Asianet Suvarna News Asianet Suvarna News

ಡಿ. 22ರಂದು ವಿಜಯೋತ್ಸವ ಆಚರಿಸುವುದು ಖಚಿತ: ಯತ್ನಾಳ

ನಮ್ಮ ಹೋರಾಟ ನಿರಂತರವಾಗಿರಬೇಕಿದ್ದು, ನಮ್ಮ ಪಾದಯಾತ್ರೆ ಸುವರ್ಣ ಸೌಧ ಮುಟ್ಟುವುದರೊಳಗಾಗಿ ಸಿಹಿ ಸುದ್ದಿ ಬರಲಿದ್ದು, ವಿಜಯೋತ್ಸವ ಆಚರಿಸುವುದು ಗ್ಯಾರಂಟಿ ಎಂದ ಬಸನಗೌಡ ಪಾಟೀಲ ಯತ್ನಾಳ 

BJP MLA Basanagouda Patil Yatnal Talks Over Panchamasali 2A Reservation grg
Author
First Published Dec 20, 2022, 8:00 PM IST

ಸವದತ್ತಿ(ಡಿ.20):  ಸಮಾಜದ ಜನರು ಮೀಸಲಾತಿ ಕೊಡುವುದರ ಬಗ್ಗೆ ಚಿಂತೆ ಬಿಡಿ ವಿಜಯೋತ್ಸವದತ್ತ ಕಡೆಗೆ ಎಲ್ಲರೂ ಗಮನ ಹರಿಸಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮಾಜಕ್ಕೆ ಕರೆ ಕೊಟ್ಟರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ನಾವು ಬರಿಗೈಯಲ್ಲಿ ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ನಿರಂತರವಾಗಿರಬೇಕಿದ್ದು, ನಮ್ಮ ಪಾದಯಾತ್ರೆ ಸುವರ್ಣ ಸೌಧ ಮುಟ್ಟುವುದರೊಳಗಾಗಿ ಸಿಹಿ ಸುದ್ದಿ ಬರಲಿದ್ದು, ವಿಜಯೋತ್ಸವ ಆಚರಿಸುವುದು ಗ್ಯಾರಂಟಿ ಎಂದರು.

ಸಂವಿಧಾನತ್ಮಕವಾಗಿ ಹಿಂದುಳಿದ ಆಯೋಗದ ವರದಿಯಂತೆ ಮುಖ್ಯಮಂತ್ರಿಗಳು ಅದರ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದು, ವಿರೋಧ ಪಕ್ಷದವರು ಇದಕ್ಕೆ ಬೆಂಬಲ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕುರಿತು ಸೂಕ್ಷ್ಮವಾಗಿ ನನ್ನೊಂದಿಗೆ ಮಾತನಾಡಿದ್ದು, ಈ ವಿಷಯವನ್ನು ಈ ಸಮಾವೇಶದಲ್ಲಿ ಮಾತನಾಡುವುದು ಬೇಡ. ಅದನ್ನು ಡಿ.22ರಂದು ಹೇಳುವದಾಗಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯನವರೇ ಅಲ್ಲಿ ಸಾವರ್ಕರ್ ಬದಲು ದಾವೂದ್ ಇಬ್ರಾಹಿಂ ಫೋಟೋ ಹಾಕಬೇಕಿತ್ತೇ?: ಕೇಂದ್ರ ಸಚಿವ ಪ್ರಲ್ಹಾದ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಯುತ ಹೇಳಿಕೆಯನ್ನು ನೀಡಿದ್ದು, ಅಧಿವೇಶನದ ಅವಧಿಯಲ್ಲಿ ನಮಗೆ ಮೀಸಲಾತಿಯನ್ನು ನೀಡುವ ಕಿವಿಮಾತನ್ನು ಹೇಳಿದ್ದಾರೆ ಎಂದು ಹೇಳಿದರು.

