ಮುಂಬರುವ ವಿಧಾನ ಪರಿಷತ್ ಹಾಗೂ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಎದುರಿಸಲು ತೀರ್ಮಾನಿಸಿವೆ. ಕಾಂಗ್ರೆಸ್ ಪಕ್ಷವನ್ನು ಮಣಿಸಲು 180 ಸ್ಥಾನಗಳ ಗುರಿ ಹೊಂದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಹಿರಂಗ ಚರ್ಚೆ ನಡೆಸದಿರಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನ ಪರಿಷತ್‌ ಚುನಾವಣೆ ಸೇರಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಮೈತ್ರಿಕೂಟ ಜಂಟಿಯಾಗಿ ಎದುರಿಸಲು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ರೀತಿ 180 ಸ್ಥಾನದ ಗುರಿ ಸಾಧಿಸಲು ಒಗ್ಗಟ್ಟಿನಿಂದ ಹೋರಾಡಲು ರಾಜ್ಯ ಬಿಜೆಪಿ-ಜೆಡಿಎಸ್‌ನ ನಾಯಕರು ತೀರ್ಮಾನಿಸಿದ್ದಾರೆ.

ವಿಧಾನ ಪರಿಷತ್ತಿನ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ-ಜೆಡಿಎಸ್‌ನ ನಾಯಕರು ಶನಿವಾರ ಸಮನ್ವಯ ಸಭೆ ನಡೆಸಿ ಚುನಾವಣೆ ಗೆಲುವಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಿದರು.

ಮುಂದೆ ಯಾವುದೇ ಚುನಾವಣೆ ನಡೆದರೂ ಅದು ಎನ್‌ಡಿಎ ಅಭ್ಯರ್ಥಿಯ ಚುನಾವಣೆ ಆಗಿರಬೇಕು. ಬಿಜೆಪಿ ಅಥವಾ ಜೆಡಿಎಸ್‌ ಅಭ್ಯರ್ಥಿ ಚುನಾವಣೆ ಎಂದು ಬಿಂಬಿಸಬಾರದು. ಎನ್‌ಡಿಎ ಸ್ಪರ್ಧೆ ಮಾಡಿದೆ ಎಂದೇ ಚುನಾವಣೆ ಎದುರಿಸಬೇಕು. ವಿಧಾನ ಪರಿಷತ್‌, ವಿಧಾನಸಭೆ, ಸಹಕಾರ ಸಂಘಗಳ ಚುನಾವಣೆಗೆ ಜಂಟಿಯಾಗಿ ಹೋರಾಟ ಮಾಡಿದರೆ ಮಾತ್ರ ಕಾಂಗ್ರೆಸ್‌ ಮಣಿಸಲು ಸುಲಭ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಣದ ಚುನಾವಣೆ ಮಾಡುತ್ತಾರೆ. ಇದರ ನಡುವೆ ಪರಿಷತ್ತಿನ ನಾಲ್ಕು ಸ್ಥಾನ ಗೆಲ್ಲಬೇಕು ಎಂದು ಮುಖಂಡರು ನಿರ್ಧರಿಸಿದ್ದಾರೆ.

ಸಿಎಂ ಸ್ಪರ್ಧೆ ಸೃಷ್ಟಿ ಬೇಡ:

ಮುಂದೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಬಹಿರಂಗ ಚರ್ಚೆ ನಡೆಸಬಾರದು. ಈ ಸಂಬಂಧ ಉಭಯ ಪಕ್ಷಗಳ ಕಾರ್ಯಕರ್ತರು ಅಥವಾ ನಾಯಕರು ಹೇಳಿಕೆ ನೀಡಬಾರದು. ಬಿ.ವೈ.ವಿಜಯೇಂದ್ರ ಮತ್ತು ಎಚ್‌.ಡಿ.ಕುಮಾರಸ್ವಾಮಿ ಪರ ಮುಖ್ಯಮಂತ್ರಿ ಸ್ಪರ್ಧೆ ಸೃಷ್ಟಿಸಬಾರದು. ಮುಂದೆ ಯಾರು ಮುಖ್ಯಮಂತ್ರಿ ಎಂಬುದನ್ನು ಹೈಕಮಾಂಡ್‌ ತೀರ್ಮಾನ ಮಾಡಲಿ ಎಂದು ಉಭಯ ಪಕ್ಷಗಳು ನಾಯಕರು ಅಭಿಪ್ರಾಯಪಟ್ಟರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಸೋಲಿಸಲು ಜಂಟಿ ಹೊರಾಟ:

ಚುನಾವಣೆ ಬಂದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಂದಾಗುತ್ತಾರೆ. ಡಿ.ಕೆ.ಶಿವಕುಮಾರ್‌ ಹಣದ ರಾಜಕಾರಣ ಮಾಡುವುದು ನಿಶ್ಚಿತ. ಸಿದ್ದರಾಮಯ್ಯ ಈಗ ಮೌನವಾಗಿದ್ದಾರೆ. ಚುನಾವಣೆ ವೇಳೆ ಸಕ್ರಿಯವಾಗಿ ಕೆಲಸ ಮಾಡುತ್ತಾರೆ. ಅವರ ಮಗನ ಭವಿಷ್ಯದ ದೃಷ್ಟಿಯಿಂದ ಸಿದ್ದರಾಮಯ್ಯ ಸಕ್ರಿಯರಾಗುತ್ತಾರೆ. ಹೀಗಾಗಿ ಕಾಂಗ್ರೆಸ್‌ ಸೋಲಿಸಲು ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ ಮಾಡಬೇಕು ಎಂದು ಸಮನ್ವಯ ಸಭೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಈ ಸಲಹೆಗೆ ಬಿಜೆಪಿ ನಾಯಕರು ಸಮ್ಮತಿ ಸೂಚಿಸಿದ್ದಾರೆ.

ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಸಾಂಪ್ರದಾಯಿಕ ಮತಗಳು ಚದುರದಂತೆ ನೋಡಿಕೊಳ್ಳಬೇಕು. ಸರ್ಕಾರದ ಮೇಲೆ ಮುನಿಸಿಕೊಂಡಿರುವ ಮತಗಳನ್ನು ಗುರಿ ಮಾಡಬೇಕು. ಮಾಜಿ ಶಾಸಕರು, ಪ್ರಮುಖ ನಾಯಕರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸಲಹೆ ನೀಡಿದರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಭಯ ಸದನಗಳ ಪ್ರತಿಪಕ್ಷದ ಸದಸ್ಯರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸೇರಿದಂತೆ ಉಭಯ ಪಕ್ಷಗಳು ನಾಯಕರು, ಮುಖಂಡರು, ಶಾಸಕರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯನ್ನು ಬಿಜೆಪಿ-ಜೆಡಿಎಸ್‌ ಪಕ್ಷಗಳು ಒಂದಾಗಿ ಎದುರಿಸಲಿವೆ. ನಾಲ್ಕು ಕ್ಷೇತ್ರಗಳಲ್ಲೂ ಗೆಲ್ಲುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಟ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಕ್ಷೇತ್ರವಾರು ನಾಯಕರಿಗೆ ಜವಾಬ್ದಾರಿ ಘೋಷಿಸಿದ್ದೇವೆ.

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

--

ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ತೆರೆದಿಡಬೇಕು. ರಾಜ್ಯದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕಾರಣ ಎಲ್ಲೆ ಮೀರಿದೆ. ಇದರ ವಿರುದ್ಧ ಹೋರಾಡುತ್ತಲೇ ಚುನಾವಣೆ ಗೆಲುವಿಗೆ ಎನ್‌ಡಿಎ ನಾಯಕರು, ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು.

- ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

----