'ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸಿದ ಬಿಜೆಪಿಗೆ ಹಿನ್ನಡೆ ಆಗುತ್ತೆ'
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸುವಾಗ ಧ್ವನಿ ಎತ್ತದೆ ಲಿಂಗಾಯತ ಶಾಸಕರು ಅನ್ಯಾಯವೆಸಗಿದ್ದಾರೆ. ಚುನಾವಣೆ ಹತ್ತಿರದಲ್ಲಿ ಅವರನ್ನು ಕರೆತಂದು ಮತ ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಟೀಕಿಸಿದ ಮಲ್ಲಿಕಾರ್ಜುನ ಚರಂತಿಮಠ.
ಬಾಗಲಕೋಟೆ(ಮಾ.18): ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ದಿಢೀರ್ ಇಳಿಸಿದಾಗ ಕಾಂಗ್ರೆಸ್‌ಗೆ ಆದ ಹಿನ್ನಡೆ, ಈಗ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿರುವ ಬಿಜೆಪಿಗೂ ಆಗಲಿದೆ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸುವಾಗ ಧ್ವನಿ ಎತ್ತದೆ ಲಿಂಗಾಯತ ಶಾಸಕರು ಅನ್ಯಾಯವೆಸಗಿದ್ದಾರೆ. ಚುನಾವಣೆ ಹತ್ತಿರದಲ್ಲಿ ಅವರನ್ನು ಕರೆತಂದು ಮತ ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಟೀಕಿಸಿದರು.
Karnataka Politics : ಚುನಾವಣೆಗೂ ಮುನ್ನ ಪ್ರಚಾರ ಅಬ್ಬರ
ಚರಂತಿಮಠ ಹಾಗೂ ವಸ್ತ್ರದ ಪ್ರತಿಷ್ಠಾನ ಹೊಸದಾಗಿ ಅಸ್ತಿತ್ವಕ್ಕೆ ಬಂದಿವೆ. ಅದರ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ನಮ್ಮ ಕುಟುಂಬದ ಹಿರಿಯರ ಕೊಡುಗೆಗಳನ್ನು ಸ್ಮರಿಸುವ ಕೆಲಸ ಮಾಡಿದ್ದೇನೆ. ಇನ್ನೆರಡು ದಿನದಲ್ಲಿ ನನ್ನಿಂದ ಆಗಿರುವ ಸಾಮಾಜಿಕ ಕಾರ್ಯಗಳನ್ನೂ ವಿವರಿಸುವ ಕೆಲಸ ಮಾಡುತ್ತೇನೆ ಎಂದರು.
ಬಂಡಾಯ ಗುಂಪಿನ ಒಬ್ಬರು ಕಣಕ್ಕೆ:
ಬಿಜೆಪಿಯಿಂದ ನನ್ನ ಉಚ್ಚಾಟನೆ ಆದೇಶ ಹಿಂಪಡೆಯುವುದಾಗಿ ತಿಳಿಸಿರುವ ವರಿಷ್ಠರು ಏನನ್ನೂ ಮಾತನಾಡದಂತೆ ಸೂಚಿಸಿದ್ದಾರೆ ಎಂದು ಮಲ್ಲಿಕಾರ್ಜುನ ಚರಂತಿಮಠ ಹೇಳಿದರು. ಉಚ್ಚಾಟನೆ ಆದೇಶ ಹಿಂಪಡೆದ ನಂತರವೂ ಸಹೋದರ ವೀರಣ್ಣ ಚರಂತಿಮಠ ಅವರಿಗೆ ಟಿಕೇಟ್ ನೀಡಿದರೆ? ಎಂಬ ಪ್ರಶ್ನೆಗೆ ವೀರಣ್ಣ ಚರಂತಿಮಠ ಹೊರತುಪಡಿಸಿ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಆಗಲೂ ನಮ್ಮ ಬಂಡಾಯ ಗುಂಪಿನಲ್ಲಿ ಯಾರಾದರೂ ಒಬ್ಬರು ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ರವಿ ಕುಮಟಗಿ, ಬಸವರಾಜ ಕಟಗೇರಿ, ಶಿವಕುಮಾರ ಮೇಲ್ನಾಡ ಇದ್ದರು.