ಮತ್ತೆ ಬಿಜೆಪಿ ನಾಯಕರ ಆಕ್ರೋಶ, ಸಿದ್ದು ಬಹಿರಂಗ ಕ್ಷಮೆ ಯಾಚನೆಗೆ ಬಿಗಿಪಟ್ಟು, ಚುನಾವಣೆ ಆಯೋಗಕ್ಕೂ ದೂರು: ಜೋಶಿ. 

ಬೆಂಗಳೂರು(ಏ.25):  ‘ಲಿಂಗಾಯತ ಸಿಎಂಗಳು ಭ್ರಷ್ಟರು’ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸೋಮವಾರವೂ ಬಿಜೆಪಿ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಡಾ. ಕೆ.ಸುಧಾಕರ್‌ ಸೇರಿದಂತೆ ಬಿಜೆಪಿಯ ಹಲವು ನಾಯಕರು ಹೇಳಿಕೆಯನ್ನು ಖಂಡಿಸಿದ್ದು, ಲಿಂಗಾಯತರಿಗೆ ಅವಮಾನ ಮಾಡಿರುವ ಸಿದ್ದರಾಮಯ್ಯ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಹೇಳಿಕೆಯಿಂದ ಬಿಜೆಪಿಗೆ ಬರುವ ಲಿಂಗಾಯತ ಮತಗಳ ಸರಾಸರಿ ಪ್ರಮಾಣ ಹೆಚ್ಚಾಗುತ್ತದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಹೋಗಿರುವುದು ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗುತ್ತದೆ ಎಂದರು. ತೋರಿಕೆಗಾದರೂ ಲಿಂಗಾಯತ ಮಠಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡುತ್ತಿರುವುದಕ್ಕೆ ಧನ್ಯವಾದಗಳು ಎಂದರು.

ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ: ಅಮಿತ್‌ ಶಾ

ಶಿವಮೊಗ್ಗದಲ್ಲಿ ಸೋಮವಾರ ಮಾತನಾಡಿದ ಯಡಿಯೂರಪ್ಪ, ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಲಾರಂಭಿಸಿದ್ದಾರೆ. ಇದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತದ್ದಲ್ಲ. ಇನ್ನಾದರೂ ಅವರು ಜವಾಬ್ದಾರಿಯಿಂದ ಮಾತನಾಡಲಿ. ವೀರಶೈವ ಸಮಾಜದವರು ಬಿಜೆಪಿ ಜೊತೆಗೆ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಹಗುರವಾಗಿ ಮಾತನಾಡಬಾರದು. ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು ಎಂಬ ಕಾರಣಕ್ಕೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಲಿಂಗಾಯತರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಸಿದ್ದರಾಮಯ್ಯ ಈವರೆಗೂ ಕ್ಷಮೆ ಕೇಳಿಲ್ಲ. ಈ ಸಂಬಂಧ ಈಗಾಗಲೇ ಚುನಾವಣೆ ಆಯೋಗಕ್ಕೆ ದೂರು ಕೊಡಲಾಗಿದೆ. ಸಿದ್ದು ಟೀಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸುವುದಿಲ್ಲ. ನಾವು ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್‌ಗೆ, ರಾಹುಲ್‌ ಗಾಂಧಿಗೆ ಪ್ರೀತಿ ಇದ್ದರೆ ಲಿಂಗಾಯತರನ್ನು ಮುಂದಿನ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಲವೆಡೆ ಬಂಡಾಯ ಥಂಡಾ: ಬಿಜೆಪಿ, ಕಾಂಗ್ರೆಸ್‌ ನಾಯಕರು ಅರ್ಧ ನಿರಾಳ

ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದಲ್ಲಿ ಮಾತನಾಡಿದ ಸಚಿವ ಸುಧಾಕರ್‌, ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಲಿಂಗಾಯಿತರಿಗೆ ಮೀಸಲಾತಿ ಕೊಟ್ಟಿದ್ದು ನಮ್ಮ ಸರ್ಕಾರ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಲಿಂಗಾಯತ ಸಿಎಂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹರಿಹಾಯ್ದಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.