜಾಬ್‌ ನಿಷೇಧ ಆದೇಶ ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮತ್ತೆ ರಾಜ್ಯದಲ್ಲಿ ಹಿಜಾಬ್‌ಗೆ ಅವಕಾಶ ನೀಡುವುದಾಗಿ ಹೇಳಿ, ಶಿಕ್ಷಣವನ್ನು ಕಲುಷಿತ ಮಾಡಲು ಮುಂದಾಗಿರುವುದು ದುರಾದೃಷ್ಟಕರ ಎಂದು ಟೀಕಾಪ್ರಹಾರ ನಡೆಸಿದರು. ಶಾಲೆಗೆ ಹೋಗುವ ಮಕ್ಕಳನ್ನು ರಾಜಕೀಯದಲ್ಲಿ ಬಳಕೆ ಮಾಡಿಕೊಳ್ಳುವುದರಿಂದ ದೂರ ಇಡಬಹುದಾಗಿತ್ತು. ಆದರೆ, ರಾಜಕೀಯವಾಗಿ ಮಕ್ಕಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಇಂದಿಗೂ ಶೇ.50 ರಷ್ಟು ಅಲ್ಪಸಂಖ್ಯಾತರಿಗೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಪಸಂಖ್ಯಾತರನ್ನ ಕೇವಲ‌ ಓಟ್ ಬ್ಯಾಂಕ್ ಗಾಗಿ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

Follow Us:
Download App:
  • android
  • ios