ಗುಜರಾತ್‌ನಲ್ಲಿ ಸಂಪುಟ ರಚನೆ, ಕೇಂದ್ರ ವೀಕ್ಷಕರಾಗಿ ತೆರಳಿದ್ದ ಬಿಎಸ್ ಯಡಿಯೂರಪ್ಪ!
ಗುಜರಾತ್‌ನಲ್ಲಿ ನಿರೀಕ್ಷೆಯಂತೆ ಭೂಪೇಂದ್ರ ಪಟೇಲ್ 2ನೇ ಅವಧಿಗೆ ಸಿಎಂ ಆಗುವುದು ಖಚಿತವಾಗಿದೆ. ಶನಿವಾರ ನಡೆದ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಸೋಮವಾರ ಪ್ರಮಾಣವಚನ ತೆಗೆದುಕೊಳ್ಳುವ ಮುನ್ನ ಶನಿವಾರ ಸಂಜೆ ಭೂಪೇಂದ್ರ ಪಟೇಲ್ ದೆಹಲಿಗೆ ಭೇಟಿ ನೀಡಿ ಸಂಪುಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಅಹಮದಾಬಾದ್ (ಡಿ.10): ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಭೂಪೇಂದ್ರ ಪಟೇಲ್ ಅವರನ್ನು ಬೆಂಬಲಿಸಿದ ಕಾರಣ, ಗುಜರಾತ್‌ನ ಎರಡನೇ ಅವಧಿಗೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಅಧಿಕಾರಿ ತಿಳಿಸಿದ್ದಾರೆ. ಅಹಮದಾಬಾದ್‌ನಲ್ಲ ನಡೆದ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ 156 ಶಾಸಕರು ಭಾಗಿಯಾಗಿದ್ದರು. ಸಿಎಂ ಅಭ್ಯರ್ಥಿಯಾಗಿದ್ದ ಭೂಪೇಂದ್ರ ಪಟೇಲ್, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಸೇರಿಹಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ಸಭೆಗೆ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿದ್ದರು. ಈ ಮೂವರು ಗುಜರಾತ್ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಹೊಸ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಭೂಪೇಂದ್ರ ಪಟೇಲ್ ಗುರುವಾರ ತಮ್ಮೊಂದಿಗೆ ಇಡೀ ಸಂಪುಟದ ರಾಜೀನಾಮೆ ನೀಡಿದ್ದರು. ಡಿಸೆಂಬರ್ 12ರ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಾಸಕಾಂಗ ಸಭೆ ಮುಗಿದ ಬಳಿಕ ದೆಹಲಿ ಭೇಟಿ: ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಅಧಿಕೃತವಾಗಿ ಘೋಷಿಸಿಸುವ ಶಾಸಕಾಂಗ ಸಭೆಯ ಬಳಿಕ ನಿಯೋಜಿತ ಸಿಎಂ ಭೂಪೇಂದ್ರ ಪಟೇಲ್, ದೆಹಲಿಗೆ ತೆರಳಲಿದ್ದಾರೆ. ಸಂಜೆ 4 ಗಂಟೆಗೆ ಅವರು ದೆಹಲಿ ತಲುಪಲಿದ್ದಾರೆ. ಅಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರನ್ನು ಭೂಪೇಂದ್ರ ಪಟೇಲ್ ಭೇಟಿಯಾಗಲಿದ್ದಾರೆ. ಹೊಸ ಸಂಪುಟ ರಚನೆ ಕುರಿತಾಗಿ ಅವರು ಚರ್ಚೆ ಮಾಡಲಿದ್ದಾರೆ.
