ಸಂಸ್ಕಾರ ಹಾಗೂ ಸಂಸ್ಕೃತಿ ಇಲ್ಲದ, ಮಾತೆತ್ತಿದರೆ ಭಾಗ್ಯ, ಭಾಗ್ಯ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.

ಶಿರಸಿ (ಡಿ.07): ಸಂಸ್ಕಾರ ಹಾಗೂ ಸಂಸ್ಕೃತಿ ಇಲ್ಲದ, ಮಾತೆತ್ತಿದರೆ ಭಾಗ್ಯ, ಭಾಗ್ಯ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಅವರೊಂದಿಗೆ ಏನೇನು ಮಾತುಕತೆ ನಡೆದಿತ್ತೋ ಅದು ನಮಗೆ ಸಬಂಧಿಸಿಲ್ಲ. ರಾಜ್ಯದ ಜನತೆ ನಿಮಗೆ ಆಡಳಿತಕ್ಕೆ ಆದೇಶ ನೀಡಿದ್ದಾರೆ. ಅದನ್ನು ಬಳಕೆ ಮಾಡಿಕೊಂಡು ಸಮರ್ಪಕ ಆಡಳಿತ ನಡೆಸುವುದು ಬಿಟ್ಟು ಪದೇ ಪದೇ ಉದ್ಧಟತನ ಮಾಡಿಕೊಂಡು ನಮ್ಮೆಡೆ ಏಕೆ ಬೊಟ್ಟು ತೋರಿಸುತ್ತೀರಿ?

ಸಿದ್ದರಾಮಯ್ಯ ಅವರ ಕಾರ್ಯವೈಖರಿ, ದಿನ ಬೆಳಗಾದರೆ ನಡೆದುಕೊಳ್ಳುವ ರೀತಿ, ಏನು ಮಾಡಿದರೂ ಸರಿ ಎಂಬ ಧೋರಣೆ ಸರಿಯಲ್ಲ. ಮಾತೆತ್ತಿದರೆ ಭಾಗ್ಯ ಎನ್ನುವ ಸಿದ್ಧರಾಮಯ್ಯ ಈಗ ತಮ್ಮ ಭಾಗ್ಯ ಏನಾಗಿದೆ? ಎಂಬುದನ್ನು ಅರಿಯಲಿ ಎಂದರು. ಅಧಿಕಾರಿಗಳೂ ಈಗ ಅವರ ಮಾತು ಕೇಳುತ್ತಿಲ್ಲ. ಆಡಳಿತವೇ ಹಳಿ ತಪ್ಪಿದಾಗ ಟೀಕೆ ಮಾಡುವುದಷ್ಟೇ ಅವರ ಕಾರ್ಯ ಆಗಿದೆ. ತಾನು ಕುರಿ ಕಾಯ್ದು ಮೇಲೆ ಬಂದವನು ಎನ್ನುವ ಸಿದ್ದರಾಮಯ್ಯ ಇವತ್ತು ಏನು ಕಾಯುತ್ತಿದ್ದಾರೆ? ಅಧಿಕಾರಕ್ಕೆ ಅಂಟಿಕೊಂಡು, ತನ್ನ ಪಾಪವನ್ನು ರಾಜ್ಯದ ಜನತೆಯ ಮೇಲೆ, ಇನ್ನೊಂದು ಪಕ್ಷದ ಮೇಲೆ ಹೇರುವುದು ನ್ಯಾಯವೇ? ಎಂದು ಪ್ರಶ್ನಿಸಿದರು.

