ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸಿದ್ದು ಕಂಡುಬಂದಿದೆ. ಮಾತ್ರವಲ್ಲದೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನೇ ತಳ್ಳಿದ್ದಾರೆ. ಈ ಕುರಿತು ಅಗತ್ಯವಾಗಿ ಪಕ್ಷ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ ರಂಜನ್‌ ಜಿ.ಗೌಡ, ಶೈಲೇಶ್‌ ಹಾಗೂ ಅಭಿನಂದನ್‌ ಹರೀಶ್‌ ಕುಮಾರ್

ಬೆಳ್ತಂಗಡಿ(ಜು.15): ತಾಲೂಕಿನಲ್ಲಿ ಕಾಂಗ್ರೆಸ್‌ ಚುನಾವಣೆ ಪರಾಮರ್ಶೆ ಸಭೆಯಲ್ಲಿ ಪ್ರಮುಖರೇ ಕಿತ್ತಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಾಂಗ್ರೆಸ್‌ ಕಚೇರಿಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಸೋಲು ಗೆಲವಿನ ವಿಮರ್ಶೆಗಾಗಿ ಸಭೆ ಕರೆಯಲಾಗಿತ್ತು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಅಶ್ವಿನ್‌ ರೈ ಬಂಟ್ವಾಳ್‌ ವೀಕ್ಷಕರಾಗಿದ್ದರು.
ವೀಕ್ಷಕರ ಮುಂದೆಯೇ ಅಭ್ಯರ್ಥಿ ರಕ್ಷಿತ್‌ ಶಿವರಾಂ ಸೋಲಿಗೆ ಬ್ಲಾಕ್‌ ಕಾಂಗ್ರೆಸ್‌ ನೇರ ಕಾರಣ ಎಂದು ಬಳಗವೊಂದು ಸಭೆಯಲ್ಲಿ ಆಕ್ಷೇಪ ಎತ್ತಿತು.

ಸಭೆ ಆರಂಭವಾಗುತ್ತಲೆ ರಕ್ಷಿತ್‌ ಶಿವರಾಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಕೆಲವರು ಅಶಿಸ್ತಿನಿಂದ ವರ್ತಿಸಿದ ಘಟನೆ ನಡೆಯಿತು. ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆ ವೀಕ್ಷಕರಾಗಿ ಬಂದಿದ್ದ ಇಬ್ರಾಹಿಂ ಜತೆಗಿದ್ದರು. ಸೋಲಿಗೆ ಕಾರಣರಾದವರನ್ನು ವೀಕ್ಷಕರಾಗಿ ಹೇಗೆ ಕರಿಸಿದ್ದೀರಿ ಎಂದು ಸಭೆಯಲ್ಲಿ ಪ್ರಶ್ನಿಸಿದರಲ್ಲದೆ ವಿಧಾನ ಪರಿಸತ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಪುತ್ರ ಅಭಿನಂದನ್‌ ಹರೀಶ್‌ ಅವರನ್ನು ಏಕವಚನದಿಂದ ಪ್ರಶ್ನಿದ್ದು ಮಾತಿಗೆ ಮಾತು ಬೆಳೆದು ಹೊಕೈ ವರೆಗೆ ತಲುಪಿದ ಘಟನೆ ನಡೆಯಿತು.

ದಕ್ಷಿಣ ಕನ್ನಡಕ್ಕೆ ಪುತ್ತಿಲ್ಲ ಆಗ್ತಾರಾ ಬಿಜೆಪಿ ಅಭ್ಯರ್ಥಿ, ಟ್ರೆಂಡ್ ನೋಡಿದರೆ ಹಾಗನ್ಸುತ್ತೆ ಅಂತಾರೆ ನೆಟ್ಟಿಗರು!

ಈ ವೇಳೆ ರಕ್ಷಿತ್‌ ಶಿವರಾಂ ಬಳಗವನ್ನು ಸಭೆಯಿಂದ ಹೊರನಡೆಯುಂತೆ ಸೂಚಿಸಿದರು. ತಕ್ಷಣ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಶಾಂತಗೊಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ರಂಜನ್‌ ಜಿ.ಗೌಡ, ಶೈಲೇಶ್‌ ಹಾಗೂ ಅಭಿನಂದನ್‌ ಹರೀಶ್‌ ಕುಮಾರ್‌ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯೆಂದು ಸ್ವಯಂ ಘೋಷಿಸಿಕೊಂಡ ಪ್ರವೀಣ್‌ ಫರ್ನಾಂಡಿಸ್‌ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಇಂದು ನಮ್ಮ ಕಾಂಗ್ರೆಸ್‌ ಪಕ್ಷದ ವೀಕ್ಷಕರ ಸಭೆಗೆ ಬಂದು ಗಲಭೆ ಎಬ್ಬಿಸಿದ್ದಾರೆ. ಶಿಸ್ತಿನ ಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿರುವುದು ಕಂಡು ಬಂದಿದೆ. ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸಿದ್ದು ಕಂಡುಬಂದಿದೆ. ಮಾತ್ರವಲ್ಲದೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನೇ ತಳ್ಳಿದ್ದಾರೆ. ಈ ಕುರಿತು ಅಗತ್ಯವಾಗಿ ಪಕ್ಷ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.