ಬಿಜೆಪಿ ಅಧಿಕಾರಕ್ಕೇರಲಿದ್ದು, ಬೊಮ್ಮಾಯಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ: ಸಚಿವ ಅಶೋಕ
ನಮ್ಮ ಬಿಜೆಪಿ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬಾಕಿ ಉಳಿದಿರುವ ಐದು ತಿಂಗಳ ಅವಧಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದ ಅಶೋಕ್
ಮೂಡಲಗಿ(ಡಿ.21): ನಮ್ಮ ಬಿಜೆಪಿ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬಾಕಿ ಉಳಿದಿರುವ ಐದು ತಿಂಗಳ ಅವಧಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಪರ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನೂತನ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮತ್ತೇ ಬಿಜೆಪಿ ಅಧಿಕಾರಕ್ಕೇರಲಿದ್ದು, ಬಸವರಾಜ ಬೊಮ್ಮಾಯಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸುಮಾರು 28,982 ನಾಗರಿಕರಿಗೆ ಸರ್ಕಾರದ ಮಾಸಾಶನ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮದಿಂದ ಈ ಸಾಧನೆ ನಡೆದಿದೆ. ಜಿಲ್ಲಾಧಿಕಾರಿಗಳು ಹಳ್ಳಿಗಳತ್ತ ಬಂದು ವಾಸ್ತವ್ಯ ಹೂಡಿ ಸ್ಥಳದಲ್ಲಿಯೇ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವಂತೆ ಆದೇಶ ನೀಡಿದ್ದೇನೆ. ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ತಹಸೀಲ್ದಾರರು ಸೇರಿಕೊಂಡು ವಿವಿಧ ಮಾಸಾಶನಗಳನ್ನು ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರು ಮಾಡಲು ಸೂಚಿಸಿದ್ದೇನೆ. ಇದರಿಂದ ಬಡ ಫಲಾನುಭವಿಗಳ ತಾಲೂಕು ಕಚೇರಿ ಅಲೆದಾಟ ತಪ್ಪಿದೆ. ನಾನು ಕೂಡ ಕಂದಾಯ ಇಲಾಖೆಯಿಂದ ಇಡೀ ರಾಜ್ಯಾದ್ಯಂತ ಗ್ರಾಮ ವಾಸ್ತವ್ಯ ಹೂಡುತ್ತಿದ್ದೇನೆ ಎಂದು ತಿಳಿಸಿದರು.
ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ: ಯತ್ನಾಳ್ ವಿರುದ್ಧ ಸಚಿವ ನಿರಾಣಿ ಪರೋಕ್ಷ ವಾಗ್ದಾಳಿ
ಮೂಡಲಗಿ ತಾಲೂಕಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ .10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿರುವ ಹೊಸ ತಾಲೂಕುಗಳ ಪೈಕಿ ಮೂಡಲಗಿ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಆರಂಭಿಸಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಒತ್ತಡವೇ ಕಾರಣ ಎಂದರು.
ಶಾಸಕ ಬಾಲಚಂದ್ರ ಅವರು ಈ ಕ್ಷೇತ್ರದಲ್ಲಿ ಮಿಂಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಕೆಎಂಎಫ್ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ ವೇಳೆ ರಾಜ್ಯದಲ್ಲಿರುವ ಎಲ್ಲ ಸ್ಲಂ ಪ್ರದೇಶಗಳ ನಾಗರಿಕರಿಗೆ ಉಚಿತವಾಗಿ ಹಾಲನ್ನು ನೀಡಿದ್ದಾರೆ. ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಭಾಗದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಮುನ್ನಡೆಯೊಂದಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮೂಡಲಗಿ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆ ಉಪ ನೋಂದಣಾಧಿಕಾರಿ ಕಚೇರಿಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಈಡೇರಿಸಿದ್ದೇನೆ. ಈ ಕಚೇರಿಗೆ ತಾಲೂಕಿನ 48 ಗ್ರಾಮಗಳು ಸೇರ್ಪಡೆಯಾಗಿದ್ದು, ಸಾರ್ವಜನಿಕರಿಗೆ ಕಾರ್ಯ ಚಟುವಟಿಕೆಗಳು ಆರಂಭವಾಗಲಿದೆ. ಇನ್ನಾದರೂ ಮೂಡಲಗಿ ತಾಲೂಕಿನ ಜನತೆ ಬರುವ ಚುನಾವಣೆಯಲ್ಲಿ ಹೆಚ್ಚಿನ ಲೀಡ್ ನೀಡಿ ಮತ್ತೊಮ್ಮೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದರು.
