2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ. ಮತ್ತೊಂದೆಡೆ, ಅವರ ಮೇಲಿನ ಇ.ಡಿ ದಾಳಿ ಪ್ರಕರಣ ದೆಹಲಿಗೆ ವರ್ಗಾವಣೆಯಾಗುವ ಸಾಧ್ಯತೆಯಿದ್ದು, ಕಾಂಗೋ ಚಿನ್ನದ ಗಣಿ ಹೂಡಿಕೆ ಪಿಡಬ್ಲ್ಯೂಡಿ ಅಕ್ರಮದ ಬಗ್ಗೆ ತನಿಖೆ ಚುರುಕು.
ಮೈಸೂರು (ಸೆ.26): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar) ಅವರ ಸ್ವಂತ ಪ್ರಯತ್ನದಿಂದ 2028ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಡಿಕೆಶಿಯವರೇ ಸಿಎಂ ಆಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಮೂಲಕ 2028ರ ಸಿಎಂ ರೇಸ್‌ನಿಂದ ದಿಢೀರ್ ಹಿಂದಕ್ಕೆ ಸರಿದಿದ್ದಾರೆ.
2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರೇ ಸಿಎಂ ಆಗಲಿ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2028ಕ್ಕೆ ನೀವು ಸಿಎಂ ರೇಸ್‌ನಲ್ಲಿ ಇದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಅವರ ಸ್ವಂತ ಪ್ರಯತ್ನದಿಂದ 2028ರಲ್ಲೂ ಕಾಂಗ್ರೆಸ್ ಸರ್ಕಾರ ಬಂದರೆ ಅವರೇ ಸಿಎಂ ಆಗಲಿ, ಆಗಬಾರದು ಅಂತೇನು ಇಲ್ಲ. ನಾನೂ ಕೂಡ ಅವಕಾಶ ಸಿಕ್ಕರೆ ಸಿಎಂ ಆಗುವುದಾಗಿ ಹೇಳಿದ್ದೇನೆ. ಆದರೆ, ನಾನೇ ಸಿಎಂ ಎಂದು ಹೇಳಿಕೊಂಡಿಲ್ಲ. ನನಗೆ ಇನ್ನೂ ವಯಸ್ಸಿದೆ, ಆತುರ ಏನಿಲ್ಲ ಎಂದರು.
ಸಿದ್ದರಾಮಯ್ಯ ಜೊತೆಗಿನ ಸಂಬಂಧ ‘ದೂರದ ಬೆಟ್ಟ ನುಣ್ಣಗೆ’ ಎಂದಿದ್ದೇಕೆ ಜಾರಕಿಹೊಳಿ?
ಸಿದ್ದರಾಮಯ್ಯ ಜೊತೆಗಿನ ಸಂಬಂಧ ಕುರಿತು ಪ್ರತಿಕ್ರಿಯಿಸಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ನಾನೇನು ಅಂತರ ಕಾಯ್ದುಕೊಂಡಿಲ್ಲ. ದೂರದ ಬೆಟ್ಟ ನುಣ್ಣಗೆ ಅಂತಾರೆ, ಹಾಗೆ ನಿಮಗೆ ನಾವು ಚೆನ್ನಾಗಿಲ್ಲ ಅನ್ನಿಸುತ್ತೆ. ಸಿದ್ದರಾಮಯ್ಯ, ನಾನು ಚೆನ್ನಾಗಿಯೇ ಇದ್ದೇವೆ. ಇ.ಡಿ. ದಾಳಿ ಆದಾಗ ಯತೀಂದ್ರ ಬಂದಿದ್ದರು. ಸಿದ್ದರಾಮಯ್ಯ ನನ್ನ ಆಪ್ತರು, ಅವರು ನನ್ನ ಜೊತೆಯಲ್ಲೇ ಇದ್ದಾರೆ. ಸಿದ್ದರಾಮಯ್ಯ ಜೊತೆ ಆಪ್ತ ಆರ್ಮಿ ಇದೆ ಎಂದು ಜಾಣ್ಮೆಯ ಉತ್ತರ ನೀಡಿದರು.
ನನಗೆ ಯಾವುದೇ ನೋಟಿಸ್ ಬಂದಿಲ್ಲ
ಇ.ಡಿ. ದಾಳಿ ಕುರಿತು ಪ್ರತಿಕ್ರಿಯಿಸಿ, ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ನೋಟಿಸ್ ಕೊಟ್ಟರೆ ಹೋಗಿ ಉತ್ತರ ಕೊಡುತ್ತೇನೆ. ನನ್ನ ಮೇಲೆ ಯಾಕೆ ರೈಡ್ ಅಯ್ತು ಅಂತ ತಿಳಿದುಕೊಳ್ಳುವುದಕ್ಕೆ ಟೈಮ್ ಬೇಕು ಎಂದರು.
