Asianet Suvarna News Asianet Suvarna News

Belagavi Winter Session: ಏಯ್‌ ಹೊರಗೆ ನಡಿ ಎಂದಿದ್ದಕ್ಕೆ ಕೋಲಾಹಲ, ಕಲಾಪ ಬಲಿ

ಬಸ್‌ ಸಮಸ್ಯೆ ಬಗ್ಗೆ ಚರ್ಚೆ ವೇಳೆ ಕಾಂಗ್ರೆಸ್‌ನ ರಂಗನಾಥ್‌ಗೆ ಗದರಿದ ಸಚಿವ ಕಾರಜೋಳ, ವಿಪಕ್ಷಗಳಿಂದ ಆಕ್ರೋಶ, ಕಾರಜೋಳ ಕ್ಷಮೆಗೆ ಆಗ್ರಹಿಸಿ ಸಿದ್ದರಾಮಯ್ಯ ಸೇರಿ ವಿಪಕ್ಷ ಸದಸ್ಯರಿಂದ ಧರಣಿ

Argument Among Congress BJP Members  in Belagavi Winter Session grg
Author
First Published Dec 22, 2022, 3:00 AM IST

ವಿಧಾನಸಭೆ(ಡಿ.22):  ಗ್ರಾಮೀಣ ಭಾಗದ ರಸ್ತೆ ದುಸ್ಥಿತಿಯಿಂದಾಗಿ ಬಸ್‌ ಓಡಿಸಲು ಆಗುತ್ತಿಲ್ಲ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಸಾರಿಗೆ ಸಚಿವರು ನೀಡಿದ ಉತ್ತರ ಆಕ್ಷೇಪಿಸಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್‌ ಸದಸ್ಯ ರಂಗನಾಥ್‌ ಅವರನ್ನು ಏಯ್‌ ಹೊರಗೆ ನಡಿ ಎಂದು ಗದರಿದ ಸಚಿವ ಗೋವಿಂದ ಕಾರಜೋಳ ನಡವಳಿಕೆ ಬುಧವಾರ ಸದನದಲ್ಲಿ ಕೋಲಾಹಲಕರ ಸನ್ನಿವೇಶ ಸೃಷ್ಟಿಸಿತು. ಜತೆಗೆ, ಎರಡು ಬಾರಿ ಸದನ ಮುಂದೂಡಿಕೆ ಕಾಣುವಂತೆ ಮಾಡಿ ಸರಿ ಸುಮಾರು ಅರ್ಧ ದಿನದ ಕಲಾಪವನ್ನು ನುಂಗಿ ಹಾಕಿತು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಪ್ರಶ್ನೆಗೆ ಶ್ರೀರಾಮುಲು ನೀಡಿದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಪಕ್ಷಗಳ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸ್ಪೀಕರ್‌ ಭರವಸೆಗೆ ಓಗೊಟ್ಟು ಉಳಿದ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ತೆರಳಿದರೂ ಕಾಂಗ್ರೆಸ್‌ ಸದಸ್ಯ ರಂಗನಾಥ್‌ ಮಾತ್ರ ತೆರಳಲಿಲ್ಲ.

Maharashtra Winter session: ಕರ್ನಾಟಕ ಸಿಎಂಗೆ ಅವರ ಭಾಷೆಯಲ್ಲೇ ಉತ್ತರಿಸಿ: ಮಹಾ ಶಾಸಕನ ಉದ್ಧಟತನ

