Assembly Election: ಈಗಲೇ ಹೈವೋಲ್ಟೇಜ್ ಕ್ಷೇತ್ರವಾದ ಕಲಘಟಗಿ
- ಈಗಲೇ ಹೈವೋಲ್ಟೇಜ್ ಕ್ಷೇತ್ರವಾದ ಕಲಘಟಗಿ
- ಛಬ್ಬಿ-ಲಾಡ್ ಮಧ್ಯೆ ಜೋರಾದ ಪೈಪೋಟಿ
- ಗೊಂದಲ ಬಗೆಹರಿಸಿ ಪುಣ್ಯಕಟ್ಕೊಳ್ಳಿ: ಕಾರ್ಯಕರ್ತರು
ಶಿವಾನಂದ ಗೊಂಬಿ
ಹುಬ್ಬಳ್ಳಿ (ನ.20) : ವಿಧಾನಸಭಾ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿಯಿರುವಾಗಲೇ ಕಲಘಟಗಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ! ಅತ್ತ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿ ಬಂದಿರುವ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಹಾಗೂ ಮಾಜಿ ಸಚಿವ ಸಂತೋಷ ಲಾಡ್ ಮಧ್ಯೆ ವಾಕ್ಸಮರ್ ಜೋರಾಗುತ್ತಿದೆ. ಇದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿಡಿದ್ದು, ಯಾರೊಂದಿಗೆ ಗುರುತಿಸಿಕೊಳ್ಳಬೇಕು ಎಂಬುದು ತಿಳಿಯದೇ ಅವರೆಲ್ಲ ಕಂಗಾಲಾಗಿದ್ದಾರೆ.
ಕಲಘಟಗಿ ಕ್ಷೇತ್ರದಲ್ಲಿ 1978ರಿಂದ 2008ರ ವರೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಂಡಿರಲಿಲ್ಲ. 2008ರಲ್ಲಿ ಕಾಂಗ್ರೆಸ್ ವಶವಾಗಿತ್ತು. ಮುಂದೆ 2013ರಲ್ಲೂ ಕಾಂಗ್ರೆಸ್ ಗೆಲುವು ಕಂಡಿತ್ತು. 2008ರಲ್ಲಿ ನಾಗರಾಜ ಛಬ್ಬಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಚುನಾವಣೆಗೆ ಮುಂಚೆ ಅಲ್ಲಿಗೆ ಬಂದ ಸಂತೋಷ ಲಾಡ್ ಟಿಕೆಟ್ ಗಿಟ್ಟಿಸಿಕೊಂಡು ನಿಂತು ಗೆಲುವು ಸಾಧಿಸಿದ್ದರು. ಬಳಿಕ 2013ರಲ್ಲೂ ಲಾಡ್ ಗೆದ್ದು ಬೀಗಿದ್ದರು. ಮಂತ್ರಿ ಕೂಡ ಆಗಿದ್ದರು. ಬಳಿಕ 2018ರಲ್ಲಿ ಟಿಕೆಟ್ ಪಡೆದರೂ ಗೆಲುವು ಸಾಧ್ಯವಾಗಲಿಲ್ಲ. ಲಾಡ್ ಕ್ಷೇತ್ರಕ್ಕೆ ಬರುವುದಿಲ್ಲ ಎಂಬ ಆರೋಪ ಈ ಸೋಲಿಗೆ ಕಾರಣ ಆಗಿತ್ತು.
ಎಲೆಕ್ಷನ್‌ಗೆ ನಿಲ್ಲಲ್ವಾ ಸಿದ್ದು-ಡಿಕೆಶಿ?: ಸಂಚಲನ ಮೂಡಿಸಿದ 'ಲಾಡ್' ಮಾತು
ಕಾಂಗ್ರೆಸ್ ಪಕ್ಷ ಯಾವಾಗಲೂ ಟಿಕೆಟ್ ಘೋಷಣೆ ಮಾಡುವುದು ಚುನಾವಣೆ ಕೆಲವೇ ಕೆಲ ದಿನ ಇದ್ದಾಗಲೇ. ಇದರಿಂದ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕಷ್ಟವಾಗುತ್ತದೆ. ಮುಂಚಿತವಾಗಿಯೇ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಕೂಗು ಸಾಮಾನ್ಯವಾಗಿತ್ತು. ಅದಕ್ಕಾಗಿಯೇನೋ ಕೆಪಿಸಿಸಿಯೂ ಈ ಸಲ ಆರು ತಿಂಗಳು ಮುಂಚೆಯೇ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ನ. 5ರಿಂದ ಪ್ರಾರಂಭವಾಗಿರುವ ಅರ್ಜಿ ಸಲ್ಲಿಕೆಯೂ ನ. 21ರ ವರೆಗೆ ನಡೆಯಲಿದೆ. ಈಗಾಗಲೇ ಜಿಲ್ಲೆಯ ಏಳು ಕ್ಷೇತ್ರಗಳಿಗೆ 60ಕ್ಕೂ ಹೆಚ್ಚು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವುದುಂಟು. ಇದೀಗ ಅತ್ತ ಅರ್ಜಿ ಸಲ್ಲಿಸುತ್ತಿದ್ದಂತೆ ಇತ್ತ ಪಕ್ಷದ ಮುಖಂಡರು ಎರಡು ಬಣಗಳಾಗಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ನಾಗರಾಜ ಛಬ್ಬಿ, ಸಂತೋಷ ಲಾಡ್ ಇಬ್ಬರು ಪರಸ್ಪರ ಎದುರಾಳಿಗಳಂತೆ ಈಗಲೇ ವಾಕ್ಸಮರದಲ್ಲಿ ತೊಡಗಿದ್ದಾರೆ.
