ಬೆಂಗಳೂರು, (ಜ.27): ಕಾಂಗ್ರೆಸ್ ಶಾಸಕ ರಿಜ್ವಾಲ್ ಅರ್ಷದ್ ಅವರ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್‌ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ.

ಇಂದು (ಸೋಮವಾರ) ಚುನಾವಣೆ ಆಯೋಗ ದಿನಾಂಕ ಪ್ರಕಟಿಸಿದ್ದು, ಇದೇ ಫೆಬ್ರವರಿ 17ಕ್ಕೆ ಚುನಾವಣೆ ನಡೆಯಲಿದ್ದು, ಅಂದೇ ಸಂಜೆ 5ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿಧಾನಸಭೆಯ ಸಂಖ್ಯಾಬಲದಲ್ಲಿ ಈ ಒಂದು MLC ಸ್ಥಾನ ಬಿಜೆಪಿಗೆ ಸಿಕ್ಕಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಸವದಿ ರಾಜಕೀಯ ಹಾದಿ ಸುಗಮ..?

ಜನವರಿ 30 ರಂದು ಚುನಾವಣೆಗೆ ಅಧಿಸೂಚನೆ ಜಾರಿಯಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಉಮೇದುವಾರಿಕೆ ಸಲ್ಲಿಸಲು ಫೆ.6 ಕೊನೆಯ ದಿನವಾಗಿದ್ದು, ಮರುದಿನ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಫೆ. 10 ಕಡೆಯ ದಿನವಾಗಿದೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಅವರು ಶಿವಾಜಿನಗರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಷದ್ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದೀಗ ಆ ಒಂದು ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ಪ್ರಕಟವಾಗಿದೆ.