'ಕಾಫಿಗೆ ಕರ್ಕೊಂಡ್ ಹೋಗಿ ಬಿಜೆಪಿಗೆ ಸೇರಿಸಿಬಿಟ್ರು': ಕೈ ನಾಯಕ ಮರಳಿ ಗೂಡಿಗೆ
ಉಪಚುನಾವಣೆಗೆ ಇನ್ನೂ 2 ದಿನ ಬಾಕಿ ಇರುವಾಗಲೇ ಬಿಜೆಪಿ ಸೇರಿದ್ದ ಕಾಂಗ್ರೆಸ್ ನಾಯಕ ಈಗ ಮರಳಿ ಗೂಡಿಗೆ ಸೇರಿಕೊಂಡಿದ್ದಾರೆ. ಕಾಫಿಗೆ ಕರ್ಕೊಂಡ್ ಹೋಗಿ ಬಿಜೆಪಿಗೆ ಸೇರಿಸಿಬಿಟ್ರು ಎಂದು ಗಂಭೀರ ಆರೋಪ ಸಹ ಮಾಡಿದ್ದಾರೆ.
ಬೆಂಗಳೂರು(ಡಿ.05): ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಿಬಿಎಂಪಿ ಕಾರ್ಪೊರೇಟರ್ ವಸಂತ್ಕುಮಾರ್ ಇಂದು (ಬುಧವಾರ) ಮತ್ತೆ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ.
ಬೈ ಎಲೆಕ್ಷನ್ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ಗೆ ಶಾಕ್: ಬಿಜೆಪಿ ಸೇರಿದ 'ಕೈ' ನಾಯಕ
ಇನ್ನೇನು ಮತದಾನಕ್ಕೆ 2 ದಿನ ಇರುವಾಗಲೇ ಶಿವಾಜಿನಗರದ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸಂಪಂಗಿರಾಮನಗರ ಬಿಬಿಎಂಪಿ ಕಾರ್ಪೋರೆಟರ್ ಆರ್. ವಸಂತ್ ಕುಮಾರ್ ಡಿ.03ರಂದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.
ಆದ್ರೆ, ಮತದಾನ ದಿನದಂದು ವಸಂತ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ವಾಪಸ್ ಕಾಂಗ್ರೆಸ್ ಸೇರಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಸಂತ್ ಕುಮಾರ್, "ಕಾಫಿ ಕುಡಿಯಲು ಕರದುಕೊಂಡು ಹೋಗಿ ಬಿಜೆಪಿ ಸೇರಿಸಿಕೊಂಡಿದ್ದರು. ಆ ಸಮಯದಲ್ಲಿ ನನಗೆ ಏನೂ ಮಾಡಲು ತೋಚಲಿಲ್ಲ. ನನ್ನಿಂದ ತಪ್ಪಾಗಿದೆ. ಅಧ್ಯಕ್ಷರಿಗೆ ತಿಳಿಸಿ, ಈಗ ಪಕ್ಷಕ್ಕೆ ವಾಪಸ್ ಬಂದಿದ್ದೇನೆ. ಹಣ ಪಡೆದು ಬಿಜೆಪಿ ಸೇರಿದ್ದು, ಈಗ ಮತ್ತೆ ಹಣ ಪಡೆದು ಕಾಂಗ್ರೆಸ್‌ಗೆ ಬಂದೆ ಎಂಬುದು ಸುಳ್ಳು," ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ , ಕಾಂಗ್ರೆಸ್ ಕಾರ್ಪೊರೇಟರ್ ವಸಂತ್ ಕುಮಾರ್ ಮರು ಕಾಂಗ್ರೆಸ್ ಸೇರಿದ್ದಾರೆ. ಸ್ವತಃ ಸಿಎಂ ಹಾಗೂ ಅವರ ಆಪ್ತರು ಹೀಗೆ ಮಾಡಿದ್ದಾರೆ ಅಂದರೆ ಅವರು ನೈತಿಕ ರಾಜಕಾರಣ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಶಿವಾಜಿನಗರ ಕ್ಷೇತ್ರದಲ್ಲಿ ಸೋಲುವ ಭಯದಿಂದ ಹೀಗೆ ಮಾಡಿದ್ದಾರೆ. ಬಿಜೆಪಿಯ ಈ ರೀತಿಯ ಕೀಳು ಮಟ್ಟದ ರಾಜಕಾರಣವನ್ನು ನಾನು ಖಂಡಿಸುತ್ತೇನೆ. ಗೆಲ್ಲಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ಒತ್ತಡ ಹೇರಿ ಕರೆದುಕೊಂಡು ಹೋಗಿದ್ದರು, ಆದರೆ ಈಗ ವಸಂತ್ ಮತ್ತೆ ವಾಪಸ್ಸಾಗಿದ್ದಾರೆ. ಬಿಜೆಪಿಯದ್ದು ಇದು ಹಳೇ ಚಾಳಿ, ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಕೆಂಡಾಮಂಡಲರಾದರು.
ಡಿಸೆಂಬರ್ 5ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: