ಪ್ರಿಯಾಂಕ ಖರ್ಗೆ ಹೆಸರು ಗಂಡೋ ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ ವ್ಯಂಗ್ಯ
* ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ ಬಿಟ್ ಕಾಯಿನ್
* ಬಿಜೆಪಿ-ಕ್ರಾಂಗ್ರೆಸ್ ನಾಯಕರ ನಡುವೆ ಆರೋಪ-ಪ್ರತ್ಯಾರೋಪ
* ವೈಯಕ್ತಿಕ ಟೀಕೆಗೆ ಇಳಿದ ಪ್ರಿಯಾಂಕ್-ಸಿಂಹ
ಮೈಸೂರು, (ನ.14): ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡುತ್ತಿದ್ದು, ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress) ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ.
"
ಪೇಪರ್ ಸಿಂಹ ಅಂದರೆ ನನಗೆ ಬೇಸರ ಇಲ್ಲ. ನಾನು ಪತ್ರಿಕೆ ಮೂಲಕವೇ ಘರ್ಜಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಪ್ರಿಯಾಂಕ ಖರ್ಗೆ ಹೆಸರು ಗಂಡೋ ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ. ಹೆಸರಿನಲ್ಲೇ ಮರಿ ಖರ್ಗೆಗೆ ಸ್ವಂತಿಕೆ ಇಲ್ಲ. ಅವರು ರಾಜೀವ್‌ಗಾಂಧಿ ಮಗಳ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.
"
Bitcoin Scam: ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್!
ಮೈಸೂರಿನಲ್ಲಿ (Mysuru) ಇಂದು (ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್‌ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದೆವು ಎಂದು ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದರು.
"
ಬಿಟ್ ಕಾಯಿನ್ ಕಾಲ್ಪನಿಕ ವಿಚಾರವಾಗಿದೆ. ಜನಸಾಮಾನ್ಯರಲ್ಲಿ ಚರ್ಚೆ ಶುರುವಾಗಿದೆ. ಮರಿ ಖರ್ಗೆ ಸುದ್ದಿಗೋಷ್ಠಿ ನಡೆಸುತ್ತಾರೆ. ಸುರ್ಜೆವಾಲ ಡೆಲ್ಲಿಯಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸುವ ಅಗತ್ಯವೇನಿದೆ. ಡಿಕೆಶಿ, ಸಿದ್ದು ಜಗಳ ಬಿಡಿಸಲು ವಿಫಲವಾಗಿ ದಿಲ್ಲಿಯಲ್ಲೇ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ತೋರಿಸಲು ಹೀಗೆ ಮಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುದನ್ನು ಬಿಟ್ಟು, ನೇರವಾಗಿ ಕರ್ನಾಟಕಕ್ಕೆ ಬಂದು ಒಟ್ಟಾಗಿ ಪ್ರೆಸ್ ಮೀಟ್ ಮಾಡಿ. 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಬಿಟ್ ಕಾಯಿನ್ ಬಗ್ಗೆ ಗೊತ್ತಿರಬೇಕಲ್ವಾ. ದಯಮಾಡಿ ಜನಸಾಮಾನ್ಯರಿಗೆ ಬಿಟ್ ಕಾಯಿನ್ ಬಗ್ಗೆ ಹೇಳಿ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.
ಶ್ರೀಕಿ ಜೊತೆ ವ್ಯವಹಾರ ನಡೆಸಿರುವದು ನಿಮ್ಮ ನಲಪಾಡ್. ನಿಮ್ಮ ಶಾಸಕರ ಮಕ್ಕಳೇ ಶ್ರೀಕಿ ಜೊತೆ ವ್ಯವಹಾರ ಮಾಡಿರುವುದು. ಅಕೌಂಟ್ ಹ್ಯಾಕ್ ಮಾಡಿದ್ದರೆ ಬಹಿರಂಗ ಪಡಿಸಿ. ನಿಮ್ಮ ಯಾವ ಅಕೌಂಟ್ ಹ್ಯಾಕ್ ಆಗಿದೆ ಬಹಿರಂಗ ಪಡಿಸಿ. ಒಂದೇ ಒಂದು ಅಕೌಂಟ್ ನಂಬರ್ ಕೊಡಿ ಎಂದು ಕಾಂಗ್ರೆಸ್ ಗೆ ಸವಾಲು ಹಾಕಿದರು.
ಒಂದು ಸಾವಿರ ಕಳೆದುಕೊಂಡರೂ ಇವತ್ತು ದೂರು ಕೊಡ್ತಾರೆ. 7 ಸಾವಿರ ಕೋಟಿ ಎಂದರೆ ಯಾಕೆ ದೂರು ಕೊಟ್ಟಿಲ್ಲ. ನಿಮ್ಮ ಧರ್ಮ ಸಂಕಟ ಏನು ಅಂತ ನನಗೆ ಚೆನ್ನಾಗಿ ಗೊತ್ತು. ಮರಿಖರ್ಗೆ, ಬಿಟಿಎಂ ರೆಡ್ಡಿ, ಪಾಟೀಲ, ಜಾರ್ಜ್ ಹೂಡಿರುವ ಅಕೌಂಟ್ ಹ್ಯಾಕ್ ಆಗಿರಬೇಕು. ಹಿಂದೆ ಪರ್ಸೆಂಜೆಟ್ ಪಡೆದಿದ್ದರಿಂದಲೇ 2018 ರಲ್ಲಿ ಹೀನಾಯ ಸೋಲಾಗಿತ್ತು. ಸಿದ್ದರಾಮಯ್ಯನವರದ್ದು ಸ್ಪಿಟ್ ಅಂಡ್ ರನ್. ಯಾವ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ ಎಂದು ಟಾಂಗ್ ಕೊಟ್ಟರು.
ಪೇಪರ್ ಸಿಂಹ ಹೇಳಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಎರಡೂ ಅವರ ಬಳಿಯೇ ಇದೆ. ತನಿಖೆ ಮಾಡಿ ಮಾಹಿತಿ ತರಿಸಿಕೊಳ್ಳಲಿ. ನಮ್ಮ ಆರೋಪಗಳಿಗೆ ಉತ್ತರ ಕೊಡಲಾಗದಿದ್ದಾಗ ವೈಯಕ್ತಿಕ ಟೀಕೆ ಮಾಡುತ್ತಾರೆ. ಇದು ಬಿಜೆಪಿಯ ಮಂತ್ರ ಎಂದು ಪ್ರತಾಂಹ ಸಿಂಹಗೆ ತಿರುಗೇಟು ಕೊಟ್ಟಿದ್ದರು. ಪೇಪರ್ ಸಿಂಹ ಎಂದಿದ್ದಕ್ಕೆ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಗಂಡೋ ಹೆಣ್ಣೋ ಎಂದು ವೈಯಕ್ತಿಕ ಟೀಕೆ ಮಾಡಿದ್ದಾರೆ.