Ticket Fight: ಘಟಾನುಘಟಿಗಳ ಪೈಪೋಟಿಗೆ ಸಜ್ಜಾಗುತ್ತಿದೆ ಮೈಸೂರು ಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್‌ಗೆ 6 ಕಡೆ ಜೆಡಿಎಸ್‌, ನಾಲ್ಕು ಕಡೆ ಬಿಜೆಪಿ, ಒಂದರಲ್ಲಿ ಎಸ್‌ಡಿಪಿಐ ಪ್ರಬಲ ಪೈಪೋಟಿ ನೀಡುವ ವಾತಾವರಣವಿದೆ. 

BJP Congres BJP Ticket Fight in Mysore District Assembly Constituency gvd

ಅಂಶಿ ಪ್ರಸನ್ನಕುಮಾರ್‌

ಮೈಸೂರು (ನ.27): ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್‌ಗೆ 6 ಕಡೆ ಜೆಡಿಎಸ್‌, ನಾಲ್ಕು ಕಡೆ ಬಿಜೆಪಿ, ಒಂದರಲ್ಲಿ ಎಸ್‌ಡಿಪಿಐ ಪ್ರಬಲ ಪೈಪೋಟಿ ನೀಡುವ ವಾತಾವರಣವಿದೆ. ಜಿಲ್ಲೆಯಲ್ಲಿ ಒಕ್ಕಲಿಗರು, ವೀರಶೈವ-ಲಿಂಗಾಯಿತರು, ಬ್ರಾಹ್ಮಣರು, ಪ.ಜಾತಿ ಮತ್ತು ವರ್ಗ, ಹಿಂದುಳಿದವರು, ಮುಸ್ಲಿಮರು, ಕ್ರೈಸ್ತರು- ಹೀಗೆ ಎಲ್ಲಾ ಜಾತಿ, ಜನಾಂಗದವರಿದ್ದು, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಜಾತಿ ಪ್ರಬಲವಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಬಹುತೇಕ ಅಂತಿಮವಾಗಿದ್ದು, ಬಿಜೆಪಿಯಲ್ಲಿ ಕೆಲವೆಡೆ ಪ್ರಬಲ ಅಭ್ಯರ್ಥಿಗಳ ಕೊರತೆಯಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌-5, ಕಾಂಗ್ರೆಸ್‌-3, ಬಿಜೆಪಿ-3 ಕಡೆ ಜಯ ಗಳಿಸಿದ್ದವು. ಜೆಡಿಎಸ್‌ ಗೆದ್ದಿದ್ದ ಐದು ಕ್ಷೇತ್ರಗಳ ಪೈಕಿ ಹುಣಸೂರು ಹೊರತುಪಡಿಸಿದರೆ ಉಳಿದೆಡೆ ಹಾಲಿ ಶಾಸಕರು ಕಣಕ್ಕಿಳಿಯುವುದು ಬಹುತೇಕ ಖಚಿತ. ಹುಣಸೂರಿನಿಂದ ಮಾಜಿ ಸಚಿವ ಜಿ.ಟಿ.ದೇವೇಗೌಡ ಪುತ್ರ ಜಿ.ಡಿ.ಹರೀಶ್‌ಗೌಡ ಅಭ್ಯರ್ಥಿಯಾಗಲಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದಲೂ ಹಾಲಿ ಶಾಸಕರೇ ಕಣಕ್ಕಿಳಿಯುವ ಸಂಭವ ಇದೆ. ಈ ಮಧ್ಯೆ, ಸಿದ್ದರಾಮಯ್ಯನವರು ಕೊನೆಕ್ಷಣದಲ್ಲಿ ವರುಣದಿಂದ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಕಾಂಗ್ರೆಸ್‌ನ ಸಿದ್ದರಾಮಯ್ಯ, ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯ ಯಡಿಯೂರಪ್ಪ ಅವರುಗಳ ವರ್ಚಸ್ಸೇ ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ಶ್ರೀರಕ್ಷೆ. ಕಾಂಗ್ರೆಸ್‌, ಜೆಡಿಎಸ್‌ನ ಪ್ರಾಬಲ್ಯಕ್ಕೆ ತಡೆಯೊಡ್ಡಲು ಬಿಜೆಪಿ ಸಜ್ಜಾಗುತ್ತಿದೆ.

