ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಬಸನಗೌಡ ಯತ್ನಾಳ
ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಉದ್ಧಟತನ. ಟಿಪ್ಪು ನಂತರ ಎರಡನೇ ಅವತಾರವೇ ಸಿದ್ದರಾಮಯ್ಯ. ಇವರು ಟಿಪ್ಪು ಪಾರ್ಟ್-2 ಇದ್ದಂತೆ.
ವಿಜಯಪುರ (ಡಿ.24): ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಉದ್ಧಟತನ. ಟಿಪ್ಪು ನಂತರ ಎರಡನೇ ಅವತಾರವೇ ಸಿದ್ದರಾಮಯ್ಯ. ಇವರು ಟಿಪ್ಪು ಪಾರ್ಟ್-2 ಇದ್ದಂತೆ. ಇವರದ್ದು ಅತಿರೇಕವಾಯ್ತು, ಅಂತ್ಯಕಾಲ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ಕುರಿತ ಹೇಳಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ನಿಷೇಧ ವಾಪಸ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದ್ದಾರೆ.
ಲೋಕಸಭೆಯಲ್ಲಿ ಆ ಸಮುದಾಯವಷ್ಟೇ ಇವರಿಗೆ ವೋಟ್ ಹಾಕುತ್ತದೆ ಅನ್ನುವ ಹಾಗೆ ಮಾಡುತ್ತಿದ್ದಾರೆ. ಸಮಸ್ತ ಹಿಂದುಗಳು ವೋಟ್ ಹಾಕೋದಿಲ್ಲ. ಮುಸ್ಲಿಂ ತುಷ್ಟೀಕರಣದಿಂದ ನಮ್ಮ ದೇಶ ಹಾಳಾಗಿದೆ ಎಂದು ಟೀಕಿಸಿದರು. ಹಿಜಾಬ್ ನಿಷೇಧದ ವಿರುದ್ಧ ಹೋರಾಟ ಮಾಡುತ್ತೀರಾ? ಎಂಬ ಪ್ರಶ್ನೆಗೆ ನಮ್ಮ ಜೋಡೆತ್ತುಗಳು ಏನು ತೀರ್ಮಾನ ಮಾಡುತ್ತವೆ ಎಂದು ಕಾದು ನೋಡೋಣ ಎಂದರು. ಕಾಂಗ್ರೆಸ್ ನಲ್ಲಿರುವ ಜೋಡೆತ್ತುಗಳಲ್ಲಿ ಒಂದು ಎತ್ತು ದಿನಾಲು ನೋಟು ತಿನ್ನುತ್ತದೆ, ಅದು ಹುಲ್ಲು ತಿನ್ನುವುದಿಲ್ಲ, ಪ್ರತಿದಿನ ಎದ್ದ ಕೂಡಲೇ ನೋಟು ತಿನ್ನುತ್ತದೆ. ಅದಕ್ಕೆ ಬಿಬಿಎಂಪಿಯದು, ನೀರಾವರಿಯದು, ನಗರಾಭಿವೃದ್ಧಿಯದು ಬೇಕು, ವರ್ಗಾವಣೆಯದ್ದು ಬೇಕು. ದಿನಾಲು ಅದಕ್ಕೆ ನೋಟು ಹಾಕಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ನೂರಕ್ಕೆ ನೂರು ಭ್ರಷ್ಟಾಚಾರ: ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ ಯತ್ನಾಳ, ಈಗಿನ ಸರ್ಕಾರದಲ್ಲಿ ನೂರಕ್ಕೆ ನೂರು ಭ್ರಷ್ಟಾಚಾರ ಇದೆ. ಬಸವರಾಜ ರಾಯರೆಡ್ಡಿ ಅವರು, ಬಿ.ಆರ್.