ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿರೂಪಣೆ ಮಾಡಿ ಗಮನ ಸೆಳೆದವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್. ವೃತ್ತಿಪರ ನಿರೂಪಕಿ ಬದಲು ಐಎಎಸ್ ಅಧಿಕಾರಿಯೇಕೆ ನಿರೂಪಣೆ ಮಾಡಿದರು ಎನ್ನುವುದಕ್ಕೆ ಕಾರಣ ಸರ್ಕಾರದ ಶಿಷ್ಟಾಚಾರ ಮತ್ತು ಸಾಂವಿಧಾನಿಕ ನಿಯಮ.

ನಿನ್ನೆ ಅರ್ಥಾತ್​ ಮೇ 3ರಂದು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​, ಉಪ ಮುಖ್ಯಮಂತ್ರಿಯಾಗಿ ಪರಮೇಶ್ವರ್​ ಸೇರಿದಂತೆ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಆಗ್ತಿರೋದು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿರುವ ನಿರೂಪಕಿಯದ್ದು. ಯಾರಿವರು, ಇವರೇ ನಿರೂಪಣೆ ಯಾಕೆ ಮಾಡಿದ್ರು? ಬೇರೆಯವರು ಸಿಗಲಿಲ್ವಾ? ಇವರ ನಿರೂಪಣೆ ನೋಡಿ ಅವರು ನೆನಪಾದ್ರು, ಇವರು ನೆನಪಾದ್ರು, ಅವರ ಅನುಪಸ್ಥಿತಿ ಕಾಡುತ್ತಿದೆ… ಎಂದೆಲ್ಲಾ ಚರ್ಚೆಗಳು ಶುರುವಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಗಿದ್ದರೆ ನಿನ್ನೆ ನಿರೂಪಣೆ ಮಾಡಿದವರು ಯಾರು ಎಂದು ಹೇಳುವುದಾದರೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretaty) ಶಾಲಿನಿ ರಜನೀಶ್​. ಇವರದ್ದು ನಿರೂಪಣಾ ವೃತ್ತಿಯಲ್ಲ, ಬದಲಿಗೆ ಇವರು ಐಎಎಸ್​ ಅಧಿಕಾರಿ. 1989ನೇ ಬ್ಯಾಚಿನ ಹಿರಿಯ ಐಎಎಸ್ (IAS) ಅಧಿಕಾರಿಯಾಗಿದ್ದು, ಉತ್ತರ ಪ್ರದೇಶ ಮೂಲದವರು. ಇವರ ಮಾತೃಭಾಷೆ ಹಿಂದಿ. ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣದಿಂದ ಕನ್ನಡವನ್ನು ಕಲಿತಿದ್ದಾರೆ. ಕನ್ನಡದಲ್ಲಿಯೇ ನಿರೂಪಣೆ ಮಾಡಿದ್ದಾರೆ. ಇದೇ ಕಾರಣಕ್ಕೆ ಕನ್ನಡ ಶಬ್ದಗಳನ್ನು ಮಾತನಾಡುವಾಗ ಕೆಲವೊಮ್ಮೆ ತೊಡಕಾಗಿದ್ದು ಇದೆ. ಹಾಗಿದ್ದರೆ ವೃತ್ತಿನಿರತ ನಿರೂಪಣೆ ಮಾಡುವವರನ್ನು ಕರೆಸಲು ಆಗ್ತಿರಲಿಲ್ಲವೆ ಎಂದು ಕೇಳುವವರು ಇದ್ದಾರೆ.