Ticket Fight: ಖರ್ಗೆ ತವರು ಕಲಬುರಗಿಯಲ್ಲಿ ಈ ಬಾರಿ ಕೈ- ಕಮಲ ಜಂಗಿ ಕುಸ್ತಿ

1. ಕೃಷ್ಣರಾಜ: ಬಿಜೆಪಿಯಿಂದ ಮಾಳವಿಕ ಅವಿನಾಶ್‌ ಹೆಸರು
ಬಿಜೆಪಿಯಿಂದ ಹಾಲಿ ಶಾಸಕ ಎಸ್‌.ಎ.ರಾಮದಾಸ್‌ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಚಿತ. ರಾಮದಾಸ್‌ ಈವರೆಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ.ರಾಜೀವ್‌, ನಗರಾಧ್ಯಕ್ಷ ಟಿ.ಎಸ್‌.ಶ್ರೀವತ್ಸ, ಮೈಲ್ಯಾಕ್‌ ಮಾಜಿ ಅಧ್ಯಕ್ಷ ಎನ್‌.ವಿ. ಫಣೀಶ್‌, ನಗರ ಕಾರ್ಯದರ್ಶಿ ಎಸ್‌.ಎಂ. ಶಿವಪ್ರಕಾಶ್‌, ನಟಿ ಮಾಳವಿಕ ಅವಿನಾಶ್‌ ಆಕಾಂಕ್ಷಿಗಳು. ಕಾಂಗ್ರೆಸ್‌ನಿಂದ ಶಾಸಕ ಎಂ.ಕೆ. ಸೋಮಶೇಖರ್‌ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್‌, ಮುಖಂಡರಾದ ಎನ್‌.ಎಂ. ನವೀನ್‌ಕುಮಾರ್‌, ಎನ್‌. ಭಾಸ್ಕರ್‌ ಕೂಡ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಕಣದಲ್ಲಿದ್ದ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್‌ ಪ್ರಬಲ ಆಕಾಂಕ್ಷಿ. ಮಾಜಿ ಉಪ ಮೇಯರ್‌ ವಿ.ಶೈಲೇಂದ್ರ, ಅಮ್ಮ ಸಂತೋಷ್‌ ಕೂಡ ಟಿಕೆಟ್‌ ಕೇಳುತ್ತಿದ್ದಾರೆ. ಇಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬರು ಗೆದ್ದಿದ್ದರೂ ಇದೊಂದು ರೀತಿಯಲ್ಲಿ ಅಘೋಷಿತ ಬ್ರಾಹ್ಮಣರ ಕ್ಷೇತ್ರ.

2. ಚಾಮರಾಜ: ಮೂರೂ ಪಕ್ಷಗಳಲ್ಲಿ ಹೆಚ್ಚಿದ ಆಕಾಂಕ್ಷಿಗಳು
ಬಿಜೆಪಿಯಿಂದ ಹಾಲಿ ಶಾಸಕ ಎಲ್‌. ನಾಗೇಂದ್ರಗೆ ಇಲ್ಲಿ ಮತ್ತೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ. ಮಾಜಿ ಶಾಸಕ ದಿವಂಗತ ಎಚ್‌.ಎಸ್‌. ಶಂಕರಲಿಂಗೇಗೌಡರ ಪುತ್ರ ಎಚ್‌.ಎಸ್‌. ನಂದೀಶ್‌ ಪ್ರೀತಂ, ನಗರ ಘಟಕದ ಮಾಜಿ ಅಧ್ಯಕ್ಷ ಡಾ.ಬಿ.ಎಚ್‌. ಮಂಜುನಾಥ್‌, ಎಸ್‌. ಜಯಪ್ರಕಾಶ್‌, ಮಲ್ಲಪ್ಪಗೌಡ ಆಕಾಂಕ್ಷಿಗಳು. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ವಾಸು ಹಾಗೂ ಕಳೆದ ಬಾರಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಂತರ ಪಕ್ಷ ಸೇರಿರುವ ಕೆ. ಹರೀಶ್‌ಗೌಡ ನಡುವೆ ತೀವ್ರ ಪೈಪೋಟಿಯಿದೆ. ಜೆಡಿಎಸ್‌ನಿಂದ ಪಾಲಿಕೆ ಸದಸ್ಯ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ವಿ.ಶ್ರೀಧರ್‌, ಪಾಲಿಕೆ ಮಾಜಿ ಸದಸ್ಯ ಸಿ.ಮಹದೇಶ್‌ ಹೆಸರುಗಳು ಕೇಳಿ ಬರುತ್ತಿವೆ.

