ಟೈಲರ್‌ ವೃತ್ತಿ... ಹೈನುಗಾರಿಕೆ ಉಪವೃತ್ತಿ...ಈಗ ಬಿಜೆಪಿ ಅಭ್ಯರ್ಥಿ: ಸುಳ್ಯ ಕ್ಷೇತ್ರದಿಂದ ಭಾಗೀರಥಿ ಮುರುಳ್ಯ ಸ್ಪರ್ಧೆ

ಟೈಲರ್‌ ವೃತ್ತಿ... ಹೈನುಗಾರಿಕೆ ಉಪ ವೃತ್ತಿ...ಶಿಕ್ಷಕಿಯಾಗಿ ಕೆಲಸ ಮಾಡಿದ್ದು ಪ್ರವೃತ್ತಿ... ಈಗ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸುಳ್ಯ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ...! 

BJP candidate Bhagirathi Murulya contest from Sullia Constituency gvd

ದುರ್ಗಾಕುಮಾರ್‌ ನಾಯರ್‌ಕೆರೆ

ಸುಳ್ಯ (ಏ.20): ಟೈಲರ್‌ ವೃತ್ತಿ... ಹೈನುಗಾರಿಕೆ ಉಪ ವೃತ್ತಿ...ಶಿಕ್ಷಕಿಯಾಗಿ ಕೆಲಸ ಮಾಡಿದ್ದು ಪ್ರವೃತ್ತಿ... ಈಗ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸುಳ್ಯ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ...! ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಭಾಗೀರಥಿ ಮುರುಳ್ಯ ಅವರ ಸಾಹಸಗಾಥೆ. ಬಿಜೆಪಿ 35 ವರ್ಷಗಳ ಬಳಿಕ ಸುಳ್ಯ ಮೀಸಲು ಕ್ಷೇತ್ರದಲ್ಲಿ ಹೊಸಮುಖಕ್ಕೆ ಟಿಕೆಟ್‌ ನೀಡಿದ್ದು, ಭಾಗೀರಥಿ ಮುರುಳ್ಯ ಈ ಅವಕಾಶ ಪಡೆದಿದ್ದಾರೆ.

ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಗುರುವ ಮತ್ತು ಕೊರಗು ದಂಪತಿಯ ಪುತ್ರಿ ಭಾಗೀರಥಿ, ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದ ಬಳಿಕ ಮಣಿಕ್ಕರ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಾಲ್ಕು ವರ್ಷ ಕಾಲ ಗೌರವ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಸು ಸಾಕುವುದರ ಮೂಲಕ ಹೈನುಗಾರಿಕೆಯನ್ನು, ಟೈಲರಿಂಗ್‌ ವೃತ್ತಿಯ ಮೂಲಕ ಸ್ವ-ಉದ್ಯೋಗವನ್ನೂ ಜತೆಯಲ್ಲಿ ಮಾಡುತ್ತಿದ್ದಾರೆ. ಈಗಲೂ ಮನೆಯಲ್ಲಿ ಹೈನುಗಾರಿಕೆಯ ಬಹುಪಾಲು ಕೆಲಸ ಇವರದ್ದೇ. ಮನೆಯಲ್ಲಿ ನಾಲ್ಕು ಹಸುಗಳಿದ್ದು, ಹತ್ತಿರದ ಸೊಸೈಟಿಗೆ ಹಾಲು ಮಾರಾಟ ಮಾಡುತ್ತಾರೆ.

ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ: ಕೆಲವರಿಂದ ಭರ್ಜರಿ ರೋಡ್‌ ಶೋ

ಆರ್‌ಎಸ್‌ಎಸ್‌ ಹಿನ್ನೆಲೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳಾ ವಿಭಾಗದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಥಮಿಕ ಶಿಕ್ಷಣ ಪಡೆದ ಭಾಗೀರಥಿ ಮುರುಳ್ಯ, ಗ್ರಾಮದ ಮಾಣಿಯಡ್ಕ ಶಿಶುಮಂದಿರದ ಸಂಚಾಲಕಿಯಾಗಿದ್ದರು. ಈಗ ಮುರುಳ್ಯ ರಾಷ್ಟ್ರ ಸೇವಿಕಾ ಸಮಿತಿ ಶಾಖೆಯ ಮುಖ್ಯಶಿಕ್ಷಕಿಯಾಗಿದ್ದಾರೆ. ಇವರು 2000ರಲ್ಲಿ ಎಣ್ಮೂರು ತಾ.ಪಂ.ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದು, ಸುಳ್ಯ ತಾ.ಪಂ.ಸದಸ್ಯರಾಗಿದ್ದರು. 2005ರಲ್ಲಿ ಜಾಲ್ಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಗೆದ್ದು ದ.ಕ.ಜಿ.ಪಂ. ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ 3 ಅವಧಿಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಜತೆಗೆ, ಸುಳ್ಯ ಎಲ್‌.ಡಿ.ಬ್ಯಾಂಕ್‌ ನಿರ್ದೇಶಕರಾಗಿ, ಜನತಾ ಬಜಾರ್‌ನ ನಿರ್ದೇಶಕರಾಗಿ ದುಡಿದ ಅನುಭವವಿದೆ. ಸುಳ್ಯ ತಾಲೂಕಿನ ಸಹಕಾರಿ ಯೂನಿಯನ್‌ನ ಕೋಶಾಧಿಕಾರಿಯಾಗಿದ್ದಾರೆ. ಮುರುಳ್ಯ ಯುವತಿ ಮಂಡಲದ ಅಧ್ಯಕ್ಷೆಯಾಗಿ, ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾಗಿದ್ದ ಭಾಗೀರಥಿ ಅವರು ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರು. ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷೆಯಾಗಿ, ರಾಜ್ಯಎಸ್‌.ಸಿ.ಮೋರ್ಚಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು, ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಮತ್ತು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವಿವಾಹಿತೆ: ಅವಿವಾಹಿತರಾಗಿರುವ, 49 ವರ್ಷ ಪ್ರಾಯದ ಭಾಗೀರಥಿ ಅವರಿಗೆ ಮುತ್ತಪ್ಪ ಮತ್ತು ಸುಭಾಷ್‌ ಎಂಬ ಇಬ್ಬರು ಅಣ್ಣಂದಿರಿದ್ದಾರೆ. ಅಕ್ಕ ಲಲಿತಾ. ತಂಗಿ ಜಾನಕಿ ಮುರುಳ್ಯಗ್ರಾ.ಪಂ.ಅಧ್ಯಕ್ಷೆಯಾಗಿದ್ದಾರೆ. ಹಲವು ದಶಕಗಳ ಹಿಂದೆ ಭಾಗೀರಥಿ ಅವರ ತಂದೆ ಊರಿನ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಬಳಿಕ ತಾಯಿಯೂ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ, ಮಗಳು ಗ್ರಾ.ಪಂ., ತಾ.ಪಂ, ಜಿ.ಪಂ. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈಗ ಶಾಸಕ ಸ್ಥಾನಕ್ಕೇ ಸ್ಪರ್ಧಿಯಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಚುನಾವಣೆ ಕಣದಲ್ಲಿ ಕೋಟಿ ಕುಬೇರರು: ಬುಧವಾರ ನಾಮಪತ್ರ ಸಲ್ಲಿಸಿದವರಲ್ಲಿ ಎಲ್ಲರೂ ಲಕ್ಷ್ಮೀಪುತ್ರರು

ನನ್ನಂತಹ ಸಾಮಾನ್ಯ ಕಾರ್ಯಕರ್ತೆಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿರುವುದು ಖುಷಿ ತಂದಿದೆ. ಬಾಲ್ಯದಿಂದ ನೋವು, ಅವಮಾನ, ಕಷ್ಟಅನುಭವಿಸಿ ಬೆಳೆದ ಕುಟುಂಬ ನಮ್ಮದು. ಪಕ್ಷ ಸೇರಿ ಜನ ಸೇವೆ ಮಾಡಿದ್ದೇವೆ. ಕಾರ್ಯಕರ್ತರ ಶ್ರಮ ನನ್ನನ್ನು ಗೆಲ್ಲಿಸಲಿದೆ.
- ಭಾಗೀರಥಿ ಮುರುಳ್ಯ, ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

Latest Videos
Follow Us:
Download App:
  • android
  • ios