ಇದು ಶಿಷ್ಟಾಚಾರ

ಇದಕ್ಕೆ ಉತ್ತರ ಇಲ್ಲ. ಏಕೆಂದರೆ ಇದು ಸರ್ಕಾರದ ಶಿಷ್ಟಾಚಾರ (Protocol). ಇದೊಂದೇ ಕಾರ್ಯಕ್ರಮವಲ್ಲ. ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ನಿಯಮದ ಪ್ರಕಾರ ಇರುವ ಪ್ರೊಟೋಕಾಲ್​ ಪ್ರಕಾರ ಮುಖ್ಯ ಕಾರ್ಯದರ್ಶಿಗಳೇ ನಿರೂಪಣೆ ಮಾಡುತ್ತಾರೆ. ಇವರ ಅನುಪಸ್ಥಿತಿಯಲ್ಲಿ ಅವರಿಂದ ನಿಯೋಜಿತ ಹಿರಿಯ ಅಧಿಕಾರಿಗಳು ಈ ಕೆಲಸ ಮಾಡುತ್ತಾರೆ. ರಾಜ್ಯ ಶಿಷ್ಟಾಚಾರಕ್ಕೆ ಅನುಗುಣವಾಗಿ ಅಧಿಕೃತವಾಗಿ ಕಲಾಪಗಳನ್ನು ನಡೆಸುತ್ತಾರೆ. ಆಯಾ ಪ್ರಾದೇಶಿಕ ಭಾಷೆ ಬರದಿದ್ದರೆ, ಅವರು ಅತ್ಯಂತ ಸುಲಲಿತವಾಗಿ ಮಾತನಾಡುವ ಇಂಗ್ಲಿಷ್​ ಭಾಷೆಯಲ್ಲಿ ನಿರೂಪಣೆ ಮಾಡಿದ್ದೂ ಇದೆ. ಆದರೆ ಹಾಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರು ಕನ್ನಡದಲ್ಲಿ ನಿರೂಪಣೆ ಮಾಡಿದ್ದಾರೆ ಅಷ್ಟೇ.

ಸಂವಿಧಾನದ ಪ್ರಕಾರ

ಇನ್ನು ಸಂವಿಧಾನದ ಪ್ರಕಾರ ಹೇಳುವುದಾದರೆ, ಸಂವಿಧಾನದ 164(3) ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಬೋಧಿಸುವ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಮುಖ್ಯಮಂತ್ರಿ ಸ್ವೀಕರಿಸುತ್ತಾರೆ. ಈ ಸಂದರ್ಭದಲ್ಲಿ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರದ್ದು. ಅಧಿಕೃತ ನೇಮಕಾತಿ ಸೂಚನೆ ಓದುವುದು, ಹೊಸ ಸರ್ಕಾರದ ನೀತಿಗಳನ್ನು ಕಾರ್ಯಗತಗೊಳಿಸಲು ಸೇರಿದಂತೆ ಪ್ರಮಾಣ ವಚನ ಸ್ವೀಕಾರದ ಎಲ್ಲ ನಿಭಾಯಿಸುವುದು ಅವರ ಕರ್ತವ್ಯ. ಈ ಸಂದರ್ಭದಲ್ಲಿ ಅವರು ನಿರ್ಣಾಯಕ ಆಡಳಿತಾತ್ಮಕ ಪಾತ್ರವನ್ನು ವಹಿಸುತ್ತಾರೆ. ಹಾಗೆಂದು ಇದೇ ಮೊದಲಲ್ಲ. ಪ್ರತಿಬಾರಿಯೂ ಮುಖ್ಯ ಕಾರ್ಯದರ್ಶಿಗಳು ಅಥವಾ ಸರ್ಕಾರದ ಹಿರಿಯ ಅಧಿಕಾರಿಗಳೇ ನಿರೂಪಣೆ ಮಾಡಬೇಕು ಎನ್ನುವುದು ನಿಯಮವಷ್ಟೇ.

ಶಾಲಿನಿ ರಜನೀಶ್​ ಕುರಿತು...

ಇನ್ನು ಶಾಲಿನಿ ರಜನೀಶ್​ ಅವರ ಕುರಿತು ಹೇಳುವುದಾದರೆ, ಇವರು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ವ್ಯವಹಾರ ಆಡಳಿತದಲ್ಲಿ (MBA) ಸ್ನಾತಕೋತ್ತರ ಪದವಿ ಹಾಗೂ ರಾಜಕೀಯ ವಿಜ್ಞಾನದಲ್ಲಿ ಡಾಕ್ಟರೇಟ್ (Ph.D.) ಪಡೆದಿದ್ದಾರೆ. ಇವರ ಪತಿ ರಜನೀಶ್ ಗೋಯಲ್ ಕೂಡ ಹಿರಿಯ ಐಎಎಸ್ ಅಧಿಕಾರಿಯಾಗಿದ್ದು, ಇವರಿಬ್ಬರೂ ಕರ್ನಾಟಕದ ಇತಿಹಾಸದಲ್ಲಿಯೇ ಒಂದೇ ಹುದ್ದೆಯನ್ನು (ಮುಖ್ಯ ಕಾರ್ಯದರ್ಶಿ) ಅಲಂಕರಿಸಿದ ಅಪರೂಪದ ದಂಪತಿ ಆಗಿದ್ದಾರೆ.