Asianet Suvarna News Asianet Suvarna News

Ticket Fight: ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ಗೆ ಜಿದ್ದಾಜಿದ್ದಿ ಪೈಪೋಟಿ

ಉಡುಪಿ ಜಿಲ್ಲೆ ಹುಟ್ಟಿ25 ವರ್ಷಗಳು ಕಳೆದಿವೆ. ಅದಕ್ಕೂ ಮೊದಲು ಇದು ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಲ್ಲೊಂದು, ಇಲ್ಲೊಂದು ಕ್ಷೇತ್ರಗಳಲ್ಲಿ ಸೋಷಿಯಲಿಸ್ವ್‌ ಪಕ್ಷ, ಜನತಾ ದಳ, ಸ್ವತಂತ್ರ ಪಕ್ಷ ಗೆದ್ದದ್ದು ಬಿಟ್ಟರೆ, ಲಾಗಾಯ್ತಿನಿಂದಲೂ ಇದು ಕಾಂಗ್ರೆಸ್‌ ಪಕ್ಷದ ಆಡುಂಬೊಲ. 

Ticket Fight In Udupi District Who Are The Bjp Candidates In Assembly Elections gvd
Author
First Published Nov 25, 2022, 3:20 AM IST

ಸುಭಾಶ್ಚಂದ್ರ ವಾಗ್ಳೆ

ಉಡುಪಿ (ನ.25): ಉಡುಪಿ ಜಿಲ್ಲೆ ಹುಟ್ಟಿ25 ವರ್ಷಗಳು ಕಳೆದಿವೆ. ಅದಕ್ಕೂ ಮೊದಲು ಇದು ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಲ್ಲೊಂದು, ಇಲ್ಲೊಂದು ಕ್ಷೇತ್ರಗಳಲ್ಲಿ ಸೋಷಿಯಲಿಸ್ವ್‌ ಪಕ್ಷ, ಜನತಾ ದಳ, ಸ್ವತಂತ್ರ ಪಕ್ಷ ಗೆದ್ದದ್ದು ಬಿಟ್ಟರೆ, ಲಾಗಾಯ್ತಿನಿಂದಲೂ ಇದು ಕಾಂಗ್ರೆಸ್‌ ಪಕ್ಷದ ಆಡುಂಬೊಲ. ಆದರೆ ಉಡುಪಿ ಪ್ರತ್ಯೇಕ ಜಿಲ್ಲೆಯಾದ ಮೇಲೆ ಇದು ಬಿಜೆಪಿಯ ಗಟ್ಟಿನೆಲ. ಒಂದು ಕಾಲದಲ್ಲಿ ಜನಸಂಖ್ಯೆ ಆಧಾರದಲ್ಲಿ ಲೆಕ್ಕಕ್ಕೆ ಸಿಗದ ಮೊಯ್ಲಿ ಸಮುದಾಯದ ಎಂ.ವೀರಪ್ಪ ಮೊಯ್ಲಿ ಕಾಂಗ್ರೆಸ್‌ನಿಂದ ಗೆದ್ದು ಮುಖ್ಯಮಂತ್ರಿಯೂ ಆಗಿದ್ದರು. ತೀರಾ ಕಡಿಮೆ ಜನಸಂಖ್ಯೆಯ ಮಾಧ್ವ ಬ್ರಾಹ್ಮಣ ಸಮುದಾಯದ ಡಾ.ವಿ.ಎಸ್‌. ಆಚಾರ್ಯ ಬಿಜೆಪಿಯಿಂದ ಗೆದ್ದು, ಗೃಹ ಸಚಿವರೂ ಆಗಿದ್ದರು.

