ಕೈದಿಗಳ ಗುರುತಿಸುವ ಕಾಯ್ದೆ ಹಿಂಪಡೆತಕ್ಕೆ ಸ್ಪೀಕರ್ ತಡೆ
ರಾಜ್ಯ ಮಸೂದೆ ಪಾಸು ಮಾಡಿದ್ಮೇಲೆ ಕೇಂದ್ರದ ಕಾಯ್ದೆಯೇ ರದ್ದು, ಹೀಗಾಗಿ ಕಾಯ್ದೆ ತಡೆಯಬೇಕೆಂದು ಗೃಹ ಸಚಿವ ಆರಗ ಕೋರಿಕೆ, ತಾಂತ್ರಿಕ ಕಾರಣ ಮುಂದಿಟ್ಟು ಕಾಯ್ದೆ ಹಿಂಪಡೆತಕ್ಕೆ ಕಾಂಗ್ರೆಸ್ ವಿರೋಧ, ಬಂದಿಗಳ ರಕ್ತ, ಡಿಎನ್‌ಎ ಪರೀಕ್ಷೆಗೆ ಒಳಪಡಿಸುವ ಕಾಯ್ದೆ.
ವಿಧಾನಸಭೆ(ಡಿ.21): ಕೈದಿಗಳ ರಕ್ತ, ಡಿಎನ್‌ಎ ಮಾದರಿ ಸೇರಿದಂತೆ ಇತರೆ ಪರೀಕ್ಷೆಗಳನ್ನು ನಡೆಸುವ ಸಂಬಂಧ ಜಾರಿಯಲ್ಲಿದ್ದ 2021ನೇ ಸಾಲಿನ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಿಂಪಡೆಯುವುದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ನೀಡಿದ್ದಾರೆ.
ಮಂಗಳವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧೇಯಕ ಹಿಂಪಡೆಯಲು ಸದನ ಅನುಮತಿ ನೀಡಬೇಕು ಎಂದು ಕೋರಿದರು. ಈ ವೇಳೆ ಕಾಂಗ್ರೆಸ್ ಸದಸ್ಯರ ಪ್ರಶ್ನೆಗಳಿಗೆ ಸಮಪರ್ಕವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ವಿಧೇಯಕ ಹಿಂಪಡೆಯುವುದನ್ನು ತಡೆಹಿಡಿದರು. ಕೇಂದ್ರದ ಸೂಚನೆ ಮೇರೆಗೆ ವಿಧೇಯಕವನ್ನು ರಾಜ್ಯ ವಿಧಾನಮಂಡಲದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿತ್ತು. ಇದಕ್ಕೆ ರಾಜ್ಯಪಾಲರ ಅಂಕಿತ ಪಡೆದು ಕೇಂದ್ರಕ್ಕೂ ಕಳುಹಿಸಿಕೊಡಲಾಗಿತ್ತು. ಆದರೆ, ವಿಧೇಯಕ ದೆಹಲಿ ತಲುಪುವಷ್ಟರಲ್ಲಿ ಕೇಂದ್ರ ಸರ್ಕಾರವು ಬಂದಿ ಗುರುತಿಸುವಿಕೆ ಕಾನೂನನ್ನೇ ರದ್ದುಪಡಿಸಿತು. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ಯಾವುದೇ ಮೌಲ್ಯ ಇಲ್ಲದಂತಾಯಿತು.
ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಸಲಹೆ ನೀಡಿ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಸದಸ್ಯರಾದ ರಮೇಶ್ ಕುಮಾರ್ ಮತ್ತು ಎಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ವಿಧೇಯಕ ಸ್ವರೂಪ ಪಡೆದುಕೊಂಡಿದೆ. ಆದರೆ, ವಿಧೇಯಕ ಶಾಸನ ಸ್ವರೂಪ ಪಡೆದುಕೊಂಡಿಲ್ಲ. ಯಾಕೆಂದರೆ ಕೇಂದ್ರದ ಮೂಲ ವಿಧೇಯಕವೇ ಈಗಿಲ್ಲ. ಗೃಹ ಸಚಿವರು ಮೌಖಿಕವಾಗಿ ಅನುಮತಿ ಕೋರಿದ್ದಾರೆ. ಇದು ಸಂವಿಧಾನಾತ್ಮಾಕವಾಗಿ ಸ್ಥಾಪಿತವಾಗುವುದಿಲ್ಲ. ಪ್ರತ್ಯೇಕವಾಗಿ ವಿಧೇಯಕವನ್ನು ಹಿಂಪಡೆಯುವ ಕುರಿತು ಲಿಖಿತ ರೂಪದಲ್ಲಿ ತರಬೇಕು. ವಿಧೇಯಕವನ್ನು ಸದನವು ಒಪ್ಪಿರುವುದರಿಂದ ರಾಜ್ಯದಲ್ಲಿ ಜೀವಂತವಾಗಿರಲಿದೆ ಎಂದರು. ಕಾಂಗ್ರೆಸ್ ಸದಸ್ಯರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷರು ವಿಧೇಯಕವನ್ನು ತಡೆ ಹಿಡಿದರು.