ಇದರಿಂದ ಕೆರಳಿದ ಸಚಿವ ಗೋವಿಂದ ಕಾರಜೋಳ, ‘ಎಲ್ಲರೂ ಹೋಗಿದ್ರೆ ನಿಂದೇನು ಸ್ಪೆಷಲ್‌. ಹೊರಗ್‌ ನಡಿ ನೀ ಮೊದಲು, ಏಯ್‌, ನಡೀ ಹೊರಗೆ’ ಎಂದು ಏರು ಧ್ವನಿಯಲ್ಲಿ ಏಕ ವಚನದಲ್ಲೇ ಗದರಿದರು. ಇದಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ರಂಗನಾಥ್‌ ವಿರುದ್ಧ ಆಕ್ರೋಶಭರಿತ ಮುಖ ಭಾವದೊಂದಿಗೆ ಮುಗಿಬಿದ್ದ ಕಾರಜೋಳ, ‘ಮೂರ್ಖನಂತೆ ಮಾತನಾಡ್ತಿದಿಯ, ನಾಲಿಗೆ ಬಿಗಿ ಹಿಡಿದು ಮಾತನಾಡು. ಹುಡುಗಾಟಿಕೆ ಮಾಡುತ್ತಿದ್ದೀಯಾ. ಮೊದಲು ನಿನ್ನ ಸದನದಿಂದ ಹೊರಗೆ ಹಾಕಬೇಕು.’ ಎಂದು ಹರಿಹಾಯ್ದರು.

ಇದು ಉಳಿದ ಕಾಂಗ್ರೆಸ್‌ ಸದಸ್ಯರನ್ನು ಕ್ರುದ್ಧಗೊಳಿಸಿತು. ಹೀಗಾಗಿ ಮತ್ತೆ ಎಲ್ಲರೂ ಸದನದ ಬಾವಿಗಿಳಿದು, ಸದಸ್ಯರೊಬ್ಬರಿಗೆ ಅಗೌರವ ಸೂಚಿಸಿದ ಕಾರಜೋಳ ಅವರು ವಿಷಾದ ವ್ಯಕ್ತಪಡಿಸಬೇಕು. ಜತೆಗೆ ಬಸ್ಸು ಕೊರತೆ ವಿಚಾರವಾಗಿ ಅರ್ಧ ಗಂಟೆ ವಿಶೇಷ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಇದೇ ಸಮಯಕ್ಕೆ ಸದನದ ಒಳಗೆ ಬಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಸದಸ್ಯರೊಂದಿಗೆ ಸೇರಿ ಕಾರಜೋಳ ವಿರುದ್ಧ ಹರಿಹಾಯ್ದರು.
ಇದರಿಂದ ಪ್ರೇರಿತರಾದ ಧರಣಿ ನಿರತ ಕಾಂಗ್ರೆಸ್‌ ಸದಸ್ಯರು ಕಾರಜೋಳ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಪ್ರತಿಯಾಗಿ ಕಾರಜೋಳ ಪರ ನಿಂತ ಬಿಜೆಪಿ ಸದಸ್ಯರು ಧರಣಿ ನಿರತರೊಂದಿಗೆ ವಾಕ್ಸಮರಕ್ಕೆ ಇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ‘ರೌಡಿ ಸರ್ಕಾರಕ್ಕೆ ಧಿಕ್ಕಾರ’, ‘ಕಳ್ಳ ಕಾಂಗ್ರೆಸ್‌ಗೆ ಧಿಕ್ಕಾರ’ ಎಂಬ ಘೋಷಣೆ, ಪ್ರತಿ ಘೋಷಣೆ ತೀವ್ರಗೊಂಡು ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳದಂತಹ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಸ್ಪೀಕರ್‌ ಎರಡು ಬಾರಿ ಕಲಾಪವನ್ನು ಮುಂದೂಡಿದರು.

ಬಳಿಕ ಅಂತಿಮವಾಗಿ ಮಧ್ಯಾಹ್ನ ಸ್ಪೀಕರ್‌ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ ಅವರು ಸಂಧಾನಸಭೆ ನಡೆಸಿ ವಿವಾದವನ್ನು ಮುಂದುವರೆಸದಿರಲು ನಿರ್ಧರಿಸಿದರು.

ಪರಿಣಾಮ ಭೋಜನ ವಿರಾಮದ ಬಳಿಕ ಸೇರಿದ ಕಲಾಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಕಾರಜೋಳ ಅವರು ವಿಷಾದ ವ್ಯಕ್ತಪಡಿಸದಿದ್ದರೂ, ಕಲಾಪದ ಸಮಯ ಹಾಳಾಗಬಾರದು ಎಂಬ ಕಾರಣಕ್ಕೆ ಇದನ್ನು ಕೈಬಿಡುತ್ತಿದ್ದೇವೆ. ಆದರೆ ಸ್ಪೀಕರ್‌ ಒಪ್ಪಿಗೆಯಂತೆ ಬಸ್ಸು ವಿಚಾರವನ್ನು ಪ್ರತ್ಯೇಕ ಚರ್ಚೆಗೆ ನೀಡಬೇಕು. ರಂಗನಾಥ್‌ ಹಾಗೂ ಅಂಜಲಿ ನಿಂಬಾಳ್ಕರ್‌ ಅವರ ಬಗ್ಗೆ ಆಡಿರುವ ಮಾತುಗಳನ್ನು ಕಡತದಿಂದ ತೆಗೆಯಬೇಕು ಎಂಬ ಷರತ್ತಿಗೆ ಒಪ್ಪಿಗೆ ಸೂಚಿಸಿರುವುದರಿಂದ ಧರಣಿ ಕೈಬಿಡುತ್ತಿದ್ದೇವೆ’ ಎಂದು ಸುದೀರ್ಘ ಗದ್ದಲಕ್ಕೆ ತೆರೆ ಎಳೆದರು.

ಸಿದ್ದರಾಮಯ್ಯ ಕಿಡಿ:

ಇದಕ್ಕೂ ಮೊದಲು ಸ್ವತಃ ಸದನದ ಬಾವಿಗಿಳಿದು ಕಾರಜೋಳ ಅವರ ಬಳಿಗೆ ತೆರಳಿದ ಸಿದ್ದರಾಮಯ್ಯ ಅವರು, ಹಿರಿಯರಾಗಿದ್ದೀರಿ ಈ ರೀತಿ ಮಾತನಾಡಬಹುದಾ? ಗೊತ್ತಾಗಲ್ವಾ ಎಂದು ಕಿಡಿ ಕಾರಿದರು. ಬಳಿಕ ಮಾತನಾಡಿದ ಅವರು, ಸದನ ನಡೆಸುವ ಜವಾಬ್ದಾರಿ ಆಡಳಿತ ಪಕ್ಷದವರಾದ ನಿಮ್ಮದು. ನಡಿ ಆಚೆಗೆ ಎಂದರೆ ಹೇಗೆ? ಏನು ಗೂಂಡಾಗಿರಿ ಮಾಡುತ್ತಿದ್ದೀರಾ? ನೀವು ಹೇಗೆ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದೀರೋ ಅವರೂ ಹಾಗೆಯೇ ಬಂದಿದ್ದಾರೆ. ಒಬ್ಬ ಶಾಸಕರಿಗೆ ನಡಿ ಆಚೆ ಎಂದರೆ ಅವರ ಹಕ್ಕು ಚ್ಯುತಿ ಅಲ್ಲವೇ? ಇದಕ್ಕೆ ಸಚಿವರು ವಿಷಾದ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದ್ದರು.

ಅಂಜಲಿ ನಿಂಬಾಳ್ಕರ್‌ ಹೊರ ಹಾಕಿ: ಮಾಧುಸ್ವಾಮಿ ಆಗ್ರಹ

ಕಾಂಗ್ರೆಸ್‌ ಶಾಸಕರು ಧರಣಿ ನಡೆಸುತ್ತಿದ್ದ ವೇಳೆ ಅವರ ಮನವೊಲಿಸಲು ಮುಂದಾದ ತಮ್ಮ ಹೇಳಿಕೆಯೊಂದಕ್ಕೆ ಸದನದ ಬಾವಿಯಲ್ಲಿದ್ದುಕೊಂಡೇ ಆಕ್ಷೇಪ ವ್ಯಕ್ತಪಡಿಸಿದ ಶಾಸಕರಾದ ಅಂಜಲಿ ನಿಂಬಾಳ್ಕರ್‌ ಅವರನ್ನು ಸದನದಿಂದ ಹೊರ ಹಾಕುವಂತೆ ಸ್ಪೀಕರ್‌ ಅವರನ್ನು ಕಾನೂನು ಸಚಿವ ಮಾಧುಸ್ವಾಮಿ ಆಗ್ರಹಿಸಿದ ಘಟನೆಯೂ ನಡೆಯಿತು.

ಧರಣಿ ನಡೆದಿದ್ದ ವೇಳೆ ಮಾಧುಸ್ವಾಮಿ ಅವರು ಸದನದ ವೇಳೆ ಹಾಳುಮಾಡುವುದು ಬೇಡ. ಸ್ಪೀಕರ್‌ ಅವರು ಅರ್ಧ ತಾಸು ಅವಕಾಶ ನೀಡಿದ ನಂತರವೂ ಧರಣಿ ನಡೆಸುವುದು ಸರಿಯಲ್ಲ ಎಂದರು. ಈ ವೇಳೆ ಅಂಜಲಿ ನಿಂಬಾಳ್ಕರ್‌ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಮಾಧುಸ್ವಾಮಿ ಅವರು, ಬಾವಿಯಲ್ಲಿ ಇರುವಾಗ ಮಾತನಾಡುವುದು ಸರಿಯಲ್ಲ. ಮಾತು ನಿಲ್ಲಿಸಿ ಎಂದು ಜೋರು ಧ್ವನಿಯಲ್ಲಿ ಅಂಜಲಿ ಅವರಿಗೆ ಹೇಳಿದರು.

ಕೈದಿಗಳ ಗುರುತಿಸುವ ಕಾಯ್ದೆ ಹಿಂಪಡೆತಕ್ಕೆ ಸ್ಪೀಕರ್‌ ತಡೆ

ಇದನ್ನು ಆಕ್ಷೇಪಿಸಿದ ನಿಂಬಾಳ್ಕರ್‌, ಸದನದಲ್ಲಿ ಮಾತನಾಡುವುದು ನನ್ನ ಹಕ್ಕು. ಅದನ್ನು ನಿಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದಾಗ ಕ್ರುದ್ಧರಾದ ಮಾಧುಸ್ವಾಮಿ ನಿಂಬಾಳ್ಕರ್‌ ಅವರನ್ನು ಸಸ್ಪೆಂಡ್‌ ಮಾಡುವಂತೆ ಸ್ಪೀಕರ್‌ ಅವರನ್ನು ಆಗ್ರಹಿಸಿದರು.

ಇದಕ್ಕೆ ಕೆರಳಿದ ಕಾಂಗ್ರೆಸ್‌ ಸದಸ್ಯರು ಮಹಿಳಾ ಸದಸ್ಯರ ಬಗ್ಗೆ ಹೇಗೆ ಮಾತನಾಡಬೇಕು ಎಂದು ಗೊತ್ತಾಗುವುದಿಲ್ಲವೇ? ಮಹಿಳಾ ಸದಸ್ಯರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಿರಂದ ಇದು ಮತ್ತೊಂದು ಹಂತದ ವಿವಾದ ಸೃಷ್ಟಿಸಿತು. ಅಂತಿಮವಾಗಿ ಸಂಧಾನಸಭೆಯಲ್ಲಿ ಅಂಜಲಿ ನಿಂಬಾಳ್ಕರ್‌ ಅವರ ಬಗ್ಗೆ ಮಾಧುಸ್ವಾಮಿ ಅವರು ಆಡಿದ ಮಾತುಗಳನ್ನೂ ಕಡತದಿಂದ ತೆಗೆಯಲು ತೀರ್ಮಾನಿಸಿದ್ದರಿಂದ ವಿವಾದ ಇತ್ಯರ್ಥವಾಯಿತು.
 

Follow Us:
Download App:
  • android
  • ios