ರಾಜಕೀಯ ಚರ್ಚೆ ನಡೆಸಲು ಎಚ್‌ಡಿಕೆ ಭೇಟಿಯಾಗಿದ್ದೆ: ಸಿ.ಪಿ.ಯೋಗೇಶ್ವರ್
ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಭರ್ಜರಿ ತಯಾರಿ ನಡೆಸಿದ್ದು, ಇದರ ಅಂಗವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ರಾಮನಗರ/ಮಾಗಡಿ (ಜ.06): ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಭರ್ಜರಿ ತಯಾರಿ ನಡೆಸಿದ್ದು, ಇದರ ಅಂಗವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಿಡದಿಯಲ್ಲಿರುವ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ ವಿಚಾರವನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೇ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಕುಮಾರಸ್ವಾಮಿ ಅವರು ನನ್ನನ್ನು ಭೇಟಿಯಾಗುವಂತೆ ಕೇಳಿದ್ದರು, ಈ ಹಿನ್ನೆಲೆಯಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅವರನ್ನು ಮೊನ್ನೆ ಭೇಟಿಯಾಗಿದ್ದು, ಮುಂದಿನ ರಾಜಕೀಯದ ವಿಚಾರವಾಗಿ ಚರ್ಚೆ ನಡೆಸಿದ್ದೇವೆ ಎಂದರು.
ಯಾರೂ ಯಾವ ಜಾತಿಗೂ ಅರ್ಜಿ ಹಾಕೊಂಡು ಹುಟ್ಟಲ್ಲ: ಗೃಹ ಸಚಿವ ಪರಮೇಶ್ವರ್
ಅಭ್ಯರ್ಥಿ ಕುರಿತು ಆತುರ ಬೇಡ: ಭೇಟಿ ವೇಳೆ ನಾನು, ಅವರು ಸಂಕ್ರಾಂತಿ ಬಳಿಕ ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸಭೆ ಮಾಡುವ ಕುರಿತು ನಿರ್ಧಾರ ಮಾಡಿದ್ದೇವೆ. ಲೋಕಸಭಾ ಚುನಾವಣೆಯ ಅಭ್ಯರ್ಥಿ ಬಗ್ಗೆ ಆತುರ ಬೇಡ, ಕುಮಾರಸ್ವಾಮಿ ದೆಹಲಿಗೆ ಹೋಗುತ್ತಾರೆ. ಆ ನಂತರ ಅಭ್ಯರ್ಥಿ ಬಗ್ಗೆ ನಿರ್ಧಾರ ಆಗಲಿದೆ ಎಂದು ತಿಳಿಸಿದರು.
ಚುನಾವಣೆ ಬರಲಿ ಗೊತ್ತಾಗತ್ತೆ: ಸಂಸದ ಡಿ.ಕೆ.ಸುರೇಶ್‌ಗೆ ಗ್ರಾಮಸಭೆಗಳು ಕಾಣುತ್ತಿವೆ. ಅವರಿಗೆ ವರ್ಚಸ್ಸು ಇದೆ, ಚುನಾವಣೆ ಬರಲಿ ಗೊತ್ತಾಗುತ್ತದೆ. ಸಿಎಂ ಸಿದ್ದರಾಮಯ್ಯರಿಂದ ಹಳೇ ಕೇಸ್ ಓಪನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಈಗೀಗ ಕಡುವಾಗಿ ನಡೆದುಕೊಳ್ತಿದ್ದಾರೆ. ಹಳೇ ಪ್ರಕರಣಗಳನ್ನ ಓಪನ್ ಮಾಡುತ್ತಿದ್ದಾರೆ. ಅವರ ವಿರುದ್ಧ ಮಾತನಾಡಿದರೆ ಕೇಸ್ ಹಾಕಿಸುತ್ತಾರೆ. ಮುಂದೆ ನೋಡೋಣ ಎಂದರು.
ಖರ್ಗೆ ಬದಲು ರಾಹುಲ್ ಪ್ರಧಾನಿ ಆಗಲಿ ಎಂದು ಸಿದ್ದು ಹೇಳಿದ್ದೇಕೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬದಲಿಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಸಂಕುಚಿತ ಮನೋಭಾವ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ್ತೊಬ್ಬ ಕನ್ನಡಿಗರೊಬ್ಬರು ಪ್ರಧಾನಿಯಾಗಲಿ ಎಂದು ಸಿದ್ದರಾಮಯ್ಯ ಹೇಳಲಿಲ್ಲ. ಒಂದು ವೇಳೆ ಆ ವಿಚಾರ ಪ್ರಸ್ತಾಪ ಮಾಡದೆ ತಟಸ್ಥವಾಗಿದ್ದರೆ ಆಗುತ್ತಿತ್ತು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ತಿಳಿಸುತ್ತದೆ. ದಲಿತ ಸಮುದಾಯಗಳು ಇದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಧಾನಿ ಮೋದಿ ಗ್ಯಾರಂಟಿಯಿಂದ ಜನರಿಗೆ ಅನುಕೂಲ: ಕೇಂದ್ರ ಸಚಿವ ಕ್ರಿಶನ್ ಪಾಲ್
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗಲಿ ಎಂದು ಇತರೆ ರಾಜ್ಯಗಳ ಮುಖ್ಯಮಂತ್ರಿಗಳು ಬಯಸುತ್ತಾರೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಅವರಿಗೆ ರಾಹುಲ್ ಗಾಂಧಿ ಋಣ ತೀರಿಸಬೇಕಾಗಿದೆ. ಕನ್ನಡಿಗರು ಪ್ರಧಾನಿಯಾದರೆ ನನಗೆ ಸಂತೋಷ. ಆದರೆ ಈಗ ಆಗುವ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯ ಅವರದ್ದು ಒಡೆದು ಆಳುವ ನೀತಿ. ಜನತಾದಳದಲ್ಲಿದ್ದು ಗುಳೇ ಹೋಗಿ ಕಾಂಗ್ರೆಸ್ ನಲ್ಲಿ ಜಾಗ ಹಿಡಿದರು. ಕನಿಷ್ಠ ಸೌಜನ್ಯಕ್ಕೆ ಸುಮ್ಮನೆ ಇರಬೇಕಿತ್ತು. ಆ ರೀತಿ ಏಕೆ ಹೇಳಿಕೆ ನೀಡಬೇಕಿತ್ತು? ಅಧಿಕಾರ ಹಿಡಿಯುವ ತನಕ ಅಹಿಂದ, ಅಧಿಕಾರ ಬಂದ ಮೇಲೆ ಅದನ್ನು ಮರೆತರು ಎಂದು ಟೀಕಾಪ್ರಹಾರ ನಡೆಸಿದರು.