ಸಿಎಂ ಭೂಪೇಂದ್ರ ಪಟೇಲ್ ನೇತೃತ್ವದ ಹೊಸ ಸರ್ಕಾರವು 10-12 ಕ್ಯಾಬಿನೆಟ್ ದರ್ಜೆಯ ಸಚಿವರು ಸೇರಿದಂತೆ ಸುಮಾರು 25-28 ಸಚಿವರನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ. ರಿವಾಬಾ ಜಡೇಜಾ, ಅಲ್ಪೇಶ್ ಠಾಕೂರ್, ಶಂಕರ್ ಚೌಧರಿ, ಡಾ ದರ್ಶನ ಶಾ, ಅಮಿತ್ ಠಕ್ಕರ್ ಮತ್ತು ಹಾರ್ದಿಕ್ ಪಟೇಲ್ ಅವರಂತಹ ಹೊಸ ಮುಖಗಳು ಹೊಸ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. "ಹೊಸ ಕ್ಯಾಬಿನೆಟ್ ವಿವಿಧ ಜಾತಿ ಮತ್ತು ಜಿಲ್ಲಾ ಪ್ರಾತಿನಿಧ್ಯಗಳ ಮಿಶ್ರಣವಾಗಿರಲಿದೆ" ಎಂದು ಬಿಜೆಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, 182ರಲ್ಲಿ 156 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಈವರೆಗೂ ಯಾವುದೇ ಪಕ್ಷ ಗಳಿಸದೇ ಇರುವಷ್ಟು ಸ್ಥಾನವನ್ನು ಗೆಲ್ಲುವ ಮೂಲಕ ಎಲ್ಲಾ ದಾಖಲೆಗಳನ್ನು ಬುಡಮೇಲು ಮಾಡಿದೆ. 1985ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ 149 ಸ್ಥಾನ ಗಳಿಸಿದ್ದು ಹಿಂದಿನ ದಾಖಲೆಯಾಗಿತ್ತು.
ಇದು ಗುಜರಾತ್ ಕಹಾನಿ: ಮೋದಿ ಪಾಳೆಯದ ಮಹಾ ಗೆಲುವಿನ ಗುಟ್ಟೇನು?
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಟೇಲ್, ಗುಜರಾತ್ ಜನತೆಗೆ ಮತ್ತೊಮ್ಮೆ ಬಿಜೆಪಿಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸೇರಿದಂತೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಪಕ್ಷವು ಜಾರಿಗೆ ತರಲಿದೆ ಎಂದು ಅವರು ಹೇಳಿದರು, ಅದರ ಶಿಫಾರಸುಗಳನ್ನು ನೀಡಲು ಈಗಾಗಲೇ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.
ಗುಜರಾತ್ ಸಿಎಂ ಆಯ್ಕೆಗೆ ವೀಕ್ಷಕರಾಗಿ ತೆರಳಿದ ಬಿಎಸ್‌ವೈ: ವಿದೇಶಿ ಮಾಧ್ಯಮಗಳಲ್ಲಿ ಗುಜರಾತ್ ಗೆಲುವಿನ ಬಣ್ಣನೆ
ಅಹಮದಾಬಾದ್ ನಗರಾಭಿವೃದ್ಧಿ ನಿಗಮದ (AUDA) ಮಾಜಿ ಅಧ್ಯಕ್ಷ ಮತ್ತು ಘಟ್ಲೋಡಿಯಾದ ಹಾಲಿ ಶಾಸಕ ಭೂಪೇಂದ್ರ ಪಟೇಲ್ ಅವರು 2021ರ ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದರು. ವಿಜಯ್ ರೂಪಾನಿ ಬದಲಿಗೆ ಇವರನ್ನು ಆಯ್ಕೆ ಮಾಡಲಾಗಿತ್ತು. ಪಟೇಲ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಗುಜರಾತ್ ಚುನಾವಣೆಯಲ್ಲಿ ಅಹಮದಾಬಾದ್ ಜಿಲ್ಲೆಯ ಘಟ್ಲೋಡಿಯಾ ಅಸೆಂಬ್ಲಿ ಸ್ಥಾನದಿಂದ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಸತತ ಎರಡನೇ ಅವಧಿಗೆ ಜಯಶಾಲಿಯಾಗಿದ್ದಾರೆ.