ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೊಳಿಸದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಈ ಯೋಜನೆಯನ್ನು ದುರ್ಯೋಧನನ ಹಠಕ್ಕೆ ಹೋಲಿಸಿದ ಅವರು, ಇದನ್ನು ಮುಂದುವರೆಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ದುರ್ಯೋಧನನ ಗತಿಯೇ ಬರುತ್ತದೆ ಎಂದು ಎಚ್ಚರಿಸಿದರು.

ರಾಮನಗರ (ಆ.10) ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರೇ ಬಿಡದಿ ಟೌನ್‌ಶಿಪ್‌(Bidadi Township) ಜಾರಿ ಮಾಡುವುದಾಗಿ ದುರ್ಯೋಧನನ ರೀತಿ ಹಠ ಮಾಡಬೇಡಿ. ಇಲ್ಲದಿದ್ದರೆ ದುರ್ಯೋಧನನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ಈ ಟೌನ್‌ಶಿಪ್ ವಿರುದ್ಧದ ಹೋರಾಟವೇ ಕಾಂಗ್ರೆಸ್ ಸರ್ಕಾರದ ಕೊನೆ ಮೊಳೆಯಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ದುಷ್ಟ ಸರ್ಕಾರ, ದುಷ್ಟ ಮುಖ್ಯಮಂತ್ರಿ. ಇವರ ವಿರುದ್ಧವೇ ಈ ಹೋರಾಟ ನಡೆಯುತ್ತಿದೆ ಎಂದರು.

ಬಿಡದಿ ಟೌನ್‌ಶಿಪ್ ಜಾರಿ ಮಾಡಿದರೆ ಉಳಿಗಾಲವಿಲ್ಲ:

ಬಿಡದಿ ಟೌನ್‌ಶಿಪ್ ಯೋಜನೆ ಜಾರಿ ವಿಚಾರದಲ್ಲಿ ಕಾಂಗ್ರೆಸ್‌ ರಚಿಸಿದ್ದ ಸತ್ಯ ಶೋಧನಾ ಸಮತಿ ವರದಿಯಲ್ಲಿ ಈ ಯೋಜನೆ ಮಾಡಿದರೆ ಉಳಿಗಾಲ ಇಲ್ಲವೆಂದು ತಿಳಿಸಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಆ ವರದಿಯನ್ನು ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ನಿಮ್ಮ ಯೋಗ್ಯತೆ ರಾಜ್ಯದ ಜನರ ಮುಂದೆ ಹರಾಜಾಗುತ್ತದೆ ಎಂದು ಎಚ್ಚರಿಸಿದರು.

ರೈತರ ಭೂಮಿ ಮುಟ್ಟಿದರೆ ಸರ್ವನಾಶ

ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ, ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಿತ್ತು. ಆ ಸಮಿತಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸದಸ್ಯರಾಗಿದ್ದರು. ಆ ಸಮಿತಿ ಕೊಟ್ಟ ವರದಿಯಲ್ಲಿ ಟೌನ್ ಶಿಪ್ ಮಾಡುವುದು ಬೇಡ, ರೈತರ ಭೂಮಿಯನ್ನು ಮುಟ್ಟಿದರೆ ಸರ್ವನಾಶ ಆಗುತ್ತೇವೆಂದು ಸಮಿತಿ ಸದಸ್ಯರಾಗಿದ್ದ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದರು ಎಂದು ತಿಳಿಸಿದರು.

ಅಲ್ಲದೆ, ವಿಧಾನಸಭೆ ಅಧಿವೇಶನದಲ್ಲೂ ಡಿ.ಕೆ.ಶಿವಕುಮಾರ್ ಯೋಜನೆ ಜಾರಿ ಮಾಡುವುದಿಲ್ಲ ಎಂದಿದ್ದರು. ಆದರೆ ಈಗ ಅದೇ ಡಿ.ಕೆ.ಶಿವಕುಮಾರ್ ಯಾವ ಮುಖ ಇಟ್ಟುಕೊಂಡು ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದಾರೆ. ಪ್ರಾಯಶ್ಚಿತ್ತ ಯಾರು ಮಾಡಿಕೊಳ್ಳಬೇಕು ಎಂದು ಆರ್‌.ಅಶೋಕ್ ಪ್ರಶ್ನಿಸಿದರು.