ಕೇಂದ್ರ ಸರ್ಕಾರವು ರಾಜ್ಯದಕ್ಕೆ ಮೂರು ನಾಮ ಬಳಿದ ಖಾಲಿ ಚೆಂಬು ತೆಂಗಿನ ಚಿಪ್ಪು ನೀಡಿದೆ ಎಂದು ಅವುಗಳನ್ನು ಪ್ರದರ್ಶಿಸಿ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಮೂದಲಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಸುದ್ಧಿಗೋಷ್ಠಿ ಸಂದರ್ಭ ಅವರು ಖಾಲಿ ಚೆಂಬು ತೆಂಗಿನ ಚಿಪ್ಪುಗಳನ್ನು ಪ್ರದರ್ಶಿಸಿದರು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.03): ಕೇಂದ್ರ ಸರ್ಕಾರವು ರಾಜ್ಯದಕ್ಕೆ ಮೂರು ನಾಮ ಬಳಿದ ಖಾಲಿ ಚೆಂಬು ತೆಂಗಿನ ಚಿಪ್ಪು ನೀಡಿದೆ ಎಂದು ಅವುಗಳನ್ನು ಪ್ರದರ್ಶಿಸಿ ಕೆಪಿಸಿಸಿ ರಾಜ್ಯ ವಕ್ತಾರ ಎಂ. ಲಕ್ಷ್ಮಣ್ ಮೂದಲಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಸುದ್ಧಿಗೋಷ್ಠಿ ಸಂದರ್ಭ ಅವರು ಖಾಲಿ ಚೆಂಬು ತೆಂಗಿನ ಚಿಪ್ಪುಗಳನ್ನು ಪ್ರದರ್ಶಿಸಿದರು. ಮೂರು ನಾಮ ಬಳಿದ ಚೆಂಬು, ತೆಂಗಿನ ಚಿಪ್ಪುಗಳನ್ನು ಹಿಡಿದು ಪ್ರದರ್ಶಿಸಿದ ಎಂ. ಲಕ್ಷ್ಮಣ್ ಮತ್ತು ಕೊಡಗು ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಗೋವಿಂದ, ಗೋವಿಂದಾ ಎಂದು ಧ್ವನಿಗೂಡಿಸಿ ಕೇಂದ್ರ ಬಜೆಟ್ ವಿರುದ್ಧ ವ್ಯಂಗ್ಯವಾಡಿದರು. 

ಬಳಿಕ ಮಾತನಾಡಿದ ಎಂ ಲಕ್ಷ್ಮಣ್, ಕೇಂದ್ರ ಸರ್ಕಾರ 205 ಲಕ್ಷ ಕೋಟಿ ಸಾಲ ಮಾಡಿದೆ ಅದರಲ್ಲಿ, ಕಳೆದ 10 ವರ್ಷದಲ್ಲಿ 143 ಲಕ್ಷ ಕೋಟಿ ಸಾಲ ಮಾಡಿದೆ. ಆ ಸಾಲಕ್ಕೆ 12.7 ಲಕ್ಷ ಕೋಟಿ ಬಡ್ಡಿ ಕಟ್ಟುತ್ತಿದೆ. ಇದು ಇಡೀ ದೇಶವನ್ನೇ ಸಾಲದ ಕೂಪಕ್ಕೆ ತಳ್ಳಿದೆ. ಈಗ ದೇಶದ ಪ್ರತಿಯೊಬ್ಬರ ತಲೆ ಮೇಲೆ ಮೂರು ಕಾಲು ಲಕ್ಷ ಸಾಲ ಇದೆ. ಇದನ್ನೇ ಬಿಜೆಪಿಯವರು ದೇಶದ ಅಭಿವೃದ್ಧಿಗೆ ಪೂರಕ ಎನ್ನುತ್ತಿದ್ದಾರೆ ಎಂದರು. 12 ಲಕ್ಷದವರೆಗೆ ತೆರಿಗೆ ವಿನಾಯಿತಿ ಎನ್ನುವುದು ಎಷ್ಟು ಜನರಿಗೆ ಅನುಕೂಲವಾಗಲಿದೆ. ದೇಶದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 9 ಕೋಟಿ ಇದೆ. ಅದರಲ್ಲಿ 5.5 ಕೋಟಿ ಜನರು ಜೀರೋ ಆದಾಯ ತೆರಿಗೆದಾರರಿದ್ದಾರೆ. 