3. ನರಸಿಂಹರಾಜ: ತನ್ವೀರ್‌ಗೆ ಎದುರಾಳಿ ಯಾರು?
ಅಘೋಷಿತ ಮುಸ್ಲಿಮರ ಕ್ಷೇತ್ರ ಎನಿಸಿಕೊಂಡಿರುವ ನರಸಿಂಹರಾಜದಲ್ಲಿ ಅಜೀಜ್‌ ಸೇಠ್‌ ನಂತರ ಒಮ್ಮೆ ಇ.ಮಾರುತಿರಾವ್‌ ಪವಾರ್‌ ಹೊರತುಪಡಿಸಿದರೆ ಮುಸ್ಲಿಮರೇ ಆಯ್ಕೆಯಾಗುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ತನ್ವೀರ್‌ ಸೇಠ್‌ ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಅವರಿಲ್ಲಿ ಸತತ ಐದು ಬಾರಿ ಗೆದ್ದಿದ್ದಾರೆ. ಮಾಜಿ ಮೇಯರ್‌ ಅಯೂಬ್‌ ಖಾನ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಅಬ್ದುಲ್ಲಾ ಮತ್ತೆ ಅದೃಷ್ಟಪರೀಕ್ಷಿಸಲಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ, ಮಾಜಿ ಶಾಸಕ ಇ.ಮಾರುತಿರಾವ್‌ ಪವಾರ್‌, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್‌ರ ಪುತ್ರ ಚೇತನ್‌ ಮಂಜುನಾಥ್‌, ಮುಖಂಡರಾದ ಎಚ್‌.ಜಿ. ಗಿರಿಧರ್‌, ಡಾ.ಅನಿಲ್‌ ಥಾಮಸ್‌ ಆಕಾಂಕ್ಷಿಗಳು. ಎಸ್‌ಡಿಪಿಐನಿಂದ ಅಬ್ದುಲ್‌ ಮಜೀದ್‌ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ.

4. ಚಾಮುಂಡೇಶ್ವರಿ: ಜಿಟಿಡಿ ಎದುರು ಸಿದ್ದು ಪುತ್ರ ಕಣಕ್ಕೆ?
ಸಿದ್ದರಾಮಯ್ಯ ಈ ಹಿಂದೆ ಐದು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರವಿದು. 2006ರ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯನವರು 257 ಮತಗಳ ಅಂತರದಿಂದ ಗೆದ್ದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ, 2008ರಿಂದ ಹೊಸದಾಗಿ ರಚಿತವಾಗಿರುವ ವರುಣಕ್ಕೆ ಸ್ಥಳಾಂತರವಾಗಿದ್ದರು. 2008, 2013ರಲ್ಲಿ ವರುಣದಿಂದ ಗೆದ್ದರು. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ, ಜೆಡಿಎಸ್‌ನ ಜಿ.ಟಿ.ದೇವೇಗೌಡರ ಎದುರು ಸುಮಾರು 36 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದಿದ್ದರು. ಜೆಡಿಎಸ್‌ನಿಂದ ಶಾಸಕ ಜಿ.ಟಿ.ದೇವೇಗೌಡ ಮತ್ತೆ ಕಣಕ್ಕಿಳಿಯಲಿದ್ದಾರೆ. ಅವರಿಲ್ಲಿ ಸತತ ಎರಡು ಬಾರಿ ಗೆದ್ದಿದ್ದಾರೆ. ಜಿಪಂ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್‌.ಮಾದೇಗೌಡ, ಬೆಳವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಕೆಂಪನಾಯಕ ಟಿಕೆಟ್‌ ಆಕಾಂಕ್ಷಿಗಳು. ಒಂದು ವೇಳೆ ಸಿದ್ದರಾಮಯ್ಯನವರು ವರುಣದಿಂದ ಕಣಕ್ಕಿಳಿದಲ್ಲಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರರನ್ನು ಇಲ್ಲಿಂದ ಕಣಕ್ಕಿಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಆದರೆ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಜಿಪಂ ಮಾಜಿ ಅಧ್ಯಕ್ಷರಾದ ಕೆ. ಮರೀಗೌಡ, ಕೂರ್ಗಳ್ಳಿ ಮಹದೇವ್‌, ಮಾಜಿ ಸದಸ್ಯರಾದ ರೇಖಾ ವೆಂಕಟೇಶ್‌, ಎಸ್‌. ಅರುಣ್‌ಕುಮಾರ್‌, ರಾಕೇಶ್‌ ಪಾಪಣ್ಣ, ಮುಖಂಡರಾದ ಎಚ್‌.ಸಿ. ಕೃಷ್ಣಕುಮಾರ್‌ ಸಾಗರ್‌, ಮೆಲ್ಲಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಎಸ್‌.ಆರ್‌.ಗೋಪಾಲರಾವ್‌, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ. ಹೇಮಂತಕುಮಾರ್‌ ಗೌಡ, ಬೋಗಾದಿ ಗ್ರಾಪಂ ಸದಸ್ಯ ಎನ್‌.ಅರುಣ್‌ಕುಮಾರ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

5. ವರುಣ: ಸಿದ್ದು ವಾಪಸ್‌ ಬಂದು ಸ್ಪರ್ಧಿಸುತ್ತಾರಾ?
ಸಿದ್ದರಾಮಯ್ಯನವರು ಅಂತಿಮ ಕ್ಷಣದಲ್ಲಿ ವರುಣದಿಂದಲೇ ಮೂರನೇ ಬಾರಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಲ್ಲದಿದ್ದಲ್ಲಿ ಅವರ ಪುತ್ರ ಯತೀಂದ್ರ ಮತ್ತೊಮ್ಮೆ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ಯಡಿಯೂರಪ್ಪ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ, ಮೈಮುಲ್‌ ನಿರ್ದೇಶಕ ಎಸ್‌.ಸಿ. ಅಶೋಕ್‌, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಎನ್‌. ಪುಟ್ಟಬುದ್ದಿ ಅವರ ಪುತ್ರ ಶರತ್‌, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಡಿ. ಮಹೇಂದ್ರ, ಮುಖಂಡ ತೋಟದಪ್ಪ ಬಸವರಾಜು, ಜಿಪಂ ಮಾಜಿ ಸದಸ್ಯರಾದ ಬಿ.ಎನ್‌. ಸದಾನಂದ, ಎ.ಎಂ. ಗುರುಸ್ವಾಮಿ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್‌ ಟಿಕೆಟ್‌ ಆಕಾಂಕ್ಷಿಗಳು. ಜೆಡಿಎಸ್‌ನಿಂದ ಅಭಿಷೇಕ್‌ ಸುಬ್ಬಣ್ಣ ಆಕಾಂಕ್ಷಿತರು. ಆದರೆ, ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ.

6. ಟಿ. ನರಸೀಪುರ: ಪುತ್ರನಿಗೆ ಮಹದೇವಪ್ಪ ಕ್ಷೇತ್ರ ತ್ಯಾಗ?
ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರವಾದ ಟಿ.ನರಸೀಪುರದಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ಎಂ.ಅಶ್ವಿನ್‌ಕುಮಾರ್‌ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಮಗನಿಗೆ ಇಲ್ಲಿ ಅವಕಾಶ ಮಾಡಿಕೊಟ್ಟು, ತಾವು ಪಕ್ಕದ ನಂಜನಗೂಡಿನಿಂದ ಸ್ಪರ್ಧಿಸಲು ಡಾ.ಮಹದೇವಪ್ಪ ಬಯಸಿದ್ದಾರೆ. ಇಬ್ಬರಲ್ಲಿ ಒಬ್ಬರು ಇಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ ಟಿಕೆಟ್‌ಗೆ ಎಂ.ನೂತನ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕರಾದ ಡಾ.ಎನ್‌.ಎಲ್‌.ಭಾರತೀಶಂಕರ್‌, ಸಿ. ರಮೇಶ್‌, ಸಾಮ್ರಾಟ್‌ ಸುಂದರೇಶನ್‌, ವಕೀಲ ಎಂ. ದಾಸಯ್ಯ, ಡಾ.ರೇವಣ್ಣ ಆಕಾಂಕ್ಷಿತರು.

7. ನಂಜನಗೂಡು: ಧ್ರುವ ನಾರಾಯಣಗೆ ಟಿಕೆಟ್‌ ಸಿಗುತ್ತಾ?
ಬಿಜೆಪಿಯಿಂದ ಹಾಲಿ ಶಾಸಕ, ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಅಳಿಯ, ಬಿ.ಹರ್ಷವರ್ಧನ್‌ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಜೆಡಿಎಸ್‌ನಿಂದ ಬೆಳವಾಡಿ ಶಿವಕುಮಾರ್‌ಗೆ ಟಿಕೆಟ್‌ ಸಿಗಬಹುದು. ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಮಾಜಿ ಸಂಸದ, ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಹೆಸರು ಮುನ್ನಲೆಗೆ ಬಂದಿದೆ. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

8. ಎಚ್‌.ಡಿ.ಕೋಟೆ: ಟಿಕೆಟ್‌ಗಾಗಿ ಹೆಚ್ಚಾಗ್ತಿದೆ ಪೈಪೋಟಿ
ಪರಿಶಿಷ್ಟಪಂಗಡಕ್ಕೆ ಮೀಸಲಾದ ಎಚ್‌.ಡಿ. ಕೋಟೆಯಿಂದ ಹಾಲಿ ಶಾಸಕ ಅನಿಲ್‌ ಚಿಕ್ಕಮಾದು ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಪಪಂ ಮಾಜಿ ಅಧ್ಯಕ್ಷ ಎಂ.ಸಿ. ದೊಡ್ಡನಾಯಕ, ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ಎ.ಎಂ. ಬಾಬು ನಾಯಕ್‌ ಕೂಡ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ ಟಿಕೆಟ್‌ಗೆ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಹಾಗೂ ಕೆ.ಎಂ. ಕೃಷ್ಣನಾಯಕ ನಡುವೆ ಪೈಪೋಟಿಯಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಎಂಎಲ್‌ಸಿ ಸಿದ್ದರಾಜು, ಹಿಂದೆ ಕೆಜೆಪಿ ಅಭ್ಯರ್ಥಿಯಾಗಿದ್ದ ಡಾ.ಎಚ್‌.ವಿ. ಕೃಷ್ಣಸ್ವಾಮಿ, ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಚ್‌ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ ಆಕಾಂಕ್ಷಿಗಳು.

