ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಒಲವು ತೋರಿಸಿದ್ದ ಸಚಿವ ವಿ. ಸೋಮಣ್ಣ ಅವರ ಪುತ್ರನಿಗೆ ಲೋಕಸಭೆಯ ಟಿಕೆಟ್‌ ನೀಡುವುದಾಗಿ ಬಿಜೆಪಿ ಹೈಕಮಾಂಡ್‌ ಭರವಸೆ ನೀಡಿದ ಬೆನ್ನಲ್ಲೇ ಬಿಜೆಪಿಯೊಂದಿಗಿನ ಮುನಿಸನ್ನು ಕೈಬಿಟ್ಟಿದ್ದಾರೆ.

ಬೆಂಗಳೂರು (ಮಾ.14): ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಒಲವು ತೋರಿಸಿದ್ದ ಸಚಿವ ವಿ. ಸೋಮಣ್ಣ ಅವರ ಪುತ್ರನಿಗೆ ಲೋಕಸಭೆಯ ಟಿಕೆಟ್‌ ನೀಡುವುದಾಗಿ ಬಿಜೆಪಿ ಹೈಕಮಾಂಡ್‌ ಭರವಸೆ ನೀಡಿದ ಬೆನ್ನಲ್ಲೇ ಬಿಜೆಪಿಯೊಂದಿಗಿನ ಮುನಿಸನ್ನು ಕೈಬಿಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ ಕೈಸುಟ್ಟಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸೋಮಣ್ಣ ಮಾತನಾಡುತ್ತಿರುವ ಫೋಟೋವನ್ನು ಹರಿಬಿಡಲಾಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್‌ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದ್ದು, ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದ ಬಗ್ಗೆ ಸ್ವತಃ ಸೋಮಣ್ಣ ಮುನಿಸು ವ್ಯಕ್ತಪಡಿಸಿದ್ದರು. ಬಿಜೆಪಿ ಹೈಕಮಾಂಡ್‌ನಿಂದ ತುಮಕೂರು ಲೋಕಸಭೆಯ ಟಿಕೆಟ್‌ ಕೊಡುವುದಾಗಿ ಭರವಸೆ ನೀಡಿದ್ದರಿಂದ ಮುನಿಸು ಕೈಬಿಟ್ಟು ಬಿಜೆಪಿಯಲ್ಲಿ ಮುಂದುವರೆಯಲು ತೀರ್ಮಾನಿಸಿದ್ದಾರೆ. ಆದರೆ, ಇದನ್ನು ಸಹಿಸದೇ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್‌ ಅವರೊಂದಿಗೆ ಚರ್ಚೆ ಮಾಡಿದ್ದಾರೆ ಎನ್ನಲಾದ ಫೋಟೋವೊಂದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಯಾರ ಮಕ್ಳಿಗೂ ಟಿಕೆಟ್‌ ಇಲ್ಲ ಎಂದರೆ ನನ್ನ ಮಗನಿಗೂ ಬೇಡ: ವಿ.ಸೋಮಣ್ಣ

ಆಪರೇಷನ್‌ ಕಾಂಗ್ರೆಸ್‌ಗೆ ಬಲಿಯಾಗಿದ್ದ ಸೋಮಣ್ಣ: ಈಗ ಸೋಮಣ್ಣ ವಿಚಾರದಲ್ಲಿ ಆಪರೇಷನ್ ಕಾಂಗ್ರೆಸ್ "ಕೈ" ಸುಟ್ಟಿತಾ..? ಎನ್ನುವ ಅನುಮಾನ ಕಾಡುತ್ತಿದೆ. ಸೋಮಣ್ಣ ಮುನಿಸು ಸರಿ ಮಾಡುವಲ್ಲಿ ಬಿಜೆಪಿ ಹೈಕಮಾಂಡ್ ಗೆದ್ದಂತೆ ಕಾಣುತ್ತಿದೆ. ಸೋಮಣ್ಣ ಅವರ ಪುತ್ರ ಅರುಣ್‌ ಸೋಮಣ್ಣ ರಾಜಕೀಯ ಭವಿಷ್ಯಕ್ಕಾಗಿ ಸೋಮಣ್ಣ ಮೈಕೊಡವಿ ನಿಂತಿದ್ದು ಸತ್ಯ. ಆದರೆ, ಈಗ ಪುತ್ರನಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಆರಂಭದಲ್ಲಿ ಬಿಜೆಪಿ ಮನಸ್ಸು ಮಾಡಲಿಲ್ಲ. ಇದೇ ಮುನಿಸನ್ನ ದಾಳವಾಗಿಟ್ಟುಕೊಂಡು ಆಪರೇಷನ್ ಕಾಂಗ್ರೆಸ್ ಮಾಡಲಾಗಿತ್ತು. ಕೈ ನಾಯಕರ ಜೊತೆಗೆ ಸಚಿವ ಸೋಮಣ್ಣ ಕೂಡ ಚರ್ಚೆ ನಡೆಸಿದ್ದರು. ಸೋಮಣ್ಣ ಬೇಡಿಕೆಗಳನ್ನು ಕಾಂಗ್ರೆಸ್ ಬಹುತೇಕವಾಗಿ ಈಡೇರಿಸುವ ಹಂತದಲ್ಲಿತ್ತು. ಇನ್ನೇನು ಕಾಂಗ್ರೆಸ್‌ ಪಡೆಗೆ ಸೋಮಣ್ಣ ಸೇರುವ ಹಾದಿ ಸುಗಮವಾಗಿದೆ ಎನ್ನುವಾಗ ಶಾಕ್‌ ನೀಡಿದಂತಾಗಿದೆ.

ಲೋಕಸಭೆ ಟಿಕೆಟ್‌ ನೀಡುವುದಾಗಿ ಬಿಜೆಪಿ ಭರವಸೆ: ಸೋಮಣ್ಣ ಹಾದಿ ಸುಗಮ ಎನ್ನುವಾಗಲೇ ಕೈ ಪಡೆಗೆ ಬಿಜೆಪಿ ಶಾಕ್ ನೀಡಿದೆ. ಸೋಮಣ್ಣ ಪುತ್ರನ ವಿಚಾರದಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ನೀವು ಗೋವಿಂದರಾಜನಗರದಿಂದಲೇ ಸ್ಪರ್ಧಿಸಿ. ನಿಮ್ಮ ಮಗನಿಗೆ ಲೋಕಸಭೆಗೆ ಟಿಕೆಟ್ ನೀಡುತ್ತೇವೆ ಎಂದು ಹೈಕಮಾಂಡ್ ಸೂಚನೆ ನೀಡಿದೆ. ತುಮಕೂರು ಅಥವಾ ಬೇರೆ ಕಡೆ ಲೋಕಸಭೆ ಟಿಕೆಟ್ ‌ನೀಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಸದ್ಯ ಕಾಂಗ್ರೆಸ್ ‌ಸೇರುವ ನಿರ್ಧಾರದಿಂದ‌ ಸಚಿವ ಸೋಮಣ್ಣ ಹಿಂದೆ ಸರಿದಿದ್ದಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ವಲಯದಿಂದಲೇ ಫೋಟೋ ವೈರಲ್ ಆಗಿದೆ. ಡಿಕೆಶಿ-ಸೋಮಣ್ಣ ಜತೆರಗಿರುವ ಫೋಟೋವನ್ನು ಕಾಂಗ್ರೆಸ್‌ ಪಾಳೆಯವು ವೈರಲ್ ಮಾಡುತ್ತಿದೆ.

Assembly Election: ಸಚಿವ ಸೋಮಣ್ಣ ಜೊತೆ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ?

ಇದು ಹಳೆಯ ಫೋಟೋ ಎಂದ ಸೋಮಣ್ಣ: ಇನ್ನು ಡಿಕೆ.ಶಿವಕುಮಾರ್‌ ಅವರೊಂದಿಗೆ ಸೋಮಣ್ಣ ಕುಳಿತು ಆತ್ಮೀಯವಾಗಿ ಚರ್ಚೆ ಮಾಡುವ ಫೋಟೋದ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ ಮಾತನಾಡತ್ತಿರುವುದು ಹಳೆಯ ಫೋಟೋವಾಗಿದೆ. ಆದರೆ, ನಾನು ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಸುಖಾಸುಮ್ಮನೆ ಆರೋಪ ಮಾಡಲು ಈ ಫೋಟೋವನ್ನು ಹರಿಬಿಡಲಾಗಿದೆ ಎಂದು ಮಾಧ್ಯಮಗಳಿಗೆ ಫೋಟೋ ಬಗ್ಗೆ ಸೋಮಣ್ಣ ಸ್ಪಷ್ಟೀಕರಣ ನೀಡಿದ್ದಾರೆ.