ಎಲ್ಲ ಪಕ್ಷಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರಿಗೆ ಅವಕಾಶ ನೀಡಬೇಕಿದ್ದು, ಟಿಕೆಟ್‌ ಹಂಚಿಕೆಯ ಕೋರ್‌ ಕಮೀಟಿಯಲ್ಲಿ ನಮ್ಮ ಸಮಾಜದವರು ಕಡ್ಡಾಯವಾಗಿ ಇರಲೇಬೇಕೆಂದು ಒತ್ತಾಯಿಸಿದರು. ನೊಂದಿರುವ ಎಲ್ಲ ಸಮಾಜಗಳಿಗೆ ಮೀಸಲಾತಿ ದೊರೆಯಬೇಕಿದೆ ಎಂದ ಅವರು, ಅದನ್ನು ಪಡೆದುಕೊಳ್ಳವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಲುಮತಕ್ಕೆ ಎಸ್‌ಟಿ ಮೀಸಲಾತಿ ನೀಡು ಎಂದು ಹೇಳಿದವರು ನಾವೇ ಆಗಿದ್ದು, ಪಂಚಮಸಾಲಿ ಸಮಾಜದವರು ಮತ್ತೊಬ್ಬರ ಏಳ್ಗೆಗೆಗೆ ಚಿಂತನೆ ಮಾಡಿದವರು ಎಂದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಗಳು ಹೇಳಿದ ಮಾತು ಇಂದು ನಮ್ಮಲ್ಲಿ ನಿರಾಶೆ ಮೂಡಿಸಿದ್ದು, ಇಂದಿನಿಂದ ವಿರಾಟ್‌ ಸಮಾವೇಶವನ್ನು ಆರಂಭಿಸಲಾಗುತ್ತಿದೆ. ಸವದತ್ತಿಯಿಂದ ಸುವರ್ಣ ಸೌಧದವರೆಗೆ ಪಾದಯಾತ್ರೆಯನ್ನು ಇಂದಿನಿಂದಲೇ ಪ್ರಾರಂಭಿಸಿಸುತ್ತಿದ್ದು, ಡಿ.22ರೊಳಗೆ ನಮಗೆ ಸಿಹಿ ಸುದ್ದಿ ಬರದೇ ಹೋದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕುವುದು ಶತಃಸಿದ್ದ ಎಂದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಮೀಸಲಾತಿ ವಿಷಯದಲ್ಲಿ ರಾಜಕಾರಣ ಬೇಡವಾಗಿದ್ದು, ಸಮಾಜದ ಬಡಜನರಿಗೆ ನ್ಯಾಯ ಒದಗಿಸುವ ಕಾರ್ಯ ನಡೆಯಬೇಕಿದೆ. ಮುಖ್ಯಮಂತ್ರಿಗಳು ಒಮ್ಮೆಯಲ್ಲ 4 ಬಾರಿ ಆಶ್ವಾಸನೆ ನೀಡಿ ಮೀಸಲಾತಿ ಬಗ್ಗೆ ಹಿಂದೇಟು ಹಾಕುತ್ತಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರಿಂದ ನಾವು ಒಪ್ಪಿಗೆ ಕೊಡಿಸುತ್ತಿದ್ದು, ಆಡಳಿತ ಪಕ್ಷದ ಜವಾಬ್ದಾರಿ ಇಲ್ಲಿ ಪ್ರಮುಖವಾಗಿದೆ ಎಂದರು.

ಸಂಕ್ರಾಂತಿಗೆ ವಿದ್ಯುತ್‌ ಮಗ್ಗ ನೇಕಾರರಿಗೂ 5000 ರು.: ಸಿಎಂ ಬೊಮ್ಮಾಯಿ

ಅರವಿಂದ ಬೆಲ್ಲದ ಮಾತನಾಡಿ, ಮುಖ್ಯಮಂತ್ರಿಗಳು ಮೀಸಲಾತಿ ಕೊಡುತ್ತಾರೆಂಬ ವಿಶ್ವಾಸ ನಮಗಿದ್ದು, ವಿರೋಧ ಪಕ್ಷದ ನಾಯಕರು ತಮ್ಮ ನಿಲುವ ಏನೆಂಬುದನ್ನು ಸ್ಪಷ್ಟಪಡಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಿ ಎಂದು ಹೇಳಿದರು.
ವಿಜಯಾನಂದ ಕಾಶಪ್ಪನವರ ಮಾತನಾಡಿ, ಮಾತು ತಪ್ಪಿ ಅಧಿಕಾರ ಕಳೆದುಕೊಂಡ ಬಿ.ಎಸ್‌.ಯಡಿಯೂರಪ್ಪನವರ ನಂತರ ಈಗ ಬೊಮ್ಮಾಯಿಯವರ ಪಾಳೆ ಬಂದಿದೆ. ಮೀಸಲಾತಿ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಹೋದಲ್ಲಿ ಮುಖ್ಯಮಂತ್ರಿಗಳು ಕುರ್ಚಿ ಕಳೆದುಕೊಳ್ಳುವುದು ಗ್ಯಾರಂಟಿ ಎಂದರು.

ಈರಣ್ಣ ಕಡಾಡಿ ಮಾತನಾಡಿದರು. ವಿನಯ ಕುಲಕರ್ಣಿ, ರತ್ನಕ್ಕ ಮಾಮನಿ, ಪಂಚನಗೌಡ ದ್ಯಾಮನಗೌಡರ, ವಿರುಪಾಕ್ಷ ಮಾಮನಿ, ಅಲ್ಲಮಪ್ರಭು ಪ್ರಭುನವರ ಮಾತನಾಡಿದರು. ಇದಕ್ಕೂ ಮುಂಚೆ ಎಪಿಎಂಸಿಯಿಂದ ಸಹಸ್ರಾರು ಸಂಖ್ಯೆಯ ಪಂಚಮಸಾಲಿ ಜನಾಂಗದವರೊಂದಿಗೆ ಬೃಹತ್‌ ರಾರ‍ಯಲಿ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳ ಹಾಗೂ ಕುಂಭ ಮೇಳಗಳೊಂದಿಗೆ ರಾರ‍ಯಲಿಯು ತಾಲೂಕು ಕ್ರೀಡಾಂಗಣ ತಲುಪಿತು.
ಈ ವೇಳೆ ಶಂಕರ ಮಾಡಲಗಿ, ರುದ್ರಣ್ಣ ಚಂದರಗಿ, ಪಿ.ಐ.ಪಾಟೀಲ, ಡಾ.ವಿ.ಐ.ಪಾಟೀಲ, ರಾಜಶೇಖ ಕಾರದಗಿ, ಡಾ.ಎನ್‌.ಸಿ.ಬೆಂಡಿಗೇರಿ, ಬಸವರಾಜ ಕಾರದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಜಶೇಖರ ಕಾರದಗಿ ಸ್ವಾಗತಿಸಿದರು.
 

Follow Us:
Download App:
  • android
  • ios