ಸಿಎಂ ಸಿದ್ದರಾಮಯ್ಯರನ್ನು ಕಂಡರೆ ಬಿಜೆಪಿಯವರಿಗೆ ಭಯ: ಶಾಸಕ ಎ.ಆರ್.ಕೃಷ್ಣಮೂರ್ತಿ
ದೇಶ ಕಂಡ ಅಪ್ಪಟ ಹಾಗೂ ಶುದ್ಧ ಹಸ್ತ ರಾಜಕಾರಣಿಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರಾಗಿದ್ದು, ಇವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡಿ ರೂಪಿಸುತ್ತಿರುವ ಷಡ್ಯಂತ್ರವನ್ನು ಸೋಲಿಸಲು ಎಲ್ಲರೂ ಒಂದಾಗುವ ಕಾಲ ಬಂದಿದೆ.
ಯಳಂದೂರು (ಆ.07): ದೇಶ ಕಂಡ ಅಪ್ಪಟ ಹಾಗೂ ಶುದ್ಧ ಹಸ್ತ ರಾಜಕಾರಣಿಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರಾಗಿದ್ದು, ಇವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡಿ ರೂಪಿಸುತ್ತಿರುವ ಷಡ್ಯಂತ್ರವನ್ನು ಸೋಲಿಸಲು ಎಲ್ಲರೂ ಒಂದಾಗುವ ಕಾಲ ಬಂದಿದೆ. ಆ.೯ ರಂದು ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಮಾವೇಶಕ್ಕೆ ಲಕ್ಷ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಮೈಸೂರಿನ ಜನಾಂದೋಲನ, ಬಿ.ರಾಚಯ್ಯ ಸ್ಮಾರಕದ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಲೂರಿನಲ್ಲಿ ಆ.೧೦ ರಂದು ಜರುಗಲಿರುವ ದಿ.ಬಿ.ರಾಚಯ್ಯ ಸ್ಮಾರಕ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಕೋರಿದರು. ದೇಶದಲ್ಲಿ ಬಿಜೆಪಿ ಇಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ದೆಹಲಿ, ಪಶ್ಚಿಮ ಬಂಗಾಳದಲ್ಲಿ ಈ ಪ್ರಯೋಗ ಮಾಡಿದೆ. ಕೆಜ್ರೀವಾಲ್‌ರನ್ನು ಜೈಲಿಗೆ ಕಳುಹಿಸಿರುವ ಬಿಜೆಪಿ, ನೆರೆಯ ಕೇರಳ ಹಾಗೂ ತಮಿಳುನಾಡಿನಲ್ಲೂ ಸರ್ಕಾರಗಳನ್ನು ಅಸ್ಥಿರಗೊಳಿಸಲು ಯತ್ನ ನಡೆಸಿ, ಈಗ ಯಾವುದೇ ಕಳಂಕವಿಲ್ಲದ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಆವರನ್ನು ಮುಡಾ ಹಗರಣ ಎಂಬ ನೆಪವೊಡ್ಡಿ ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಅರಿವಾಗುತ್ತಿಲ್ಲ ಎಂದರು.
ಸಿದ್ದರಾಮಯ್ಯರಿಂದ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ: ಶಾಸಕ ಶರತ್ ಬಚ್ಚೇಗೌಡ
ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ. ಇದಕ್ಕೆ ಕಾನೂನಿದೆ. ಇದನ್ನು ಬಳಸಿಕೊಳ್ಳದೆ, ವಾಮಮಾರ್ಗದಲ್ಲಿ ಮುಖ್ಯಮಂತ್ರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತನಾಡುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದು ಇವರನ್ನು ಕಂಡರೆ ಬಿಜೆಪಿಯವರಿಗೆ ಭಯವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಅನೇಕ ಹಗರಣಗಳು ನಡೆದಿವೆ. ಈ ಬಗ್ಗೆ ೨೧ ಹಗರಣಗಳ ಬಗ್ಗೆ ದಾಖಲೆಗಳನ್ನು ಸದನದಲ್ಲಿ ಬಿಡುಗಡಡೆ ಮಾಡಲಾಗಿದೆ. ಇಂತಹ ಪಿತೂರಿ ನಡೆಸುತ್ತಿರುವ ಬಿಜೆಪಿಗರ ವಿರುದ್ಧ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆ.೯ ರಂದು ಬೃಹತ್ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು, ನಮ್ಮ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು.
ದಲಿತರ, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಮನಿತ ವರ್ಗಗಳ ಧ್ವನಿಯಾಗಿರುವ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ ಎಂದರು. ಅಲ್ಲದೆ ಆ.೧೦ ರಂದು ಆಲೂರು ಗ್ರಾಮದಲ್ಲಿ ನಮ್ಮ ತಂದೆ ದಿ.ಬಿ.ರಾಚಯ್ಯ ರವರ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ. ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳಾಗಿದ್ದ ಬಿ.ರಾಚಯ್ಯರವರ ಸ್ಮಾರಕಕ್ಕೆ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ೧ ಕೋಟಿ ರು. ಹಣ ಹಾಕಿದ್ದು ಇದಕ್ಕೆ ಚಾಲನೆಯನ್ನು ಇವರೇ ನೀಡಿದ್ದರು. ಈಗ ಮತ್ತೆ ಅವರೇ ಮುಖ್ಯಮಂತ್ರಿಯಾಗಿದ್ದು, ಇದನ್ನು ಲೋಕಾರ್ಪಣೆಗೊಳಿಸಲು ಬರಲಿದ್ದಾರೆ. ಹಾಗಾಗಿ ಇವೆರಡೂ ಕಾರ್ಯಕ್ರಮಗಳಿಗೂ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಗ್ಯಾರಂಟಿ ಯೋಜನೆಯ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಸದಸ್ಯರಾದ ವಡಗೆರೆದಾಸ್, ಕೇತಮ್ಮ, ಮಂಗಲ ಶಿವಕುಮಾರ್ ಮಾತನಾಡಿದರು. ಕೊಪ್ಪಾಳಿ ಮಹದೇವನಾಯಕ, ಕಿನಕಹಳ್ಳಿ ರಾಚಯ್ಯ, ಬಾಗಳಿ ರೇವಣ್ಣ ,ಪಪಂ ಸದಸ್ಯ ಮಹೇಶ್, ಚಾಮುಲ್ ನಿರ್ದೇಶಕರಾದ ರೇವಣ್ಣ, ನಂಜುಂಡಸ್ವಾಮಿ, ಭಾಗ್ಯ, ಜಿ.ಎನ್.ಲೋಕೇಶ್, ಕಮಲ್ ನಾಗರಾಜು, ಚೇತನ್ ದೊರೆರಾಜ್, ಜಯರಾಜು ಸೇರಿದಂತೆ ಅನೇಕರು ಇದ್ದರು.
ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಸಿಗ್ನಲ್‌ನಲ್ಲಿ ಹಿಡಿದ ಪೊಲೀಸ್ ಪೇದೆ!
ಮುಂದಿನ ದಿನಗಳಲ್ಲಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳಲು ಯತ್ನ ನಡೆಸುತ್ತಿರುವ ಕಾಡಂಚಿನ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರನ್ನು ಬಿಳಿಗಿರಿ ರಂಗನಬೆಟ್ಟಕ್ಕೆ ಕರೆಯಿಸಿ ಅಲ್ಲೇ ಸಭೆ ನಡೆಸಲು ನಾನು ಪ್ರಯತ್ನಿಸುತ್ತೇನೆ. ಇವೆಲ್ಲಾ ಕೆಲಸಗಳಾಗಬೇಕಾದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಅವಶ್ಯ.
-ಶಾಸಕ ಎ.ಆರ್.ಕೃಷ್ಣಮೂರ್ತಿ