ಉಡುಪಿ ಹೆಚ್ಚು ಸುಶಿಕ್ಷಿತರಿರುವ ಜಿಲ್ಲೆ. ಆದರೂ ಈಗ ಇಲ್ಲಿ ಟಿಕೆಟ್‌ ಹಂಚಿಕೆಯಾಗುವುದು ಮಾತ್ರ ಜಾತಿ ಆಧಾರದಲ್ಲೇ. ಜಿಲ್ಲೆಯಲ್ಲಿ ಬಿಲ್ಲವ, ಬಂಟ ಮತ್ತು ಮೊಗವೀರ ಜಾತಿಗಳದ್ದೇ ಪ್ರಾಬಲ್ಯ. ಈ ಮೂರು ಸಮುದಾಯಗಳಿಗೆ ಟಿಕೆಟ್‌ ಕೊಡದೆ ಇರುವ ಧೈರ್ಯ ಕಾಂಗ್ರೆಸ್ಸಿಗೂ ಇಲ್ಲ, ಬಿಜೆಪಿಗೂ ಇಲ್ಲ. ಆದ್ದರಿಂದ ಈ ಮೂರು ಸಮುದಾಯಗಳಿಗೆ ಒಂದೊಂದು ಕ್ಷೇತ್ರಗಳನ್ನು ಮೀಸಲಿಟ್ಟು, ಉಳಿದ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹುಡುಕಲಾಗುತ್ತದೆ. ಸದ್ಯಕ್ಕಂತೂ ಜಿಲ್ಲೆಯ ಎಲ್ಲ 5 ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಅವುಗಳನ್ನು ಮರಳಿ ವಶಪಡಿಸಿಕೊಳ್ಳುವುದು ಕಾಂಗ್ರೆಸ್‌ನ ಬಹುಕಾಲದ ಕನಸಾಗಿದೆ. ಕಾಂಗ್ರೆಸ್‌ನಿಂದ ಗೆದ್ದು ಮಂತ್ರಿ ಪದವಿಯನ್ನೂ ಅನುಭವಿಸಿದ ಪ್ರಮೋದ್‌ ಮಧ್ವರಾಜ್‌ ಇದೀಗ ಬಿಜೆಪಿ ಸೇರಿದ್ದಾರೆ. ಇನ್ನೊಬ್ಬ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮತ್ತು ಮಾಜಿ ಶಾಸಕ ಗೋಪಾಲ ಪೂಜಾರಿ ಅವರಷ್ಟೇ ಕಾಂಗ್ರೆಸ್‌ನಲ್ಲಿ ಭರವಸೆ ಇಡಬಹುದಾದ ಅಭ್ಯರ್ಥಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವ ಇಲ್ಲ ಎಂದೇ ಹೇಳಬಹುದು.

Congress Ticket: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಭಾರೀ ಕಸರತ್ತು: 33 ಅರ್ಜಿ ಸಲ್ಲಿಕೆ