ಇಬ್ಬರು ಮುಖಂಡರು ನಾನೇ ಈ ಸಲದ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಲೇ ಪ್ರಚಾರವನ್ನೂ ಶುರು ಮಾಡಿದ್ದಾರೆ. ಕುಕ್ಕರ್, ಅಕ್ಕಿ ಮೂಟೆ ಹಂಚುವ ಕೆಲಸವೂ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ. ಜತೆ ಜತೆಗೆ ತಮ್ಮ ಪಕ್ಷದ ಮುಖಂಡರ ವಿರುದ್ಧವೇ ಪರಸ್ಪರ ಕೆಸರೆಚಾಟದಲ್ಲಿ ತೊಡಗಿದ್ದಾರೆ.
ಬಗೆಹರಿಸಿ ಪುಣ್ಯ ಕಟ್ಕೊಳ್ಳಿ:
ತಮ್ಮ ತಮ್ಮ ಜಗಳದ ಮಧ್ಯೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರನ್ನು ಎಳೆದು ತರುವ ಕೆಲಸವಾಗುತ್ತಿದೆ. ಹೀಗೆ ಆದರೆ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಆದಕಾರಣ ಕ್ಷೇತ್ರದಲ್ಲಿನ ಗೊಂದಲ ಬಗೆಹರಿಸಲು ಪಕ್ಷದ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು. ಅಂದಾಗ ಕಾರ್ಯಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಸಮಸ್ಯೆ ಕಟ್ಟಿಟ್ಟಬುತ್ತಿ. ಜಿಲ್ಲೆಯ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಯಾವಾಗ ಬೇಕಾದರೂ ಘೋಷಿಸಿಕೊಳ್ಳಲಿ. ಕಲಘಟಗಿ ಕ್ಷೇತ್ರದ ಅಭ್ಯರ್ಥಿಯನ್ನು ಮಾತ್ರ ಈಗಲೇ ಘೋಷಿಸಿ ಪುಣ್ಯಕಟ್ಟಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಒಕ್ಕೊರಲಿನ ಆಗ್ರಹ.
India@75: 9ಕಿಮೀ ಉದ್ದದ ತಿರಂಗಾ ಧ್ವಜ ಯಾತ್ರೆ, ಸಂತೋಷ್ ಲಾಡ್ ಚಾಲನೆ
ಸಂತೋಷ ಲಾಡ್ ನಾನು ಒಳ್ಳೆಯ ಸ್ನೇಹಿತರು. 2008ರಲ್ಲೇ ನಾನು ಟಿಕೆಟ್‌ಗಾಗಿ ಪ್ರಯತ್ನಿಸಿದ್ದೆ. ಆಗ ಲಾಡ್ ಅವರು ಬಂದಿದ್ದರಿಂದ ಕ್ಷೇತ್ರ ಬಿಟ್ಟು ಕೊಟ್ಟಿದ್ದೆ. ಈಗ ನಾನು ಕಲಘಟಗಿ ಕ್ಷೇತ್ರಕ್ಕೆ ನಿಲ್ಲುತ್ತೇನೆ. ಅವರು ಬೇರೆ ಯಾವ ಕ್ಷೇತ್ರಕ್ಕಾದರೂ ಹೋಗಲಿ.
ನಾಗರಾಜ ಛಬ್ಬಿ, ವಿಪ ಮಾಜಿ ಸದಸ್ಯ
ನಾನು ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಕ್ಷೇತ್ರವನ್ನು ಯಾವತ್ತೂ ಬಿಟ್ಟಿಲ್ಲ. ಕಲಘಟಗಿ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಮಾಡುವ ಕೆಲಸ ನಾಗರಾಜ ಛಬ್ಬಿ ಅವರು ಮಾಡುತ್ತಿದ್ದಾರೆ. ಹೈಕಮಾಂಡ್ ಕ್ಷೇತ್ರದಲ್ಲಿನ ಗೊಂದಲವನ್ನು ಬಗೆಹರಿಸಬೇಕು.
ಸಂತೋಷ ಲಾಡ್, ಮಾಜಿ ಸಚಿವ