Asianet Suvarna News Asianet Suvarna News

ಬಿಜೆಪಿ ಬಿಟ್ಟು ಜೆಡಿ​ಎಸ್‌ ಸೇರಿದ್ದ ಆಯನೂರು ಮಂಜುನಾಥ್‌ ಈಗ ಕಾಂಗ್ರೆಸ್‌ಗೆ?

ರಾಜ್ಯದಲ್ಲಿ ಹಾಲಿ ಬಿಜೆಪಿಯಲ್ಲಿರುವ ಬಾಂಬೆ ಬಾಯ್ಸ್‌ ಘರ್‌ವಾಪ್ಸಿ ಸುದ್ದಿಯ ಬೆನ್ನಲ್ಲೇ ಶಿವಮೊಗ್ಗದಲ್ಲಿಯೂ ಅಂತಹದೇ ಘಟನೆಗಳು ಕಾಣುತ್ತಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದ ಮಾಜಿ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. 

ayanur manjunath likely join congress gvd
Author
First Published Aug 18, 2023, 5:33 PM IST

ಗೋಪಾಲ್‌ ಯಡಗೆರೆ

ಶಿವಮೊಗ್ಗ (ಆ.18): ರಾಜ್ಯದಲ್ಲಿ ಹಾಲಿ ಬಿಜೆಪಿಯಲ್ಲಿರುವ ಬಾಂಬೆ ಬಾಯ್ಸ್‌ ಘರ್‌ವಾಪ್ಸಿ ಸುದ್ದಿಯ ಬೆನ್ನಲ್ಲೇ ಶಿವಮೊಗ್ಗದಲ್ಲಿಯೂ ಅಂತಹದೇ ಘಟನೆಗಳು ಕಾಣುತ್ತಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದ ಮಾಜಿ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌, ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಮತ್ತವರ ಬೆಂಬಲಿಗರು ತಮ್ಮ ಮಾತೃಪಕ್ಷವನ್ನು ತೊರೆದು ಜೆಡಿಎಸ್‌ ಸೇರಿದ್ದರು. ಸಾಗರದಲ್ಲಿ ಕಾಂಗ್ರೆಸ್‌ನಲ್ಲಿಯೇ ಇದ್ದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಸೇರಿದಂತೆ ಹಲವು ಪ್ರಭಾವಿ ನಾಯಕರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. 

ಸೊರಬದಲ್ಲಿ ಕಾಂಗ್ರೆಸ್‌ನಲ್ಲಿದ್ದ ರಾಜು ತಲ್ಲೂರು ಬಿಜೆಪಿ ಸೇರಿದ್ದರು. ಶಿಕಾರಿಪುರದಲ್ಲಿ ಜೆಡಿಎಸ್‌ನಲ್ಲಿದ್ದ ಪ್ರಭಾವಿ ನಾಯಕ ಎಚ್‌.ಟಿ. ಬಳಿಗಾರ್‌ ಬಿಜೆಪಿ ಸೇರಿದ್ದರು. ಆದರೆ, ಶಿಕಾರಿಪುರದಲ್ಲಿ ಬಳಿಗಾರ್‌ ಹೊರತಾಗಿ ಉಳಿದವರೆಲ್ಲರ ಲೆಕ್ಕಾಚಾರ ತಲೆಕೆಳಗಾಗಿ ಹೋಯಿತು. ಹೀಗಾಗಿ, ಪುನಃ ವಲಸೆ ರಾಜಕಾರಣ ಶುರುವಾದಂತೆ ಕಾಣುತ್ತಿದೆ. ಚುನಾವಣೆ ವೇಳೆಯಲ್ಲಿಯೂ ಆಯನೂರು ಮಂಜುನಾಥ್‌ ಅವರೇ ಈ ವಲಸೆಗೆ ಪ್ರಥಮ ಮುನ್ನುಡಿ ಬರೆದಿದ್ದರು. ಈಗಲೂ ಅವರೇ ಪ್ರಥಮವಾಗಿ ಮುನ್ನುಡಿ ಬರೆಯುವಂತೆ ಕಾಣುತ್ತಿದೆ.

ಧಾರವಾಡ ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಸಚಿವ ಪರಮೇಶ್ವರ್!

ಜೆಡಿಎಸ್‌ಗೆ ಪಕ್ಷಾಂತರ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಪಡೆದು ಸ್ಪರ್ಧಿಸಿದ್ದು, ಭಾರಿ ಹವಾ ಸೃಷ್ಟಿಸಿದ್ದರು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿ ಅತ್ಯಂತ ಕಡಿಮೆ ಮತ ಪಡೆದಿದ್ದರು. ಇನ್ನೊಂದೆಡೆ ಇವರ ಬೆನ್ನಿಗೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ನೀಡಲಿಲ್ಲ ಎಂದು ಬೇಸರಿಸಿಕೊಂಡು ಜೆಡಿಎಸ್‌ ಸೇರಿದ್ದ ಕೆ.ಬಿ. ಪ್ರಸನ್ನಕುಮಾರ್‌ ಅವರು ಕೂಡ ಸರ್ಕಾರ ರಚನೆಯಲ್ಲಿ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯಕ್ಕೆ ಅಡಿಪಾಯ ಆಗುತ್ತದೆ ಎಂದು ಭಾವಿಸಿದ್ದರು. ಅವರ ಲೆಕ್ಕಾಚಾರ ಕೂಡ ಉಲ್ಟಾಆಯಿತು.

