Asianet Suvarna News Asianet Suvarna News

ಧರ್ಮ-ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವವರ ಬಗ್ಗೆ ಎಚ್ಚರ ಇರಲಿ: ಸಿಎಂ ಸಿದ್ದರಾಮಯ್ಯ

ಪಟ್ಟಬದ್ರ ಹಿತಾಸಕ್ತರು ಸಮಾಜದಲ್ಲಿ ದ್ವೇಷ ಹುಟ್ಟು ಹಾಕುವ, ಧರ್ಮ, ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Beware of those who sow poison in the name of religion caste Says CM Siddaramaiah gvd
Author
First Published Mar 6, 2024, 1:34 PM IST

ಶಿರಸಿ (ಮಾ.06): ಪಟ್ಟಬದ್ರ ಹಿತಾಸಕ್ತರು ಸಮಾಜದಲ್ಲಿ ದ್ವೇಷ ಹುಟ್ಟು ಹಾಕುವ, ಧರ್ಮ, ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬನವಾಸಿಯ ಕದಂಬೋತ್ಸವ ಮೈದಾನದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬನವಾಸಿ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ್ದ ಕದಂಬೋತ್ಸವ ಉದ್ಘಾಟಿಸಿ ಮಾತನಾಡಿದರು.

ಕದಂಬೋತ್ಸವವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ಇಂದಿನ ಯುವ ಪೀಳಿಗೆಗೆ ಇತಿಹಾಸ, ಸಂಸ್ಕೃತಿ, ಕಲೆ ತಿಳಿಯಬೇಕು ಎಂಬ ಉದ್ದೇಶದಿಂದ ಸರ್ಕಾರದ ವತಿಯಿಂದ ಕದಂಬೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದರು. ಮನುಷ್ಯ ಮನುಷ್ಯನ ನಡುವೆ ದ್ವೇಷ ಇಲ್ಲದೆ ಪ್ರೀತಿ ಇರಬೇಕು.‌ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಆದಿ ಕವಿ ಪಂಪ ಹೇಳಿದ್ದಾರೆ. ನಾವೆಲ್ಲರೂ ಕೂಡ ಮನುಷ್ಯರು. ಕೆಲ ಸ್ವಾರ್ಥಿಗಳು ಮನುಷ್ಯರನ್ನು ವಿಂಗಡಣೆ ಮಾಡಿ, ಜಾತಿ, ಧರ್ಮ ಹುಟ್ಟು ಹಾಕಿ ಮನುಷ್ಯರನ್ನು ವಿಭಜಿಸುತ್ತಾರೆ. ನಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಾದರೂ ನಾವೆಲ್ಲರೂ ಮನುಷ್ಯರು ಎಂದು ತಿಳದುಕೊಳ್ಳಬೇಕು ಎಂದರು.

ರಾಜಕೀಯ ಸಂಸ್ಕೃತಿ ಬದಲಾಯಿಸಿದ ಪ್ರಧಾನಿ ಮೋದಿ: ಜೆ.ಪಿ.ನಡ್ಡಾ

ಇತಿಹಾಸ ತಿಳಿದವರಿಂದ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯ. ಅದಕ್ಕಾಗಿ ಇತಿಹಾಸ ಮತ್ತು ಚರಿತ್ರೆಗಳನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಯುವಕರು ಹಳೆಯ ಸಂಸ್ಕೃತಿ ಪರಿಚಯಿಸುವುದಕ್ಕೆ ಅನೇಕ ಉತ್ಸವ ಆಚರಣೆ ಮಾಡಲಾಗುತ್ತಿದೆ. ಸಮಾಜ ಸುಧಾರಕರ ತತ್ವಾದರ್ಶ ಪರಿಚಯಿಸಿ, ಅವರ ಮಾರ್ಗದರ್ಶನಲ್ಲಿ ನಡೆದುಕೊಳ್ಳಬೇಕು. ಕೇವಲ ಬಾಯಿಯಲ್ಲಿ ಹೇಳಿದರೆ ಸಾಧ್ಯವಾಗುವುದಿಲ್ಲ. ಬುದ್ಧ, ಬಸವ, ಕನಕದಾಸರ ತತ್ವಾದರ್ಶದಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸಹಿಷ್ಣುತೆ ಮತ್ತು ಸಹಬಾಳ್ವೆ ಸಂವಿಧಾನದಲ್ಲಿ ಅಳವಡಿಕೊಂಡಿದ್ದೇವೆ. ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. 

