ಮಂತ್ರಿಗಿರಿ ಕಳೆದುಕೊಳ್ಳುವ ಭೀತಿ, ಒಂದೇ ದಿನಕ್ಕೆ 3 ಬಾರಿ ಸಿಎಂ ಭೇಟಿಯಾದ ಸಚಿವ
ಕಗ್ಗಂಟಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಾರ್ಯ ಚಟುವಟಿಕೆಗಳು ಗರಿಗೆದರಿವೆ.ಅದರಲ್ಲೂ ಸಚಿವರೊಬ್ಬರು ಮಂತ್ರಿಗಿರಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಯಡಿಯೂರಪ್ಪನವರ ದುಂಬಾಲು ಬಿದ್ದಿದ್ದಾರೆ.
ಬೆಂಗಳೂರು, [ಫೆ.01]: ಭಾರೀ ಕುತೂಹಲ ಕೆರಳಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಸೋಮವಾರ ಸಂಜೆ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ.
ಮಂತ್ರಿಯಾಗಲಿರುವ ಶಾಸಕರಿಗೆ ಗುಟ್ಟಾಗಿ ಸೂಚನೆ ಹೋಗುತ್ತಿದ್ದು, ಪ್ರಮಾಣ ವಚನಕ್ಕೆ ರೆಡಿಯಾಗಿರಿ ಎನ್ನುವ ಗುಪ್ತ ಸಂದೇಶಗಳು ಹೋಗುತ್ತಿವೆ. ಆದ್ರೆ, ಯಾರಿಗೆ ಸಚಿವ ಸ್ಥಾನ ಎನ್ನುವ ಹೆಸರುಗಳನ್ನು ಯಡಿಯೂರಪ್ಪ ಬಹಿರಂಗ ಪಡಿಸುತ್ತಿಲ್ಲ.
ಪಟ್ಟಿ ಫೈನಲ್ ಮಾಡಿದ ಅಮಿತ್ ಶಾ, ಯಾರು ಇನ್, ಯಾರು ಔಟ್?
ಮೂಲಗಳ ಪ್ರಕಾರ 9 ನೂತನ ಶಾಸಕರಿಗೆ ಇಬ್ಬರು ಅಥವಾ ಮೂವರು ಮೂಲ ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
ಗರಿಗೆದರಿದ ಸಂಪುಟ ವಿಸ್ತರಣೆ ಚರ್ಚೆ
ಹೌದು....ಕೇಂದ್ರ ಬಜೆಟ್ ಮುಗಿಯುತ್ತಿದ್ದಂತೆಯೇ ಬೆಂಗಳೂರಿನ ಡಾಲರ್ಟ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಧವಣಗಿರಿ ನಿವಾಸದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಗರಿಗೆದರಿವೆ.
ಒಬ್ಬೊಬ್ಬರು ಸಚಿವಾಕಾಂಕ್ಷಿಗಳು ಧವಣಗಿರಿ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪನವರ ಜತೆ ಚರ್ಚೆ ನಡೆಸಿ ತೆರಳುತ್ತಿದ್ದಾರೆ. ಅದರಲ್ಲೂ ನೂತನ ಶಾಸಕರು ಒಬ್ಬರಿಂದೊಬ್ಬರು ಧವಳಗಿರಿ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಸಿಎಂ ಭೇಟಿಯಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು.
ಕುತೂಹಲ ಮೂಡಿಸಿದ ಸಿಸಿ ಪಾಟೀಲ್ ಭೇಟಿ
ಸಚಿವಾಕಾಂಕ್ಷಿಗಳು ಬಂದು ಬಿಎಸ್ ವೈ ಅವರನ್ನು ಭೇಟಿ ಮಾಡುತ್ತಿದ್ದರೆ, ಮತ್ತೊಂದೆಡೆ ಸಚಿವ ಸಿಸಿ ಪಾಟೀಲ್ ಸಹ ಬೆಳಗ್ಗೆಯಿಂದ ಯಡಿಯೂರಪ್ಪನವರನ್ನ ಭೇಟಿಯಾಗುತ್ತಲೇ ಇದ್ದಾರೆ.
ಎಲ್ಲಿ ಸಂಪುಟದಿಂದ ತಮಗೆ ಕೊಕ್ ಕೊಡುತ್ತಾರೆಯೋ ಎನ್ನುವ ಮುನ್ಸೂಚನೆಗಳು ಸಿಕ್ಕಿವೆಯೋ ಏನೋ ಶನಿವಾರ ಒಂದೇ ದಿನ ಬೆಳಗ್ಗೆಯಿಂದಯಡಿಯೂರಪ್ಪನವರ ದುಂಬಾಲು ಬಿದ್ದಿದ್ದಾರೆ. ಇದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.