ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ರಾಜ್ಯದ ಹಲವೆಡೆ ಬಂಡಾಯ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದಿರುವುದರಿಂದ ಎರಡೂ ಪಕ್ಷಗಳು ಕೊಂಚ ನಿರಾಳವಾಗಿವೆ. 

ಬೆಂಗಳೂರು(ಏ.25):  ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಹಲವರನ್ನು ಮನವೊಲಿಸುವಲ್ಲಿ ಬಿಜೆಪಿ, ಕಾಂಗ್ರೆಸ್‌ ಯಶಸ್ವಿಯಾಗಿವೆ. ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ರಾಜ್ಯದ ಹಲವೆಡೆ ಬಂಡಾಯ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್‌ ಪಡೆದಿರುವುದರಿಂದ ಎರಡೂ ಪಕ್ಷಗಳು ಕೊಂಚ ನಿರಾಳವಾಗಿವೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಡೆಸಿದ ಸಂಧಾನ ಫಲ ನೀಡಿದ್ದರಿಂದ ಧಾರವಾಡದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಬಸವರಾಜ ಕೊರವರ ತಮ್ಮ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ವಿರುದ್ಧ ಅವರು ಸ್ಪರ್ಧಿಸಿದ್ದರು. ಮತ್ತೊಂದೆಡೆ, ಟಿಕೆಟ್‌ ಕೈತಪ್ಪಿದ್ದರಿಂದ ಕೋಪಗೊಂಡು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಬಂಡೆದ್ದಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮುನಿಸು ಶಮನವಾಗಿದ್ದು, ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ. ಮಾಯಕೊಂಡದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡೆದ್ದಿದ್ದ 11 ಅಭ್ಯರ್ಥಿಗಳ ಪರವಾಗಿ ಕಣಕ್ಕಿಳಿದಿದ್ದ ಶಿವಪ್ರಕಾಶ್‌, ಶಿರಹಟ್ಟಿಯಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿ ತಮ್ಮ ನಾಮಪತ್ರಗಳನ್ನು ವಾಪಸ್‌ ಪಡೆದಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.

ಶೆಟ್ಟರ್ ಬೇರೆ ಟೀಂ ಸೇರಿದ್ರೂ ಈ ಸಲವೂ ಕಪ್‌ ನಮ್ದೆ; ಪ್ರಲ್ಹಾದ್ ಜೋಶಿ

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಫಲ ನೀಡಿದ್ದು, ಶಿರಸಿಯಲ್ಲಿ ವೆಂಕಟೇಶ ಹೆಗಡೆ ಹಾಗೂ ಕುಮಟಾದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿತಮ್ಮ ನಾಮಪತ್ರ ವಾಪಸ್‌ ಪಡೆದಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡೆಸಿದ ಸಂಧಾನ ಫಲಪ್ರದವಾಗಿದ್ದು, ಉಡುಪಿಯಲ್ಲಿ ಪ್ರಸಾದ್‌ ರಾಜ್‌ ಕಾಂಚನ್‌ ಹಾಗೂ ಕೃಷ್ಣಮೂರ್ತಿ ಆಚಾರ್ಯ, ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ತಮ್ಮ ನಾಮಪತ್ರ ವಾಪಸ್‌ ಪಡೆದಿದ್ದಾರೆ. ರಾಯಚೂರು ನಗರದಲ್ಲಿ ರವಿ ಬೋಸರಾಜು, ಮಂಡ್ಯದಲ್ಲಿ ಎಚ್‌.ಕೃಷ್ಣ ಉಮೇದುವಾರಿಕೆ ಹಿಂಪಡೆದು ಕಾಂಗ್ರೆಸ್ಸಿಗೆ ಬೆಂಬಲ ಪ್ರಕಟಿಸಿದ್ದಾರೆ.
ಫಲ ನೀಡಿದ ಸಂಧಾನ

ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬೆಂಬಲ ಘೋಷಣೆ

- ಮತ ವಿಭಜನೆ ಆತಂಕದಲ್ಲಿದ್ದ ಬಿಜೆಪಿ, ಕಾಂಗ್ರೆಸ್‌ ನಾಯಕರು ಅರ್ಧ ನಿರಾಳ

ಯಾವ ಪಕ್ಷ?, ಯಾರು ಹಿಂದಕ್ಕೆ?

ಬಿಜೆಪಿ

ಮಹಾದೇವಪ್ಪ ಯಾದವಾಡ, ರಾಮದುರ್ಗ
ರಾಮಣ್ಣ ಲಮಾಣಿ, ಶಿರಹಟ್ಟಿ
ಬಸವರಾಜ ಕೊರವರ, ಧಾರವಾಡ
ಶಿವಪ್ರಕಾಶ್‌ ಮಾಯಕೊಂಡ

ಕಾಂಗ್ರೆಸ್‌

ಶಾರದಾ ಶೆಟ್ಟಿ, ಕುಮಟಾ
ಗಂಗಾಂಬಿಕೆ ಮಲ್ಲಿಕಾರ್ಜುನ್‌, ಚಿಕ್ಕಪೇಟೆ
ರವಿ ಬೋಸರಾಜು, ರಾಯಚೂರು ಸಿಟಿ
ವೆಂಕಟೇಶ ಹೆಗಡೆ, ಶಿರಸಿ
ಪ್ರಸಾದ್‌ ರಾಜ್‌ ಕಾಂಚನ್‌, ಉಡುಪಿ
ಕೃಷ್ಣಮೂರ್ತಿ ಆಚಾರ್ಯ, ಉಡುಪಿ
ಡಾ.ಎಚ್‌.ಕೃಷ್ಣ, ಮಂಡ್ಯ
ಪ್ರಮುಖ ಬಂಡಾಯ ಮುಂದುವರಿಕೆ

ಬಿಜೆಪಿ

ಗೂಳಿಹಟ್ಟಿಶೇಖರ್‌, ಹೊಸದುರ್ಗ
ಅರುಣ್‌ ಪುತ್ತಿಲ, ಪುತ್ತೂರು
ಮಾಡಾಳು ಮಲ್ಲಿಕಾರ್ಜುನ, ಚನ್ನಗಿರಿ
ಎಸ್‌.ಐ. ಚಿಕ್ಕನಗೌಡರ ಕುಂದಗೋಳ
ಮಲ್ಲಿಕಾರ್ಜುನ ಚರಂತಿಮಠ, ಬಾಗಲಕೋಟೆ

ಡಿಕೆ ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ ಜೆಡಿಎಸ್‌ ಮುಖಂಡರು!

ಕಾಂಗ್ರೆಸ್‌

ಎಚ್‌.ಪಿ.ರಾಜೇಶ್‌, ಜಗಳೂರು
ಸೌಭಾಗ್ಯ ಬಸವರಾಜನ್‌, ಚಿತ್ರದುರ್ಗ
ಸತೀಶ್‌ ಬಂಡಿವಡ್ಡರ್‌, ಮುಧೋಳ
ಪದ್ಮಜೀತ್‌ ನಾಡಗೌಡ, ತೇರದಾಳ
ಕೆಜಿಎಫ್‌ ಬಾಬು, ಚಿಕ್ಕಪೇಟೆ

ಜೆಡಿಎಸ್‌

ವಿಜಯಾನಂದ, ಮಂಡ್ಯ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.