1. ಕಾರ್ಕಳ: ಮೊಯ್ಲಿ ಮಗನ ರಂಗಪ್ರವೇಶ?
ಕಾರ್ಕಳದಲ್ಲಿ ಬಹಳ ಕಾಲದಿಂದ ಇದ್ದ ಕಾಂಗ್ರೆಸ್‌ ಪಕ್ಷದ ಭದ್ರ ಕೋಟೆಯನ್ನು ಧ್ವಂಸ ಮಾಡಿದವರು ಬಿಜೆಪಿಯ ವಿ.ಸುನೀಲ್‌ಕುಮಾರ್‌. ಅವರಿಗೆ ಸಡ್ಡು ಹೊಡೆಯುವುದಕ್ಕೆ ಸದ್ಯಕ್ಕಂತೂ ಕಾಂಗ್ರೆಸ್‌ ಬಳಿ ಅಭ್ಯರ್ಥಿ ಇಲ್ಲ. ತಾಪಂ-ಜಿಪಂ ಸದಸ್ಯರಾಗಿದ್ದ ಮೂರು ಮಂದಿ ಮೊನ್ನೆ ಕೆಪಿಸಿಸಿಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಖ್ಯಾತ ಲೋಕೋಪಯೋಗಿ ಗುತ್ತಿಗೆದಾರ ಮುನಿಯಾಲು ಉದಯಕುಮಾರ್‌ ಶೆಟ್ಟಿಇತ್ತೀಚೆಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಇತ್ತೀಚೆಗೆ ಕಾರ್ಕಳದಲ್ಲಿ ಓಡಾಡುತ್ತಿದ್ದಾರೆ. ಕಳೆದ ಬಾರಿಯೇ ಅವರು ತಮ್ಮ ಮಗ ಹರ್ಷ ಮೊಯ್ಲಿಗೆ ಇಲ್ಲಿ ಟಿಕೆಟ್‌ ಕೊಡಿಸುವ ಟ್ರಯಲ್‌ ನಡೆಸಿದ್ದರು, ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ಮೊಯ್ಲಿ ಪುತ್ರ ಅಭ್ಯರ್ಥಿ ಎನ್ನಲಾಗುತ್ತಿದೆ. ಚತುರ ಮಾತುಗಾರ ಮತ್ತು ಕೆಲಸಗಾರರಾಗಿರುವ ಅವರು ಜಿಲ್ಲೆಯಲ್ಲಿ ಕಡಿಮೆ ಮತದಾರರಿರುವ ದೇವಾಡಿಗ ಸಮಾಜಕ್ಕೆ ಸೇರಿದವರು. ಬಿಜೆಪಿಯಿಂದ ಸುನಿಲ್‌ ಕುಮಾರ್‌ ಕೂಡ ಚತುರ ಮಾತುಗಾರ ಮತ್ತು ಕೆಲಸಗಾರ. ಅವರು ಬಿಲ್ಲವ ಸಮಾಜಕ್ಕೆ ಸೇರಿದವರು. ಸುನಿಲ್‌ ಅವರನ್ನು ಪಕ್ಕಕ್ಕೆ ಸರಿಸುವಂಥ ಅಭ್ಯರ್ಥಿಗಳು ಸದ್ಯ ಕಾರ್ಕಳ ಬಿಜೆಪಿಯಲ್ಲಿಲ್ಲ. ಆದ್ದರಿಂದ ಸುನಿಲ್‌ ಅವರೇ ಅಭ್ಯರ್ಥಿಯಾಗುವುದು ಖಚಿತವಾಗಿದೆ.

2. ಉಡುಪಿ: ಈ ಸಲ ಹೊಸಮುಖ ಪ್ರಯೋಗ?
ಮಾಧ್ವ ಸಮುದಾಯದ ಕೇಂದ್ರ ಕೃಷ್ಣಮಠ ಇರುವ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಪ್ರಬಲ ಮೊಗವೀರ ಸಮುದಾಯದ ಮನೋರಮಾ ಮಧ್ವರಾಜ್‌, ಯು.ಆರ್‌. ಸಭಾಪತಿ, ಪ್ರಮೋದ್‌ ಮಧ್ವರಾಜ್‌ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ನಡುವೆ ಒಮ್ಮೆ ಮಾಧ್ವ ಸಮುದಾಯದ ಡಾ.ವಿ.ಎಸ್‌.ಆಚಾರ್ಯ, ಎರಡು ಬಾರಿ ರಘುಪತಿ ಭಟ್‌ ಗೆದ್ದಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಪ್ರಮೋದ್‌ ಮಧ್ವರಾಜ್‌ ಕೈ ಕೊಟ್ಟು ಬಿಜೆಪಿ ಸೇರಿರುವುದರಿಂದ, ಕಾಂಗ್ರೆಸ್‌ನಲ್ಲಿ ಯಾರು ಅಭ್ಯರ್ಥಿ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನಿಂದ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಯುವ ಉದ್ಯಮಿ ಕೃಷ್ಣಮೂರ್ತಿ ಆಚಾರ್ಯ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಕೀರ್ತಿ ಶೆಟ್ಟಿ, ರಮೇಶ್‌ ಕಾಂಚನ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಸೇರಿ ರಾಜಕೀಯ ಪುನರ್ಜನ್ಮ ಪಡೆಯಲೆತ್ನಿಸುತ್ತಿರುವ ಪ್ರಮೋದ್‌ ಮಧ್ವರಾಜ್‌ ತಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎನ್ನುತ್ತಲೇ ಟಿಕೆಟ್‌ಗಾಗಿ ಕಾಯುತ್ತಿದ್ದಾರೆ. ಮೊಗವೀರ ಯುವನಾಯಕ ಯಶಪಾಲ್‌ ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರ ಹೆಸರೂ ಚಾಲ್ತಿಯಲ್ಲಿದೆ.

