ಬೆಂಗಳೂರು, [ಫೆ.01]: ಒಂದೂವರೆ ತಿಂಗಳಿಂದ ಮಂತ್ರಿಗಿರಿಗಾಗಿ ಕಾಯ್ತಿದ್ದ ಆಕಾಂಕ್ಷಿಗಳಿಗೆ ಹೈಕಮಾಂಡ್ ಸಿಹಿ ಸುದ್ದಿ ಕೊಟ್ಟಿದೆ. ಸಂಪುಟ ವಿಸ್ತರಣೆ ಸೋಮವಾರ ಬಹುತೇಕ ಪಕ್ಕಾ ಆಗಿದೆ. 
ಆದ್ರೆ ಯಾರ್ ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಗೆದ್ದ ನೂತನ ಶಾಸಕರ ಪೈಕಿ ಎಷ್ಟು ಜನರಿಗೆ ಅವಕಾಶ ಸಿಗುತ್ತೆ? ಮೂಲ ಬಿಜೆಪಿಗರಲ್ಲಿ ಯಾರಿಗೆ ಮಂತ್ರಿಭಾಗ್ಯ ಒಲಿಯುತ್ತೆ? ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ. 

ಮಂತ್ರಿಗಿರಿ ಕಳೆದುಕೊಳ್ಳುವ ಭೀತಿ, ಒಂದೇ ದಿನಕ್ಕೆ 3 ಬಾರಿ ಸಿಎಂ ಭೇಟಿಯಾದ ಸಚಿವ

ಇದರ ನಡುವೆ ಒಂದು ವಿಧಾನಪರಿಷತ್ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್ ಫಿಕ್ಸ್ ಘೋಷಿಸಲಾಗಿದೆ. ಇದರಿಂದ ಸಚಿವ ಸ್ಥಾನದ ಕನಸು ಕಾಣುತ್ತಿದ್ದ ಆರ್. ಶಂಕರ್ ಗೆ ಟಿಕೆಟ್ ಕೈತಪ್ಪಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಬಳಿ ಸಂಖ್ಯಾಬಲ ಕಡಿಮೆ ಇರುವುದರಿಂದ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿಗೆ ಅವಿರೋಧ ಗೆಲುವು ಸಿಗುವುದು ಪಕ್ಕಾ ಆಗಿದೆ. ಈ ಮೂಲಕ ಸವದಿ ಡಿಸಿಎಂ ಹುದ್ದೆಯೂ ಖಾಯಂ ಆಗಲಿದೆ.

 ಟಿಕೆಟ್ ಕೈತಪ್ಪಿರುವುದಕ್ಕೆ ಆರ್. ಶಂಕರ್ ಸೇರಿದಂತೆ ಕೆಲ ಬಿಜೆಪಿ ನಾಯಕರು ಸಹ ಬೇಸರಗೊಂಡಿದ್ದಾರೆ. ಆರ್ ಶಂಕರ್ ಅವರು ಯಡಿಯೂರಪ್ಪ ಹೇಳಿದ ಮಾತಿಗೆ ಬೆಲೆ ಕೊಟ್ಟು ರಾಣೇಬೆನ್ನೂರು ಬೈ ಎಲೆಕ್ಷನ್ ಕಣದಿಂದ ಹಿಂದೆ ಸರಿದಿದ್ದರು.

ರಿಜ್ವಾನ್ ಅರ್ಷದ್‌ರಿಂದ ತೆರವಾದ MLC ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ

 ಎಂ ಎಲ್ ಸಿ ಮಾಡಿ ಮಂತ್ರಿ ಮಾಡುವುದಾಗಿ ಬಿಎಸ್ ವೈ, ಶಂಕರ್ ಅವರಿಗೆ ಮಾತು ಕೊಟ್ಟಿದ್ದರು. ಆದ್ರೆ, ಇದೀಗ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದ್ದು, ಸೋತ ಡಿಸಿಎಂ ಲಕ್ಷ್ಮಣ ಸವದಿಗೆ ವಿಧಾನಪರಿಷತ್ ಟಿಕೆಟ್ ಫಿಕ್ಸ್ ಮಾಡಿದ್ದಾರೆ. 

ವಿಧಾನಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಅವರು ಶಿವಾಜಿನಗರ ಉಪಚುನಾವಣೆಯಲ್ಲಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಇದರಿಂದ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 

ಇದಕ್ಕೆ ಫೆಬ್ರವರಿ 17ಕ್ಕೆ ಚುನಾವಣೆ ನಡೆಯಲಿದ್ದು, ಅಂದೇ ಸಂಜೆ 5ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿಧಾನಸಭೆಯ ಸಂಖ್ಯಾಬಲದಲ್ಲಿ ಈ ಒಂದು MLC ಸ್ಥಾನ ಬಿಜೆಪಿಗೆ ಸಿಕ್ಕಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.