ಕೇಂದ್ರದಿಂದ ರಾಜ್ಯಕ್ಕೆ ಚೊಂಬು ಸಿಕ್ಕಿಲ್ಲ, ಜನರಿಂದ ಲಕ್ಷ್ಮಣ್‌ಗೆ ಖಾಲಿಚೊಂಬು: ಬಿಜೆಪಿ ಮುಖಂಡ ರವಿ ಕಾಳಪ್ಪ
ಕೇಂದ್ರ ಸರ್ಕಾರ ರಾಜ್ಯಕ್ಕೆ ಖಾಲಿ ಚೆಂಬು ಮತ್ತು ಚಿಪ್ಪು ಕೊಟ್ಟಿಲ್ಲ, ಬದಲಾಗಿ ಮೈಸೂರು, ಕೊಡಗು ಕ್ಷೇತ್ರದ ಜನರು ಎಂ. ಲಕ್ಷ್ಮಣ್ ಅವರಿಗೆ ಚೆಂಬು ಕೊಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ರವಿ ಕಾಳಪ್ಪ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ತಿರುಗೇಟು ನೀಡಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.04): ಕೇಂದ್ರ ಸರ್ಕಾರ ರಾಜ್ಯಕ್ಕೆ ಖಾಲಿ ಚೆಂಬು ಮತ್ತು ಚಿಪ್ಪುಕೊಟ್ಟಿಲ್ಲ, ಬದಲಾಗಿ ಮೈಸೂರು, ಕೊಡಗು ಕ್ಷೇತ್ರದ ಜನರು ಎಂ. ಲಕ್ಷ್ಮಣ್ ಅವರಿಗೆ ಚೆಂಬುಕೊಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ರವಿ ಕಾಳಪ್ಪ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರಿಗೆ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಿದ್ದ ಬಜೆಟ್ ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಖಾಲಿ ಚೆಂಬು ಮತ್ತು ಚಿಪ್ಪು ನೀಡಿದೆ ಎಂದು ವ್ಯಂಗ್ಯವಾಡಿದ್ದರು. ಕೇಂದ್ರ ಸರ್ಕಾರದ ಬಜೆಟ್ ಅನ್ನು ವಿರೋಧಿಸಬೇಕೆಂದು ಕಾಂಗ್ರೆಸ್ ನವರು ಮಾನಸಿಕವಾಗಿ ನಿರ್ಧಾರ ಮಾಡಿದ್ದರು ಎನಿಸುತ್ತದೆ. 12 ಲಕ್ಷದವರೆಗೆ ತೆರಿಗೆ ವಿನಾಯತಿ ಮಾಡಿರುವುದನ್ನು ಎಲ್ಲರೂ ಸ್ವಾಗತಿಸಿದ್ದಾರೆ.
ಅಷ್ಟೇ ಅಲ್ಲ, 34 ರೀತಿ ಔಷಧಗಳಿಗೆ ತೆರಿಗೆ ರಹಿತ ಮಾಡಲಾಗಿದೆ. ಬಡವರ ಮಕ್ಕಳಿಗೂ ವೈದ್ಯಕೀಯ ಸೀಟು ಸಿಗುವಂತೆ ವೈದ್ಯಕೀಯ ಸೀಟು ಹೆಚ್ಚಳ ಮಾಡಲಾಗಿದೆ. ಇಡೀ ದೇಶದ ಪ್ರತೀ ಜಿಲ್ಲಾಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ನೀಡಲಾಗುತ್ತಿದೆ. ರೈತರಿಗೆ ಐದು ಲಕ್ಷದವರೆಗೆ ಬಡ್ಡೀ ರಹಿತವಾಗಿ ಸಾಲ ನೀಡಲು ನಿರ್ಧಾರ ಮಾಡಲಾಗಿದೆ. ಯೂರಿಯಾ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಿಗೆ ಬ್ರಾಡ್ ಬ್ಯಾಂಡ್ ಮಾಡಲು ನಿರ್ಧರಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಕಾರು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಅಗ್ಗದ ದರದಲ್ಲಿ ನೀಡಲು ಯೋಜನೆ ರೂಪಿಸಿಲಾಗಿದೆ.
