ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ ಏನೇನು ಕೆಲಸ ಮಾಡಿದೆ ಎಂಬುದು ಜನತೆಗೆ ಗೊತ್ತಿದೆ. ಹಲವು ಕಾರ್ಖಾನೆ, ಕಬ್ಬು ಬೆಳೆಗಾರರಿಗೆ ನ್ಯಾಯ, ಬೆಂಗಳೂರು-ಮೈಸೂರು ಹೈವೇ, ಬೆಂಗಳೂರು-ಚೆನ್ನೈ ಹೈವೇ, ರೈಲ್ವೆ ಯೋಜನೆ...ಹೀಗೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಇದೆಲ್ಲವೂ ನಮ್ಮ ಕಣ್ಮುಂದೆಯೇ ಇದೆ. ಹೀಗಾಗಿ, ಈ ಬಾರಿ ಬಿಜೆಪಿ ಪೂರ್ಣ ಬಹುಮತ ಪಡೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ್‌ ಶಾ

ಹುಬ್ಬಳ್ಳಿ(ಏ.25): ಕರ್ನಾಟಕವನ್ನು ಸುರಕ್ಷಿತ ಹಾಗೂ ವಿಕಸಿತ ರಾಜ್ಯವನ್ನಾಗಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಸಲವೂ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಜೆಪಿಯದು 40 ಪರ್ಸೆಂಟ್‌ ಸರ್ಕಾರ ಎಂದು ಟೀಕಿಸುತ್ತಿರುವ ಕಾಂಗ್ರೆಸ್‌, ಒಂದೇ ಒಂದು ಕೇಸ್‌ ದಾಖಲಾಗಿರುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಕಸಿತ ಹಾಗೂ ನವ ಕರ್ನಾಟಕ ನಿರ್ಮಾಣದ ಘೋಷಣೆಯೊಂದಿಗೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದರು. ಕಳೆದ ಅವಧಿಯಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ ಏನೇನು ಕೆಲಸ ಮಾಡಿದೆ ಎಂಬುದು ಜನತೆಗೆ ಗೊತ್ತಿದೆ. ಹಲವು ಕಾರ್ಖಾನೆ, ಕಬ್ಬು ಬೆಳೆಗಾರರಿಗೆ ನ್ಯಾಯ, ಬೆಂಗಳೂರು-ಮೈಸೂರು ಹೈವೇ, ಬೆಂಗಳೂರು-ಚೆನ್ನೈ ಹೈವೇ, ರೈಲ್ವೆ ಯೋಜನೆ...ಹೀಗೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಇದೆಲ್ಲವೂ ನಮ್ಮ ಕಣ್ಮುಂದೆಯೇ ಇದೆ. ಹೀಗಾಗಿ, ಈ ಬಾರಿ ಬಿಜೆಪಿ ಪೂರ್ಣ ಬಹುಮತ ಪಡೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್‌ಗೆ ಯಾಕೆ ಟಿಕೆಟ್ ನೀಡಿಲ್ಲವೆಂದು ಗೊತ್ತು, ಅದನ್ನು ಬಹಿರಂಗಪಡಿಸಲ್ಲ: ಅಮಿತ್ ಶಾ