9. ಹುಣಸೂರು: ಜಿಟಿಡಿ ಪುತ್ರನ ಸ್ಪರ್ಧೆಯಿಂದ ಹೆಚ್ಚಿದ ಕುತೂಹಲ
ಹುಣಸೂರಿನಲ್ಲಿ ಹಾಲಿ ಶಾಸಕ ಎಚ್‌.ಪಿ.ಮಂಜುನಾಥ್‌ ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ. ಜೆಡಿಎಸ್‌ನಿಂದ ಮಾಜಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‌ಗೌಡ ಅಭ್ಯರ್ಥಿಗಳು. ಬಿಜೆಪಿಯಿಂದ ಗಣೇಶ್‌ ಕುಮಾರಸ್ವಾಮಿ, ಬಿ.ಎಸ್‌. ಯೋಗಾನಂದಕುಮಾರ್‌, ಜಿ.ಎಸ್‌. ರಮೇಶ್‌ಕುಮಾರ್‌, ಹನಗೋಡು ಮಂಜುನಾಥ್‌, ಡಿ.ಎಸ್‌. ನಾಗರಾಜಪ್ಪ ಆಕಾಂಕ್ಷಿಗಳು.

10. ಪಿರಿಯಾಪಟ್ಟಣ: ಮಹದೇವ್‌-ವೆಂಕಟೇಶ್‌ ಫೈಟ್‌ ನಿರೀಕ್ಷೆ
ಪಿರಿಯಾಪಟ್ಟಣದಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ಕೆ.ಮಹದೇವ್‌ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಕೆ. ವೆಂಕಟೇಶ್‌ ಮುಂಚೂಣಿಯಲ್ಲಿದ್ದಾರೆ. ಮುಖಂಡ ಎಚ್‌.ಡಿ.ಗಣೇಶ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌, ಮಾಜಿ ಶಾಸಕ ಎಚ್‌.ಸಿ. ಬಸವರಾಜು, ಮುಖಂಡರಾದ ಕೌಲನಹಳ್ಳಿ ಸೋಮಶೇಖರ್‌, ಜಿ.ಸಿ. ವಿಕ್ರಂರಾಜು, ಡಾ.ಕೆ. ವಸಂತಕುಮಾರ್‌ ಆರ್‌.ಟಿ. ಸತೀಶ್‌ ಆಕಾಂಕ್ಷಿಗಳು.

Ticket Fight: ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ಗೆ ಜಿದ್ದಾಜಿದ್ದಿ ಪೈಪೋಟಿ

11. ಕೆ.ಆರ್‌. ನಗರ: ಸಾ.ರಾ. ವಿರುದ್ಧ ಸ್ಪರ್ಧಿಸೋರು ಯಾರು?
ಕೆ.ಆರ್‌. ನಗರದಲ್ಲಿ ಹಾಲಿ ಶಾಸಕ ಸಾ.ರಾ.ಮಹೇಶ್‌ ಜೆಡಿಎಸ್‌ನಿಂದ ನಾಲ್ಕನೇ ಬಾರಿ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ದೊಡ್ಡಸ್ವಾಮೆಗೌಡರ ಪುತ್ರ ಜಿಪಂ ಸದಸ್ಯ ಡಿ.ರವಿಶಂಕರ್‌ ಮತ್ತೊಮ್ಮೆ ಅಭ್ಯರ್ಥಿ ಎಂದು ಸಿದ್ದರಾಮಯ್ಯನವರು ಬಹಿರಂಗವಾಗಿ ಘೋಷಿಸಿದ್ದಾರೆ. ಹೀಗಿದ್ದರೂ, ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್‌ ಅವರ ಪುತ್ರಿ ಐಶ್ವರ್ಯಾ, ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್‌, ಮಿರ್ಲೆ ಶ್ರೀನಿವಾಸಗೌಡ, ಶ್ವೇತಾ ಗೋಪಾಲ್‌ ಮತ್ತಿತರರು ಆಕಾಂಕ್ಷಿತರು.

ಒಟ್ಟು ಕ್ಷೇತ್ರ-11
ಜೆಡಿಎಸ್‌- 5
ಕಾಂಗ್ರೆಸ್‌-3
ಬಿಜೆಪಿ-3

Latest Videos
Follow Us:
Download App:
  • android
  • ios