ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, 3000 ವರ್ಷಗಳ ಹಿಂದೂ ಧರ್ಮವನ್ನು 100 ವರ್ಷಗಳ ಹಿಂದಿನ ಸಂಘಟನೆಯು ತನ್ನ ಬೆಳವಣಿಗೆಗೆ ಬಳಸಿಕೊಳ್ಳುತ್ತಿದೆ. ಹಿಂದುತ್ವ ಎಂಬುದು ಇತ್ತೀಚಿನ ಪರಿಕಲ್ಪನೆಯಾಗಿದ್ದು, ಹಿಂದೂ ರಾಷ್ಟ್ರ ಅಪಾಯಕಾರಿ ಎಂದು ಅಂಬೇಡ್ಕರ್ ಹೇಳಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಬೆಂಗಳೂರು (ಜು.7): 3000 ವರ್ಷಗಳ ಇತಿಹಾಸ ಇರುವ ಹಿಂದು ಧರ್ಮವನ್ನು 100 ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಘಟನೆ ತನ್ನ ಬೆಳವಣಿಗೆಗಾಗಿ ಬಳಸಿಕೊಂಡಿದೆ. 100 ವರ್ಷಗಳ ಹಿಂದೆ ಹಿಂದುತ್ವ ಎಂಬುದೇ ಇರಲಿಲ್ಲ. ಅದನ್ನು ಹುಟ್ಟಿ ಹಾಕಿ, ಮುಂದುವರಿಸಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಭಾರತ ಹಿಂದೂ ರಾಷ್ಟ್ರವಾದ್ರೆ ಸ್ವಾತಂತ್ರ್ಯ ಹೋಗುತ್ತೆ: ಯತೀಂದ್ರ

ಭಾರತ ಹಿಂದು ರಾಷ್ಟ್ರವಾದರೆ ಸ್ವಾತಂತ್ರ್ಯ ಹೋಗುತ್ತದೆ ಎಂಬ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿರುವ ಪ್ರಿಯಾಂಕ್‌, ಮನುವಾದಿಗಳು ಇರಬಾರದು ಎಂಬ ಮಾತು ಹಿಂದಿನಿಂದಲೂ ಇದೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹಿಂದು ರಾಷ್ಟ್ರ ನಿರ್ಮಾಣ ಅಪಾಯಕಾರಿ ಎಂದಿದ್ದರು. ಅದನ್ನು ಅವರು ತಮ್ಮ ಪುಸ್ತಕಗಳಲ್ಲಿಯೂ ಬರೆದಿದ್ದಾರೆ. ಜಾತಿ ವ್ಯವಸ್ಥೆ ಎಷ್ಟು ಅಪಾಯಕಾರಿ ಎಂಬುದನ್ನು ರಾಷ್ಟ್ರಕ್ಕೆ ಡಾ. ಅಂಬೇಡ್ಕರ್‌ ಅವರು ತಿಳಿಸಿದ್ದಾರೆ. ಬಿಜೆಪಿ ನಾಯಕರು ಆ ಪುಸ್ತಕಗಳನ್ನು ಓದಲಿ. ಆದರೆ, ಬಿಜೆಪಿ ನಾಯಕರು ಮನುಸ್ಮೃತಿಯನ್ನು ಓದುತ್ತಾರಷ್ಟೇ ಎಂದರು.

ಸಾವರ್ಕರ್ ಹಿಂದುತ್ವ ತಂದರು

ಸನಾತನ ಹಿಂದು ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೂರು ವರ್ಷಗಳ ಹಿಂದೆ ನಮ್ಮ ಹಿಂದು ಧರ್ಮ ಮಾತ್ರ ಇತ್ತು. ಆದರೆ, ಸಾವರ್ಕರ್‌ ಅವರು ಹಿಂದುತ್ವವನ್ನು ತಂದರು. ಅಲ್ಲದೆ, ಆ ಹಿಂದುತ್ವವನ್ನು 100 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘಟನೆ ತನ್ನ ಬೆಳವಣಿಗೆಗೆ ಬಳಸಿಕೊಂಡಿತು. ಡಾ. ಅಂಬೇಡ್ಕರ್‌, ನಾರಾಯಣ ಗುರು, ಬಸವಣ್ಣ ಅವರಂತಹ ಮಹನೀಯರು ಜಾತಿ ವ್ಯವಸ್ಥೆ ಇರಬಾರದು ಎಂದು ಪ್ರತಿಪಾದಿಸಿದರು. ಸಂವಿಧಾನದಲ್ಲಿ ಸಾಮಾಜಿಕ, ಆರ್ಥಿಕ ಸಮಾನತೆಯನ್ನು ತಿಳಿಸಲಾಗಿದೆ. ಅದನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.