3.ಕಾಪು: ಬಿಜೆಪಿಯಲ್ಲಿ ಕಾವೇರಿದ ಪೈಪೋಟಿ
ಬಿಲ್ಲವ ಮತ್ತು ಮೊಗವೀರರೇ ಬಹುಸಂಖ್ಯೆಯಲ್ಲಿರುವ ಕ್ಷೇತ್ರ ಕಾಪು. ಬಿಲ್ಲವ ಸಮುದಾಯದ ವಸಂತ ಸಾಲ್ಯಾನ್‌ 5 ಬಾರಿ ಗೆದ್ದು ಸಚಿವರಾಗಿದ್ದರು. ವಿನಯಕುಮಾರ್‌ ಸೊರಕೆ ಕೂಡ ಇಲ್ಲಿಂದಲೇ ಗೆದ್ದು ಮಂತ್ರಿಗಳಾದವರು. ಇದೀಗ ಮೊಗವೀರ ಸಮುದಾಯದ ಲಾಲಾಜಿ 3ನೇ ಬಾರಿ ಶಾಸಕರಾಗಿದ್ದಾರೆ. ಕಳೆದ ಬಾರಿ ಕೊನೇ ಕ್ಷಣದಲ್ಲಿ ಟಿಕೆಟ್‌ ಪಡೆದ ಲಾಲಾಜಿಗೆ ಈ ಬಾರಿ ಅವರ ಪಕ್ಷದಲ್ಲೇ ಭರ್ಜರಿ ಪೈಪೋಟಿ ಎದುರಾಗಿದೆ. ಕಳೆದ ಬಾರಿ ಕೊನೇ ಕ್ಷಣದಲ್ಲಿ ಟಿಕೆಟ್‌ ವಂಚಿತರಾಗಿದ್ದ, ಬಿಜೆಪಿಯ ರಾಷ್ಟ್ರೀಯ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಯಶಪಾಲ್‌ ಸುವರ್ಣ ಈ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಕಳೆದೈದು ವರ್ಷಗಳಿಂದ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಲ್ಲಿದ್ದಾರೆ. ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷರಾಗಿರುವ ಅವರಿಗೆ ಮೊಗವೀರ ಸಮಾಜದ ಬೆಂಬಲವೂ ಬೆನ್ನಿಗಿದೆ. ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಿರುವ ಸಾರಸ್ವತ ಕೊಂಕಣಿ ಸಮುದಾಯದವರಾದ ಯುವನಾಯಕ ಪೆರ್ಣಂಕಿಲ ಶ್ರೀಶ ನಾಯಕ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್‌, ಕಳೆದ ಬಾರಿಯೂ ಟಿಕೆಟ್‌ಗೆ ಪ್ರಯತ್ನಿಸಿದ್ದ ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಹಿಳಾ ಮೋರ್ಚಾದ ವೀಣಾ ಶೆಟ್ಟಿಕೂಡ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನ ವಿನಯಕುಮಾರ್‌ ಸೊರಕೆ ಕಳೆದ ಬಾರಿ ಸೋತಿದ್ದರೂ, ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಓಡಾಟ, ಬಿಜೆಪಿ ವಿರುದ್ಧ ಹೋರಾಟ ನಿಲ್ಲಿಸಿಲ್ಲ. ಆದ್ದರಿಂದ ಅವರೇ ಕಣಕ್ಕಿಳಿಯುವುದು ಹೆಚ್ಚುಕಡಿಮೆ ಖಚಿತವಾಗಿದೆ.

