Karnataka Politics : ಚುನಾವಣೆಗೂ ಮುನ್ನ ಪ್ರಚಾರ ಅಬ್ಬರ

  ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಅದಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ. ಆದರೆ, ಅದಕ್ಕೂ ಮೊದಲೇ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿವೆ.

Campaigning before the election snr

ಬ್ರಹ್ಮಾನಂದ ಎನ್‌. ಹಡಗಲಿ

 ಬೆಳಗಾವಿ :  ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಅದಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ. ಆದರೆ, ಅದಕ್ಕೂ ಮೊದಲೇ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರನ್ನು ಕರೆಸಿ ತನ್ನ ಭದ್ರಕೋಟೆಯನ್ನು ಮತ್ತಷ್ಟು ಬಿಗಿ ಮಾಡಿಕೊಳ್ಳಲು ಯತ್ನಿಸಿದೆ. ಕಾಂಗ್ರೆಸ್‌ ಕೂಡ ಪ್ರಜಾಧ್ವನಿ ಹೆಸರಲ್ಲಿ ತನ್ನ ಅಬ್ಬರವನ್ನೂ ತೋರಿಸಿದೆ. ಇದರ ನಡುವೆ ಜಿಲ್ಲೆಯಲ್ಲಿ ಅಸ್ತಿತ್ವ ಇಲ್ಲದಿದ್ದರೂ ಪಂಚರತ್ನ ಮೂಲಕ ಜೆಡಿಎಸ್‌ ಕೂಡ ತನ್ನ ಇರುವಿಕೆಯನ್ನು ಪ್ರದರ್ಶಿಸಿದೆ.

ಬೆಂಗಳೂರು ನಗರ ಹೊಂದಿರುವ 24 ವಿಧಾನಸಭಾ ಕ್ಷೇತ್ರಗಳ ನಂತರ, 18 ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಎರಡನೇ ದೊಡ್ಡ ಸ್ಥಾನ ಹೊಂದಿದೆ. ಜಿಲ್ಲೆಯಲ್ಲಿ ಸದ್ಯ 13 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಮುಂಚೂಣಿಯಲ್ಲಿದೆ. ಐದು ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌ ಈ ಬಾರಿ ಕೇಸರಿ ಕೋಟೆಯನ್ನು ಛಿದ್ರಗೊಳಿಸುವ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ತಮಗೆ ಹೆಚ್ಚು ಅನುಕೂಲ ಎಂಬ ಲೆಕ್ಕಾಚಾರ ಎರಡೂ ಪಕ್ಷಗಳ ನಾಯಕರಲ್ಲಿದೆ. ಹೀಗಾಗಿ ಬೆಳಗಾವಿ ಜಿಲ್ಲೆಗೆ ಎಲ್ಲರೂ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಬಿಜೆಪಿ ಅಬ್ಬರ ಬಲು ಜೋರು:

ಬೆಳಗಾವಿ ಬಿಜೆಪಿ ಭದ್ರಕೋಟೆ. ಹೀಗಾಗಿ ತಾನು ಈಗ ಪಡೆದಿರುವ ಸಂಖ್ಯೆಗಿಂತ ಇನ್ನೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡಿದೆ ಬಿಜೆಪಿ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಆರಂಭಿಸಿರುವ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ನಾನಾ ಸಮಾವೇಶಗಳನ್ನು ಬಿಜೆಪಿ ಬೆಳಗಾವಿಯಲ್ಲಿ ಈಗಾಗಲೇ ನಡೆದಿದೆ. ಎಸ್‌ಸಿ, ಎಸ್ಟಿಸಮಾವೇಶ, ಹಿಂದುಳಿದವರ ಸಮಾವೇಶ, ರೈತ ಸಮಾವೇಶ ಸೇರಿದಂತೆ ಹಲವಾರು ಸಮಾವೇಶಗಳನ್ನು ನಡೆಸಿದೆ. ಮಾತ್ರವಲ್ಲ, ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಕರೆಸಿತ್ತು. ಜತೆಗೆ ರೋಡ್‌ ಶೋ ಕೂಡ ನಡೆಸಿತ್ತು. ಇದರ ನಡುವೆ ಕಿತ್ತೂರ ಕರ್ನಾಟಕ ಭಾಗದ ವಿಜಯ ಸಂಕಲ್ಪ ಯಾತ್ರೆಗೆ ರಾಜನಾಥ ಸಿಂಗ್‌ ಚಾಲನೆ ನೀಡಿದ್ದಲ್ಲದೆ, ಕಿತ್ತೂರಲ್ಲಿ ರೋಡ್‌ ಶೋ ಕೂಡ ನಡೆಸಿದ್ದರು.