ಖಾಲಿ ಚೆಂಬು, ತೆಂಗಿನ ಚಿಪ್ಪು ಪ್ರದರ್ಶಿಸಿ ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕಿದ ಎಂ.ಲಕ್ಷ್ಮಣ್
ಹುಡಾನ್ ಯೋಜನೆ ಅಡಿಯಲ್ಲಿ ನಗರಗಳ ನಡುವೆ ರೈಲು ಜೋಡಣೆ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಉತ್ಪಾದನೆಗೆ ಸಬ್ಸಿಡಿ ಕೊಡಲು ನಿರ್ಧರಿಸಲಾಗಿದೆ. ಇದೆಲ್ಲವೂ ಇರುವಾಗ ಕಾಂಗ್ರೆಸ್ ನವರು ಮಾತ್ರವೇ ಕೇಂದ್ರ ಬಜೆಟ್ ಅನ್ನು ವಿರೋಧಿಸುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ 2500 ಕೋಟಿಗೂ ಹೆಚ್ಚು ಮೀಸಲಿಡಲಾಗಿದೆ. ಇವೆಲ್ಲವೂ ರಾಜ್ಯಕ್ಕೂ ಸಿಗುವ ಸೌಲಭ್ಯಗಳಲ್ಲವೇ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಕೀಳುಮಟ್ಟದ ವ್ಯಂಗ್ಯ ಮಾಡುವ ಮೊದಲು ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ತರುವ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಇನ್ನು ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಪ್ರಧಾನಿ ಮೋದಿಯವರು ಜನಪರವಾದ ಬಜೆಟ್ ನೀಡಿದ್ದಾರೆ. ಬಡವರಿಂದ ಹಿಡಿದು ಶ್ರೀಮಂತರವರೆಗೆ ಒಳಿತಾಗುವ ರೀತಿ ಬಜೆಟ್ ಇದೆ. 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯತಿ ಇದೆ. ಕೊಡಗಿಗೆ ಮಳೆಗಾಲದಲ್ಲಿ ರಸ್ತೆ ಹಾಳಾಗುವುದರಿಂದ ವಿಶೇಷ ಅನುದಾನ ಕೊಡಬೇಕು. ಆದರೆ ಕಾಂಗ್ರೆಸ್ ಸರ್ಕಾರ ಕೊಡುತ್ತಿಲ್ಲ. ಕಾಡು ಪ್ರಾಣಿಗಳಿಂದ ಆಗುವ ಮಾನವ ಜೀವ ಹಾನಿಗೆ ಸಿಗುವ ಪರಿಹಾರದ ಮೊತ್ತವನ್ನು ಇವರಿಗೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಮಂಡ್ಯದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಇದೇ ಸ್ಥಿತಿ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಏನು ಹೇಳುತ್ತಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಸಿಎಂಗೆ ಎಲ್ಲಾ ವಿಷಯ ಗೊತ್ತಿರುತ್ತದೆ.
ಕೊಡವ ಉಡುಗೆ, ಸಂಸ್ಕೃತಿ ಆಚಾರ ರಕ್ಷಣೆಗಾಗಿ ಸಹಸ್ರ ಜನರ ಪಾದಯಾತ್ರೆ
ಆದರೆ ಗೃಹಸಚಿವರಿಗೆ ಯಾವುದೇ ಮಾಹಿತಿ ಇರಲ್ಲ. ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ. ಇವರ ಸರ್ಕಾರ ಬಂದ ಮೇಲೆ ಆನೆಗಳ ತಡೆಗೆ ಒಂದು ರೈಲ್ವೇ ಕಂಬಿ ಜೋಡಿಸಿಲ್ಲ. ನಮ್ಮ ಸರ್ಕಾರದ ಸಂದರ್ಭದಲ್ಲಿ 120 ಕೋಟಿ ಕೊಟ್ಟಿದ್ದೆವು. ಈ 120 ಕೋಟಿ ಎಲ್ಲಿ, ಎಷ್ಟು ಖರ್ಚು ಮಾಡಿದರು ಅದನ್ನು ಹೇಳಲಿ ಎಂದು ಆಗ್ರಹಿಸಿದ್ದಾರೆ. ಹಿಂದೆ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಕೆಲಸ ಮಾಡಿಸಿ, ನಾವು ಮಾಡಿದ್ದೇವೆ ಎಂದು ಹೇಳುವುದಲ್ಲ. ಮಡಿಕೇರಿ ನಗರಕ್ಕೂ ಹುಲಿ ಯಾವಾಗ ಬರುತ್ತದೆಯೋ ಎಂಬ ಆತಂಕವಿದೆ. ರಾಜ್ಯ ಸರ್ಕಾರ ಜನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಇಡೀ ರಾಜ್ಯದಲ್ಲಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮೇಲೆ ಎತ್ತಿಕಟ್ಟುವ ಕೆಲಸವನ್ನು ರಾಜ್ಯದ ಸಚಿವರುಗಳು ಮಾಡುತ್ತಿದ್ದಾರೆ ಎಂದು ಬೋಪಯ್ಯ ಅಸಮಾಧಾನ ಹೊರಹಾಕಿದ್ದಾರೆ.