ಬಿಜೆಪಿ ಶಾಸಕರಾಗಿದ್ದುಕೊಂಡೇ ತಮ್ಮದೇ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಹಗುರವಾದ ಹೇಳಿಕೆಯನ್ನು ನೀಡುತ್ತಿದ್ದ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ.
ಬೆಂಗಳೂರು (ಜ.16): ಬಿಜೆಪಿ ಶಾಸಕರಾಗಿದ್ದುಕೊಂಡೇ ತಮ್ಮದೇ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಹಗುರವಾದ ಹೇಳಿಕೆಯನ್ನು ನೀಡುತ್ತಿದ್ದ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ, ಮೀಸಲಾತಿ ನೀಡಲು ಕಾನೂನು ಚೌಕಟ್ಟು ಮತ್ತು ಇತರೆ ನೀತಿ ನಿಯಮಗಳು ಅನುಸಾರ ಕೆಲವೊಂದಿಷ್ಟು ಸಮಯ ಕಾಲಮಿತಿಯನ್ನು ತೆಗೆದುಕೊಳ್ಳುತ್ತಿದೆ. ಆದರೆ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ, ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ್ ವಿರುದ್ಧ ಹಗುರವಾದ ಮಾತುಗಳನ್ನಾಡಿದ್ದರು. ಅದರಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಗೆ ಪಿಂಪ್ ಸಚಿವ ಎಂದು ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುವುದಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ.
ಯತ್ನಾಳ್ V/s ನಿರಾಣಿ: ಇಬ್ಬರು ಬಿಜೆಪಿ ನಾಯಕರ ವಾಕ್ಸಮರಕ್ಕೆ ಸಿಎಂ ಗರಂ
ಕೇಂದ್ರ ಸಮಿತಿಯಿಂದ ರಾಜ್ಯಕ್ಕೆ ಶಿಫಾರಸು: ಇನ್ನು ಕಳೆದ ಎರಡ್ಮೂರು ತಿಂಗಳಿಂದ ಮೀಸಲಾತಿ ವಿಚಾರವಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಒಂದೇ ಪಕ್ಷದ ನಾಯಕರಾಗಿದ್ದುಕೊಂಡು ಹೀಗೆ ಬಹಿರಂಗವಾಗಿ ತಮ್ಮ ಪಕ್ಷದವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದರು. ಇಲ್ಲಿ ಒಂದು ಸಮುದಾಯದ ಓಲೈಕೆಗಾಗಿ ಈ ರೀತಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಣತಿಯಂತೆ ರಾಜ್ಯ ಶಿಸ್ತು ಸಮಿತಿಯಿಂದ ಶಾಸಕ ಯತ್ನಾಳ್‌ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಮೂಗುದಾರಕ್ಕೆ ಬಗ್ಗಿದ ಯತ್ನಾಳ್: ಇನ್ನು ಪಕ್ಷದ ಶಿಸ್ತು ನಿಯಮ ಉಲ್ಲಂಘನೆ ಮಾಡಿದ್ದರಿಂದಾಗಿ ಶಾಸಕ ಯತ್ನಾಳ್ ವಿರುದ್ಧ ಕ್ರಮ ಜರುಗಿಸಲು ನೋಟಿಸ್ ನೀಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಕೇಂದ್ರದ ಹೈಕಮಾಂಡ್‌ನಿಂದ ಯತ್ನಾಳ್‌ಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಈ ಮೂಲಕ ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದಕ್ಕೆ ಸ್ಪಷ್ಟನೆಯನ್ನೂ ಕೇಳಿದೆ. ಈ ಘಟನೆ ನಡೆದ ನಂತರ ಇಂದು ಬೆಳಗ್ಗೆ ಯತ್ನಾಳ್ ಮಾಧ್ಯಮಗಳ ಮುಂದೆ ಮಾತನಾಡುವಾಗ ತಮ್ಮ ಶೈಲಿಯನ್ನು ಸಾಫ್ಟ್ ಮಾಡಿಕೊಂಡಿರುವುದು ಕಂಡುಬಂದಿದೆ. ಹೈಕಮಾಂಡ್ ಹಾಕಿದ ಮೂಗುದಾರಕ್ಕೆ ಯತ್ನಾಳ್ ಬಗ್ಗಿದ್ದಾರೆ ಎನ್ನುವುದು ಈಗ ಕಂಡುಬರುತ್ತಿದೆ. ಆದರೆ, ಹೋರಾಟದಲ್ಲಿ ಪಾಲ್ಗೊಂಡಾಗ ಮತ್ತೆ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದರೆ ಬಿಜೆಪಿಗೆ ತೊಂದರೆ ಆಗುವುದಂತೂ ಸತ್ಯವಾಗಿದೆ.
ಬಿಜೆಪಿ, ಕಾಂಗ್ರೆಸ್ಸಿನಲ್ಲಿ ಸೀಡಿ ಫ್ಯಾಕ್ಟರಿಗಳಿವೆ: ಬಸನಗೌಡ ಪಾಟೀಲ ಯತ್ನಾಳ್ ಬಾಂಬ್
ಪಕ್ಷದಿಂದ ಉಚ್ಛಾಟನೆ ಸಾಧ್ಯತೆ ಕಡಿಮೆ: ರಾಜ್ಯದ ಬಿಜೆಪಿ ನಾಯಕರಲ್ಲಿ ಪ್ರಮುಖರು ಆಗಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಿಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ, ರಾಜ್ಯದ ಎಲ್ಲ ನಾಯಕರ ವಿರುದ್ಧವೂ ಹಗುರ ಹೇಳಿಕೆ ನೀಡುವುದನ್ನು ಪರಿಪಾಠ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬರುವ ವೇಳೆಯೂ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದರು. ಜೊತೆಗೆ, ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದ ವೇಳೆ ತಾನೇ ಮುಂದಿನ ಮುಖ್ಯಮಂತ್ರಿ ಎಂದು ತಮ್ಮ ಆಪ್ತ ಬಳಗದಲ್ಲಿ ಘೋಷಣೆಯನ್ನೂ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ವೇಳೆಯೂ ಯತ್ನಾಳ್‌ಗೆ ನೋಟಿಸ್ ನೀಡಲಾಗಿತ್ತು. ಈಗಲೂ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ, ಪಕ್ಷದಿಂದ ಉಚ್ಛಾಟನೆ ಮಾಡುತ್ತಾರೋ ಅಥವಾ ಅವರನ್ನು ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಾರೋ ಕಾದು ನೋಡಬೇಕು.
