ಕಲುಷಿತ ನೀರು ಸೇವನೆ ಪ್ರಕರಣ: ಕವಾಡಿಗರಹಟ್ಟಿ ಅಭಿವೃದ್ಧಿಗೆ 4 ಕೋಟಿ ಅನುದಾನ ಮಂಜೂರು!
ಒಂದು ವಾರದ ಹಿಂದಷ್ಟೇ ಕಲುಷಿತ ನೀರು ಸೇವೆನೆಯಿಂದ ಕವಾಡಿಗರಹಟ್ಟಿಯಲ್ಲಿ ಸಾವು ನೋವಿನ ದುರಂತವೇ ಸಂಭವಿಸಿತ್ತು. ಆದ್ರೆ ಈಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಆ ಬಡಾವಣೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿರೋದು ಖುಷಿಯ ವಿಚಾರ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.18): ಒಂದು ವಾರದ ಹಿಂದಷ್ಟೇ ಕಲುಷಿತ ನೀರು ಸೇವೆನೆಯಿಂದ ಕವಾಡಿಗರಹಟ್ಟಿಯಲ್ಲಿ ಸಾವು ನೋವಿನ ದುರಂತವೇ ಸಂಭವಿಸಿತ್ತು. ಆದ್ರೆ ಈಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಆ ಬಡಾವಣೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿರೋದು ಖುಷಿಯ ವಿಚಾರ. ಅಷ್ಟಕ್ಕೂ ಏನೆಲ್ಲಾ ಅಭಿವೃದ್ಧಿ ಪಡಿಸುವ ಪ್ಲಾನ್ ಮಾಡಿದ್ದಾರೆ. ಕಳೆದೊಂದು ವಾರದ ಹಿಂದಷ್ಟೇ ಇಡೀ ರಾಜ್ಯಕ್ಕೆ ಕವಾಡಿಗರಹಟ್ಟಿಯಲ್ಲಿ ದುರ್ಘಟನೆ ಏನೆಂಬುದು ಗೊತ್ತಾಗಿತ್ತು. ಅದೇನೋ ಹೇಳ್ತಾರಲ್ಲ ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಗಾದೆ ಮಾತಿನ ರೀತಿ, ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಜಿಲ್ಲಾ ನಾಯಕರು ಕವಾಡಿಗರಹಟ್ಟಿ ಅಭಿವೃದ್ಧಿಗೆ ನಾಲ್ಕು ಕೋಟಿ ಬಿಡುಗಡೆ ಮಾಡುವ ಮೂಲಕ ಮಾದರಿ ಏರಿಯಾವನ್ನು ಮಾಡಲು ಹೊರಟಿದ್ದಾರೆ.
ಕಲುಷಿತ ನೀರು ಸೇವನೆಯಿಂದ ದುರ್ಘಟನೆ ನಡೆದ ಪರಿಣಾಮ ಕವಾಡಿಗರಹಟ್ಟಿಯಲ್ಲಿ ಇಂದಿಗೂ ಸೂತಕದ ಛಾಯೆ ಆವರಿಸಿದೆ. ಈ ದುರಂತದಲ್ಲಿ ಸುಮಾರು ೫ ಮಂದಿ ಸಾವನ್ನಪ್ಪಿ, ಇಡೀ ಏರಿಯಾ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಪರಿಣಾಮ, ಅಧಿಕಾರಿಗಳು ಹಾಗೂ ಜಿಲ್ಲಾ ಜನಪ್ರತಿನಿಧಿಗಳು ಘಟನೆ ಬಳಿಕ ಹೈ ಅಲರ್ಟ್ ಆಗಿದ್ದಾರೆ. ಅರ್ಬನ್ ಡೆವಲಪ್ಮೆಂಟ್ ಇಲಾಖೆಯಿಂದ ಸುಮಾರು ೪ ಕೋಟಿ ವೆಚ್ಚದಲ್ಲಿ ಕವಾಡಿಗರಹಟ್ಟಿಯಲ್ಲಿ ಶುದ್ದ ನೀರಿನ ಘಟಕಗಳು, ಅಂಡರ್ ಡ್ರೈನೇಜ್, ಓವರ್ ಹೆಡ್ ಟ್ಯಾಂಕ್, ಮನೆ ಮನೆಗೆ ನಲ್ಲಿ ನೀರು ಸರಬರಾಜು ಮಾಡುವ ಯೋಜನೆ ಮಂಜೂರಾಗಿದೆ.