ಸಿಎಂ ಭೇಟಿಗೆ ದಿನಾಂಕ ಸಿಕ್ಕಿಲ್ಲ: ಆಯನೂರು ಮಂಜುನಾಥ್‌ ಜೆಡಿಎಸ್‌ಗೆ ಹೋಗುವ ಮುನ್ನ ಕಾಂಗ್ರೆಸ್‌ ಬಾಗಿಲು ಬಡಿದಿದ್ದರು. ಆದರೆ, ಆಗ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಎಲ್ಲ 12 ಮಂದಿ ಒಟ್ಟುಗೂಡಿ ಆಯನೂರು ಪ್ರವೇಶವನ್ನು ವಿರೋಧಿಸಿದ್ದರು. ಹೀಗಾಗಿ, ಕೊನೆಗಳಿಗೆವರೆಗೂ ಆಯನೂರ್‌ಗೆ ಕಾಂಗ್ರೆಸ್‌ ಪ್ರವೇಶ ಸಿಗಲೇ ಇಲ್ಲ. ಇದೀಗ ಪುನಃ ಕಾಂಗ್ರೆಸ್‌ ಬಾಗಿಲು ಬಡಿಯತೊಡಗಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಬಂದಿರುವ ಆಯನೂರು ಮಂಜುನಾಥ್‌ ಅವರು ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಅವರ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಇಲ್ಲಿ ಹಸಿರು ಸಿಗ್ನಲ್‌ ಸಿಕ್ಕರೆ ಸೇರ್ಪಡೆ ಖಚಿತವಾಗಬಹುದು.

ಈಗ ಎದುರಿಗೆ ವಿಧಾನ ಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಇದೆ. ಈ ಚುನಾವಣೆ ದೃಷ್ಟಿಯಿಂದಲೇ ಆಯನೂರು ಮಂಜುನಾಥ್‌ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿಯೇ ಈಗಲೂ ಪಕ್ಷದಲ್ಲಿ ಆಯನೂರು ಪ್ರವೇಶಕ್ಕೆ ವಿರೋಧ ಇದ್ದೇ ಇದೆ. ಆದರೆ, ಆಗಿನಷ್ಟುಇಲ್ಲ. ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಿಂದ ಮಾತ್ರ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ.

4 ಪಕ್ಷ​ಗಳ ರುಚಿ ಕಂಡಿ​ರುವ ಆಯನೂರು: ಆರ್‌ಎಸ್‌ಎಸ್‌, ಕಾರ್ಮಿಕ ಸಂಘಟನೆ, ರಾಜಕಾರಣ ಎಲ್ಲ ಪಟ್ಟುಗಳನ್ನು ಅನಾಯಸವಾಗಿ ದಕ್ಕಿಸಿಕೊಂಡಿರುವ, ಸಂದರ್ಭಕ್ಕೆ ತಕ್ಕಂತೆ ತಮ್ಮ ವಾಕ್ಚಾತುರ್ಯದ ಮೂಲಕ ತಮ್ಮ ಎಲ್ಲ ನಡೆಯನ್ನು ಸಮರ್ಥಿಸಿಕೊಳ್ಳುವ ಸಾಮಥ್ಯವಿರುವ ಆಯನೂರು ಪಕ್ಷಾಂತರ ಮುಖೇ​ನ ನಾಲ್ಕು ಪಕ್ಷಗಳ ರುಚಿ ನೋಡಿದ್ದಾರೆ. ದೇಶದಲ್ಲಿ ಸಂವಿಧಾನಾತ್ಮಕವಾಗಿ ಇರುವ 4 ಸದನಗಳಾದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತು ಸದಸ್ಯರಾಗುವ ಮೂಲಕ ಈ ಅಪರೂಪದ ಸಾಧನೆ ಮಾಡಿದ ಕೆಲವರಲ್ಲಿ ಆಯನೂರು ಕೂಡ ಒಬ್ಬರು. ಆದರೆ ಈ ನಾಲ್ಕು ಸ್ಥಾನಗಳನ್ನು ಅವರಿಗೆ ನೀಡಿದ್ದು ಮಾತ್ರ ಬಿಜೆಪಿ!

