ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡುವುದರ ಜೊತೆಗೆ ಬಿಜೆಪಿಯನ್ನು ನಿರ್ಧಾರವನ್ನು ಪ್ರಶ್ನಿಸುವಂತೆ ಮಾಡಿದ್ದ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅಭಿಮಾನಿಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ.

ಪುತ್ತೂರು: ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌‌ಗೆ ಪ್ರಬಲ ಪೈಪೋಟಿ ನೀಡುವುದರ ಜೊತೆಗೆ ಟಿಕೆಟ್ ನೀಡುವಲ್ಲಿ ಬಿಜೆಪಿ ಹೈ ಕಮಾಂಡ್ ನಿರ್ಧಾರವನ್ನು ಪ್ರಶ್ನಿಸುವಂತೆ ಮಾಡಿರುವ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅಭಿಮಾನಿಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ‘ಪುತ್ತೂರಿಗೆ ಪುತ್ತಿಲ’ ಎಂಬ ಸಂದೇಶಗಳು ನಂತರ ‘ತುಳುನಾಡಿಗೆ ಪುತ್ತಿಲ’ ಎಂದೂ ಬದಲಾಗಿತ್ತು. ವಾಟ್ಸಪ್‌ ಗ್ರೂಪ್‌, ಆ್ಯಪ್‌, ಇನ್‌ಸ್ಟಾಗ್ರಾಂಗಳಲ್ಲಿ ಈ ಮಾಹಿತಿ ವಿಸ್ತಾರಗೊಳ್ಳುತ್ತಿದ್ದು, ‘ಇದು ಅಂತ್ಯವಲ್ಲ ಆರಂಭ ಇನ್ನು ಹಿಂದುತ್ವದ ದಿಗ್ವಿಜಯಕ್ಕೆ’ ಎಂಬ ಸಂದೇಶಗಳು ಜಿಲ್ಲಾದ್ಯಂತ ಹರಿದಾಡುತ್ತಲೇ ಇವೆ.

ಎಂಪಿ ಸ್ಪರ್ಧೆಯ ಕಡೆಗೆ: ಹಿಂದುತ್ವದ ರಕ್ಷಣೆ ಮತ್ತು ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಗುರಿಯಲ್ಲಿ ಬಿಜೆಪಿ ಬಂಡಾಯದ ಪಕ್ಷೇತರ ಅಭ್ಯರ್ಥಿಯಾಗಿದ್ದ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅರುಣ್‌ ಕುಮಾರ್‌ ಪುತ್ತಿಲ ಕೇವಲ 20 ದಿನಗಳ ಅವಧಿಯಲ್ಲಿ ಕ್ಷೇತ್ರದ ಎಲ್ಲೆಡೆ ಸುತ್ತಾಡಿ ಪ್ರಚಾರ ನಡೆಸಿ, 62458 ಮತಗಳನ್ನು ಪಡೆದು, ಮತ ಗಳಿಕೆಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿದ್ದರು. ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅಲ್ಲದೆ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿಯೂ ಯಶಸ್ವಿಯಾಗಿದ್ದರು.

ಮುಂದುವರಿದ ಉತ್ಸಾಹ: ಇದೀಗ ಅದೇ ಉತ್ಸಾಹದಲ್ಲಿರುವ ಪುತ್ತಿಲ ಮತ್ತು ಅವರ ಅಭಿಮಾನಿ ಬೆಂಬಲಿಗರ ಬಳಗ ಹೊಸ ಹೆಜ್ಜೆಯತ್ತ ಸಾಗುತ್ತಿದೆ. ಪುತ್ತೂರಿಗೆ ಸೀಮಿತವಾಗಿದ್ದ ಚಿಂತನೆಯೊಂದು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿಕೊಳ್ಳುತ್ತಿದೆ. 2024ರ ಲೋಕಸಭಾ ಚುನಾವಣೆಯತ್ತ ದೃಷ್ಟಿಹಾಯಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪುತ್ತಿಲ ಬೆಂಬಲಿಗರಿಂದ ಹರಿದಾಡುತ್ತಿರುವ ಸಂದೇಶಗಳು ಇದಕ್ಕೆ ಪುಷ್ಟಿನೀಡುತ್ತಿದೆ.

‘ಪುತ್ತೂರಿಗೆ ಪುತ್ತಿಲ’ ವಾಟ್ಸಪ್‌ ಗ್ರೂಪುಗಳ ಲಾಂಛನ ಬದಲಾಗಿದೆ. ತುಳುನಾಡಿಗೆ ಪುತ್ತಿಲ ಎಂಬ ಆ್ಯಪ್‌ ಬಂದಿದೆ. ಅಲ್ಲದೆ ಆ್ಯಟ್‌ ಪುತ್ತಿಲ ಫಾರ್‌ ಎಂಪಿ 2024 ಇನ್‌ಸ್ಟಾಗ್ರಾಂ ಖಾತೆ ಆರಂಭಗೊಂಡಿದೆ. ಇವುಗಳಲ್ಲಿ ಸಾಕಷ್ಟುಸದಸ್ಯರು, ಅನುಯಾಯಿಗಳು ಸೇರಿಕೊಂಡಿದ್ದಾರೆ.

ಪೋಸ್ಟ್‌ ಕಾರ್ಡ್‌ ಅಭಿಯಾನ:

ಪುತ್ತಿಲ ಅವರನ್ನು ಸಂಸದ ಅಭ್ಯರ್ಥಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಾಗಿ ಅವರ ಅಭಿಮಾನಿ ಬಳಗವು ಇದೀಗ ಅರುಣ್‌ ಕುಮಾರ್‌ ಪುತ್ತಿಲ ಅವರಿಗೆ ಎಂ.ಪಿ ಸ್ಥಾನ ನೀಡಬೇಕು ಎಂಬ ಪೋಸ್ಟ್‌ ಕಾರ್ಡ್‌ ಅಭಿಯಾನ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೋಸ್ಟ್‌ ಕಾರ್ಡ್‌ ಹಾಕುವ ಅಭಿಯಾನ ಆರಂಭಗೊಂಡಿದೆ.

ಜಿಲ್ಲೆಯಿಂದ ಸುಮಾರು 3 ಲಕ್ಷ ಪೋಸ್ಟ್‌ ಕಾರ್ಡ್‌ ಹಾಕುವ ಗುರಿ ಹೊಂದಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಬಿಜೆಪಿ ಕೇಂದ್ರೀಯ ಕಚೇರಿಗೆ ಪೊಸ್ಟ್‌ ಕಾರ್ಡ್‌ ಕಳುಹಿಸಲಾಗುತ್ತಿದೆ. ಹಿಂದುತ್ವದ ಉಳಿವಿಗಾಗಿ, ಬಿಜೆಪಿ ಪಕ್ಷದ ಸುಭದ್ರತೆಗಾಗಿ, ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಪೋಸ್ಟ್‌ ಕಾರ್ಡ್‌ ಅಭಿಯಾನದಲ್ಲಿ ವಿನಂತಿಸಲಾಗುತ್ತಿದೆ.

ಆನ್‌ಲೈನ್‌ ಮತದಾನ:
ಅರುಣ್‌ ಕುಮಾರ್‌ ಪುತ್ತಿಲ ಅವರ ಅಭಿಮಾನಿಗಳು ಮಂಗಳೂರಿನ ಮುಂದಿನ ಸಂಸದರು ಯಾರಾಗುತ್ತಾರೆ ಎಂಬ ಆನ್‌ಲೈನ್‌ ಓಟಿಂಗ್‌ ಈಗಾಗಲೇ ಆರಂಭಿಸಿದ್ದಾರೆ. ಅದರಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್‌ ಚೌಟ, ಸತ್ಯಜಿತ್‌ ಸುರತ್ಕಲ್‌, ಅರುಣ್‌ ಕುಮಾರ್‌ ಪುತ್ತಿಲ ಅವರ ಹೆಸರನ್ನು ಹಾಕಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಅವರು ತನ್ನ ಸ್ಪರ್ಧೆಯನ್ನು ಕೇವಲ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸಿ ಮೌನವಾಗಿರದೆ, ಇದೀಗ ಜಿಲ್ಲೆಯಲ್ಲಿಯೂ ಸಂಚಲನ ಮೂಡಿಸುವ ಇರಾದೆಯಲ್ಲಿದ್ದಾರೆ. ಪುತ್ತೂರಿನ ಯಶಸ್ಸು ಅವರ ಇಚ್ಚಾಶಕ್ತಿಯನ್ನು ನೂರ್ಮಡಿಗೊಳಿಸಿದೆ.

ಪುತ್ತೂರು ಗ್ರಾಪಂ ಉಪ ಚುನಾವಣಾ ಸ್ಪರ್ಧೆಗೆ ಇಳಿದ 'ಪುತ್ತಿಲ ಪರಿವಾರ; ಬಿಜೆಪಿಗೆ ಮತ್ತೊಮ್ಮೆ ಸೆಡ್ಡು?

ಕಾರ್ಯಕರ್ತರ ಅಭಿಲಾಷೆ
ಕಳೆದ ಐದು ವರ್ಷಗಳಿಂದ ಕಾರ್ಯಕರ್ತರು ನೊಂದಿದ್ದಾರೆ, ಅವರ ಅಭಿಲಾಷೆಯಿಂದ ಈ ಅಭಿಯಾನ ನಡೆಯುತ್ತಿದೆ. ಆದರೆ ನಾನು ಮುಂಬರುವ ಚುನಾವಣೆಯ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಮ್ಮ ಜೊತೆ ಸಂಘದ ಹಿರಿಯರಿದ್ದಾರೆ, ಬಿಜೆಪಿ ಹಿರಿಯರಿದ್ದಾರೆ. ಅವರೆಲ್ಲರೂ ಹೇಳಿದರೆ ಮುಂದೆ ನಿರ್ಧರಿಸಲಾಗುವುದು.