ಪಾಟೀಲ್ ಆಳಂದ ಸೇರಿದಂತೆ ಅನೇಕ ಕಾಂಗ್ರೆಸ್ ಶಾಸಕರು ಮಾತನಾಡುತ್ತಿರುವುದರಲ್ಲಿ ಸತ್ಯವಿದೆ. ಅವರು ಸತ್ಯವನ್ನೇ ಮಾತನಾಡುತ್ತಿದ್ದಾರೆ. ಅವರು ಮೌಲ್ಯಾಧಾರಿತ ರಾಜಕಾರಣ ಮಾಡಿದವರು. ಕಾಂಗ್ರೆಸ್ ನಲ್ಲಿ ಎಲ್ಲರೂ ಭ್ರಷ್ಟರೇ ಇದ್ದಾರಂತಲ್ಲ. ಕೆಲವರು ಒಳ್ಳೆಯವರೂ ಇದ್ದಾರೆ. ಒಳ್ಳೆಯವರು ಎಲ್ಲ ಪಕ್ಷದಲ್ಲೂ ಇದ್ದಾರೆ. ದುಷ್ಟರೂ ಎಲ್ಲ ಪಕ್ಷದಲ್ಲೂ ಇದ್ದಾರೆ. ಇಂದು ಯಾವುದೇ ಸಚಿವರು ಕಮಿಷನ್ ಇಲ್ಲದೆ ಒಂದು ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಬಹಳ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಾರಿ ಭ್ರಷ್ಟಾಚಾರ ಕಂಟ್ರೋಲ್ ಮಾಡಲು ಸಿದ್ರಾಮಯ್ಯನವರಿಗೆ ಆಗುತ್ತಿಲ್ಲ. ಅವರನ್ನೂ ಮೀರಿಬಿಟ್ಟಿದೆ ಎಂದು ತಿಳಿಸಿದರು.
ವಿಶೇಷ ವಿಮಾನಕ್ಕೆ ನಿಮ್ಮ ಅಕೌಂಟ್ ಕೋಡ್ತೀರಾ?: ಸಿಎಂ, ಸಚಿವರು ಐಷಾರಾಮಿ ವಿಮಾನ ಬಳಕೆ ಹಾಗೂ ಇದಕ್ಕೆ ಪ್ರಧಾನಿ ಮೋದಿ ಬಗ್ಗೆ ಸಿಎಂ ಪ್ರಶ್ನೆ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಪ್ರಧಾನಿ ಮೋದಿ ಅವರದ್ದು, ಭಾರತ ಸರ್ಕಾರದ ವಿಶೇಷ ವಿಮಾನವಿದೆ. ನೀವು ಬೇಕಿದ್ದರೆ ಕರ್ನಾಟಕ ಸರ್ಕಾರದಿಂದ ವಿಶೇಷ ವಿಮಾನ ತೆಗೆದುಕೊಳ್ಳಿ. ನಿಮಗೆ ಹೆಲಿಕಾಪ್ಟರ್ ಇಲ್ಲವೇ?. ನಮ್ಮವರೂ ಸೇರಿ ಎಲ್ಲ ಮುಖ್ಯಮಂತ್ರಿಗಳೂ ಇದನ್ನೇ ಮಾಡುತ್ತಿದ್ದಾರೆ. ಇವಾರಾರೂ ಸಾಮಾನ್ಯ ವಿಮಾನದಲ್ಲಿ ಅಡ್ಡಾಡೋದಿಲ್ಲ. ಇಮಗೆಲ್ಲ ಅಂತಹ ಏನು ಅರ್ಜೆಂಟ್ ಇರುತ್ತದೆ.
ಅರ್ಧ ಗಂಟೆಗೊಂದು ಬೆಂಗಳೂರಿನಿಂದ ದೆಹಲಿಗೆ ವಿಮಾನ ಇವೆ. ಅದರಲ್ಲೂ ಜೆ ಕ್ಲಾಸ್, ಡಿಲಕ್ಸ್ ಕ್ಲಾಸ್ ಸೀಟು ಇವೆ. ಇವರು ಓಡಾಡಿರೋದು ಫೈವ್ ಸ್ಟಾರ್ ಪ್ಲೈಟ್. ಒಮ್ಮೆ ಬೆಂಗಳೂರಿನಿಂದ ದೆಹಲಿಗೆ ಹೋದರೆ ₹50 ಲಕ್ಷ ಖರ್ಚು ಇರಬೇಕು. ವಿಶೇಷ ವಿಮಾನಗಳಿಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಒಂದು ಸಲ ದೆಹಲಿಗೆ ಹೋಗಿ ಬರಲು ₹50 ರಿಂದ ₹60 ಲಕ್ಷ ಹಣ ಖರ್ಚು ಮಾಡುತ್ತಾರೆ. ಯಾರಪ್ಪನ ದುಡ್ಡು ಇದು? ಜನರ ದುಡ್ಡಿದು, ಜನರ ದುಡ್ಡೋ ? ಬೇನಾಮಿ ದುಡ್ಡೊ? ಅವರ ಅಕೌಂಟ್‌ನಿಂದ ಕೊಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ಯತ್ನಾಳ ನೀತಿ ಪಾಠ ಹೇಳಿದರು.
