ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್‌ಡಿಕೆ ಭೇಟಿ ಮಾಡುತ್ತಿರುವ ಬಿಜೆಪಿ ಪ್ರಮುಖರು: ಯಾಕೆ?
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ವಿಜಯ್ ಕೇಸರಿ
ಚನ್ನಪಟ್ಟಣ (ಜ.08): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸದ್ಯದಲ್ಲೇ ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಅನ್ನು ಭೇಟಿ ಮಾಡಿ ಸೀಟು ಹಂಚಿಕೆಯ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸೀಟು ಹಂಚಿಕೆ ಕಾರಣ?: ಈಗಾಗಲೇ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ ಎಂಬುದು ಪಕ್ಕ ಆಗಿಲ್ಲ. ಇನ್ನು ಯಾವ ಪಕ್ಷಕ್ಕೆ ಯಾವ ಕ್ಷೇತ್ರ ಸಿಗಲಿದೆ ಎಂಬುದು ಸಹ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದು, ಬಿಜೆಪಿ ವರಿಷ್ಠರ ಜತೆ ಸೀಟು ಹಂಚಿಕೆ ಹಾಗೂ ಯಾವ ಪಕ್ಷಕ್ಕೆ ಯಾವ ಕ್ಷೇತ್ರ ಎಂಬುದರ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖ ನಾಯಕರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಇದರ ಜತೆಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆ, ಸಂಘಟನೆ ಮತ್ತಿತರರ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾರೂ ಯಾವ ಜಾತಿಗೂ ಅರ್ಜಿ ಹಾಕೊಂಡು ಹುಟ್ಟಲ್ಲ: ಗೃಹ ಸಚಿವ ಪರಮೇಶ್ವರ್
ಹೈವೋಲ್ಟೇಜ್ ಕ್ಷೇತ್ರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ನಡುವೆಯೂ ಕಾಂಗ್ರೆಸ್ ರಾಜ್ಯದಲ್ಲಿ ಧೂಳಿಪಟವಾಗಿತ್ತು. ಸಂಸದ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲುವ ಸಾಧಿಸುವ ಮುಖಾಂತರ ರಾಜ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಏಕೈಕ ಸಂಸದ ಎನ್ನಿಸಿದ್ದರು. ಈ ಬಾರಿ ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಹಣೆಯುವ ಜತೆಗೆ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್‌ಗೆ ಮಾರ್ಮಾಘಾತ ನೀಡಬೇಕು. ಅಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಾಗಾಲೋಟಕ್ಕೆ ತಡೆಹಾಕಬೇಕು ಎಂದು ಬಿಜೆಪಿ-ಜೆಡಿಎಸ್ ವರಿಷ್ಠರು ಮುಂದಾಗಿದ್ದು, ಇದಕ್ಕಾಗಿ ಸಾಕಷ್ಟು ತಾಲೀಮು ನಡೆಸುತ್ತಿದ್ದಾರೆ. ಇದರ ಜತೆಗೆ ಸೀಟು ಹಂಚಿಕೆಗೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ಎಚ್‌ಡಿಕೆ ಭೇಟಿ ಹೆಚ್ಚಾಗತೊಡಗಿದೆ.
ಕೇಂದ್ರ ಸ್ಥಾನವಾದ ಕೇತುಗಾನಹಳ್ಳಿ!: ಬಿಡದಿಯ ಕೇತುಗಾನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆ ಇದೀಗ ರಾಜ್ಯ ರಾಜಕಾರಣದ ಕೇಂದ್ರಸ್ಥಾನವಾಗಿ ಬದಲಾಗಿದೆ. ಕುಮಾರಸ್ವಾಮಿಯರು ಇತ್ತೀಚಿಗೆ ಹೆಚ್ಚಾಗಿ ಕೇತುಗಾನಹಳ್ಳಿಯ ತೋಟದ ಮನೆಯಲ್ಲೇ ಬಂದು ತಂಗುತ್ತಿದ್ದು, ರಾಜ್ಯದ ಪ್ರಮುಖ ನಾಯಕರು ಅವರನ್ನು ಇಲ್ಲಿಯೇ ಬಂದು ಭೇಟಿಯಾಗುತ್ತಿರುವುದು ಕೇತುಗಾನಹಳ್ಳಿಯ ತೋಟದ ಮನೆಯನ್ನು ಜೆಡಿಎಸ್-ಬಿಜೆಪಿ ಪಾಲಿನ ರಾಜಕಾರಣದ ಕೇಂದ್ರ ಸ್ಥಾನವನ್ನಾಗಿ ಮಾಡಿದೆ.
ಬಚ್ಚೇಗೌಡ, ಸದಾನಂದಗೌಡ, ರಾಘವೇಂದ್ರ ಭೇಟಿ?: ಬಿಡದಿಯ ಕೇತುಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿಯವರ ತೋಟದ ಮನೆಗೆ ಭಾನುವಾರ ಮಾಜಿ ಸಚಿವ ಸಿ.ಟಿ.ರವಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದರ ಜತೆಗೆ ಗುರುವಾರ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಹ ಭೇಟಿ ಮಾಡಿ ಮುಂದಿನ ರಾಜಕೀಯದ ಮಾತುಕತೆ ನಡೆಸಿರುವುದನ್ನು ಅವರೇ ಬಹಿರಂಗಪಡಿಸಿದ್ದಾರೆ. ಈ ನಡುವೆ ಸಂಸದರಾದ ಬಚ್ಚೇಗೌಡ, ಸದಾನಂದಗೌಡ ಹಾಗೂ ಬಿ.ವೈ.ರಾಘವೇಂದ್ರ ಸಹ ಇತ್ತೀಚೆಗೆ ಕುಮಾರಸ್ವಾಮಿಯವರ ತೋಟದ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.
ಎಚ್‌ಡಿಕೆ ಭೇಟಿಯಾದ ಸಿ.ಟಿ.ರವಿ: ಮಹತ್ವದ ರಾಜಕೀಯ ಬೆಳವಣಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿದ್ದಾರೆ. ಭಾನುವಾರ ಬಿಡದಿಯ ಕೇತುಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿಯವರು ತೋಟದ ಮನೆಗೆ ಭೇಟಿ ನೀಡಿದ ಸಿ.ಟಿ.ರವಿ ಕೆಲ ಹೊತ್ತು ರಾಜಕೀಯ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಭೇಟಿಯ ವೇಳೆ ಉಭಯ ನಾಯಕರು ಕೆಲ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ರಾಜಕೀಯ ಚರ್ಚೆ ನಡೆಸಲು ಎಚ್‌ಡಿಕೆ ಭೇಟಿಯಾಗಿದ್ದೆ: ಸಿ.ಪಿ.ಯೋಗೇಶ್ವರ್
ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಸಿ.ಟಿ.ರವಿ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಅಥವಾ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆಯ ಕುರಿತು ಬಿಜೆಪಿ ವರಿಷ್ಠರ ಜತೆ ಚರ್ಚೆ ನಡೆಸಲು ಕುಮಾರಸ್ವಾಮಿ ಸದ್ಯದಲ್ಲೇ ದೆಹಲಿಗೆ ತೆರಳಲಿದ್ದಾರೆ. ಇಂತಹ ಸಮಯದಲ್ಲಿ ಕುಮಾರಸ್ವಾಮಿ ಅವರನ್ನು ಸಿ.ಟಿ.ರವಿ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.