ರಾಜ್ಯದಲ್ಲಿ 17 ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಲಾ .10 ಕೋಟಿ ಅನುದಾನ ಸರ್ಕಾರ ಮಂಜೂರು ಮಾಡಿದ್ದು, ಅದರಲ್ಲಿ ಮೂಡಲಗಿ ತಾಲೂಕಿಗೂ ಅನುದಾನ ಬಂದಿದೆ. ಫೆಬ್ರುವರಿ ತಿಂಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದ್ದು, ವಿವಿಧ ಇಲಾಖೆಗಳ ಏಳು ಕಚೇರಿಗಳು ಕರ್ತವ್ಯ ನಿರ್ವಹಿಸಲಿವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ .50 ರಿಂದ .100 ಕೋಟಿವರೆಗೆ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾರೆ. ಅದರಂತೆ ನಮ್ಮ ಕ್ಷೇತ್ರಕ್ಕೂ ರಸ್ತೆಗಳ ಸುಧಾರಣೆಗಾಗಿ ಹಣ ಬಿಡುಗಡೆ ಮಾಡಿದ್ದಾರೆ. ಮುಂದಿನ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ, ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಅವರ ಮೂಲಕ ಹೆಚ್ಚಿನ ಅನುದಾನ ತರುತ್ತೇನೆ ಎಂದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಬೇಕು. ನಾನು ಕೂಡ ಸಮಾಜದ ಮುಖಂಡನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ದಾಹ ಮುಕ್ತ ಮಾಡಲು .9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಅರಭಾವಿ ಕ್ಷೇತ್ರಕ್ಕೆ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದಾಗಿ .30 ಕೋಟಿ ಹಣವನ್ನು ಕುಡಿಯುವ ನೀರಿಗಾಗಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ದತ್ತಾತ್ರೇಯಬೋಧ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ, ಜಿಲ್ಲಾನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ, ತಹಸೀಲ್ದಾರ್ ಡಿ.ಜಿ.ಮಹಾತ್, ಉಪನೋಂದಣಿ ಅಧಿಕಾರಿ ಹರಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಚಿವ ಆರ್.ಅಶೋಕ್ ಅವರಿಗೆ ಕೃಷ್ಣನ ಕಂಚಿನ ಪ್ರತಿಮೆ ಹಾಗೂ ಸಚಿವ ಬೈರತಿ ಬಸವರಾಜ ಅವರಿಗೆ ಬೆಳ್ಳಿ ಗಣೇಶನ ಮೂರ್ತಿಯನ್ನು ನೀಡಿ ಸತ್ಕರಿಸಿದರು.
ಡಿ. 22ರಂದು ವಿಜಯೋತ್ಸವ ಆಚರಿಸುವುದು ಖಚಿತ: ಯತ್ನಾಳ
ನಮ್ಮ ಬಿಜೆಪಿ ಸರ್ಕಾರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪವರ್ ಫುಲ್ ಲೀಡರ್. ಬೆಂಗಳೂರಿಗೆ ಬಂದಾಗಲೆಲ್ಲ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟಹಲವಾರು ಮಂತ್ರಿಗಳನ್ನು ಭೇಟಿ ಮಾಡಿ ಅರಭಾವಿ ಅಭಿವೃದ್ಧಿ ಕೆಲಸಗಳಿಗೆ ಕಡತಗಳಿಗೆ ಅನುಮತಿ ಪಡೆದುಕೊಂಡೇ ಹೋಗುತ್ತಾರೆ ಅಂತ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮೂಡಲಗಿ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆ ಉಪ ನೋಂದಣಾಧಿಕಾರಿ ಕಚೇರಿಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಈಡೇರಿಸಿದ್ದೇನೆ. ಈ ಕಚೇರಿಗೆ ತಾಲೂಕಿನ 48 ಗ್ರಾಮಗಳು ಸೇರ್ಪಡೆಯಾಗಿದ್ದು, ಸಾರ್ವಜನಿಕರಿಗೆ ಕಾರ್ಯ ಚಟುವಟಿಕೆಗಳು ಆರಂಭವಾಗಲಿದೆ. ಇನ್ನಾದರೂ ಮೂಡಲಗಿ ತಾಲೂಕಿನ ಜನತೆ ಬರುವ ಚುನಾವಣೆಯಲ್ಲಿ ಹೆಚ್ಚಿನ ಲೀಡ್ ನೀಡಿ ಮತ್ತೊಮ್ಮೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಅಂತ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.