ಬಿಜೆಪಿಯ ಕಟ್ಟಾಳುವಾಗಿ ಬೆಳೆದ ಅವರು ಬಿಜೆಪಿಯಿಂದ ಶಾಸಕ, ಸಂಸದರಾಗಿ ಅಧಿಕಾರ ಅನುಭವಿಸಿದ ಬಳಿಕ 2004 ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದ ಎಸ್‌. ಬಂಗಾರಪ್ಪ ಅವರಿಗೆ ಲೋಕಸಭಾ ಟಿಕೆಟ್‌ ನೀಡಿದರು ಎಂಬ ಕಾರಣಕ್ಕೆ ಬಿಜೆಪಿಗೆ ರಾಜಿನಾಮೆ ನೀಡಿ, ಕಾಂಗ್ರೆಸ್‌ ಸೇರಿ ಟಿಕೆಟ್‌ ಪಡೆದು ಚುನಾವಣೆಗೆ ರೋಚಕತೆ ತಂದಿದ್ದರು. ಬಳಿಕ ಕಾಂಗ್ರೆಸ್‌ ಬಿಟ್ಟು ವಿಜಯ ಮಲ್ಯ ಅವರ ಜನತಾಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಕೆಲವೇ ತಿಂಗಳಲ್ಲಿ ಮಲ್ಯ ಅವರ ಜೊತೆ ಹೊಂದಾಣಿಕೆಯಾಗದೇ ಪುನಃ ಬಿಜೆಪಿಗೆ ಆಗಮಿಸಿದರು. ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ, ಬಳಿಕ ವಿಧಾನ ಪರಿಷತ್ತು ಸದಸ್ಯರಾಗಿ ಅಧಿಕಾರ ಅನುಭವಿಸಿದರು.

2023ರಲ್ಲಿ ಬಿಜೆಪಿಯಿಂದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಅವರ ಬದಲಿಗೆ ತಮಗೆ ಟಿಕೆಟ್‌ ನೀಡಬೇಕೆಂದು ಕೋರಿದರು. ಆರಂಭದಲ್ಲಿ ಈಶ್ವರಪ್ಪ ಬಿಟ್ಟು ಯಾರಿಗೇ ಟಿಕೆಟ್‌ ನೀಡಿದರೂ ತಾವು ಸ್ಪರ್ಧಿಸದೇ ಬೆಂಬಲ ನೀಡುತ್ತೇನೆ. ಒಂದುಪಕ್ಷ ಈಶ್ವರಪ್ಪ ಅಥವಾ ಅವರ ಕುಟುಂಬದವರಿಗೇ ಟಿಕೆಟ್‌ ನೀಡಿದರೆ ತಮ್ಮ ಸ್ಪರ್ಧೆ ಖಚಿತ ಎಂದು ಬಂಡಾಯ ಹಾರಿಸಿ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ್ದ ಆಯನೂರು ಮಂಜುನಾಥ್‌, ಬಿಜೆಪಿಯ ಈಶ್ವರಪ್ಪ ಅವರಿಗೆ ಟಿಕೆಟ್‌ ನೀಡದೇ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ನೀಡಿದಾಗ ತಮ್ಮ ವರಸೆ ಬದಲಿಸಿದರು. ಬಿಜೆಪಿ ಟಿಕೆಟ್‌ ನೀಡಿದ ಚನ್ನಬಸಪ್ಪ ಅವರು ಈಶ್ವರಪ್ಪ ಅವರ ಪ್ರತಿರೂಪ. ಹೀಗಾಗಿ, ತಮ್ಮ ಸ್ಪರ್ಧೆ ನಿಶ್ಚಿತ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಕಲುಷಿತ ನೀರು ಸೇವನೆ ಪ್ರಕರಣ: ಕವಾಡಿಗರಹಟ್ಟಿ ಅಭಿವೃದ್ಧಿಗೆ 4 ಕೋಟಿ ಅನುದಾನ ಮಂಜೂರು!

ತಮಗೆ ಟಿಕೆಟ್‌ ಸಿಗದಿರುವುದು ಖಚಿತ ಆಗುತ್ತಿದ್ದಂತೆ ಆಯ​ನೂರು ಕಾಂಗ್ರೆಸ್‌ ಕದ ತಟ್ಟಿದರು. ಅಲ್ಲಿಗೆ ಪ್ರವೇಶ ಸಾಧ್ಯವೇ ಇಲ್ಲ ಎನಿಸಿದಾಗ ಚುನಾವಣೆಗೆ ಹತ್ತು ದಿನ ಇರುವಾಗ ಜೆಡಿಎಸ್‌ ಸೇರಿ ಟಿಕೆಟ್‌ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಸೋಲು ಬಹುತೇಕ ಹೀನಾಯವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆಯ​ನೂರು ಮಂಜು​ನಾಥ್‌ ಈಗ ಮತ್ತೆ ಕಾಂಗ್ರೆಸ್‌ ಬಾಗಿಲು ಬಡಿಯುತ್ತಿದ್ದಾರೆ. ಇಲ್ಲಿಯೂ ಅವಕಾಶ ಸಿಗದಿದ್ದರೆ ಮುಂದೇನು ಎಂಬುದನ್ನು ಅವರೇ ಹೇಳಬೇಕು. ಮತ್ತು ಮುಂದಿನ ಅವರ ನಡೆಯನ್ನು ಕೂಡ ಸಮರ್ಥವಾಗಿಯೇ ಸಮರ್ಥಿಸಿಕೊಳ್ಳುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios