ದಕ್ಷಿಣ ಕನ್ನಡ ಲೋಕಸಭೆಗೆ ಅರುಣ್ ಪುತ್ತಿಲ ಸ್ಪರ್ಧೆ ಫಿಕ್ಸ್; ಕಟೀಲ್‌ಗೆ ಉರುಳಾಗುವುದೇ ಪುತ್ತಿಲ ಪರಿವಾರ!
ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿಗೆ ಬಂಡಾಯವಾಗಿ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಬಂಡಾಯವಾಗಿ ಸ್ಪರ್ಧೆ ಮಾಡಲಿದ್ದಾರೆ.
ದಕ್ಷಿಣ ಕನ್ನಡ (ಫೆ.29): ರಾಜ್ಯದ ಕರಾವಳಿ ಜಿಲ್ಲೆ ಹಾಗೂ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿಗೆ ಬಂಡಾಯವಾಗಿ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಬಂಡಾಯವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಮಾಡಲಿದೆ. ಇನ್ನು ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಬಂಡಾಯವಾಗಿ ಅರುಣ್ ಪುತ್ತಿಲ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಅಧಿಕೃತ ಘೋಷಣೆ ಮಾಡಿದ್ದಾರೆ. ಅರುಣ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅರುಣ್ ಪುತ್ತಿಲ ಸ್ವತಂತ್ರ ಸ್ಪರ್ಧೆ ಮಾಡಲಿದ್ದಾರೆ.
ಹಿಂದೂ ಮುಖಂಡ ಅರುಣ್ ಪುತ್ತಿಲಗೆ ಬಿಜೆಪಿ ಬಾಗಿಲು ಬಂದ್? ಲೋಕಸಭೆಗೆ ಮತ್ತೆ ಬಂಡಾಯ ಫಿಕ್ಸ್!
ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಅವರು, ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ಸುತ್ತಿನ ಮಾತುಕತೆ ಬಳಿಕವೂ ಅರುಣ್ ಪುತ್ತಿಲ ಪಕ್ಷ ಸೇರ್ಪಡೆ ವಿಫಲವಾಗಿದೆ. ಇತ್ತೀಚೆಗಷ್ಟೇ ಅರುಣ್ ಪುತ್ತಿಲ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಯಾಗಿದ್ದರು. ಆದರೆ, ಷರತ್ತುಗಳಿಲ್ಲದೇ ಪಕ್ಷ ಸೇರುವಂತೆ ಸೂಚಿಸಿದ್ದರು. ಆದರೆ, ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನ ನೀಡುವಂತೆ ಪುತ್ತಿಲ ಪಟ್ಟು ಹಿಡಿದಿದ್ದರು. ಇದಕ್ಕೆ ಒಪ್ಪದೇ ಪಕ್ಷ ಸೇರಿದ ಬಳಿಕ ಜವಾಬ್ದಾರಿ ನೀಡುವ ಬಗ್ಗೆ ವಿಜಯೇಂದ್ರ ಒಲವು ತೋರಿದ್ದರು. ಆದರೆ, ಪಟ್ಟು ಬಿಡದ ಅರುಣ್ ಪುತ್ತಿಲ ಲೋಕಸಭಾ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧೆ ಮಾಡುವ ಬಗ್ಗೆ ಒಲವು ತೋರಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಬಿಜೆಪಿ ಪಕ್ಷದ ನಾಯಕರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂತೋಷ್ ಜಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸ್ಥಳೀಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರೊಂದಿಗೆ ಮಾತುಕತೆ ನಡೆದಿತ್ತು. ಎಲ್ಲರಿಂದಲೂ ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿತ್ತು. ಅದರೆ, ಇಲ್ಲಿನ ತನಕ ಯಾವ ನಿರ್ಧಾರವನ್ನು ಅವರು ಕೈಗೊಂಡಿಲ್ಲ. ಹಾಗಾಗಿ, ಪುತ್ತಿಲ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಬಿಜೆಪಿಗೆ ಸೇರ್ಪಡೆಯಾದಲ್ಲಿ ಬಹಿರಂಗವಾಗಿ ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನವನ್ನು ಅರುಣ್ ಪುತ್ತಿಲ ಅವರಿಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು. ಅದರೆ, ಅದ್ಯಾವುದೂ ಈವರೆಗೆ ಸಫಲವಾಗಿಲ್ಲ. ಕಾರ್ಯಕರ್ತರ ಒತ್ತಾಸೆಯಂತೆ ಅರುಣ್ ಕುಮಾರ್ ಪುತ್ತಿಲ ಸ್ಪರ್ದಿಸಲಿದ್ದಾರೆ ಎಂದರು.
ಲೋಕಸಭಾ ಚುನಾವಣೆ 2024: ಬಿಜೆಪಿ ಟಿಕೆಟ್‌ಗೆ ಶಕ್ತಿ ಪ್ರದರ್ಶನಕ್ಕೆ ಇಳಿದ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್
ಪುತ್ತೂರು ತಾಲೂಕಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಸಂಘಟನೆ ಇದ್ರೆ ಅದು ಪುತ್ತಿಲ ಪರಿವಾರವಾಗಿದೆ. ಈಗಾಗಲೇ ನಾವು ಚಾಪು ಮೂಡಿಸಿದ್ದೇವೆ. ಮುಂದೆ ಇನ್ನೂ ಹೆಚ್ಚು ಸೇವೆ ಸಲ್ಲಿಸುವ ಸಲುವಾಗಿ ನಮ್ಮ ಆರೋಗ್ಯ ಘಟಕದಿಂದ ಬೆಟ್ಟಂಪಾಡಿ ವಿಭಾಗದಲ್ಲಿ ಮಾ.3ಕ್ಕೆ ಆ್ಯಂಬುಲೆನ್ಸ್ ಸೇವೆ ಆರಂಭಿಸಲಿದ್ದೇವೆ. ಮುಂದಿನ ದಿನ ಜಿಲ್ಲೆಯಾದ್ಯಂತ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಸಂಘಟನೆಯನ್ನು ರಾಜ್ಯಕ್ಕೆ ವಿಸ್ತರಿಸಲಿದ್ದೇವೆ. ಞಮಾಲೋಚನಾ ಸಭೆಯ ಬಳಿಕ ಮುಂದಿನ ಎಲ್ಲಾ ಚುನಾವಣೆಯಲ್ಲಿ ನಮ್ಮ ಸ್ಪರ್ಧೆ ಇರಬೇಕೆಂದು ನಾವು ತೀರ್ಮಾನ ಕೈಗೊಂಡಿದ್ದೇವೆ. ಮುಂದೆ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಮಾಡಲಿದೆ. ರಾಜ್ಯಕ್ಕೂ ಸೇವಾ ಸಂಘಟನೆ ವಿಸ್ತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪರಿವಾರದ ವಕ್ತಾರ ಕೃಷ್ಣ ಉಪಾದ್ಯಾಯ, ಉಪಾದ್ಯಕ್ಷ ಮಹೇಂದ್ರ ವರ್ಮ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕೋಡಿಬೈಲು ಉಪಸ್ಥಿತರಿದ್ದರು.