ಸಾಕು ನಾಯಿ ಕಚ್ಚಿದರೆ ಮಾಲೀಕನಿಗೆ 6 ತಿಂಗಳು ಜೈಲು ಶಿಕ್ಷೆ ಫಿಕ್ಸ್!
ಶೀಘ್ತದಲ್ಲಿಯೇ ಅಲ್ಲಿ ಸ್ವಚ್ಚತಾ ಕಾರ್ಯ ಶುರು ಮಾಡಿ ಈ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ವಾರದಲ್ಲಿಯೇ ಕಾಮಗಾರಿ ಶುರು ಮಾಡಲಾಗುವುದು ಎಂದು ಉಸ್ತುವಾರಿ ಸಚಿವರು ತಿಳಿಸಿದರು. ಇನ್ನೂ ಕವಾಡಿಗರಹಟ್ಟಿಯಲ್ಲಿ ನಡೆದ ಕಲುಷಿತ ನೀರು ಸೇವನೆ ದುರಂತಕ್ಕೆ ಸಂಬಂಧಿಸಿದಂತೆ ಕೆಲ ದಲಿತ ಪರ ಸಂಘಟನೆಗಳು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಲೇ ಬರ್ತಿದ್ದಾವೆ. ಇಂದು ಕೂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಇದೊಂದು ಪೂರ್ವ ನಿಯೋಜಿತ ಸಂಚು.
ಅಧಿಕಾರಿಗಳು ಹಾಗು ರಾಜ್ಯ ಸರ್ಕಾರ ಈ ಪ್ರಕರಣವನ್ನು ಕಾಲರಾ ಎಂದು ಮುಚ್ಚಿ ಹಾಕಲು ಮುಂದಾಗಿದೆ. ಆದ್ರೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಘಟನೆ ಯಿಂದ ಕಾಣದ ಕೈಗಳ ಕೈವಾಡ ಜಾಸ್ತಿ ಇದೆ. ಆದ್ದರಿಂದ ನ್ಯಾಯಕ್ಕಾಗಿ ಸತ್ಯ ಹೊರಬರಲಿಕ್ಕೋಸ್ಕರ ಈ ಪ್ರಕರಣವನ್ನು CBI ತನಿಖೆಗೆ ವಹಿಸಬೇಕು. ಅದಕ್ಕಾಗಿಯೇ ಇದೇ ತಿಂಗಳು ೨೨ ರಿಂದ ೨೫ರವರೆಗೆ ಮೂರು ದಿನಗಳ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಹೋರಾತ್ರಿ ಸತ್ಯಾಗ್ರಹವನ್ನು ನಡೆಸಲಾಗುವುದು ಒಂದು ವೇಳೆ ಅಧಿಕಾರಿಗಳು, ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾಥಾ ಮಾಡುವ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಲು ಸಿದ್ದವಿದ್ದೇವೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರೋರಾತ್ರಿ ಬಾಲಕಿಯರ ಹಾಸ್ಟೆಲ್ಗೆ ನುಗ್ಗಿದ ಯುವಕ: ಆರೋಪಿಯ ಬಂಧನ
ಒಟ್ಟಾರೆಯಾಗಿ ಕಲುಷಿತ ನೀರು ಸೇವನೆಯಿಂದ ಕವಾಡಿಗರಹಟ್ಟಿಯಲ್ಲಿ ದೊಡ್ಡ ದುರಂತವೇ ಸಂಭವಿಸಿ ಹೋಗಿದೆ. ಆದ್ರೆ ಈಗಾಗಲೇ ಅಧಿಕಾರಿಗಳು ಕಾಲರಾ ಎಂದು ಧೃಡಪಡಿಸಿದ್ದು, ಇದನ್ನು ಒಪ್ಪದ ಕೆಲ ದಲಿತ ಪರ ಸಂಘಟನೆಗಳು CBI ಗೆ ವಹಿಸುವಂತೆ ಒತ್ತಾಯಿಸಿದ್ದು, ಸರ್ಕಾರ ಇದಕ್ಕೆಲ್ಲಾ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.