ಜಾತಿ, ವರ್ಣ, ಭಾಷೆಗಳಿದ್ದರೂ, ಅಂತಿಮವಾಗಿ ಮನುಷ್ಯರಿಂದ ಕೂಡಿರುವ ಸಮಾಜ ನಿರ್ಮಾಣ ಮಾಡಬೇಕು ಎಂದರು. ೨೦೧೩ರಿಂದ ೨೦೧೮ ಮತ್ತು ೨೦೨೩ರಿಂದ ಕಾಂಗ್ರೆಸ್ ಸರ್ಕಾರ ೧೬೫ ಭರವಸೆ ನೀಡಿ, ೧೫೮ ಭರವಸೆ ಈಡೇರಿಸಿದೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸುವ ಪ್ರಯತ್ನ ಮಾಡಬೇಕು. ನಮ್ಮ ಸರ್ಕಾರ ಬಸವಾದಿ ಶರಣರು ಹೇಳಿದಂತೆ ನಡೆದಿದ್ದೇವೆ ಎಂದರು. ೨೦೧೮ರಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ೨೦೨೩ರಲ್ಲಿ ಮತ್ತೆ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿ ಗ್ಯಾರಂಟಿ ಈಡೇರಿಸಿದ್ದೇವೆ. ಅಧಿಕಾರಕ್ಕೆ ಬಂದು ೭ ತಿಂಗಳಲ್ಲಿ ಐದು ಗ್ಯಾರಂಟಿ ಈಡೇರಿಸಿ, ನುಡಿದಂತೆ ನಡೆದಿದ್ದೇವೆ. 

ರಾಜ್ಯದಲ್ಲಿ ಪ್ರತಿದಿನ ೫೯ ರಿಂದ ೫೫ ಲಕ್ಷ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.  ಜನರ ಬಳಿ ಹಣ ಉಳಿಸಬೇಕು ಎಂಬ ಕಾರಣಕ್ಕೆ ಈ ಯೋಜನೆ ಜಾರಿಗೊಳಿಸಿದ್ದೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಮಯೂರ ವರ್ಮರ ಕಾಲದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದ ಹಾಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ರಾಜ್ಯದ ಅನ್ನದಾತರಾಗಿರುವ ಸಿದ್ದರಾಮಯ್ಯ ಬರಬೇಕು ಎಂಬ ವಿನಂತಿ ಮೇರೆಗೆ ಬಹಳ ಖುಷಿಯಿಂದ ಆಗಮಿಸಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್, ರಾಜ್ಯವು ೧೪ ಬಾರಿ ಬರಗಾಲ ಎದುರಿಸಿದೆ. ಈ ವರ್ಷವೂ ಬನವಾಸಿ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದೆ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಬನವಾಸಿ ಭಾಗಕ್ಕೆ ಕುಡಿಯುವ ನೀರಿನ ಯೋಜನೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜನಸಾಮಾನ್ಯರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳಿದ ಬಳಿಕ ಘೋಷಿಸುತ್ತಾರೆಂಬ ವಿಶ್ವಾಸವಿದೆ. ಬನವಾಸಿ ಅಭಿವೃದ್ಧಿಗೆ ೨೦೧೬ ಮತ್ತು ೧೭ರಂದು ಬಜೆಟ್‌ನಲ್ಲಿ ಬನವಾಸಿ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಿದ್ದರು. ₹ ೧೧೦ ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಗೆ ಪ್ರಾರಂಭಿಸಿದ್ದರು. ಇದೆಲ್ಲ ಯೋಜನೆಯಿಂದ ಬನವಾಸಿಯಲ್ಲಿ ಅಭಿವೃದ್ಧಿ ಮೈಲುಗಲ್ಲು ಸ್ಥಾಪನೆಗೆ ಸಾಧ್ಯವಾಯಿತು ಎಂದರು.

ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿವೆ: ಜೆ.ಪಿ.ನಡ್ಡಾ

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿದರು. ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಮಾಜಿ ಶಾಸಕರಾದ ವಿ.ಎಸ್. ಪಾಟೀಲ, ಅಂಜಲಿ ನಿಂಬಾಳ್ಕರ, ಯುವ ಮುಖಂಡ ನಿವೇದಿತ್ ಆಳ್ವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿಐಷಾ ಖಾನ್, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಖ್ಯಾತ ನಿರೂಪಕಿ ದಿವ್ಯಾ ಆಲೂರ ನಿರೂಪಿಸಿದರು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ ವಂದಿಸಿದರು.

Follow Us:
Download App:
  • android
  • ios