ಮಾತ್ರವಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಮಧ್ಯಪ್ರದೇಶ ಸಿಎಂ ಶಿವರಾಜಸಿಂಗ್‌ ಚೌಹಾಣ, ಅಸ್ಸಾ ಸಿಎಂ ಹಿಮಂತ್‌ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ನಾಯಕರು ಆಗಮಿಸಿ ಬಿಜೆಪಿ ಸಭೆ, ಸಮಾವೇಶ, ಸಮಾರಂಭಗಳಲ್ಲಿ ಪಾಲ್ಗೊಂಡು ಅಬ್ಬರದ ಪ್ರಚಾರ ನಡೆಸಿದ್ದಾರೆ. ಇನ್ನೂ ಹಲವಾರು ನಾಯಕರು ಬಿಜೆಪಿಗೆ ಆಗಮಿಸುವ ಸಾಧ್ಯತೆಗಳಿದ್ದು, ಹಲವಾರು ಸಮಾವೇಶಗಳು ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ.

ಕಾಂಗ್ರೆಸ್‌ನಲ್ಲಿ ರಾಜ್ಯ ನಾಯಕರ ಅಬ್ಬರ:

ಬಿಜೆಪಿಯು ರಾಜ್ಯ ಮತ್ತು ರಾಷ್ಟ್ರ ನಾಯಕರು, ಕೇಂದ್ರ, ರಾಜ್ಯ ಸಚಿವರನ್ನು ಕರೆಸಿ ಪ್ರಚಾರ ನಡೆಸಿದರೆ, ಕಾಂಗ್ರೆಸ್‌ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಕಾಂಗ್ರೆಸ್‌ಗೆ ರಾಜ್ಯ ನಾಯಕರೆ ಸ್ಟಾರ್‌ ನಾಯಕರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಉಸ್ತುವಾರಿ ಸುರ್ಜೇವಾಲಾ, ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ ಸೇರಿದಂತೆ ಹಲವಾರು ನಾಯಕರು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಚಾರ ನಡೆಸಿದ್ದಾರೆ. ಮಾ.20ರಂದು ಬೆಳಗಾವಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಮಿಸುತ್ತಿದ್ದು, ರಾರ‍ಯಲಿ ಕೂಡ ನಡೆಸಲಿದ್ದಾರೆ. ಈ ಮೂಲಕ 5 ಕ್ಷೇತ್ರಗಳಿಂದ 15 ಕ್ಷೇತ್ರಗಳನ್ನು ಏರಿಸಿಕೊಳ್ಳುವ ಗುರಿಯನ್ನು ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕಾರಣವೇ ಬೇರೆ. ಇಲ್ಲಿ ಕೇವಲ ಪ್ರಚಾರದಿಂದ ಮತಗಳನ್ನು ಪಡೆಯುವುದು ಕಷ್ಟಸಾಧ್ಯ. ಅಭಿವೃದ್ಧಿ ಕಾರ್ಯಗಳ ಜತೆಗೆ ಕೆಲವು ಬಾರಿ ಸ್ಥಳೀಯ ನಾಯಕರ ವರ್ಚಸ್ಸು ಕೂಡ ಪ್ರಭಾವ ಬೀರುತ್ತದೆ. ಹೀಗಾಗಿ ಯಾರೇ ನಾಯಕರು ಬಂದರು ಅಂತಿಮ ಅಭ್ಯರ್ಥಿಗಳ ತೀರ್ಮಾನ ಮತದಾರರ ಕೈಯಲ್ಲಿರುತ್ತದೆ ಎಂಬುವುದು ಮಾತ್ರ ಸುಳ್ಳಲ್ಲ.

Latest Videos
Follow Us:
Download App:
  • android
  • ios