Assembly Election: ಕೈ ಬಿಟ್ಟು ಕಮಲ ಮುಡಿದ ಮಾಜಿ ಶಾಸಕ: ಶ್ರೀರಾಮುಲು ನಾನು ಸಹೋದರರಿದ್ದಂತೆ ಎಂದ ತಿಪ್ಪಾರೆಡ್ಡಿ
ಕಳೆದ ವಿಧಾನಸಭಾಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಬದ್ಧ ರಾಜಕೀಯ ವೈರಿಯಾಗಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ತಿಪ್ಪಾರೆಡ್ಡಿ, ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಚಿತ್ರದುರ್ಗ (ಫೆ.26): ಕಳೆದ ವಿಧಾನಸಭಾಚುನಾವಣೆಯಲ್ಲಿ ಶ್ರೀರಾಮುಲುಗೆ ಬದ್ಧ ರಾಜಕೀಯ ವೈರಿಯಾಗಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ತಿಪ್ಪಾರೆಡ್ಡಿ, ಇಂದು ಕಾಂಗ್ರೆಸ್ ತೊರೆದು ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಅವರು ನೇರಗುಂಟೆ ಗ್ರಾಮದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸಚಿವ ಶ್ರೀರಾಮುಲು ಮತ್ತು ನಾನು ಅಣ್ಣತಮ್ಮಂದಿರಿದ್ದಂತೆ. 2013ರಲ್ಲಿ ಬಿಎಸ್ ಆರ್ ಪಕ್ಷದಿಂದ ಗೆದ್ದು ಬಿಜೆಪಿ ಸೇರಿದ್ದೆನು. ಆಗ ಮೊಳಕಾಲ್ಮೂರಲ್ಲಿ ಬಿಜೆಪಿ ಪಕ್ಷ ಬಲವಾಗಿ ಕಟ್ಟಿದ್ದೆನು. 2018ರಲ್ಲಿ ಪಕ್ಷದ ಆಂತರಿಕ ವಿಚಾರಗಳು ಹಾಗೂ ಇತರೆ ಒತ್ತಡಗಳ ಹಿನ್ನೆಲೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರಲ್ಲಿ ಬಿಜೆಪಿಯಿಂದ ಸ್ಪರ್ದಿಸಿದರು. ಆಗ ಶ್ರೀರಾಮುಲು ನನ್ನ ಬಳಿ ಬರಬೇಕಿತ್ತು. ಜೊತೆಗೆ, ನಾನು ಸೈಲಾಂಟಾಗಿ ಇರಬೇಕಿತ್ತು. ಯಾವುದೋ ಕಾರಣಕ್ಕೆ, ಯಾವುದೋ ಶಕ್ತಿಯಿಂದ ಇಬ್ಬರ ನಡುವೆ ಸಮರವಾಯಿತು ಎಂದು ಹೇಳಿದ್ದಾರೆ.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ
ಈಗ ನಮ್ಮ ಅಣ್ಣ ತಮ್ಮಂದಿರ ಜಗಳ ಅಂತ್ಯವಾಗಿದ್ದು ಒಂದಾಗಿದ್ದೇವೆ. ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನಮ್ಮಿಬ್ಬರನ್ನು ಒಂದಾಗಿಸಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವ ಭರವಸೆಯಿದೆ. 2018ರಲ್ಲಿ ಆದಂತೆ ಈ ಬಾರಿ ಆಗಲ್ಲ ಎಂಬ ಭರವಸೆಯಿದೆ ಎಂದು ಹೇಳಿದರು.
ಅಭಿವೃದ್ಧಿ ಉದ್ದೇಶಕ್ಕಾಗಿ ಒಂದಾಗಿದ್ದೇವೆ: ಪಕ್ಷ ಸೇರ್ಪಡೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ಅವರು, ಮಾಜಿ ಶಾಸಕ ತಿಪ್ಪೇಸ್ವಾಮಿ ಮರಳಿ ಬಿಜೆಪಿಗೆ ಬಂದಿದ್ದಾರೆ. ಅವರ ಸೇರ್ಪಡೆಯಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಮುಂಬರುವ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ. 2018ರ ಚುನಾವಣೆ ಸಂದರ್ಭದಲ್ಲಿ ನಾವಿಬ್ಬರು ವಾಕ್ಸಮರ ಮಾಡಿರಬಹುದು. ಅಭಿವೃದ್ಧಿಗಾಗಿ ನಾವಿಬ್ಬರೂ ಈಗ ಒಂದಾಗಿದ್ದೇವೆ. ಬಿಎಸ್ ಆರ್ ಪಕ್ಷದಲ್ಲಿ ನಾವಿಬ್ಬರು ಜತೆಗಿದ್ದೆವು, ಬಳಿಕ ಬಿಜೆಪಿ ಸೇರಿದ್ದೆವು. ಈಗ ಎಸ್ ತಿಪ್ಪೇಸ್ವಾಮಿ ಮರಳಿ ಬಿಜೆಪಿಗೆ ಬಂದಿದ್ದಾರೆ. ನನ್ನ ಸೇರಿ ಟಿಕೆಟ್ ಘೋಷಣೆ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಪಕ್ಷದ ನಾಯಕರ ಜತೆ ಚರ್ಚಿಸಿ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಯಡಿಯೂರಪ್ಪ ಸ್ಪರ್ಧೆಗೆ ಆಹ್ವಾನ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಂದು ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದೇನೆ. ಅವರು ಬಂದು ಇಲ್ಲಿ ಸ್ಪರ್ಧೆ ಮಾಡುವುದಾದರೆ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಾಗಿದ್ದೇನೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ಯಡಿಯೂರಪ್ಪ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿದರೆ ಬರೋಬ್ಬರಿ 1 ಲಕ್ಷ ಗಳ ಅಂತರ ಗೆಲವು ಆಗುತ್ತದೆ. ಮೊನ್ನೆ ಪಕ್ಷದ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರು ಬಂದಿದ್ದಾಗ ಬಳ್ಳಾರಿಯಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇನೆ. ಅವರ ಸಲಹೆ , ಮಾರ್ಗದರ್ಶನ ಬೇಕು ನನಗಷ್ಟೇ ಅಲ್ಲದೇ, ಇಡೀ ಬಿಜೆಪಿಗೆ ಬೇಕು ಎಂದು ಹೇಳಿದರು.