ಎಲ್ಲರೂ ಹೋಗೋದು ಸಿದ್ದೇಶ್ವರರ ವಿಮಾನದಲ್ಲೇ: ನಿಮ್ಮದು ಸರಳ ಜೀವನ ಇರಬೇಕು. ಕಾಮನ್ ಆಗಿ ಹೋಗಿ. ನಾವು ಹೋಗೋದು ₹9 ರಿಂದ ₹15 ಸಾವಿರ ಅಥವಾ ₹20 ಸಾವಿರ ಆಗುತ್ತದೆ. ಈ ಹಿಂದಿನ ಮೂರ್ನಾಲ್ಕು ಮುಖ್ಯಮಂತ್ರಿಗಳು ಇದನ್ನೇ ಮಾಡಿದ್ದಾರೆ. ಎಲ್ಲಿಗೆ ಹೋದರೂ ವಿಶೇಷ ವಿಮಾನ, ಹುಬ್ಬಳ್ಳಿಗೆ ಬಂದರೂ ವಿಶೇಷ ವಿಮಾನ ಬಳಸೋದು, ಇವರೆಲ್ಲ ಹುಟ್ಟುವಾಗ ವಿಮಾನದಲ್ಲೇ ಹುಟ್ಟಿದ್ದಾರೆಯೇ? ಅದೇ ಹಳ್ಳಿ, ಅದೇ ತೊಟ್ಟಿಲಲ್ಲೇ ಹುಟ್ಟೀದ್ದೀರಲ್ಲವೆ? ಈಗ್ಯಾಕೆ ವಿಶೇಷ ವಿಮಾನ?
ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಕಡ್ಡಾಯ ಅನ್ನೋದು ತಗೀತಾರೋ?: ಸಿ.ಟಿ.ರವಿ
ಸುಮ್ಮನೆ ಸರ್ಕಾರದ ದುಡ್ಡು ಪೋಲು ಮಾಡ್ತಿದ್ದಾರೆ ಎಂದು ಹರಿಹಾಯ್ದ ಅವರು, ಸಾಮಾನ್ಯರಂತೆ ಇರಬೇಕು. ರಾಮಕೃಷ್ಣ ಹೆಗಡೆ ಅವರೆಲ್ಲ ರೈಲಿನಲ್ಲಿ, ಅಂಬಾಸಿಡರ್ ಕಾರ್‌ನಲ್ಲಿ ಓಡಾಡುತ್ತಿದ್ದರು. ಪಾಪ ಸಿದ್ರಾಮಯ್ಯನವರ ಬಳಿ ಹಣ ಇರಲಿಕ್ಕಿಲ್ಲ. ಅವರ ಹಿಂದೆ ಇರುವ ಜಮೀರ್ ಅಹಮ್ಮದ ಖಾನ್, ಭೈರತಿ ಸುರೇಶ ಇವರೆಲ್ಲ ದೊಡ್ಡ ಶ್ರೀಮಂತರು. ಸಿಎಂ ಅವರನ್ನು ಖುಷಿಪಡಿಸಲು ಇಂತಹ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಾರೆ. ದೇಖೋ ಸರ್ ಮೇರಾ ವಿಮಾನ್ ಕೈಸಾ ಹೈ ಅಂತಾರೆ. ಯಾವುದೇ ವಿಮಾನದಲ್ಲಿ ಕುಳಿತರೂ ಕೊನೆಗೆ ನಮ್ಮ ಸಿದ್ದೇಶ್ವರ ಸಂಸ್ಥೆಯಂತಹ ವಿಮಾನದಲ್ಲೇ ಹೋಗಬೇಕು ಎಂಬುದನ್ನು ಮರೆತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.