ಗುಜರಾತ್‌ ಸಿಎಂ ಆಯ್ಕೆಗೆ ವೀಕ್ಷಕರಾಗಿ ತೆರಳಿದ ಬಿಎಸ್‌ವೈ: ವಿದೇಶಿ ಮಾಧ್ಯಮಗಳಲ್ಲಿ ಗುಜರಾತ್‌ ಗೆಲುವಿನ ಬಣ್ಣನೆ

ರಾಷ್ಟ್ರೀಯ ಬಿಜೆಪಿ ಮೂವರನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ಯಡಿಯೂರಪ್ಪ ಅವರೂ ಸೇರಿದಂತೆ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಹಾಗೂ ಅರ್ಜುನ್‌ ಮುಂಡಾ ಅವರೂ ಇದ್ದಾರೆ.

bjp mlas to meet today to elect new gujarat chief minister foreign media on gujarat bjp wi ash

ನವದೆಹಲಿ: ಗುಜರಾತ್‌ ವಿಧಾನಸಭೆಯಲ್ಲಿ (Gujarat Assembly) ಬಿಜೆಪಿ (BJP) ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಯ ವೀಕ್ಷಕರಾಗಿ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (B.S. Yediyurappa) ಅವರು ಅಹಮದಾಬಾದ್‌ಗೆ (Ahmedabad) ತೆರಳಿದ್ದಾರೆ. ರಾಷ್ಟ್ರೀಯ ಬಿಜೆಪಿ ಮೂವರನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ಯಡಿಯೂರಪ್ಪ ಅವರೂ ಸೇರಿದಂತೆ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (Rajnath Singh) ಹಾಗೂ ಅರ್ಜುನ್‌ ಮುಂಡಾ (Arjun Munda) ಅವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಗುಜರಾತ್‌ನ ಅಹಮದಾಬಾದ್‌ಗೆ (Ahmedabad) ತೆರಳಿದರು. ಶನಿವಾರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಾಪಸಾಗಲಿದ್ದಾರೆ.

ವಿದೇಶಿ ಮಾಧ್ಯಮಗಳಲ್ಲಿ ಗುಜರಾತ್‌ ಗೆಲುವಿನ ಬಣ್ಣನೆ: ಸತತ 7ನೇ ಜಯಕ್ಕೆ ಮೋದಿ ಗುಣಗಾನ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಸತತ 7ನೇ ಬಾರಿಗೆ ಬಿಜೆಪಿ ಸಾಧಿಸಿದ ಗೆಲುವನ್ನು ಹಲವು ವಿದೇಶಿ ಮಾಧ್ಯಮಗಳು ವಿಶೇಷವಾಗಿ ಪ್ರಕಟಿಸಿವೆ. ದ ಸ್ಪ್ರೈಟ್ಸ್ ಟೈಮ್ಸ್‌ ಆಫ್‌ ಸಿಂಗಾಪುರ್‌, ದ ನಿಕ್ಕಿ ಏಷ್ಯಾ, ಅಲ್‌ ಜಝೀರಾ, ಇಂಡಿಪೆಂಡೆಂಟ್‌, ಎಬಿಸಿ ನ್ಯೂಸ್‌ ಸೇರಿದಂತೆ ಹಲವು ಮಾಧ್ಯಮಗಳು ಗುಜರಾತ್‌ನಲ್ಲಿ ನಡೆದ ಸಂಭ್ರಮಾಚರಣೆಯನ್ನು ಪೋಟೋ ಸಮೇತ ಪ್ರಕಟಿಸಿವೆ. 

ಬ್ರಿಟಿಷ್‌ ಪತ್ರಿಕೆಯಾದ ದ ಗಾರ್ಡಿಯನ್‌, ‘ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷಕ್ಕೆ ಗಮನಾರ್ಹ ಬೂಸ್ಟ್‌ ನೀಡಿದ್ದಾರೆ. ಇದು 2024ರ ಚುನಾವಣೆಗೂ ಮೊದಲು ಪಕ್ಷ ಗಳಿಸಿಕೊಳ್ಳುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ’ ಎಂದು ಹೇಳಿದೆ. ‘1995ರಿಂದ ಬಿಜೆಪಿ ಗುಜರಾತ್‌ನಲ್ಲಿ ಸೋತಿಲ್ಲ. ಇದು ರಾಜ್ಯದಲ್ಲಿ ಮೋದಿ ಜನಪ್ರಿಯತೆಯನ್ನು ತೋರಿಸುತ್ತದೆ’ ಎಂದು ಜಪಾನಿನ ನಿಕ್ಕಿ ಏಷ್ಯಾ ಹೇಳಿದೆ.

‘ಗುಜರಾತಲ್ಲಿ ಪ್ರಧಾನಿ ಮೋದಿ ಹಲವು ಚುನಾವಣಾ ರ್‍ಯಾಲಿಗಳನ್ನು ನಡೆಸಿದರು. ಅವರ ಸ್ಟಾರ್‌ ಪವರ್‌ ಅನ್ನು ಬಳಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು’ ಎಂದು ಜಪಾನೀಸ್‌ ಡೈಲಿ ವರದಿ ಮಾಡಿದೆ. ‘ಗುಜರಾತಲ್ಲಿ ಗಳಿಸಿರುವ ಜಯ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷಕ್ಕೆ ಬೂಸ್ಟ್‌ ನೀಡಿದೆ’ ಎಂದು ಇಂಡಿಪೆಂಡೆಂಟ್‌ ಹೇಳಿದೆ. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಸತತ 7ನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

ಗುಜರಾತಿನ ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ
ಅಹಮದಾಬಾದ್‌: ಗುಜರಾತ್‌ನಲ್ಲಿ ಮುಸ್ಲಿಂ ಸಮುದಾಯ ಬಾಹುಳ್ಯ ಇರುವ 12 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಿ ಅಚ್ಚರಿ ಮೂಡಿಸಿದೆ. ಆಪ್‌ ಹಾಗೂ ಒವೈಸಿ ಅವರ ಎಐಎಂಐಎಂಗಳು ಕಾಂಗ್ರೆಸ್‌ಗೆ ಹೊಡೆತ ನೀಡಿದ್ದು, ಪಕ್ಷದ ಸಾಂಪ್ರದಾಯಿಕ ಕ್ಷೇತ್ರಗಳಾಗಿದ್ದ ಇವು ಬಿಜೆಪಿ ಮಡಿಲಿಗೆ ಬಂದಿವೆ. ಮುಸ್ಲಿಂ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿರುವ 17 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್‌ 5 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಮೊದಲು ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಗಳಿಸುತ್ತಿತ್ತು. ಕಳೆದ 10 ವರ್ಷಗಳಲ್ಲಿ ಇವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದವು.

ಆದರೆ, ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಎಂಐಎಂನ 13 ಸ್ಪರ್ಧಿಗಳು ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮತಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಕ್ಷೇತ್ರಗಳಲ್ಲಿ ಸುಲಭವಾಗಿ ಬಿಜೆಪಿ ಜಯಗಳಿಸಿದೆ ಎಂದು ವಿಶ್ಲೇಷಣೆಗಳು ಹೇಳಿವೆ.

Latest Videos
Follow Us:
Download App:
  • android
  • ios