ಕಾಂಗ್ರೆಸ್‌ ಪಕ್ಷ ರಿವರ್ಸ್‌ ಗೇರ್‌ನಲ್ಲಿ ಚಲಿಸುತ್ತಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಆದರೆ, ಈ ಸಲ ಅದಕ್ಕೆ ಅಧಿಕಾರ ಸಿಗುವುದಿಲ್ಲ. ಬಿಜೆಪಿಯೇ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಪಿಎಫ್‌ಐ ಸಂಘಟನೆಯನ್ನು ಬಿಜೆಪಿ ರದ್ದುಪಡಿಸಿದ್ದರೆ, ಕಾಂಗ್ರೆಸ್‌ ಅಧಿಕಾರದಲ್ಲಿ ಅವರಿಗೆ ವಿಶೇಷ ಟ್ರೀಟ್‌ಮೆಂಟ್‌ ಸಿಗುತ್ತಿತ್ತು. ಆ ಮೂಲಕ ಪಿಎಫ್‌ಐಗೆ ಸಹಕಾರ ನೀಡಲಾಗುತ್ತಿತ್ತು. ನಾವು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ, ದೇಶ ವಿರೋಧಿ ಚಟುವಟಿಕೆಗೆ ಲಗಾಮು ಹಾಕಿದ್ದೇವೆ. ಸೋನಿಯಾ, ಮನಮೋಹನಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿದ್ದಾಗ ರಾಜ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಅನುದಾನ ಬರುತ್ತಿತ್ತು. ಸಾವಿರ ಕೋಟಿ ಲೆಕ್ಕದಲ್ಲಿ ಹಣ ಕೊಡಲಾಗುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲಕ್ಷ ಕೋಟಿ ಲೆಕ್ಕದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು:

ಕಿತ್ತೂರು, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಈ ಸಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಳೆ ಮೈಸೂರು ಭಾಗದಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆಂದು ಹೆಚ್ಚಿನ ಒತ್ತು ನೀಡಿದ್ದೇವೆ. ಹಳೆ ಮೈಸೂರು ಭಾಗದಲ್ಲೂ ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಈ ಸಲವೂ ನಮ್ಮದೇ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.

ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣ:

ಬಿಜೆಪಿಯಲ್ಲಿ ಈ ಬಾರಿ ಮಗ, ಮಗಳು, ಸೊಸೆ ಸೇರಿದಂತೆ ರಾಜಕಾರಣಿಗಳ ಸಂಬಂಧಿಕರಿಗೆ ಟಿಕೆಟ್‌ ನೀಡಿದ್ದೀರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವಿದೆ. ಜೆಡಿಎಸ್‌ನಲ್ಲಿ ಅಧ್ಯಕ್ಷರು, ಶಾಸಕರು ಒಂದೇ ಕುಟುಂಬಕ್ಕೆ ಸೇರಿದವರು. ಆದರೆ, ಬಿಜೆಪಿಯಲ್ಲಿ ಸಿಎಂ ಹಾಗೂ ಅಧ್ಯಕ್ಷರು ಬೇರೆ, ಬೇರೆ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ವಂಶ ರಾಜಕಾರಣವನ್ನು ಬಿಜೆಪಿ ವಿರೋಧಿಸುತ್ತದೆ. ಬಿಜೆಪಿಯಲ್ಲಿ ಪಕ್ಷ ಮತ್ತು ಅಧಿಕಾರ ಬೇರೆ, ಬೇರೆಯವರ ಕೈಯಲ್ಲಿರುತ್ತದೆ. ಅವರು ಬದಲಾಗುತ್ತಲೇ ಇರುತ್ತಾರೆ. ಹಾಗಾಗಿ, ಪಕ್ಷದಲ್ಲಿ ವಂಶ ರಾಜಕಾರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಯಾರು ಏನೇ ತಂತ್ರಗಾರಿಕೆ ಮಾಡಿದರೂ ಗೆಲುವು ನನ್ನದೇ: ಜಗದೀಶ್‌ ಶೆಟ್ಟರ್‌

ಕಾಂಗ್ರೆಸ್ಸಿಗೆ ಸವಾಲ್‌

ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಬಿಜೆಪಿಯದ್ದು 40 ಪರ್ಸೆಂಟ್‌ ಸರ್ಕಾರ ಎಂದು ಟೀಕಿಸುತ್ತಿರುವ ಕಾಂಗ್ರೆಸ್‌, ಆ ಬಗ್ಗೆ ಒಂದೇ ಒಂದು ಕೇಸ್‌ ದಾಖಲಾಗಿರುವುದನ್ನು ಸಾಬೀತುಪಡಿಸಲಿ ಅಂತ ಕೇಂದ್ರ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.