4.ಕುಂದಾಪುರ: ಹಾಲಾಡಿ ಬಿಟ್ಟು ಕೊಡುತ್ತಾರೆಯೇ?
ಕುಂದಾಪುರ ಲಾಗಾಯ್ತಿನಿಂದಲೂ ಬಂಟ ಸಮುದಾಯಕ್ಕೆ ಮೀಸಲಾದ ಕ್ಷೇತ್ರ. ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟರು ಇಲ್ಲಿ 4 ಬಾರಿ ಪಕ್ಷದಿಂದ, ಒಮ್ಮೆ ಪಕ್ಷೇತರರಾಗಿ ಗೆದ್ದಿದ್ದಾರೆ. ಎರಡು ಬಾರಿ ಮಂತ್ರಿ ಪದವಿಯಿಂದ ವಂಚಿತರಾಗಿದ್ದಾರೆ. ಆದರೆ ಕುಂದಾಪುರದ ವಾಜಪೇಯಿ ಎಂದು ಕರೆಸಿಕೊಳ್ಳುವ, ನೇರ, ನಿಷ್ಠುರ ನಡೆ-ನುಡಿಯ, ಪಕ್ಷದಿಂದ, ಪಕ್ಷದ ಕಾರ್ಯಕ್ರಮಗಳಿಂದ, ನಾಯಕರಿಂದ ಅಂತರ ಕಾಯ್ದುಕೊಂಡಿರುವ ವಿಚಿತ್ರ ಗುಣದ ಅವರ ಬದಲಿಗೆ ಇಲ್ಲಿ ಈ ಬಾರಿ ಹೊಸಮುಖವನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರವಾಗಿ ಯೋಚಿಸಿದೆ. ಆದರೆ ಅಷ್ಟುಸುಲಭಕ್ಕೆ ಹಾಲಾಡಿ ಟಿಕೆಟ್‌ ಬಿಟ್ಟು ಕೊಡುತ್ತಾರೆಯೇ, ಟಿಕೆಟ್‌ ನೀಡದಿದ್ದರೆ ಸುಮ್ಮನಿರುತ್ತಾರೆಯೇ ಎಂಬ ಗೊಂದಲ ಕೂಡ ಬಿಜೆಪಿಯಲ್ಲಿದೆ. ಯಾಕೆಂದರೆ ಮಂತ್ರಿ ಪದವಿ ಸಿಕ್ಕಿಲ್ಲ ಎಂದು ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಗೆದ್ದವರು ಅವರು. ಅವರನ್ನು ಎದುರು ಹಾಕಿಕೊಂಡು ಗೆಲ್ಲುವುದು ಬಿಜೆಪಿಗೆ ಸುಲಭ ಸಾಧ್ಯವಿಲ್ಲ. ಕಳೆದ ಬಾರಿ ಇಲ್ಲಿ ತೀರಾ ಹೊಸಬರಾಗಿದ್ದ ಮಂಗಳೂರಿನ ರಾಕೇಶ್‌ ಮಲ್ಲಿ ಹೇಗೋ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿ ಬಂದು ಸ್ಪರ್ಧಿಸಿ ಹಾಲಾಡಿ ಶೆಟ್ಟರಿಂದ ಸೋತಿದ್ದರು. ಈ ಬಾರಿ ಸಹಕಾರಿ ಧುರೀಣರಾದ ಬಾಬು ಹೆಗ್ಡೆ, ಮೊಳಹಳ್ಳಿ ದಿನೇಶ್‌ ಹೆಗ್ಡೆ ಮತ್ತು ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಅಶೋಕ್‌ ಪೂಜಾರಿ, ಶಂಕರ್‌ ಕುಂದರ್‌ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

