ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕಸರತ್ತು ನಡೆಸಿದ್ದರೆ, ಪಡೆಯಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಈ ಸರ್ಕಾರ ಬೀಳಬಹುದು ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬಾಗಲಕೋಟೆ (ನ.23): ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕಸರತ್ತು ನಡೆಸಿದ್ದರೆ, ಪಡೆಯಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದಾರೆ. ಇಬ್ಬರಲ್ಲಿ ಯಾರೇ ಸಿಎಂ ಆದರೂ ಹೋದೆಯಾ ಪಿಶಾಚಿ ಅಂದ್ರೆ, ಬಂದೆ ಗವಾಕ್ಷಿ ಅಂದಂಗೆ ಆಗುತ್ತದೆ. ಯಾವುದೇ ಸಂದರ್ಭದಲ್ಲಿ ಈ ಸರ್ಕಾರ ಬೀಳಬಹುದು ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಪರಿಸ್ಥಿತಿ ನೋಡಿದರೆ ಎಲ್ಲಿ ಈ ಸರ್ಕಾರ ಬೀಳುತ್ತದೋ ಗೊತ್ತಿಲ್ಲ ನಾವು ಚುನಾವಣೆಗೆ ಸಿದ್ಧರಾಗಬೇಕು ಎನ್ನುವಂತಿದೆ.
ಜನರು ಸಮಸ್ಯೆ ಅರಿತು ಸರ್ಕಾರ ನಡೆಸಬೇಕು. ಇಲ್ಲದಿದ್ದರೆ ಇದು ಅಲ್ಪಾಯುಷಿ ಸರ್ಕಾರ ಆಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ನಲ್ಲಿ ಸಿಎಂ ಡಿಸಿಎಂ ದ್ವಂದ್ವ ಹೇಳಿಕೆಗಳಲ್ಲಿ ಗೊಂದಲ ಕಾಣುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಬದುಕಿದ್ದಿದ್ದರೆ ಇವರು ಇಷ್ಟೆಲ್ಲ ಮಾತಾಡುತ್ತಿರಲಿಲ್ಲ. ಹೈಕಮಾಂಡ್ ಗಟ್ಟಿ ನಿರ್ಧಾರ ಹೇಳಬೇಕು. ಇಷ್ಟೆಲ್ಲ ನೆಡೆಯುತ್ತಿದ್ದರೂ ಎಐಸಿಸಿ ಸುಮ್ಮನೆ ಇದೆ. ಪಾಪ ಅವರನ್ನೇ ಹಿಡಿದುಕೊಳ್ಳೋರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ವೋಟ್ ಚೋರಿ ವೋಟ್ ಚೋರಿ ಎಂದು ಬಡಿದುಕೊಳ್ಳಲಿದ್ದಾರೆ. ಇವಿಎಂ ಮ್ಯಾನ್ಯುಯಲ್ ಮಷೀನ್.
ಯಾರು ಏನೂ ಮಾಡೋಕೆ ಆಗಲ್ಲ. ಒಂದು ಕಡೆ ಹೋಗಿ ಅವರಿಗೆ ಫ್ರೂವ್ ಮಾಡೋಕೆ ಆಗಿಲ್ಲ, ಇದನ್ನು ಪ್ರೂವ್ ಮಾಡಿ. ಇಲ್ಲ ನಿಮ್ಮನ್ನು ನೀವು ತಿದ್ದುಕೊಳ್ಳಿ, ಬಿಹಾರ ಚುನಾವಣೆಯಲ್ಲಿ ಏನಾಯಿತು ಗೊತ್ತಲ್ಲ. ನಿಮಗೆ ಮೊಟ್ಟ ಮೊದಲ ವೋಟ್ ಚೋರಿ ನಡೆದಿದ್ದು, ನೆಹರು ಕಾಲದಲ್ಲಿ ಇವರು ಈಗ ವೋಟ್ ಚೋರಿ ಎಂದು ಹೇಳಿಕೊಂಡು ಒಡಾಡುತ್ತಾರೆ. ಇವರು ಹಾಗೆ ಹೇಳಿಕೊಂಡು ಓಡಾಡಿದ್ದಕ್ಕೆ ಜನ ಒನ್ ಸೈಡ್ ವೋಟ್ ಹಾಕಿದರು. ಇನ್ನೊಂದೆರಡು ವರ್ಷದಲ್ಲಿ ಕಾಂಗ್ರೆಸ್ ಬರಕಾಸ್ತು ಆಗುತ್ತದೆ. ಮಹಾತ್ಮ ಗಾಂಧಿ ಅವರ ಆಸೆ ಈಡೇರುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಅಧಿವೇಶನದಲ್ಲಿ ಸರ್ಕಾರಿ ಚಾಟಿ
ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ವಿಧಾನಪರಿಷತ್ತಿನಲ್ಲಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡುತ್ತೇವೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಉಭಯ ಪಕ್ಷಗಳ ಪರಿಷತ್ ಸದಸ್ಯರ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ನೆರೆ ಹಾವಳಿ, ಬರ ಪರಿಹಾರ ವಿಚಾರವನ್ನು ನಿಲುವಳಿ ಸೂಚನೆಯಾಗಿ ಮಂಡಿಸಲಾಗುವುದು ಎಂದು ಹೇಳಿದರು. ಬೆಳಗಾವಿ ಅಧಿವೇಶನದಲ್ಲಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನ ಮಾಡಿದ್ದೇವೆ.
ರಾಜ್ಯದಲ್ಲಿ ಈ ಸರ್ಕಾರದಿಂದ ಆಗಿರುವ ಅನಾಹುತಗಳು, ರಸ್ತೆ ಗುಂಡಿಗಳ ಸಮಸ್ಯೆ, ಕರ್ನಾಟಕದ ಆರ್ಥಿಕ ಸಮಸ್ಯೆ, ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದು, ಶಿಕ್ಷಣ ಕ್ಷೇತ್ರದ ಅನಾಹುತಗಳನ್ನು ಮುಖ್ಯ ವಿಚಾರವಾಗಿ ಪರಿಗಣಿಸಲು ಎರಡೂ ಪಕ್ಷಗಳ ಮುಖಂಡರು ತೀರ್ಮಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ರಾಜ್ಯಾದ್ಯಂತ ರೈತರ ಸಮಸ್ಯೆಗಳು ದೊಡ್ಡದಾಗಿ ಮತ್ತು ವೇಗವಾಗಿ ಬೆಳೆಯುತ್ತಿವೆ. ಈ ಸರ್ಕಾರ ಮಾತನಾಡುತ್ತದೆ. ಆದರೆ, ಕೆಲಸ ಮಾಡುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸದನದಲ್ಲಿ ನಾವು ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಬೇಕು. ಕಾಲಹರಣ ಮಾಡದೇ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು. ರೈತರ ಸಮಸ್ಯೆಗಳನ್ನು ಆಮೂಲಾಗ್ರವಾಗಿ ಚಿಂತನೆ ಮಾಡಿ ಅವುಗಳಿಗೆ ಪರಿಹಾರ ನೀಡಬೇಕೆಂಬ ವಿಷಯವನ್ನೂ ಪರಿಗಣಿಸುತ್ತೇವೆ ಎಂದು ಹೇಳಿದರು.