ಕೊಂಕಣ ರೈಲ್ವೆ ಜಾರ್ಜ್ ಫರ್ನಾಂಡಿಸ್ ಅವರ ಅವಧಿಯಲ್ಲೇ ಎರಡು ಮಾರ್ಗ ಸ್ಥಾಪಿಸಬೇಕು ಎಂಬ ಬಗ್ಗೆ ಪ್ರಯತ್ನವಾಗಿತ್ತು. ರಾಜ್ಯ, ಮಹಾರಾಷ್ಟ್ರ, ಕೇರಳ, ಗೋವಾ ಸರ್ಕಾರ ಜತೆ ಮಾತನಾಡಿ ಏನು ಮಾಡಬಹುದು ಎಂಬುದನ್ನು ನಿರ್ಧರಿಸುತ್ತೇವೆ. ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ ಸಹ ಆಗಬೇಕಿದೆ. ತಾಂತ್ರಿಕವಾಗಿ ಏನೇನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗ ಸ್ಥಾಪನೆಗೆ ಅಟಲ್ ಬಿಹಾರಿ ವಾಜಪೇಯಿ ಅಡಿಗಲ್ಲು ಹಾಕಿದ್ದಾರೆ. ಯಾರು ಯಾರೋ ಈ ಮಾರ್ಗ ಸ್ಥಾಪನೆಗೆ ತಡೆಯಾಜ್ಞೆ ತಂದಿದ್ದರು. ತಾಳಗುಪ್ಪ ಹಾವೇರಿ ರೈಲು ಮಾರ್ಗದ ಸಮೀಕ್ಷೆ ಸಹ ನಡೆದಿದೆ. ಪರಿಸರವಾದಿಗಳ ಸಹಕಾರ ಅತ್ಯಮೂಲ್ಯ. ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗಲೂ ಹೊಂದಾಣಿಕೆ ಅತಿ ಮುಖ್ಯ.

ರೈಲ್ವೆ ಪ್ರಯಾಣಿಕರಿಗೆ ಸೌಲಭ್ಯ

ಅಂದಿನ ಮತ್ತು ಇಂದಿನ ತಂತ್ರಜ್ಞಾನಕ್ಕೂ, ಜನಸಂಖ್ಯೆಗೂ ಗಣನೀಯ ವ್ಯತ್ಯಾಸವಿದೆ. ಇನ್ನು ಆರು ತಿಂಗಳು ಕಾಯಿರಿ, ಅನೇಕ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದರು. ಉತ್ತರ ಕನ್ನಡಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಅನೇಕ ಯೋಜನೆ ಹಾಕಿಕೊಂಡು ಹಣ ಬಿಡುಗಡೆ ಮಾಡಿದೆ. ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ 164 ಕಿಮಿಗೆ ₹16500 ಕೋಟಿ, ತಾಳಗುಪ್ಪ ಶಿರಸಿ ಹುಬ್ಬಳ್ಳಿ ನೂತನ ರೈಲು ಮಾರ್ಗಕ್ಕೆ ₹3115 ಕೋಟಿ, ತಾಳಗುಪ್ಪ ಹೊನ್ನಾವರ ಮಾರ್ಗ ₹1500 ಕೋಟಿ, ಕರಾವಳಿಯಲ್ಲಿ ಕೊಂಕಣ ರೈಲ್ವೆ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ₹300 ಕೋಟಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ ಎಂದರು.

ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಯೋಜನೆ 1997-98ರಲ್ಲಿ ಆರಂಭಗೊಂಡಿದ್ದು, ಕಲಘಟಗಿ ವರೆಗೆ ಈಗಾಗಲೇ ಒಂದು ಹಂತದಲ್ಲಿ ಕೆಲಸ ಪೂರ್ಣಗೊಂಡಿದೆ. ಮುಂದಿನ ಕಾಮಗಾರಿ ಕುರಿತಂತೆ 2350 ಎಕರೆ ಭೂಮಿ ಅಗತ್ಯವಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಮುಂದೇನು ಮಾಡಬೇಕು ಎಂಬ ಬಗ್ಗೆ ಸಹ ಚರ್ಚೆ ನಡೆಸಿದ್ದೇವೆ. ಈ ಮಾರ್ಗಗಳ ಸ್ಥಾಪನೆ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿ ಆಗಲಿದೆ ಎಂದರು. ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಆನಂದ ಸಾಲೇರ್, ರಮಾಕಾಂತ ಭಟ್ ಮತ್ತಿತರರು ಉಪಸ್ಥಿತರಿದ್ದರು.