ನಾನು, ಭವಾನಿ ಹಾಸನ ಬಿಟ್ಟು ಎಲ್ಲೂ ಹೋಗಲ್ಲ: ಎಚ್.ಡಿ.ರೇವಣ್ಣ
ಭವಾನಿಯಾಗಲಿ, ನಾನಾಗಲಿ ಬೇರೆ ಜಿಲ್ಲೆಗೆ ಹೋಗಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ದೇವೇಗೌಡರು, ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು ಈಗಾಗಲೇ ಹೇಳಿದ್ದಾರೆ.
ಚಿಕ್ಕಮಗಳೂರು (ಏ.14): ಭವಾನಿಯಾಗಲಿ, ನಾನಾಗಲಿ ಬೇರೆ ಜಿಲ್ಲೆಗೆ ಹೋಗಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ದೇವೇಗೌಡರು, ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು ಈಗಾಗಲೇ ಹೇಳಿದ್ದಾರೆ. ನಾವೇಕೆ ಚಾಮರಾಜ ಕ್ಷೇತ್ರಕ್ಕೆ ಹೋಗಬೇಕು, ಅಲ್ಲಿ ನಮ್ಮ ನಾಯಕರು ಇದ್ದಾರೆ. ನಾನು, ನಮ್ಮ ಕಾರ್ಯಕರ್ತರು ಹಾಸನ ಜಿಲ್ಲೆ ಬಿಟ್ಟು ಎಲ್ಲೂ ಹೋಗಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.
ದತ್ತಾ ಮತ್ತೆ ಜೆಡಿಎಸ್‌ಗೆ, ರೇವಣ್ಣರಿಂದ ಘೋಷಣೆ: ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತಾ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ವಾಪಸಾಗುವ ನಿರ್ಧಾರ ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಹರ್ಷ ತಂದಿದೆ. ಖುದ್ದು ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರೇ ದತ್ತಾ ಅವರ ಕಡೂರಿನ ಮನೆಗೆ ಭೇಟಿ ನೀಡಿ ಜೆಡಿಎಸ್‌ಗೆ ಬರಮಾಡಿಕೊಂಡಿದ್ದಾರೆ. ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ದತ್ತಾ ಅವರು ಸ್ಪರ್ಧಿಸಲಿದ್ದಾರೆ. ಅವರ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಉಪಸ್ಥಿತರಿರಲಿದ್ದಾರೆ ಎಂದು ಎಚ್.ಡಿ.ರೇವಣ್ಣ ಘೋಷಿಸಿದ್ದಾರೆ.
ಮೊದಲ ದಿನವೇ 5 ನಾಮಪತ್ರ ಸ್ವೀಕಾರ: ಬಿಜೆಪಿಯಿಂದ ಇಬ್ಬರು, ಪ್ರಜಾಕೀಯದಿಂದ ಒಬ್ಬರು ನಾಮಪತ್ರ ಸಲ್ಲಿಕೆ
ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕಡೇಗಳಿಗೆಯಲ್ಲಿ ಟಿಕೆಟ್ ವಂಚಿತರಾಗಿದ್ದರಿಂದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸ್ವಾಭಿಮಾನಿ ಸಮಾವೇಶ ನಡೆಸಿ ದತ್ತಾ ಅವರು ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದರು. ಅದಕ್ಕೆ ದತ್ತಾ ಕೂಡ ಒಪ್ಪಿದ್ದರು. ಆದರೆ ಇದರ ಬೆನ್ನಲ್ಲೇ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದತ್ತಾ ಅವರನ್ನು ಕರೆಸಿಕೊಂಡು ಜೆಡಿಎಸ್‌ಗೆ ವಾಪಸಾಗುವಂತೆ ಮನವೊಲಿಸಿದ್ದರು. ಆ ಬಳಿಕ ಗುರುವಾರ ಯಗಟಿಯಲ್ಲಿರುವ ದತ್ತ ಅವರ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ದತ್ತಾ ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಜೆಡಿಎಸ್‌ಗೆ ಆಹ್ವಾನಿಸಿದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ ವೈಎಸ್‌ವಿ ದತ್ತಾ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ತಮ್ಮ ನಡುವಿನ ಸಂಬಂಧ ತಂದೆ-ಮಗನ ರೀತಿ ಇದೆ. ದೇವೇಗೌಡರ ಮನೆ ಬಾಗಿಲು ಬಡಿಯುವ ಅವಶ್ಯಕತೆ ತಮಗಿಲ್ಲ. ಅವರ ಮನೆಯಲ್ಲಿ ಮುಕ್ತವಾಗಿ ಓಡಾಡುವ ಅವಕಾಶ ತಮಗಿದೆ. ಒಂದು ಅತ್ಯಂತ ಕೆಟ್ಟವ್ಯವಸ್ಥೆ ಕಿತ್ತೊಗೆಯಲು ನಾನು ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾದ ಪರಿಸ್ಥಿತಿ ಉಂಟಾಗಿತ್ತು. ಎರಡು ದೊಡ್ಡ ರಾಜಕೀಯ ಪಕ್ಷಗಳನ್ನು ಅಲ್ಲಿನ ವ್ಯವಸ್ಥೆಯನ್ನು ಮಣಿಸಲು ಈ ಚುನಾವಣೆ ನನಗೆ ಅನಿವಾರ್ಯ. ಹಾಗಾಗಿ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದೆ. ಆದರೆ ದೇವೇಗೌಡರ ಇಚ್ಛೆಯಂತೆ ಮರಳಿ ಗೂಡಿಗೆ ಬಂದಿದ್ದೇನೆ. ಕಾರ್ಯಕರ್ತರ ರಕ್ಷಣೆಯೇ ನನ್ನ ಹೊಣೆ ಎಂದರು.
ಸೋನಿಯಾ, ರಾಹುಲ್ ಬಿಟ್ಟ ಮುರುಕಲು ಕುರ್ಚಿಗೆ ಖರ್ಗೆ ಅಧ್ಯಕ್ಷ: ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ
18ರಂದು ನಾಮಪತ್ರ: ನನ್ನ ಸ್ಪರ್ಧೆ ಕುರಿತು ನಿರ್ಧಾರ ಮಾಡುವವರು ಅಭಿಮಾನಿಗಳು. ಅವರ ನಿರ್ಧಾರವೇ ನನ್ನ ಮುಂದಿನ ರಾಜಕೀಯದ ನಡೆ ಆಗಿದೆ. ಏ.18 ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಅಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಡೂರಿಗೆ ಭೇಟಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ವೈಎಸ್‌ವಿ ದತ್ತ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.