ಕಳೆದ 12 ವರ್ಷದಲ್ಲಿ ಬಿಜೆಪಿಯ ಯಾವೊಬ್ಬ ನಾಯಕನ ಮೇಲೂ ಇ.ಡಿ. ದಾಳಿ ಆಗಿಲ್ಲ. ಬಿಜೆಪಿಯವರ ಮೇಲೆ ದೂರು ಕೊಟ್ಟರೂ ರೈಡ್ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಇಡಿ ದಾಳಿ ಕೇಸ್ ದಿಲ್ಲಿಗೆ ಶಿಫ್ಟ್, ಸದ್ಯದಲ್ಲೇ ಜಾರಕಿಹೊಳಿಗೆ ನೋಟಿಸ್?
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಪ್ರಕರಣವನ್ನು ದೆಹಲಿಯ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದೆ.
ದಾಳಿ ಪ್ರಕರಣವನ್ನು ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಸಿದ್ಧತೆ ನಡೆದಿದ್ದಾರೆ. ಇದರಿಂದಾಗಿ ಸತೀಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ದಾಳಿ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಪರಿಶೀಲನೆಯನ್ನು ದೆಹಲಿ ಅಧಿಕಾರಿಗಳೇ ನಡೆಸಿದ್ದರು ಎನ್ನಲಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆ ಮತ್ತು ಹಣ ಅಕ್ರಮ ವರ್ಗಾವಣೆ ವಿಚಾರವಾಗಿ ಇ.ಡಿ. ಯಿಂದ ತನಿಖೆ ನಡೆಯಲಿದೆ. ಬೆಂಗಳೂರು ವಲಯದ ಇ.ಡಿ ಅಧಿಕಾರಿಗಳು ಅನೇಕ ಹೈಪ್ರೊಫೈಲ್ ಪ್ರಕರಣಗಳ ತನಿಖೆ ನಡೆಸುತ್ತಿರುವ ಕಾರಣ, ದೆಹಲಿ ಅಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ದಾಳಿ ಪ್ರಕರಣವನ್ನು ವಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಜಾರಕಿಹೊಳಿ ವಿರುದ್ಧ ಬಲವಾದ ಸಾಕ್ಷ್ಯಗಳು ಲಭ್ಯ!:
ಇತ್ತೀಚೆಗೆ ನಡೆಸಿದ ದಾಳಿ ವೇಳೆ ಇ.ಡಿ ಅಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಬಲವಾದ ಸಾಕ್ಷ್ಯಗಳು ಸಿಕ್ಕಿದೆ. ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರು, ಸಹಚರರ ಬಳಿಯೂ ಕೆಲ ಸಾಕ್ಷ್ಯ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಕೇಂದ್ರದಿಂದ ಬಂದ ಅನುದಾನದಲ್ಲಿ ಕ್ಯಾಪಿಟಲ್ ಅಸೋಸಿಯಟ್ಸ್ ಸ್ಕೀಮ್ ಅಡಿ ನಡೆದಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಷ್ಟಚಾರ ನಡೆದಿರುವುದು ಪತ್ತೆಯಾಗಿದೆ. ರಸ್ತೆ ಕಾಮಗಾರಿಗಳ ಗುತ್ತಿಗೆಯಲ್ಲಿ ಭಾರಿ ಅಕ್ರಮ ನಡೆದಿರುವ ಸಂಬಂಧ ಆಧಾರಗಳು ಸಿಕ್ಕಿವೆ ಎನ್ನಲಾಗಿದೆ.
ಸದ್ಯದಲ್ಲಿಯೇ ನೋಟಿಸ್?:
ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೆವೇಟ್ ಲಿಮಿಟೆಡ್ ಕಂಪನಿ ಸೇರಿದಂತೆ, ವಿವಿಧ ಕಂಪನಿಗಳಿಂದ ರಸ್ತೆ ಕಾಮಗಾರಿ ಗುತ್ತಿಗೆಗೆ ಲಂಚ ಪಾವತಿ ಪತ್ತೆಯಾಗಿದೆ. ಅಲ್ಲದೆ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು, ಆಫ್ರಿಕಾ ಖಂಡದ ಕಾಂಗೋ ದೇಶದ ಚಿನ್ನದ ಗಣಿ ಉದ್ಯಮದಲ್ಲಿ ಶೇ.40 ಪಾಲಿನ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಹೀಗಾಗಿ ಸಚಿವರಿಗೆ ಸಂಕಷ್ಟ ಎದುಗಾರಲಿದ್ದು, ಸದ್ಯದಲ್ಲಿಯೇ ಸಚಿವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.