ಕೇಂದ್ರ ಬಜೆಟ್ ಬಗ್ಗೆ ನಿರೀಕ್ಷೆ ಇದ್ದರೂ ಎಲ್ಲವೂ ಸುಳ್ಳಾಗುತ್ತದೆ: ಸಿಎಂ ಸಿದ್ದರಾಮಯ್ಯ ಲೇವಡಿ

ನಿಜವಾದ ತೆರಿಗೆ ಪಾವತಿದಾರರು 35 ಲಕ್ಷ ಮಾತ್ರ ಇದ್ದಾರೆ. ನಿತೀಶ್ ಮತ್ತು ಚಂದ್ರಬಾಬು ನಾಯ್ಡು ಅವರನ್ನು ಓಲೈಸಿಕೊಳ್ಳುವುದಕ್ಕೆ ದೊಡ್ಡ ಕೊಡುಗೆ ಕೊಡಲಾಗಿದೆ. ಕಳೆದ ಬಾರಿಯ ಯೋಜನೆಗಳನ್ನೇ ಮತ್ತೆ ಘೋಷಿಸಲಾಗಿದೆ. 5 ಲಕ್ಷ ಕೋಟಿಯಷ್ಟು ರಾಜ್ಯದಿಂದ ತೆರಿಗೆ ಸಂದಾಯವಾಗುತ್ತದೆ. ಅದಕ್ಕೆ ನೀವು 42 ಪರ್ಸೆಂಟ್ ರಾಜ್ಯಕ್ಕೆ ವಾಪಸ್ ಕೊಡುಬೇಕಾಗಿರುವುದು ನಿಯಮ. ಆದರೆ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. 19 ಜನ ಎಂಪಿಗಳು 4 ಕೇಂದ್ರ ಸಚಿವರು ಇದ್ದಾರೆ. ಅವರಲ್ಲಿ ಒಬ್ಬೇ ಒಬ್ಬರು ಸಿಎಂ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಏನು ಬೇಕೆಂದು ಚರ್ಚಿಸಲಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಬಜೆಟ್ ಬಗ್ಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅಸಮಾಧಾನ ಹೊರಹಾಕಿದರು. 

ರಾಜ್ಯಕ್ಕೆ ಬೇಕಾಗಿರುವ ಯೋಜನೆಗಳ ಬಗ್ಗೆ ಸರ್ಕಾರ ಮನವಿ ಮಾಡಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್ ಡಿಸೆಂಬರ್ ತಿಂಗಳಲ್ಲಿಯೇ ಸಿಎಂ ಸಿದ್ದರಾಮಯ್ಯನವರು 30 ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದಾರೆ. ಆದರೆ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುವ ಅಪ್ರಬುದ್ಧ ರಾಜಕಾರಣಿ. ರಾಜಕೀಯವಾಗಿ ಮಾತನಾಡಿ ಜನರ ದಿಕ್ಕು ತಪ್ಪಿಸುವುದು ಕುಮಾರಸ್ವಾಮಿ ಅವರದ್ದು ಎಂದು ಎಂ. ಲಕ್ಷ್ಮಣ್ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. 

ಕೊಡವ ಉಡುಗೆ, ಸಂಸ್ಕೃತಿ ಆಚಾರ ರಕ್ಷಣೆಗಾಗಿ ಸಹಸ್ರ ಜನರ ಪಾದಯಾತ್ರೆ

ನಾವು ಮನವಿ ಮಾಡಿದರೆ ಮಾತ್ರವೇ ರಾಜ್ಯಕ್ಕೆ ಯೋಜನೆ ಕೊಡುವುದಾ. ನಮ್ಮ ತೆರಿಗೆಯ ಪಾಲಿನ 42 ಪರ್ಸೆಂಟ್ ವಾಪಸ್ ನಮಗೆ ಕೊಡಬೇಕು ಎನ್ನುವುದು ಸಾಮಾನ್ಯ ಜ್ಞಾನ ಅಲ್ಲವೇ ಕುಮಾರಸ್ವಾಮಿ ಅವರೆ.? ರಾಜ್ಯದಿಂದ 5 ಲಕ್ಷ ಕೋಟಿ ತೆರಿಗೆ ಪಾವತಿ ಮಾಡುತ್ತೇವೆ. ನಾವು ಕೇಳದಿದ್ದರೂ ಪ್ರತೀ ರಾಜ್ಯಗಳಿಗೆ ಏನು ಕೊಡಬೇಕು ಎನ್ನುವುದು ಮೂಲಭೂತ ಸಾಮಾನ್ಯ ಜ್ಞಾನ ಅಲ್ಲವೆ.? ಇದು ಕೇಂದ್ರ ಸರ್ಕಾರಕ್ಕೆ ಇರಬೇಕು ಅಲ್ಲವೇ. ಬಿಹಾರ, ಆಂಧ್ರದವರಿಗೆ ಇಷ್ಟೊಂದು ಕೊಟ್ಟಿದ್ದೀರಲ್ಲ, ಅವರು ಅಷ್ಟೊಂದು ಕೇಳಿದ್ದರೆ ಎಂದು ಕೇಂದ್ರ ಸಚಿವ ಎಚ್ ಡಿಕೆಗೆ ಎಂ ಲಕ್ಷ್ಮಣ್ ಪ್ರಶ್ನಿಸಿದ್ದಾರೆ.