Karnataka Assembly Election 2023: ಕಾಂಗ್ರೆಸ್‌ನ ಒಂದೇ ಟಿಕೆಟ್‌ಗಾಗಿ 16 ಜನರ ಪೈಪೋಟಿ: ಅರ್ಜಿ ಸಲ್ಲಿಕೆ

5.ಬೈಂದೂರು: ಬಿಜೆಪಿಯೊಳಗೇ ಪೈಪೋಟಿ
ಜಿಲ್ಲೆ ಉಡುಪಿಯಾದರೂ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ, ರಾಜ್ಯದ ಪ್ರಮುಖ ಮುಜರಾಯಿ ದೇವಾಲಯಗಳಲ್ಲೊಂದಾದ ಕೊಲ್ಲೂರು ಮೂಕಾಂಬಿಕಾ ದೇವಾಲಯವಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದಲೂ ಕಾಂಗ್ರೆಸ್‌ ಪಕ್ಷದ್ದೇ ಕಾರುಬಾರು. ಆದರೆ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ, ಯಡಿಯೂರಪ್ಪ ಅವರ ಆಪ್ತವಲಯದಲ್ಲಿರುವ ಬಿ.ಎಂ. ಸುಕುಮಾರ್‌ ಶೆಟ್ಟಿಕಳೆದ ಬಾರಿ ಬಿಜೆಪಿ ಟಿಕೆಟ್‌ ಪಡೆದು ಗೆದ್ದಿದ್ದರು. ಈ ಬಾರಿಯೂ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಆದರೆ ಈ ಬಾರಿ ಬೈಂದೂರು ಬಿಜೆಪಿಯೊಳಗೇ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಆರಂಭವಾಗಿದೆ. ಆಹಾರ ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಕಿರಣ್‌ ಕೊಡ್ಗಿ, ಮಂಡಲಾಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಸಮಾಜಸೇವಕರಾಗಿ ಹೆಸರು ಮಾಡಿರುವ ಉದ್ಯಮಿ ಬಾಬು ಗೋವಿಂದ ಪೂಜಾರಿ, ಯಳೂರು ಪ್ರಣಯ್‌ ಕುಮಾರ್‌ ಶೆಟ್ಟಿಅವರು ಕೂಡ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಕಾಪುನಲ್ಲಿ ಟಿಕೆಟ್‌ ಸಿಗದಿದ್ದರೆ ಯಶಪಾಲ್‌ ಸುವರ್ಣ ಬೈಂದೂರಿನ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಮೋದ್‌ ಮಧ್ವರಾಜ್‌ ಹೆಸರೂ ಚಾಲ್ತಿಯಲ್ಲಿದೆ.

ಕಾಂಗ್ರೆಸ್‌ನಿಂದ ಜಿ.ಪಂ. ಮಾಜಿ ಸದಸ್ಯ ರಾಜು ಪೂಜಾರಿ ಅವಕಾಶ ಸಿಕ್ಕಿದರೆ ಸ್ಪರ್ಧಿಸುವ ಆಸೆಯಲ್ಲಿದ್ದರೂ, 3 ಬಾರಿ ಗೆದ್ದಿರುವ ಮಾಜಿ ಶಾಸಕ ಹೊಟೇಲ್‌ ಉದ್ಯಮಿ ಗೋಪಾಲ ಪೂಜಾರಿ ಅವರಿಗೆ ಪ್ರತಿಸ್ಪರ್ಧಿಯಾಗುವ ಉಮೇದು ಬೇರೆ ಯಾರಿಗೂ ಇಲ್ಲಿನ ಕಾಂಗ್ರೆಸ್‌ ಪಕ್ಷದೊಳಗೆ ಇದ್ದಂತಿಲ್ಲ.

Follow Us:
Download App:
  • android
  • ios